ಚಳಿಯು ಕೂಡ ನಡುಗುವಾಗ...
ಇಷ್ಟರಲ್ಲೇ ಮುಗಿಯುವ ವರ್ಷಕ್ಕೆ ಹಿತವಾದ ಚಳಿಜ್ವರ. ಸೂರ್ಯ ಕೂಡ ಮೈಮುರಿದು ಏಳುವಷ್ಟರಲ್ಲಿ ಸಮಯ ಆರೂವರೆ ಗಂಟೆ. ಭೂಮಿಯ ಹಣೆ ಮೇಲೆ ಸುಖದ ಬೆವರ ಬಿಂದುಗಳಂಥ ಇಬ್ಬನಿ. ಹೊದ್ದು ಮಲಗಿದಷ್ಟೂ ಕಾಡುವ ನಿದ್ರೆ. ಪ್ರತಿ ದಿನ ನೆತ್ತಿ ಮೇಲೆ ಕುಕ್ಕಿಸಿಕೊಂಡರೂ ಬುದ್ಧಿ ಕಲಿಯದ ಅಲಾರಮ್ಮು. ರಸ್ತೆ ಪಕ್ಕ ಚಹಾ ಮಾಡುವವನ ಕಿವಿಯನ್ನು ಮುಚ್ಚುವ ಮಂಕೀ ಕ್ಯಾಪು. ಬರಿಮೈಮೇಲೆ ಮಂಜನ್ನೂ ಮೀರಿಸುವ ತಣ್ಣೀರನ್ನು ಸುರಿದುಕೊಳ್ಳುವ ಹಿಂಸಾವಿನೋದಿ ದೇವರ ಭಕ್ತರ ಬಾಯಲ್ಲಿ 'ಸ್ವಾಮಿಯೇ ಶರಣಂ ಅಯ್ಯಪ್ಪ'
ಚಳಿ ಕೂಡ ನಡುಗುವ ಇಂಥವೇ ದಿನಗಳಲ್ಲಿ ಪರಿಚಯವಾದವಳು ನೀನು. ಮರಗಳೆಲ್ಲ ಒಣಗಿದ ಎಲೆಗಳನ್ನು ಉದುರಿಸಿಕೊಳ್ಳುತ್ತಿದ್ದ ಕಾಲದಲ್ಲಿ ಮನಸಿನಲ್ಲಿ ಚಿಗುರು ಮೂಡಿಸಿದವಳು. ನೀನು ಬರುವ ಮುಂಚೆ ಜೀವನದಲ್ಲಿ ಹೇಳಿಕೊಳ್ಳುವಂಥ ಸಂಭ್ರಮಗಳಿರಲಿಲ್ಲ ನಿಜ; ಆದರೆ ಅನುಭವಿಸಲಾಗದ ಕಷ್ಟ - ನೋವುಗಳೂ ಇರಲಿಲ್ಲ. ಏನು ಹೇಳಬೇಕೋ ತೋಚದ ಜ್ಯೋತಿಷಿ, ಹೇಳಿದ ನಿತ್ಯಭವಿಷ್ಯವನ್ನೇ ಮತ್ತೆ ಮತ್ತೆ ಅದಲು-ಬದಲು ಮಾಡಿ ಬೇರೆ-ಬೇರೆ ರಾಶಿಯವರಿಗೆಹೇಳಿದಂತೆ, ಜೀವನ ಕೂಡ ಅವೇ ದಿನಗಳನ್ನು ಪುನರಾವರ್ತಿಸುತ್ತಿತ್ತು. ಅದೇ ಕಾಲೇಜು, ಅವೇ ಕ್ಲಾಸುಗಳು, ಅವೇ ಕಥೆ - -ಕಾದಂಬರಿ - ಕಾವ್ಯ. ಅಲ್ಲಿಂದ ಮರಳಿದರೆ ನನ್ನ ಅದೇ ಚಚೌಕ ಕೋಣೆ. ಅರ್ಧ ಕೇಳಿದ ಹಾಡುಗಳು, ಪೂರ್ತಿ ಓದದ ಪುಸ್ತಕಗಳು.. ಜೀವನ ಸರಳ ರೇಖೆಯಂತಿತ್ತು.
