"ಸೋಲೇ ಇಲ್ಲ ನಿನ್ನ ಹಾಡು ಹಾಡುವಾಗ.." ಎಂದು ಹಾಡಿದ ಹುಡುಗಿಯ ಕಥೆ
'ಸರ್, ಸಂಧ್ಯಾ ಹೋಗ್ಬಿಟ್ಳು' ಅಂತ ಆ ಹುಡುಗ ನನಗೆ ಫೋನ್ ಮಾಡಿ ಹೇಳುವಷ್ಟು ಹೊತ್ತಿಗಾಗಲೇ ನಾನು ಪ್ರಯಾಣಿಸುತ್ತಿದ್ದ ಬಸ್ಸು ಬಳ್ಳಾರಿ ದಾಟಿ ಬಹುಶಃ ಐವತ್ತು ಮೈಲಿ ಹೋಗಿತ್ತು.
ನಾನು ಊರಿಗೆ ಮರಳಿ ಹೋಗುವಷ್ಟು ಹತ್ತಿರದಲ್ಲಿರಲಿಲ್ಲ; ಮತ್ತು ಅವಳು ಲೋಕಕ್ಕೆ ಮರಳಲಾರದಷ್ಟು ದೂರ ಹೋಗಿದ್ದಳು. ಬಸ್ಸಿನ ಕಿಟಕಿಯ ಹೊರಗೆ ಮತ್ತು ಮನದ ಬಾಗಿಲ ಒಳಗೆ ಮುಗಿಯುವುದಿಲ್ಲ ಎನಿಸುವಂಥ ಕತ್ತಲು.
ಆ ಹುಡುಗಿಯನ್ನು ಮೊದಲು ನೋಡಿದ್ದು ಶಾಲೆಯ ಅಂಗಳದಲ್ಲಿ, ಗಣಿತ ಕಲಿಸುವ ಟೀಚರ್ ನೌಕರಿ ಕೇಳಿಕೊಂಡು ಬಂದಿದ್ದಳು. ಪಾಠ ಹೇಳಿಕೊಡುವ ಭಾಷೆ, ವಿಷಯದ ಜ್ಞಾನ - ಅದ್ಭುತ ಎನಿಸುವಷ್ಟು ಇರಲಿಲ್ಲ. ಆದರೆ ಆ ಹುಡುಗಿಯಲ್ಲಿ ಮಕ್ಕಳೆಡೆಗಿನ ಪ್ರೀತಿ ಎದ್ದು ಕಾಣುತ್ತಿತ್ತು. ಕೆಲಸಕ್ಕೆ ಸೇರಿಸಿಕೊಂಡ ನಮ್ಮ ನಿರ್ಧಾರ ತಪ್ಪಾಗಲಿಲ್ಲ. ಪ್ರೀತಿ ತನ್ನ ಅದ್ಭುತವನ್ನು ಸೃಷ್ಟಿಸಿತ್ತು. ಬರಬರುತ್ತ ಅದೆಂಥ ಅಪರೂಪದ ಟೀಚರ್ ಆದಳು ಆ ಹುಡುಗಿ.
ಒಂದು ದಿನ ಮೆಸೇಜು ಬಂತು 'ಸರ್, ಬೆನ್ನು ನೋವಿನಿಂದ ಶಾಲೆಗೆ ಬರಲು ಆಗುತ್ತಿಲ್ಲ.' ಅಲ್ಲಿಂದ ಶುರುವಾಯಿತು ಒಂದು ಅಸಹನೀಯ ಅಧ್ಯಾಯ. ಮತ್ತೆ ಮತ್ತೆ ಖಾಯಿಲೆ ಬೀಳತೊಡಗಿದಳು ಸಂಧ್ಯಾ. ಅಸಹನೀಯ ಬೆನ್ನು ನೋವು. ಶಾಲೆಗೆ ಬಂದಾಗಲೂ ಅದೆಷ್ಟು ನೋವಿರುತ್ತಿತ್ತೋ ಏನೋ, ಮಕ್ಕಳ ಮೇಲಿನ ಪ್ರೀತಿಗೆ, ಮಾಡುವ ಕೆಲಸದ ಮೇಲೆ ಶ್ರದ್ಧೆಗೆ ಹಾಗೇ ನಗುತ್ತಾ ಕೆಲಸ ಮಾಡುತ್ತಿದ್ದಳು. ಆದರೆ ಬರಬರುತ್ತಾ ಬೆನ್ನು ನೋವು ಹೆಚ್ಚಾಗುತ್ತಾ ಶಾಲೆಗೇ ಗೈರಾಗುವುದು ಹೆಚ್ಚಾಯಿತು. ಪಾಠಗಳು ಹಿಂದುಳಿದವು.
