ಸೋರುವ ಕಾಲದ ಬಿದಿರ ಚಪ್ಪರದಡಿ ಬಾಳೊಂದು ಮಣ್ಣ ಗಣೇಶ!
- Harsha
- Aug 31
- 2 min read
ನನಗಾಗ ಏಳೆಂಟು ವರ್ಷ ವಯಸ್ಸು. ಅಪ್ಪನ ಹಿಂದೆ ನಡೆದುಕೊಂಡು ಹೋಗುವುದೆಂದರೆ ಅದೊಂದು ಅಶ್ವಮೇಧಯಾಗ: ಅಷ್ಟು ವೇಗದ ನಡಿಗೆ. ಅಪ್ಪ ಮುಂದೆ-ಮುಂದೆ ನಡೆಯುತ್ತಿದ್ದರೆ ನಾವು ಹಿಂದೆ-ಹಿಂದೆ ಓಡಬೇಕು. ದಾರಿ ಮಧ್ಯದಲ್ಲಿ ನೂರು ಜನ, ನೂರು ನಮಸ್ಕಾರಗಳ ವಿನಿಮಯ. ಆಗಾಗ ಯಾರಾದರೂ ಮಾತನಾಡುತ್ತಾ ನಿಂತರೆ, ನನ್ನ ಪಾಲಿಗೆ ಅವರೇ ಸ್ಪೀಡ್ ಬ್ರೇಕರು, ಟೋಲ್ ಗೇಟು, ಚೆಕ್ ಪೋಸ್ಟು ಎಲ್ಲ. ನಿಂತು ದಣಿವಾರಿಸಿಕೊಳ್ಳಲು ಚಿಕ್ಕ ವಿರಾಮ ಸಿಗುತ್ತಿತ್ತು.
ನಾವಿದ್ದುದು ಪ್ರಸಿದ್ಧ ಹಂಪಿಯಿಂದ ಕೂಗಳತೆ ದೂರದಲ್ಲಿರುವ ಅಮ್ಮನ ತವರು ಕಮಲಾಪುರದಿಂದ ಒಂದೂವರೆ ಮೈಲಿಯ ದೂರದ ಊರು: ಹಂಪಿ ಪವರ್ ಕ್ಯಾಂಪ್ (HPC). ಒಂದು ಸರ್ಕಾರಿ ಶಾಲೆ, ಒಂದು ಸರ್ಕಾರಿ ಆಸ್ಪತ್ರೆ, ಕರೆಂಟು ಆಫೀಸು, ಯಾಕಿತ್ತೋ ಗೊತ್ತಿರದ ಒಂದು ಸಿವಿಲ್ ಆಫೀಸು, ಕೆಳಗಿನ ಕ್ಯಾಂಪು-ಮೇಲಿನ ಕ್ಯಾಂಪು ಎಂಬ ಊರಿನ ಎರಡು ಭಾಗಗಳನ್ನು ಬೇರ್ಪಡಿಸುವ ಪುಟ್ಟ ದಿನ್ನೆಯ ಮೇಲಿದ್ದ ಒಂದು ಪೋಸ್ಟಾಫೀಸು, ಹಂಪಿ ನೋಡಲು ಬರುವ ವಿದೇಶಿ ಯಾತ್ರಿಗಳಿಗೆ, ಗಣ್ಯರಿಗೆ ತಂಗಲು ಇದ್ದ ಸರ್ಕಾರಿ ಐಬಿ (inspection bangalow), ಹಚ್ಚ ಹಸಿರು - ಥೇಟು ಪಠ್ಯ ಪುಸ್ತಕಗಳಲ್ಲಿ, ಚಿತ್ರಗಳಲ್ಲಿ ವರ್ಣಿಸುವಂಥ ಊರು.