ಅವತ್ತೊಂದು ದಿನ ಕಾಲೇಜಿನ ಕಾರಿಡಾರಿನಲ್ಲಿ ಎದುರು ಬಂದು Could you please tell me where the English department is? ಅಂತ ಕೇಳಿದವಳ ಧ್ವನಿಯಲ್ಲಿ ಇಂಗ್ಲೀಷು ಮೀಡಿಯಂ ಹುಡುಗಿಯ ಒಂದು ಮುದ್ದಾದ ಅಹಂಕಾರವಿತ್ತು. 'ಮುಂದೆ ಹೋಗಿ ಬಲಕ್ಕೆ ತಿರುಗಿ, ಅಲ್ಲೇ ಮೂರನೇ ರೂಮು' ಎಂದು ಹೇಳಿದ ನನ್ನ ಧ್ವನಿಯಲ್ಲಿ ಕನ್ನಡ ಮೀಡಿಯಂ ಹುಡುಗನ ಅಮಾಯಕತೆ ಇತ್ತಾ? ನೀನೇ ಹೇಳಬೇಕು.
ಆಮೇಲೆ ನಡೆದದ್ದೆಲ್ಲ ಕ್ರೈಸ್ತ ಸಭೆಗಳಲ್ಲಿ ನಡೆಯುವ ಸಾಮೂಹಿಕ ಸನ್ನಿ; ಏನಾಯಿತೋ ಗೊತ್ತಾಗಲಿಲ್ಲ. ಪ್ರೀತಿಗಿಂತ ದೊಡ್ಡ ಸನ್ನಿ ಇನ್ಯಾವುದೂ ಇರಲು ಸಾಧ್ಯ!
ನನ್ನ ಚಚೌಕ ಕೋಣೆಯಿಂದ ಪ್ರೇಮಗೀತೆ ಕೇಳತೊಡಗಿದವು:
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಮೋಹಿಸಿದ್ದು ನಿನ್ನ ರೂಪವಾ? ಅಮಾಯಕತೆಯಾ? ಅಹಂಕಾರವಾ? ಪೆದ್ದುತನವಾ? ಸಮಯವಾದರೂ ಹಠಮಾಡಿ ನಿನ್ನಲ್ಲಿ ಹಾಗೇ ಉಳಿದುಕೊಂಡ ಬಾಲ್ಯವಾ? ಗೊತ್ತಿಲ್ಲ. ಯೋಚಿಸುವಷ್ಟು ಬುದ್ಧಿಯಿದ್ದರೆ ಪ್ರೀತಿ ಹೇಗಾದೀತು? ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ನೀನು ಬೆಳಗಿನ ವಾಕ್ ಹೆಸರಲ್ಲಿ ನಾಲ್ಕು ಹೆಜ್ಜೆ ಹಾಕುವೆ ಎಂಬ ಕಾರಣಕ್ಕೆ ನಾನು ಅಲಾರಮ್ಮು ಬಾಯಿ ಬಡಿದುಕೊಳ್ಳುವ ಮೊದಲೇ ಏಳಲು ಶುರು ಮಾಡಿದೆ. ಲೈಬ್ರರಿಯ ಟೇಬಲ್ಲುಗಳ ಮೇಲೆ ನನ್ನ ಕುವೆಂಪುವಿನ ಮಲೆಗಳಲ್ಲಿ ಮದುಮಗಳು - ನಿನ್ನ Shakespeare ನ ಜೂಲಿಯೆಟ್ ಮಾತಾಡಿಕೊಳ್ಳಲು ಶುರುಮಾಡಿದರು.
ಮೋಡಮುಚ್ಚಿದ್ದ ಊರಿನ ಕೊನೆಗೆ ಹೋಗಿ ಹಂಚಿಕೊಂಡು ಕುಡಿದ ಕಾಫಿಯ ಘಮ, ನಮ್ಮ ಬಿಸಿಲೂರಿನ ಚಳಿಗಾಲದಲ್ಲಿ ಅಕಾಲಿಕವಾಗಿ ಸುರಿದ ಮಳೆ, ಆಗ ನಮ್ಮಿಬ್ಬರನ್ನು ರಕ್ಷಿಸಲಾಗದ ನಿನ್ನ ಪುಟ್ಟ ಛತ್ರಿಯ ಅಸಹಾಯಕತೆ, ತೊಯ್ದ ನಿನ್ನ ತುಟಿಯ ನಡುಗು, ಆಲ್ಲಿವರೆಗಿದ್ದ ಮನಸಿನ ಭಾವನೆಯ ಅಪರಂಜಿಗೆ ವಾಂಛೆಯ ತಾಮ್ರ ಸೇರಿಸಿ ಸೃಷ್ಟಿಗೊಳ್ಳುತ್ತಿದ್ದ ಪ್ರೇಮದ ಆಭರಣ, ಪತ್ರಗಳಲ್ಲಿ ಬರೆದುಕೊಂಡ ಲಕ್ಷ ಅಕ್ಷರ, ಊರಾಚೆ ಬೆಟ್ಟದ ತೊಡೆಯ ಮೇಲೆ ಬೆನ್ನಿಗೆ ಬೆನ್ನು ಮಾಡಿ ಕುಳಿತು ಆಡಿದ ಕೋಟಿ ಮಾತು ... ಅದೆಂಥಾ ಸನ್ನಿ!