ಅವಳ ಪ್ರತಿ ಫೋನ್ ಕಾಲ್ ಮೆಸೇಜುಗಳಲ್ಲೂ ಅದೇ ಆತಂಕ ಎದ್ದು ಕಾಣುತ್ತಿತ್ತು.
ಅವಳ ನೋವು, ಕೆಲಸದ ಕಡೆಗಿನ ತಪನೆ - ಎರಡೂ ಅರ್ಥವಾಗುತ್ತಿದ್ದವು. ನನ್ನ ಕೈಲಿದ್ದ ಅಧಿಕಾರದಿಂದ ಕೈಲಾದ ಸಹಾಯ ಮಾಡಿದೆ. ಆ ಹುಡುಗಿಗೆ ಏನನ್ನಿಸಿತೋ 'ಸರ್, ನೀವು ತಪ್ಪು ತಿಳಿದುಕೊಳ್ಳುವುದಿಲ್ಲವೆಂದರೆ ನಿಮ್ಮನ್ನ 'ಅಣ್ಣ' ಅನ್ನಲಾ?' ಅಂತ ಮೆಸೇಜು ಮಾಡಿದಳು.
'ಹುಚ್ಚು ಹುಡುಗಿ.. ಅದನ್ನ ಕೇಳ್ತಾರಾ?' ಅಂತ ಉತ್ತರ ಕೇಳಿಸಿದ್ದೆ.
ಅವಳ ಅನಾರೋಗ್ಯದ ತೀವ್ರತೆ ಹೆಚ್ಚುತ್ತಾ ಇತ್ತು.
ಒಂದು ದಿನ ಸಿಂಧನೂರಿನಲ್ಲಿ ಗಣಿತದ ಟೀಚರುಗಳಿಗೆ ಒಂದು ದಿನದ ಕಾರ್ಯಾಗಾರ (workshop) ಇತ್ತು. ಹಿಂದಿನ ರಾತ್ರಿ ನನಗೆ ಫೋನ್ ಕಾಲ್ ಬಂತು. 'ಸರ್ ನನಗೆ ತುಂಬಾ ಬೆನ್ನು ನೋವು. ನಾಳೆ ರಜೆ ಬೇಕಿತ್ತು.'
ನಾನು ಬೆಂಗಳೂರಿನಲ್ಲಿದ್ದೆ; ಸಿಂಧನೂರಿಗೆ ಹೋಗುವ ಬಸ್ಸಿನಲ್ಲಿ. ಅವಳ ಧ್ವನಿಯಲ್ಲಿ ಪ್ರಾಮಾಣಿಕತೆ ಸ್ಪಷ್ಟವಿತ್ತು. ಈ ಕಡೆ ಮೇಲಿನವರಿಂದ 'ಯಾವ ಟೀಚರ್ ಕೂಡ ಗೈರು (absent) ಆಗುವಂತಿಲ್ಲ' ಎಂಬ ಸ್ಪಷ್ಟ ಆಜ್ಞೆ ಇತ್ತು. ಆದರೂ ನನ್ನ ಮೇಲಿನವರೊಂದಿಗೆ ಮಾತನಾಡಿದೆ. ಇಲ್ಲ, ಅನುಮತಿ ಸಿಗಲಿಲ್ಲ. ಅಸಹಾಯಕತೆಗಿಂತ ದೊಡ್ಡ ದುಃಖ ಇನ್ನೊಂದಿಲ್ಲ.