ಊರಿನ ಮಗ್ಗುಲಲ್ಲೇ ಫೋರ್ ಬೇ (fore bay) ಇತ್ತು (ನಾವೆಲ್ಲರೂ ಯಾಕೋ ಅದನ್ನು ಫೋರ್ ಬಾಯ್ ಅಂತಿದ್ದೆವು). ನಮ್ಮೂರಲ್ಲಿದ್ದ ವಿದ್ಯುತ್ ತಯಾರಿಕೆಯ ಒಂದು ಚಿಕ್ಕ ಘಟಕಕ್ಕೆ ನೀರು ಹರಿಸಲು ಮಾಡಿದ ಕಾಲುವೆ ಅದು. ಅದೇ fore bay ದಡದಲ್ಲಿ ಜೇಡಿ ಮಣ್ಣು ಸಿಗುತ್ತಿತ್ತು. ಪ್ರತಿ ಗಣೇಶ ಚತುರ್ಥಿಯ ಒಂದೆರಡು ದಿನಗಳ ಮುನ್ನ ಅಲ್ಲಿಗೆ ಹೋಗಿ ಅಪ್ಪ-ನಾನು ಮಣ್ಣು ತರುತ್ತಿದ್ದೆವು. ಪ್ರತಿಸಲ ಅದೇ ಅಶ್ವಮೇಧ ಯಾಗ.
ಅದು ಅಲ್ಲಿಗೆ ಮುಗಿಯುತ್ತಿರಲಿಲ್ಲ. ತಂದ ಮಣ್ಣಿನಲ್ಲಿ ಕಲ್ಲು - ಕಡ್ಡಿಗಳಿರುತ್ತಿದ್ದವು. ಅಮ್ಮ ಗಂಟೆಗಟ್ಟಲೆ ಅದೆಷ್ಟು ಸಹನೆಯಿಂದ ಅದನ್ನೆಲ್ಲ ಹಸನು ಮಾಡಿ ಕೊಟ್ಟರೆ, ಅಪ್ಪ ಇಳಿ ಸಂಜೆ ಗಣೇಶ ಮೂರ್ತಿಯನ್ನು ಮಾಡಲು ಶುರುಮಾಡುತ್ತಿದ್ದರು. ತಲೆ, ಸೊಂಡಿಲು, ಹೊಟ್ಟೆ.. ಎಲ್ಲದರ ತೂಕ ಒಂದಾದರೆ.. ಆ ಪುಟ್ಟ ಬೆರಳುಗಳನ್ನು ಮಾಡುವೆ ಕಲೆ ಸುಲಭವಿರಲಿಲ್ಲ. ಅಲ್ಲಿಗೆ ಗಣೇಶನಿಗೆ ಜೀವ ಬಂದಂತಿರುತ್ತಿತ್ತು. ನಾನು ಇಲಿ ಮಾಡುತ್ತಿದ್ದೆ. ಅದು ಒಂದೊಂದು ವರ್ಷ ಒಂದೊಂದು ಪ್ರಾಣಿಯಂತೆ ಕಾಣುತ್ತಿತ್ತು.
ಪ್ರತಿ ವರ್ಷ ಅದೇ ಫೋರ್ ಬೇ ಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲು ಹೋಗುವಾಗ ದುಃಖವೊಂದು ಗಂಟಲಲ್ಲಿ ಸಿಕ್ಕಿಕೊಳ್ಳುತ್ತಿತ್ತು. ಪುಟ್ಟ ಕಂಗಳಲ್ಲಿ ಕಂಡೂ ಕಾಣದ ನೀರು. ಗೆಳೆಯನನ್ನು, ಅಣ್ಣನನ್ನು ದೂರ ಕಳಿಸುವ ಭಾವ.
ಪಾಪ ಗಣೇಶ! ನದಿಯ ಆಳದಲ್ಲಿ, ಕತ್ತಲ ಗರ್ಭದಲ್ಲಿ, ಹಸಿವೆಯಲ್ಲಿ ಹೇಗೆ ಹೋಗುತ್ತಾನೆ ಎಂಬ ದಿಗಿಲು ಕೂಡ ಕಾಡುತ್ತಿತ್ತು.
