top of page

ನೀವು ಮಾಡಿದ್ದೆಲ್ಲ ಇಷ್ಟೇ!

  • Harsha
  • 5 days ago
  • 2 min read

ಆಗತಾನೆ ಅರಳಿ ತಮ್ಮ ಸುತ್ತಮುತ್ತ ಗಾಳಿಗೆ ಕಂಪು ಬೀರುತ್ತಿದ್ದ ಹೂಗಳ ಕತ್ತು ಕುಯ್ದು ನಿಮ್ಮ ದೇವರ ಕೊರಳಿಗೆ ನೇತು ಹಾಕಿದಿರಿ, ಅಲಂಕಾರ ಮಾಡಿದಿರಿ. ನಿಮ್ಮ ಕಿವಿಗಳಿಗೆ ಹೂಗಳ ಆರ್ತನಾದ ಕೇಳಲಿಲ್ಲ. ನಿಮ್ಮ ಕಂಗಳಿಗೆ ಅವುಗಳನ್ನು ತಮ್ಮ ತಾಯಿ ಕೊಂಬೆಯ ಮಡಿಲಲ್ಲೇ ನೋಡಿ ಆನಂದಿಸುವ ಸಂವೇದನೆ ಉಳಿಯಲಿಲ್ಲ.


ನೀವು ಮಾಡಿದ್ದೆಲ್ಲ ಇಷ್ಟೇ.


ಸ್ವಚ್ಛಂದವಾಗಿ ಅಲೆದು, ಹುಲ್ಲು ಮೇಯ್ದು, ತನ್ನ ಕರುವಿಗಾಗಿ ಹಾಲು ತುಂಬಿಕೊಂಡು ಬರುವ ಕೆಚ್ಚಲನ್ನು ಹಿಸುಕಿ ಹಿಂಡಿ ನಿಮ್ಮ ಕಲ್ಲು ದೇವರುಗಳ ನೆತ್ತಿಯ ಮೇಲೆ ಹಾಲು, ಮೊಸರು, ತುಪ್ಪ ಸುರಿದು ಅಭಿಷೇಕವೆಂದಿರಿ. ಅವು ಹಸಿದವರಿಗೆ ಹೊಟ್ಟೆ ತುಂಬಿಸಲಿಲ್ಲ. ನೀವು ನಿಮ್ಮ ರಾಕ್ಷಸೀ ಸಂಭ್ರಮದಲ್ಲಿ ಮಗ್ನರಾಗಿದ್ದೀರಿ. ನಿಮಗೆ ಹಾಲು - ತುಪ್ಪ ಕೊಟ್ಟ ಕಾರಣಕ್ಕಾಗಿ ಹಸುವನ್ನು ಮಾತೆ ಎಂದಿರಿ. ಇಲ್ಲದಿದ್ದರೆ ಹಸುವು ಕೂಡ ಕೋಣ - ಕುರಿ - ಕೋಳಿಗಳಂತೆ ನಿಮ್ಮ ದೇವತೆಗಳ ಹಸಿವಿಗೆ ಬಲಿಯಾಗುತ್ತಿತ್ತು. ನಿಮ್ಮ ಸ್ವಾರ್ಥ ಮನಸ್ಸುಗಳಿಗೆ, ನಿಮ್ಮ ಧರ್ಮ, ಜಾತಿ, ಧರ್ಮಗ್ರಂಥಗಳಿಗೆ ಬೇರೆ ಪ್ರಾಣಿಗಳಲ್ಲಿ ಮಾತೆ ಕಾಣಿಸಲಿಲ್ಲ.


ನೀವು ಮಾಡಿದ್ದೆಲ್ಲ ಇಷ್ಟೇ.


ರೇಷ್ಮೆ ಹುಳು ತನ್ನ ರಕ್ಷಣೆಗಾಗಿ ತನ್ನ ದೇಹದ ಸುತ್ತ ದಾರವನ್ನು ಸುತ್ತಿಕೊಂಡಿತ್ತು. ನೀವು ಅದನ್ನೂ ಬಿಡಲಿಲ್ಲ. ಆ ಹುಳುವನ್ನು ಕೊತ ಕೊತ ಕುದಿಯುವ ನೀರಿನಲ್ಲಿ ಕುದಿಸಿ, ಆ ಹುಳುವನ್ನು ಸಾಯಿಸಿ ಅದರ ಸುತ್ತಲಿನ ರೇಷ್ಮೆಯನ್ನು ನಿಮ್ಮ ಶೋಕಿಗಾಗಿ ವಸ್ತ್ರ ಮಾಡಿಕೊಂಡಿರಿ, ನಿಮ್ಮ ನಿರ್ದಯ ಧರ್ಮಗಳು ಆ ರೇಷ್ಮೆ ವಸ್ತ್ರಗಳನ್ನು ಹೋಮ - ಹವನಗಳಲ್ಲಿ ಅರ್ಪಿಸಲು ಹೇಳಿದವು. ನೀವು ಅದನ್ನೇ ಮಾಡಿದಿರಿ. ನಿಮ್ಮ ಅರ್ಥಹೀನ ಆಚರಣೆಗಳಿಗೆ ಆ ಅಮಾಯಕ ಹುಳುಗಳು ಜೀವ ಕಳೆದುಕೊಂಡದ್ದು ನಿಮ್ಮ ಒರಟು ಚರ್ಮದ ಮನಸ್ಸಿಗೆ ತಾಕಲೇ ಇಲ್ಲ.