ಮಾರನೆಯ ದಿನ ಆಗಾಗ ಅವಳನ್ನು ಗಮನಿಸುತ್ತಿದ್ದೆ. ಒಮ್ಮೊಮ್ಮೆ ಸುಸ್ತು, ಒಮ್ಮೊಮ್ಮೆ ನೋವು, ಒಮ್ಮೊಮ್ಮೆ ನಗು - ಎಲ್ಲ ಇದ್ದವು. ಪವಾಡವೆಂಬಂತೆ ಸಂಜೆ ಹೊತ್ತಿಗೆ ಬಹಳ ಲವಲವಿಕೆಯಿಂದಿದ್ದಳು ಸಂಧ್ಯಾ. ಶಾಲೆಯ ಬಸ್ಸಿನಲ್ಲಿಯೇ ಬಳ್ಳಾರಿಗೆ ಹೋಗುತ್ತಿದ್ದೆವು. ಮುಂದೆ ಡ್ರೈವರ್ ನ ಪಕ್ಕದ ಒಂಟಿ ಸೀಟಿನಲ್ಲಿ ಕುಳಿತು ನಾನು ತೇಜಸ್ವಿ ಬರೆದ 'ತಬರನ ಕತೆ' ಓದುತ್ತಿದ್ದೆ. ತಬರನ ಹೆಂಡತಿ ತನ್ನ ನೋವನ್ನು ಸಹಿಸಲಾರದೆ ತನಗೆ ವಿಷ ತಂದು ಕೊಡು ಎಂದು ಕೇಳಿಕೊಂಡಾಗ, ಅವನ ಬಳಿ ಅಂದು ಅದಕ್ಕೂ ಹಣವಿರದ ಹೃದಯ ಕಲುಕುವ ಸನ್ನಿವೇಶ. ಓದಿದ ಪ್ರತಿ ಬಾರಿಯೂ ಹೊಸದಾಗಿ ನೀರು ತುಂಬಿಕೊಳ್ಳುತ್ತವೆ ಕಂಗಳು. ಅದೇ ಭಾಗ ಓದುತ್ತಿದ್ದೆ. ಹಿಂದೆಯಿಂದ ಹಾಡು ಕೇಳಿತು..
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು?
ಬೇರೆ ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು..
ಸೋಲೇ ಇಲ್ಲ.. ನಿನ್ನ ಹಾಡು ಹಾಡುವಾಗ..
ಟೀಚರ್ ಗಳೆಲ್ಲರ ಅಂಟಾಕ್ಷರಿ ಭರದಿಂದ ಸಾಗಿತ್ತು. ಉತ್ಸಾಹದಿಂದ ಹಾಡುತ್ತಿದ್ದವಳು ನನ್ನ ಅದೇ ತಂಗಿ ಸಂಧ್ಯಾ. ತಬರನನ್ನು, ಅವನ ಹೆಂಡತಿಯನ್ನು ಮರೆತು ಸಂತೋಷ ಪಟ್ಟೆ.
ಅಂತ್ಯಾಕ್ಷರಿಯಂತೆ ಅವಳ ಬದುಕಿನ ಪುಸ್ತಕದ ಅಕ್ಷರಗಳು ಅಂತ್ಯವಾಗುತ್ತಿವೆ ಅನ್ನುವುದು ತಿಳಿದಿರಲಿಲ್ಲ.
ಆರೋಗ್ಯ ತೀರಾ ಹದಗೆಟ್ಟಿತು. ಬೆಂಗಳೂರಿನ HOSMAT ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ ಅವಳ ಅಣ್ಣ ಒಮ್ಮೆ ತಿಳಿಸಿದ್ದ. ಬೆನ್ನು ಮೂಳೆಯ ಸಮಸ್ಯೆ ಇದೆ ಅಂದರು. ಇನ್ನೂ ಕೆಲ ದಿನಕ್ಕೆ ಮತ್ತೆ ಫೋನ್ ಕಾಲ್.. ಕಾಮಾಲೆ (jaundice) ಆಗಿದೆಯಂತೆ, ಯಕೃತ್ತು (ಲಿವರ್) ಸಮಸ್ಯೆ ಅಂದರು.. ಆತಂಕವಾಗುತ್ತಿತ್ತು. ಕ್ಯಾನ್ಸರ್ ಅಂತ ಅಂತ ಗಾಳಿಸುದ್ದಿ ಬಂತು. ಮನಸ್ಸು ನಂಬಲು ತಯಾರಿರಲಿಲ್ಲ.
