ಅಪ್ಪನೆಂಬ ವೃಕ್ಷ
- Harsha
- Sep 21
- 1 min read
ನಾನೊಂದು ವೃಕ್ಷ. ಇದೇ ದಿವಸ, ಎಷ್ಟೋ ವರ್ಷಗಳ ಹಿಂದೆ, ಬೀಜದ ಪೊರೆಯ ಹರಿದು, ನೆಲದ ಗರ್ಭವ ಸೀಳಿಕೊಂಡು ಮೇಲೆ ಬಂದಿದ್ದೆ. ಅದು ನನ್ನ ಮೊದಲ ಸಂಘರ್ಷವಾಗಿತ್ತಾ? ಗೊತ್ತಿಲ್ಲ. ಅದನ್ನು ನಾನು ಆನಂದಿಸಿದ್ದೆ.
ನನ್ನೊಡನೆ ಹುಟ್ಟಿದ ನನ್ನ ಮಿತ್ರ ಸಸಿಗಳು, ಆಹ್ಲಾದದ ತಂಗಾಳಿಗೆ, ಆನಂದದ ಮಳೆಗೆ ಮೈಯೊಡ್ಡುತ್ತಿರುವಾಗ, ನಾನು ಮಾತ್ರ, ಶುಷ್ಕ ಭೂಮಿಯ ಮೇಲೆ ನಿಂತು, ಆಕಾಶದ ಕಡೆ ಮುಖಮಾಡಿ, ಕಾಣದ ಮೋಡಗಳನ್ನು ಕರೆಯುತ್ತಿದ್ದೆ. ಅಲ್ಲಿ ಏನೂ ಘಟಿಸಲಿಲ್ಲ. ನನಗೆ ಅರ್ಥವಾಯಿತು, ನಾನು ಅಲ್ಲೇ ಉಳಿದರೆ ನಿರ್ಣಾಮಗೊಳ್ಳುತ್ತೇನೆ. ನನಗೆ ನಾನೇ ಹೇಳಿಕೊಂಡೆ, ' ನಾನಿದ್ದಲ್ಲಿ ಮೇಘಗಳು ಕರಗುವುದಿಲ್ಲವಾದರೆ, ನಾನೇ ಮಳೆ ಸುರಿಯುವಲ್ಲಿ ಹೋಗಬೇಕು!'
ನಾನು ಪ್ರಯತ್ನಿಸಿದೆ - ಒಮ್ಮೆ, ಇನ್ನೊಮ್ಮೆ, ಮತ್ತೊಮ್ಮೆ. ಕೊನೆಗೂ ತೆವಳುವುದನ್ನು ಕಲಿತೆ. ತೆವಳುವುದು ಕ್ರಮೇಣವಾಗಿ ನಡಿಗೆಯಾಯಿತು. ವೇಗವಾಗಿ ನಡೆದೆ. ದೂರ ದೂರ ನಡೆದೆ. ಅವಕಾಶಗಳ ಮೋಡಗಳನ್ನು ಬೆನ್ನತ್ತಿ ನಡೆದೆ. ಆ ಮೋಡಗಳು ನನ್ನ ಮೇಲೆ ಧಾರಾಕಾರವಾಗಿ ಮಳೆ ಸುರಿಯುವವರೆಗೆ ನಡೆದೆ. ಅದು ಸಂಘರ್ಷವಾಗಿತ್ತಾ? ಗೊತ್ತಿಲ್ಲ! ಅದನ್ನು ಒಂದು ಅನುಭವ ಎಂದುಕೊಂಡೆ.
