ಪುಟ್ಟಿ...
- Harsha
- May 10
- 3 min read
Updated: May 13
Sisterlessness!
ಹೀಗೊಂದು ಭಾವ ಬಹಳ ಜನರ ಅನುಭವಕ್ಕೆ ಬಂದಿರುವುದಿಲ್ಲ. ಆದರೆ ನನ್ನನ್ನು ಬಾಲ್ಯದಿಂದ ಕಾಡಿದ ಭಾವವಿದು. ನಾಲ್ಕೈದು ವರ್ಷದವನಿದ್ದಾಗ ಪಕ್ಕದ ಮನೆಯ ಶೃತಿ-ಸಂಧ್ಯಾ, ಆರು - ಏಳನೇ ಕ್ಲಾಸ್ಸಿನಲ್ಲಿದ್ದಾಗ ಗೆಳೆಯ ಇನಾಯತ್ ನ ತಂಗಿ ತಸ್ಲಿಂ, ಚಿಕ್ಕಪ್ಪನ ಮಕ್ಕಳು ನನ್ನನ್ನು ಅಣ್ಣ ಅಂತ ಕರೆಯುತ್ತಿದ್ದರೂ, ಎಲ್ಲೋ ಒಂದು ಅಪೂರ್ಣತೆ ಇದ್ದೇ ಇತ್ತು.
ಆಗಲೇ ಸಿಕ್ಕ ಹುಡುಗಿ ಪುಟ್ಟಿ!
ಬಹಳಷ್ಟು ಸಲ ಹಾಗಾಗುತ್ತದೆ. ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ನಿರೀಕ್ಷೆ ಮಾಡದ ಪಾರಿಜಾತ, ಕಲ್ಪವೃಕ್ಷ ಸಿಕ್ಕಂತೆ, ಹುಡುಕುವುದನ್ನು ಮರೆತಾಗ ಹುಡುಕುತ್ತಿದ್ದುದು ಸಿಗುತ್ತದೆ.
ನನ್ನದೇ ತಂಗಿ ಬೇರೆ ಗರ್ಭದಲ್ಲಿ, ಬೇರೆ ಮನೆಯಲ್ಲಿ, ಬೇರೆ ಕಾಲದಲ್ಲಿ ಹುಟ್ಟಿದ್ದಳು, ಸಿಕ್ಕಿದ್ದು ಮಾತ್ರ ಹೂಡುವುದನ್ನು ನಿಲ್ಲಿಸಿದ ಮೇಲೆ.
ನಾನು ಆಗ ತಾನೇ ಒಂದು ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಹೊಸ ಅಗಸನ ಹುರುಪು. ಮಕ್ಕಳ ಜೀವನದಲ್ಲೇನೋ ಬದಲಾವಣೆ ತರುವೆನೆಂಬ ಭ್ರಮೆ. ಮಾಡುವ ಕೆಲಸವನ್ನು ಭಿನ್ನವಾಗಿ ಮಾಡಬೇಕೆಂಬ ಹಪಹಪಿ. ಬಹುತೇಕ ಪ್ರತಿದಿನ ಶಾಲೆಯಿಂದ ಎಲ್ಲರಿಗಿಂತ ಕೊನೆಗೆ ಮನೆಗೆ ಹೋಗುತ್ತಿದ್ದವನು ನಾನೇ. ಪುಟ್ಟ ಹಾರ್ಮೋನಿಯಂ ಥರದ ಲ್ಯಾಪ್ ಟಾಪ್ ತೆರೆದುಕೊಂಡು ಕೆಲಸ ಮಾಡಲು ಕುಳಿತರೆ ಹೊತ್ತು ಮುಳುಗುವುದೂ ತಿಳಿಯುತ್ತಿರಲಿಲ್ಲ. ಇರುವಷ್ಟು ಹೊತ್ತು ಇದ್ದು 'ಇವನು ಮನೆಗೆ ಹೋಗುವ ಲಕ್ಷಣಗಳು ಕಾಣುತ್ತಿಲ್ಲ' ಅಂತ ಅನಿಸಿ ತೋಟವಿಲ್ಲದ ಶಾಲೆಯ ತೋಟಗಾರ ಕಮ್ ವಾಚ್ ಮನ್ ನಾಗಪ್ಪ ಕೂಡ ಮನೆಗೆ ಹೋಗಿರುತ್ತಿದ್ದ.