ಕೆಲ ದಿನಗಳ ನಂತರ ಒಂದು ಕರೆ ಬಂತು: 'ಸರ್, ಸಂಧ್ಯಾ ಹೋಗ್ಬಿಟ್ಳು.' ಅಳು ಕೂಡ ಬಾರದಷ್ಟು ಸ್ಥಬ್ಧನಾಗಿ ಹೋಗಿದ್ದೆ.
ಕೊನೆಗೂ ಆ ಪುಟ್ಟ ಹುಡುಗಿಯನ್ನು ನೋಡಲು ಹೋಗಲಾಗಲಿಲ್ಲ. ಶಾಲೆಯ ಸಿಬ್ಬಂದಿ ಅವಳನ್ನು ಕೊನೆಯ ಬಾರಿಗೆ ನೋಡಲು ಹೋದಾಗ ಸಂಧ್ಯಾಳ ಅಮ್ಮ ನನ್ನ ಬಗ್ಗೆ ಕೇಳಿದರಂತೆ 'ಸಂಧ್ಯಾಳಿಗೆ ತನ್ನ ಸಾವು ಗೊತ್ತಾಗಿತ್ತೋ ಏನೋ. ತಾನು ಬಳ್ಳಾರಿಗೆ ಮರಳಿದ ಮೇಲೆ ಹರ್ಷ ಸರ್ ತನ್ನನ್ನು ನೋಡಲು ಬಂದೆ ಬರ್ತಾರೆ ಅಂತ ಹೇಳಿದ್ದಳು ನನ್ನ ಮಗಳು.' ಅಂತ ಅತ್ತರಂತೆ ಅಮ್ಮ, ನಾನು ಆ ಅಮ್ಮನ್ನು ಎಂದೂ ನೋಡಿರಲಿಲ್ಲ, ನೋಡಲಿಲ್ಲ. ನಾನು ಮತ್ತು ಸಂಧ್ಯಾ ಒಂದೇ ಗರ್ಭವನ್ನು ಹಂಚಿಕೊಳ್ಳಲಿಲ್ಲ. ಆದರೂ ಯಾಕಷ್ಟು ತಂಗಿ ಅನಿಸುತ್ತಾಳೆ?
ಕೆಲವೊಂದು ಪ್ರೀತಿ ನಮ್ಮ ಅರ್ಹತೆಗೆ ಮೀರಿ ಸಿಗುತ್ತವೆ. ಕೆಲವೊಂದು ಬಂಧಗಳು ರಕ್ತವನ್ನು ದಾಟಿ ನಮ್ಮೊಂದಿಗೆ ಬರುತ್ತವೆ. ಮನುಷ್ಯ ಸಂಬಂಧಗಳು ಇಷ್ಟು ಗಾಢವಾಗಿರುವಾಗ, ನಾವು ಕಾಣದ ದೇವರನ್ನು ಪೂಜಿಸುತ್ತ ಇರುವ ಸಂಬಂಧಗಳನ್ನು ಮರೆಯುತ್ತೇವೆ, ಪ್ರೀತಿ ಹೀಗೆ ಎಲ್ಲೆಲ್ಲಿಂದಲೂ ಹರಿದು ಬರುವಾಗ ನಾವು ಜಾತಿ - ಕುಲ ಅಂತ ಗೆರೆ ಗೀಚಿಕೊಳ್ಳುತ್ತೇವೆ.
ಇಷ್ಟು ವರ್ಷಗಳ ನಂತರ ಯಾಕೋ ಇದೆಲ್ಲ ನೆನಪಾಯಿತು. ನನ್ನ ಮಣಿಕಟ್ಟಿನ ಮೇಲೆ ಆ ಪುಟ್ಟ ತಂಗಿಯ ಕಟ್ಟದ ರಾಖಿ ಮೂಡಿದಂತೆ ಭಾಸವಾಗುತ್ತಿದೆ.
Comentarios