ತೂಗು ಮಂಚದಲ್ಲಿ ಕೂತು · ಮೇಘ ಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು · ರಾಧೆ ನಾಚುತಿದ್ದಳು
ಬರಬರುತ್ತಾ ಅದೇನಾಯಿತೋ! ಮೊದಮೊದಲು ಬೆಚ್ಚಗಿದ್ದ ನನ್ನ ಅಪ್ಪುಗೆ ಆಮೇಲಾಮೇಲೆ ನಿನಗೆ ಉಸಿಗಟ್ಟಿಸತೊಡಗಿತು, ನನ್ನ ಮಾತಿನಲ್ಲಿ ಕಾಳಜಿ ಕಾಣುತ್ತಿದ್ದವಳು ನಾನು ಏನೇ ಹೇಳಿದರು ಅಪಾರ್ಥವಾಗಲು ಶುರುವಾಯಿತು, ಆಗ ಕಾರ್ಮೋಡ ಮುಸುಕಿದ್ದರೂ ನನ್ನ ಜೊತೆ ಬರುತ್ತಿದ್ದವಳಿಗೆ ಈಗ ನಿರಭ್ರ ಆಕಾಶವಿದ್ದರೂ ಮಳೆ ಬರಬಹುದೆಂಬ ಕಾರಣ ಹುಟ್ಟಿಕೊಂಡಿತು. ನಿನ್ನ ಪುಟ್ಟ ಛತ್ರಿ ಎಲ್ಲಿ ಮಲಗಿತ್ತು? ಮಾತುಗಳು ವಿರಳವಾದವು. ಭೇಟಿಯಾಗದಿರಲು ನಿನಗೆ ಸಾವಿರ ಕಾರಣ. ನನ್ನ ಕಿಸೆಯಿಂದ ಒಂದು ಚಿಕ್ಕ ಕಾಗದ ಇಣುಕಿದರೂ ನನ್ನ ಅಕ್ಷರಗಳಿಗಾಗಿ ಕಣ್ಣ ತುಂಬಾ ಹೊಳಪು ತುಂಬಿಸಿಕೊಳ್ಳುತ್ತಿದ್ದವಳಿಗೆ ನನ್ನ ಪತ್ರ ನಿನ್ನ ಕೈಗಿಟ್ಟರು ಓದಲು ಆಸಕ್ತಿ ಸತ್ತುಹೋಗಿತ್ತು!
ಮನವಿ ಮಾಡಿದೆ, ಬೇಡಿಕೊಂಡೆ, ಕಾರಣ ಕೇಳಿದೆ, ಪ್ರಶ್ನೆ ಮಾಡಿದೆ - ತೀವ್ರ ನಿಗಾದಲ್ಲಿರುವ ರೋಗಿಯನ್ನು ಉಳಿಸಿಕೊಳ್ಳಲು ಡಾಕ್ಟರು ಮಾಡುವ ಎಲ್ಲ ಪ್ರಯತ್ನಗಳಂತೆ - ನಾನು ಕೂಡ ಕಣ್ಮುಚ್ಚುತ್ತಿರುವ ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಿದೆ. ನಿನ್ನ ಕಣ್ಣಲ್ಲಿದ್ದುದು ಉದಾಸೀನವೋ, ತಿರಸ್ಕಾರವೋ, ನನ್ನ ಪ್ರೀತಿಸಿದ್ದಕ್ಕೆ ಇದ್ದ ಪಶ್ಚಾತ್ತಾಪವೋ ತಿಳಿಯಲಿಲ್ಲ. ಅಂದು ಮುಂಜಾನೆ ಕೊನೆ ಪ್ರಯತ್ನ ಮಾಡಿ ನಿನ್ನಿಂದ ಕಾರಣ ತಿಳಿದುಕೊಳ್ಳಬೇಕೆಂದು ಬಂದವನಿಗೆ ಬಾಗಿಲಿಗೆ ಹಾಕಿದ್ದ ನಿನ್ನ ಮನೆಯ ಬೀಗ ಉತ್ತರ ಕೊಟ್ಟಿತು.
ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು
ಆಮೇಲೆ ನಾನು ಪ್ರಯತ್ನಿಸಲಿಲ್ಲ. ಪ್ರತ್ನಿಸದಿದ್ದರೂ ವಿಷಯ ತಿಳಿಯಿತು; ನನ್ನ ಹೊರತುಪಡಿಸಿ ಎಲ್ಲರಿಗು ಹೇಳಿ ಹೋಗಿದ್ದೆ ನೀನು.
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ
ಯಾಕೋ ಗೊತ್ತಿಲ್ಲ ಇದೆಲ್ಲ ಸುಳ್ಳಿರಬೇಕೆಂದು ಮನಸ್ಸು ಬಯಸುತ್ತಿತ್ತು. ಅದೇ ಮೂರ್ಖ ಮನಸ್ಸಿನ ಆಣತಿಯಂತೆ ಕಾಲೇಜಿನ ಕಾರಿಡಾರಿನಲ್ಲಿ ನಿನ್ನ ಹುಡುಕುತ್ತಿದ್ದವು ಕಂಗಳು. 'ಸರ್, ಮೇಡಂ ನಿಮಗೆ ಕೊಡೋಕೆ ಹೇಳಿದ್ರು' ಅಂತ ನನ್ನ ಕೈಗೆ ನಿನ್ನ ವಿವಾಹದ ಆಮಂತ್ರಣ ಇತ್ತ ಜವಾನ ಹನುಮಂತ. ಅದನ್ನು ತೆರೆದು ನಾನು ನೋಡುವುದಿಲ್ಲ ಎಂದು ನಿನಗೆ ಗೊತ್ತಿತ್ತು; ಅದರ ಜೊತೆ ಮತ್ತೊಂದು ಲಕೋಟೆಯಿತ್ತು. ತೆರೆದು ನೋಡಿದವನಿಗೆ ಕಂಡದ್ದು ನಿನ್ನ ಪುಟ್ಟ ಪತ್ರ:
'ಹೊಸ ಕಾರಣಗಳೇನಿಲ್ಲ. ನಮ್ಮ ಮದುವೆಗೆ ಅಪ್ಪ - ಅಮ್ಮ ಒಪ್ಪಲಿಲ್ಲ. ತಂಗಿಯ ಬಾಳು ಹಾಳಾದರೆ ನನಗೇನು ಎಂದುಕೊಂಡು ನಿನ್ನ ಜೊತೆ ಬರುವಷ್ಟು ಸ್ವಾರ್ಥಿಯಾಗಲು ನನ್ನಿಂದ ಆಗುತ್ತಿಲ್ಲ.
ಪ್ರಪಂಚಕ್ಕೆ ಮತ್ತ್ತೊಂದು ವಿಫಲ ಪ್ರೇಮ ಸೇರಿಕೊಳ್ಳುತ್ತದೆ. 'ಎಲ್ಲ ಮರೆತು ಸುಖವಾಗಿರು' ಅಂತ ನಿನಗೆ ಹೇಳುವಷ್ಟು ದೂರದವಳಲ್ಲ ನಾನು. 'ಮುಂದೆ ಸ್ನೇಹಿತರಾಗಿರೋಣ' ಅನ್ನುವ ಹುಚ್ಚು ಯೋಚನೆಯನ್ನು ಬಿಟ್ಟು ಹೋಗುವಷ್ಟು ಹತ್ತಿರದವಳಾಗಿಯೂ ಈಗ ಉಳಿದಿಲ್ಲ.
ಸಾಧ್ಯವಾದರೆ ಕ್ಷಮಿಸು!'
ಈ ಪತ್ರವನ್ನು ಓದಿದವನು ಸುಮ್ಮನೆ ಊರಾಚೆ ಬೆಟ್ಟಕ್ಕೆ ಹೋಗಿ ಸೂರ್ಯ ಮುಳುಗುವವರೆಗೆ ಅತ್ತುಬಿಟ್ಟೆ. ತಮ್ಮ ಕೈಲಾದಷ್ಟು ದುಃಖವನ್ನು ಕಣ್ಣೀರು ಹೊರಹಾಕಿದವು. ಇನ್ನುಳಿದ ದುಃಖ ಮೌನದ ಗೆಳೆತನ ಮಾಡಿತ್ತು.