ಆ ಶಾಲೆಯಲ್ಲಿ ನನಗಿಂತ ಕೆಲವೇ ದಿನಗಳ ಮುಂಚೆ ಕನ್ನಡ ಟೀಚರ್ ಆಗಿ ಸೇರಿದ್ದರು ಶಾರದಾ ಮೇಡಂ. ಕೆಲಸದಲ್ಲಿ, ಮಾತಿನಲ್ಲಿ, ಉಡುಗೆಯಲ್ಲಿ ಬಹಳ ಅಚ್ಚುಕಟ್ಟಾದ ಹುಡುಗಿ. ಏರು ಧ್ವನಿಯಲ್ಲಿ ಮಾತನಾಡಿದ್ದು ನಾನು ಯಾವತ್ತೂ ಕೇಳಿರಲಿಲ್ಲ. ನನ್ನದೇ ಟೀಮ್ ನಲ್ಲಿದ್ದರೂ ಯಾರ ಬಗ್ಗೆಯೂ ಇಲ್ಲಸಲ್ಲದ್ದನ್ನು ಹೇಳುತ್ತಿರಲಿಲ್ಲ. ಕಂಪ್ಲೇಟುಗಳಿಂದ ದೂರ. ಒಂದನೇ-ಎರಡನೇ ಕ್ಲಾಸಿಗೆ ಹೋದರೆ ಈ ಹುಡುಗಿಯು ಫ್ರಾಕ್ ಬದಲು ಸೀರೆ ಉಟ್ಟು ಹೋದ ಪುಟ್ಟ ಹುಡುಗಿಯಂತೆ ಇರುತ್ತಿದ್ದಳು. ಮಕ್ಕಳು ಕೂಡ 'ಅಕ್ಕ' ಅನ್ನಬೇಕೆನ್ನಿಸುವಷ್ಟು ಪ್ರೀತಿಯ ಮಿಸ್ಸು.
ನನ್ನ ಕಣ್ಣಲ್ಲಿ ಒಂದು ಮೆಚ್ಚುಗೆ ಯಾವಾಗಲೂ ಇತ್ತು.
ಇವತ್ತಿಗೆ ಸರಿಯಾಗಿ ನೆನಪಿಲ್ಲ. ಆದರೆ ಅಂಥದೇ ಒಂದು ದಿನ ಯಾರದೋ ಹುಟ್ಟುಹಬ್ಬವಿದ್ದಿರಬೇಕು. ಅವರು ಕೇಕ್ ಕೊಟ್ಟಾಗ ನಾನೆಲ್ಲಿದ್ದೇನೋ ಗೊತ್ತಿಲ್ಲ. ಆದರೆ ನನಗಾಗಿ ಒಂದು ಡಬ್ಬಿಯಲ್ಲಿ ತೆಗೆದಿಟ್ಟಿದ್ದರು ಶಾರದಾ ಮೇಡಂ ಮತ್ತು ಶೋಭಾ ಮೇಡಂ. ಪ್ರತಿಯೊಂದು ಚಿಕ್ಕ ಒಳ್ಳೆತನಕ್ಕೂ ಕೂಡಲೇ ಒಂದು ಧನ್ಯವಾದ, ಒಂದು ಕೃತಜ್ಞತೆ ಸಲ್ಲಿಸಬೇಕು ಅಂತ ನಂಬಿರುವವನು ನಾನು. ಅವರಿಬ್ಬರಾಗಲೇ ಮನೆಗೆ ಹೋಗಿದ್ದರಿಂದ, ಒಂದು ಪುಟ್ಟ 'ಥ್ಯಾಂಕ್ ಯು' ಮೆಸೇಜು ಕಳಿಸಿದೆ.
ಅದು ಏಕೆ ಹಾಗೆನ್ನಿಸಿತೋ ಗೊತ್ತಿಲ್ಲ; ಬಹುಶಃ ಪುಟ್ಟ ಹುಡುಗಿಯೆನಿಸಿ, ಮೆಸೇಜಿನಲ್ಲಿ ಮೊದಲಿಗೆ 'ಶಾರದಾ ಮೇಡಂ' ಅಂತ ಬರೆದವನು ಅದನ್ನು ಅಳಿಸಿ 'ಪುಟ್ಟಿ, ಥ್ಯಾಂಕ್ ಯು' ಅಂತ ಕಳಿಸಿದೆ. ಅದೆಂಥಾ ಕಾಕತಾಳಿಯ! ಅವರ ಮನೆಯಲ್ಲೂ ಪುಟ್ಟಿಯನ್ನು ಕರೆಯುತ್ತಿದ್ದುದು ಪುಟ್ಟಿ ಅಂತಲೇ. ಬಹುಶ ನಾನು ಹಾಗೆ ಕರೆದದ್ದು ಕೇಳಿ ಖುಷಿಯಾಗಿರಬೇಕು. ಆಗಿನಿಂದ ತುಂಬ ಪ್ರಬುದ್ಧತೆಯ ಶಾರದಾ ಮೇಡಂ ನನ್ನ ತಂಗಿ ಪುಟ್ಟಿಯಾದಳು.