ಎಷ್ಟೇ ನಡೆಯುವುದನ್ನು ಕಲಿತಿದ್ದರೂ ನಾನು ಒಂದು ವೃಕ್ಷವಷ್ಟೇ! ನಾನು ಹುಟ್ಟಿದ ಮಣ್ಣಿನ ಬಂಧ - ಬಂಧನ ನಾನಲ್ಲಿ ಯಾವಾಗಲೂ ಜಾಗೃತವಾಗಿತ್ತು. ನನ್ನ ಮಣ್ಣನ್ನು ಹಂಚಿಕೊಂಡ ನನ್ನ ಒಡಹುಟ್ಟಿದ ಸಸಿಗಳು ಅದೇ ಮಣ್ಣಿನಲ್ಲಿದ್ದರೆ ಮರವೇ ಆಗದೆ ಅಲ್ಲೇ ಮಣ್ಣಾಗುತ್ತಾರೆ ಅಂತ ಗೊತ್ತಿತ್ತು. ಅವರಿಗೂ ನಡಿಗೆ ಸಾಧ್ಯ ಎನ್ನುವುದನ್ನು ಹೇಳಿದೆ. ಅವರೊಂದಿಗೆ ನನ್ನ ಕಾಲುಗಳನ್ನು ಹಂಚಿಕೊಂಡೆ. ಅವರಿಗೂ ನಡೆಯಲು ಬೇಕಾದ, ಅವಕಾಶದೂರಿಗೆ ಬರಲು, ಮೋಡದ ನಾಡಿಗೆ ಸೇರಲು ಒಂದು ರಸ್ತೆ ಮಾಡಿಕೊಟ್ಟೆ. ಅವರು ಬೆಳೆದರು. ಅವರನ್ನು ಬೆಳೆಸುತ್ತಾ ಬೆಳೆಸುತ್ತಾ ನನ್ನ ಯೌವನದ ಸತ್ವ ಕಳೆದುಕೊಂಡೆ, ತ್ಯಾಗ ಮಾಡಿದೆ. ಅವರು ವೇಗವಾಗಿ ನಡೆದರು. ನಾನು ಹಿಂದೆ ಉಳಿದುಹೋದೆನಾ? ಗೊತ್ತಿಲ್ಲ. ನಾನು ಮಾಡಬೇಕಾದದ್ದು ಮಾಡಿದೆ. ನಿರ್ವಹಿಸಲು ನನಗಿನ್ನೂ ಬಹಳ ಪಾತ್ರಗಳಿದ್ದವು.
ನನ್ನ ನೆರಳಿನಲ್ಲಿ ಸಾವಿರ ಸಾವಿರ ಶಿಷ್ಯ ಸಸ್ಯಗಳು ಹುಟ್ಟಿಕೊಂಡಿದ್ದವು. ಮುಂದೊಂದು ದಿನ ಸಾವಿರ ಸಸಿಗಳಿಗೆ ಅವು ಕೂಡ ನೆರಳಾಗಬೇಕೆಂಬುದನ್ನು ಹೇಳಿಕೊಟ್ಟೆ.
ಇವತ್ತು ಸುತ್ತ ನೋಡಿದರೆ ನನ್ನ ಮಣ್ಣು ಹಂಚಿಕೊಂಡ ಎಷ್ಟೋ ಕೃತಘ್ನ ವೃಕ್ಷಗಳ ಜೊತೆಗೆ, ನನ್ನ ನೆರಳು ಹಂಚಿಕೊಂಡ ಸಾವಿರ ಸಾವಿರ ಕೃತಜ್ಞ ವೃಕ್ಷಗಳೂ ಇವೆ. ಅದು ನನ್ನ ಕಾಡು. ನನಗೆ ಸಂತೋಷವಾಗಿದೆಯಾ? ಗೊತ್ತಿಲ್ಲ! ಅದಕ್ಕಿಂತ ಹೆಚ್ಚಾದ ಸಂತೃಪ್ತಿ ನನಗಿದೆ.
ನಾನು ಬೆಳೆಯುತ್ತಾ, ಬೆಳೆಸುತ್ತಾ, ನನ್ನ ಸಂಗಾತಿ, ಸಂತಾನ ವೃಕ್ಗಳಿಗೂ ನನ್ನಿಂದಾಗುವುದನ್ನು ಕೊಟ್ಟಿದ್ದೇನೆ. ಅವರಿಗೆ ಒಳ್ಳೆಯದಾಗುವುದನ್ನು ಮತ್ತು ಅವರಿಂದ ಒಳ್ಳೆಯದಾಗುವುದನ್ನು ಕೊಟ್ಟಿದ್ದೇನೆ. ಪ್ರಪಂಚಕ್ಕೆ ನನ್ನ ಪಾತ್ರ ಮುಗಿದು, ನನಗೆ ಪ್ರಪಂಚದ ಪಾತ್ರ ಸಾಕೆನಿಸಿ ಒಂದು ದಿನ ನಾನು ಕೂಡ ನಿರ್ನಾಮನಾಗುತ್ತೇನಾ? ನನಗೆ ಗೊತ್ತು ನಾನು ಸಾಯುವುದಿಲ್ಲ
Comments