ನೀವು ಮಾಡಿದ್ದೆಲ್ಲ ಇಷ್ಟೇ.


ಲಕ್ಷ ಲಕ್ಷ ಹೂಗಳ ಮಕರಂದವನ್ನು ಹೀರಿ ತನ್ನ ಗೂಡಿನಲ್ಲಿ ಅಡಗಿಸಿದ್ದ ಜೇನು ನೊಣಗಳನ್ನು ಓಡಿಸಿ ಆ ಗೂಡುಗಳನ್ನು ನಾಶ ಮಾಡಿ, ಜೇನನ್ನು ಕದ್ದು ನಿಮ್ಮ ಕಲ್ಲು ದೇವರ ನೆತ್ತಿಯ ಮೇಲೆ ಸುರಿದಿರಿ. ನಿಮ್ಮ ಉಗುರಿನ ಗಾತ್ರಕ್ಕಿಂತ ಚಿಕ್ಕವಿರುವ ನೊಣಗಳಿಂದ ಜೇನು ಕದ್ದು ನಿಮ್ಮನ್ನು ನೀವು ಶಕ್ತಿಶಾಲಿಗಳು, ಬುದ್ಧಿವಂತರು, ಆಚಾರವಂತರು ಎಂದು ಬೀಗಿದಿರಿ. ವಿಷವಿರುವುದು ಜೇನು ನೊಣದ ಮುಳ್ಳಿನಲ್ಲಾ? ನಿಮ್ಮ ಮನಸ್ಸಿನಲ್ಲಾ?


ಇನ್ನು ನೀವು ನಿಮ್ಮ ದೇವರಿಗಾಗಿ ಮಾಡಿದ್ದೇನಿದೆ? ನಿಮ್ಮ ಕತ್ತು ನೀವು ಕುಯ್ದು ದೇವರಿಗೆ ಸಮರ್ಪಿಸಲಿಲ್ಲ, ಅಲಂಕಾರ ಮಾಡಲಿಲ್ಲ. ನಿಮ್ಮ ದೇಹದಿಂದ ರಕ್ತ ಬಸಿದು ದೇವರಿಗೆ ಅಭಿಷೇಕ ಮಾಡಲಿಲ್ಲ. ನೀವು ಬಹಳ ಲೆಕ್ಕಾಚಾರದ ಜನ. ಮತ್ತೆ ಬೆಳೆಯುವ ನಿಮ್ಮ ಕೂದಲನ್ನು ನಿಮ್ಮ ದೇವರಿಗೆ ಸಮರ್ಪಿಸುತ್ತೀರಿ. ಹೆಚ್ಚೆಂದರೆ ಮತ್ತೆ ದುಡಿಯಬಹುದಾದ ದುಡ್ಡು, ಮತ್ತೆ ಕೊಳ್ಳಬಹುದಾದ ವಸ್ತ್ರ, ಬೆಳ್ಳಿ, ಬಂಗಾರಗಳನ್ನು ನಿಮ್ಮ ದೇವರಿಗೆ ಕೊಡುತ್ತೀರಿ, ಅದು ಕೂಡ ನಿಮ್ಮ ಹರಕೆ ದೇವರು ತೀರಿಸಿದ ಮೇಲೆ! ಮತ್ತೆ ಹುಟ್ಟದ, ಎಂದೂ ಬೆಳೆಯದ, ಕೊಳ್ಳಲು ಆಗದ ನಿಮ್ಮ ಹೃದಯವನ್ನು, ಕೈಕಾಲು, ಕಣ್ಣು ಕಿವಿಗಳನ್ನು ನೀವು ದೇವರಿಗೆ ಸಮರ್ಪಿಸುವುದಿಲ್ಲ.


ಎಲ್ಲೋ ಅರಳಿದ ಹೂವನ್ನು, ಹಸಿವಿನಿಂದ ಕದ್ದ ಹಾಲನ್ನು, ನೊಣದಿಂದ ಕದ್ದ ಜೇನನ್ನು, ಹುಳುವಿನಿಂದ ಕದ್ದ ರೇಷ್ಮೆಯನ್ನು.. ನಿಮ್ಮ ದೇವರಿಗೆ ಸಮರ್ಪಿಸಿ ವರಗಳನ್ನು ಕೇಳಿದಿರಿ.


ನೀವು ಮಾಡಿದ್ದೆಲ್ಲ ಇಷ್ಟೇ!


ನಿಮ್ಮ ಅರ್ಥಹೀನ ಆಚರಣೆಗಳಿಗೆ, ನಿಮ್ಮ ನಿರ್ದಯಿ ಧರ್ಮಗಳಿಗೆ ನನ್ನ ಧಿಕ್ಕಾರ!

 
 
 

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page