ಶಾಲೆಯಿಂದ ಕೂಗಳತೆಯಲ್ಲಿತ್ತು ಅವರ ಮೆನೆ. ಅಲ್ಲಿ ಅವಳ ಸ್ಕೂಟರಿನ ಕಿವಿ ಹಿಂಡಿದರೆ ಅದು ನೇರವಾಗಿ ಶಾಲೆಯ ಅಂಗಳದಲ್ಲಿ ಬಂದು ಇಳಿಸುತ್ತಿತ್ತು. ನನ್ನದು ಯಥಾಪ್ರಕಾರ ಎಲ್ಲರೂ ಮನೆಗೆ ಹೋದರೂ ಶಾಲೆಯಲ್ಲೇ ಉದ್ಭವ ಮೂರ್ತಿಯಂತೆ ಕೂತು ಕೆಲಸ ಮಾಡುವ ಕೆಟ್ಟ ಅಭ್ಯಾಸ. ಅದರ ಜೊತೆ, ಮಧ್ಯಾಹ್ನ ಊಟ ಮಾಡಲು ಯಾರ ಕಂಪನಿ ಇಲ್ಲದ ಕಾರಣ ನಾನು ಮನೆಯಿಂದ ಊಟ ಕೂಡ ತರುತ್ತಿರಲಿಲ್ಲ. ಶಾಲೆ ಮುಗಿದ ಮೇಲೆ ಮನೆಗೆ ಹೋಗಿರುತ್ತದ್ದ ಪುಟ್ಟಿ ಮತ್ತೆ ಇಳಿಸಂಜೆ ತನ್ನ ಸ್ಕೂಟರಿನ ಕಿವಿ ಹಿಂದಿ ಶಾಲೆಗೇ ಬರುತ್ತಿದ್ದಳು. ಬಂದವಳ ಬ್ಯಾಗಿನಲ್ಲಿ ಒಂದು ಬಾಕ್ಸು. ಬಾಕ್ಸಿನಲ್ಲಿ ಸ್ಯಾಂಡ್ವಿಚ್, ನೂಡಲ್ಸ್... ಹೀಗೆ ಏನಾದರೂ ತಿನ್ನಲು ತಂದಿರುತ್ತಿದ್ದಳು. ಜೊತೆಗೆ ಪುಟ್ಟ ಫ್ಲಾಸ್ಕ್ ಲ್ಲಿ ಕಾಫಿ.
ಮೇಲ್ನೋಟಕ್ಕೆ ಇದೆಲ್ಲ ಬಹಳ ದೊಡ್ಡದಲ್ಲ ಅನಿಸಬಹುದು. ಆದರೆ ಒಂದು 'Thank you' ಮೆಸೇಜಿಗೆ ಒಂದು 'You are welcome' ಮೆಸೇಜು ಉತ್ತರವಾಗಿಬಿಡಬಹುದಾಗಿತ್ತು. ಹಾಗಾಗಲಿಲ್ಲ. ಈಗ ನೆನಪು ಮಾಡಿಕೊಂಡರೆ ಕಣ್ಣು ಮಂಜಾಗುತ್ತವೆ, ಆದರೆ ನನಗೆ ತಂಗಿಯ ಸ್ಥಾನ, ಬೆಚ್ಚಗಿನ ಆ ಕಾಳಜಿ ಅರ್ಥವಾದದ್ದು ಆಗಲೇ.
ಮೊದಮೊದಲು ಶಿಷ್ಟಾಚಾರಕ್ಕೆ ಬೇಡವೆನ್ನುತ್ತಿದ್ದರೂ ಆಮೇಲಾಮೇಲೆ ಪುಟ್ಟಿಗೆ ನಾನೇ ಫೋನು ಮಾಡಿ ಕಾಫಿ ತರಲು ಹೇಳುವಷ್ಟು ಸಲುಗೆ - ಹಕ್ಕು ಬೆಳೆದವು. ನನಗೆ ಬಹುವಚನ ಯಾವತ್ತೋ ಮರೆತು ಹೋಗಿತ್ತಾದರೂ ಕೆಲಸದ ವಿಷಯದಲ್ಲಿ ಅವಳು ಮೇಡಂ. ನನಗೆ ಅದೇ ಗೌರವ, ಮೆಚ್ಚುಗೆ ಇದ್ದವು . ಆಮೇಲೆ ಕೂಡ ಶಾಲೆಯಲ್ಲಿ ನನಗಿದ್ದ ಚಿಕ್ಕ ಪುಟ್ಟ ಅಧಿಕಾರವನ್ನು ಪುಟ್ಟಿ ಯಾವತ್ತೂ ಉಪಯೋಗಿಸಿಕೊಳ್ಳಲಿಲ್ಲ; ಅವಳಿಗಿದ್ದ ಜಾಣ್ಮೆಗೆ, ಕೆಲಸದ ಮೇಲಿನ ಶ್ರದ್ದೆಗೆ ಅದರ ಅವಶ್ಯಕತೆಯೂ ಇರಲಿಲ್ಲ.