"ಕಾಲುವೆಯಲ್ಲಿ ವಿಸರ್ಜನೆ ಮಾಡಿದ ನಂತರ ಆಳದಲ್ಲಿ ತಮ್ಮ ಮಗನನ್ನು ಕರೆದೊಯ್ಯಲು ಶಿವ - ಪಾರ್ವತಿ ಬರುತ್ತಾರೆ. ಅಲ್ಲಿಯವರೆಗೆ ಹಸಿವಾಗದಿರಲೆಂದು ಬಟ್ಟೆಯ ಗಂಟಿನಲ್ಲಿ ಮಂಡರಳು ಇಟ್ಟು ಕಳಿಸುತ್ತಿದ್ದೇವಲ್ಲ!" - ಅಂತ ಅಮ್ಮ ನಮ್ಮನ್ನು ಸಮಾಧಾನ ಮಾಡುತ್ತಿದ್ದಳು. ಎಂಥ ಪ್ರೀತಿಯ ಸುಳ್ಳುಗಳು!
ವರ್ಷಗಳು ಕಳೆದವು. ನಿಧಾನವಾಗಿ ನಾನು ಮಣ್ಣಿನ ಗಣೇಶನನ್ನು ನಾನು ಮಾಡಲು ಶುರುಮಾಡಿದೆ. ಗೆಳೆಯನೇ ಆಗಿದ್ದರೆ ಚೆಂದವಿರುತ್ತಿತ್ತು; ಗಣೇಶ ದೇವರಾಗಿಬಿಟ್ಟ. ದೊಡ್ಡವರಾಗುತ್ತಾ ವಿಸರ್ಜನೆಯ ಸಮಯದ ಬೀಳ್ಕೊಡುಗೆ ಭಾವ ಮಾಸಿಹೋಯಿತು.
ಈ ವರ್ಷ ಮಗಳು ಸಮನ್ವಿಯನ್ನು ಊರ ಹೊರಗಿನ ಹೊಲವೊಂದಕ್ಕೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ಹೆಕ್ಕಿ ಜೇಡಿ ಮಣ್ಣು ತಂದೆವು. ನಾನೊಂದು ಅವಳೊಂದು ಗಣೇಶನ ಮೂರ್ತಿ ಮಾಡಿದೆವು.
ರಾತ್ರಿ ವಿಸರ್ಜನೆ ಮಾಡುವಾಗ ಅವಳ ಮನದಲ್ಲಿ, ಮಾತುಗಳಲ್ಲಿ ಅದೇ ಬೇಸರದ ಭಾವ. ನಾನು ಅದೇ ಕಥೆ ಹೇಳಿದೆ: ಗಣೇಶನ ಅಪ್ಪ - ಅಮ್ಮ ಅವನನ್ನು ಕರೆದುಕೊಂಡು ಹೋಗುವ, ಮತ್ತೆ ಮುಂದಿನ ವರ್ಷ ಕಳಿಸುವ ಕಥೆ!
ಸೋರುವ ಕಾಲದ ಬಿದಿರ ಚಪ್ಪರದಡಿ ಬಾಳೊಂದು ಮಣ್ಣ ಗಣೇಶ!
ಗಣೇಶ ಕರಗುತ್ತಾನೆ; ಮತ್ತೆ ಮಣ್ಣು ಗಣೇಶನಾಗಿ, ಮತ್ತೆ ನೀರಿನಲ್ಲಿ ಮುಳುಗಿ, ದಡ ಸೇರಿ, ಮತ್ತೆ ಮುಂದಿನ ವರ್ಷ ಗಣೇಶನಾಗುತ್ತಾನೆ. ಕಳೆದು ಹೋದ ಭಾವ ಮತ್ತೆ ಮೂಡುತ್ತದೆ.
Comments