ಬಾಲ್ಯದಲ್ಲಿ ಜಗಳ ಮಾಡಲು, ಬೆಳೆಯುತ್ತ ತಮಾಷೆ ಮಾಡಲು, ಕಾಲೆಳೆಯಲು, ಮುನಿಸಿಕೊಳ್ಳಲು, ಇನ್ನೂ ದೊಡ್ಡವರಾಗುತ್ತಾ ಪ್ರೊಟೆಕ್ಟಿವ್ ಆಗಲು, ಬುದ್ಧಿ ಮಾತು ಹೇಳಲು - ಬುದ್ಧಿ ಮಾತು ಕೇಳಲು, ಯಾರಿಗೂ ಅರ್ಥವಾಗದ್ದನ್ನು ಹಂಚಿಕೊಳ್ಳಲು, ಬೇಸರವಾದಾಗ ಸುಮ್ಮನೆ ಕರೆದುಕೊಂಡು ಹೋಗಿ ಪಾನಿ ಪುರಿ ತಿನ್ನಿಸಿಕೊಂಡು ಬರಲು, ಆಗಾಗ ಗಿಫ್ಟ್ ಕೊಡಲು, ಮದುವೆ ಮಾಡಿಕೊಡಲು, ಆಮೇಲೆ ಒಂಟಿಯಾಗಲು.. ಇವುಗಳಿಗೆಲ್ಲ ಒಬ್ಬ ತಂಗಿ ಇರಬೇಕು ಅನ್ನಿಸುತ್ತಿತ್ತು...
ಇವೆಲ್ಲ ಆಗಲು ಪಾಪಿ ಪುಟ್ಟಿ (ಅಥವಾ ಪಾಪಿ ನಾನು) ಒಟ್ಟಿಗೆ ಹುಟ್ಟಲಿಲ್ಲ. ಆದರೆ ನಮ್ಮ ಎಲ್ಲ ಖುಷಿ - ದುಃಖಗಳನ್ನು ಹಂಚಿಕೊಳ್ಳುತ್ತ ಹೋದೆವು. ಬದುಕು ನಿಲ್ಲುವುದಿಲ್ಲ. ಪುಟ್ಟಿಯ ಮದುವೆ ಅವಳನ್ನು ಬೇರೆ ಊರಿಗೆ ಕರೆದೊಯ್ಯಿತು. ನನ್ನ ಕೆಲಸ ನನ್ನವು ಮತ್ತೆಲ್ಲಿಗೋ ಕರೆದೊಯ್ಯಿತು. ಮತ್ತೆ ಆ ಶಾಲೆಯ ಇಳಿಸಂಜೆಯ ಕಾರಿಡಾರಿನ ಬೆಂಚಿನ ಮೇಲೆ ನಾನು ಸ್ಥಾಪಿತನಾಗಿ ಕೆಲಸ ಮಾಡಲಿಲ್ಲ, ಪುಟ್ಟಿಯು ಸ್ಕೂಟರು ಶಾಲೆಯ ಅಂಗಳದಲ್ಲಿ ಬಂದು ನಿಲ್ಲಲಿಲ್ಲ..
ಆದರೆ ಆ ಶಾಲೆ, ಆ ದಿನಗಳು ನನಗೆ ಜೀವನದ ಅಪೂರ್ಣತೆಯೊಂದನ್ನು ಇಲ್ಲವಾಗಿಸಿದವು. ನನಗೆ ತಂಗಿ ಪುಟ್ಟಿ ಸಿಕ್ಕಳು . ಕೆಲವು ಸಂಬಂಧಗಳು ತಮ್ಮ ಪಾತ್ರವನ್ನು ಮೀರಿ ಬೆಳೆಯುತ್ತವೆ.
ಯಾಕೋ ಇವತ್ತು ಇದೆಲ್ಲ ನೆನಪಾಯಿತು. 'ಪುಟ್ಟಿ, ಮನೆಗೆ ಬಾ' ಎಂದೆ. 'ಓಕೆ ಅಣ್ಣ' ಅಂತ ಉತ್ತರ ಬಂತು. ಪುಟ್ಟಿ ನನ್ನನ್ನು 'ಅಣ್ಣ' ಅಂತ ಕರೆದಾಗಲೂ ಮೊದಲ ಬಾರಿ ಕರೆದದ್ದನ್ನು ಕೇಳಿಸಿಕೊಂಡಷ್ಟೇ ಖುಷಿ. ಯಾಕೋ ಕಣ್ಣು ಮಂಜು ಮಂಜು.
Comentários