ದಿನಗಳು ಉರುಳಿದವು. ಕಣ್ಣೀರು, ಮೌನ, ನಿದ್ರಾಹೀನತೆಯ ಜೊತೆಗೆ ದುಃಖದ ಹೆಣವ ಹೊರಲು ನಾಲ್ಕನೆಯ ಭುಜ ಮುಂದೆ ಬಂತು: ಅಕ್ಷರಗಳು. ಬರೆಯಲು ಕುಳಿತೆ.
ಮೂರು ಬೆರಳುಗಳ ಮಧ್ಯೆ ಲೇಖನಿಯನ್ನು ಅಪ್ಪಿ ಹಿಡಿದು ಬರೆದು ಯಾವ ಕಾಲವಾಗಿತ್ತೋ ಏನೋ. ಬಹಳ ಕಾಲ ಮಾತನಾಡಿಸದೆ ಇದ್ದುದರಿಂದ ಬೆರಳ ಮೊನೆಗಳಿಗೆ ಅಂಟಿಕೊಂಡ ಅಕ್ಷರಗಲು ಥೇಟು ನಿನ್ನಂತೆ ಮುನಿಸಿಕೊಳ್ಳತೊಡಗಿದ್ದವು.
ಕಂಬನಿ ತುಂಬಿಕೊಂಡ ಕಂಗಳಿಗೆ ಅಕ್ಷರ ಅಸ್ಪಷ್ಟ, ದೃಷ್ಟಿ ಮಂಜು-ಮಂಜು, ಚಳಿಗಾಲದ ಮುಂಜಾವಿನಂತೆ!
ಆಗಲೇ ನನ್ನ ಕೋಣೆಯ ಕದ ಯಾರೋ ತಟ್ಟಿದ ಶಬ್ದ. ಬಾಗಿಲು ತೆರೆದರೆ ಆಶ್ಚರ್ಯ!
ಆಶ್ಚರ್ಯ ಮೊದಲ ಬಾರಿಗೆ ಸೀರೆ ಉಟ್ಟುಕೊಂಡು ಬಂದಿತ್ತು: ನೀನು.
'ಈಡಿಯಟ್, ಅದು ಹೇಗೆ ಅಷ್ಟು ಸುಲಭವಾಗಿ ಬಿಟ್ಟುಕೊಟ್ಟೆ ನನ್ನನ್ನ! ನನಗೆ ಆಗಲಿಲ್ಲ. ಅಪ್ಪ - ಅಮ್ಮ ಮುನಿಸಿಕೊಂಡಿದ್ದಾರೆ. ಒಂದು ವರ್ಷ ಅವರನ್ನು ಬಿಟ್ಟು ಬಂದಿದ್ದೇನೆ. ಅಷ್ಟರೊಳಗೆ ನಮ್ಮ ಮಗನನ್ನು ಅವರ ಬಳಿ ಸಂಧಾನಕ್ಕೆ ಕಳಿಸಬೇಕು. ತಂಗಿಗೆ ಭರವಸೆಯಿದೆ - ನಿನ್ನಂಥವನೇ ಯಾರೋ ಅವಳನ್ನು ಅರ್ಥಮಾಡಿಕೊಳ್ಳುವವನು, ಪ್ರಾಣದಷ್ಟು ಪ್ರೀತಿಸುವವನು ಸಿಗುತ್ತಾನೆ. ಹಂಚಿದ ಎಲ್ಲಾ ವಿವಾಹ ಆಮಂತ್ರಣ ಕಾರ್ಡುಗಳನ್ನು ಏನೂ ಮಾಡಲಾಗುವುದಿಲ್ಲ, ಆದರೆ ಒಂದನ್ನು ತಂದಿದ್ದೇನೆ - ಇದರಲ್ಲಿ ಅವನ ಹೆಸರು ಅಳಿಸಿ ನಿನ್ನ ಹೆಸರು ಬರೆಯಬೇಕು.'
ನೀನು ಮಾತಾಡುತ್ತಲೇ ಇದ್ದೆ. ನನ್ನ ಟೇಪ್ ರೆಕಾರ್ಡರ್ ನಲ್ಲಿ ಅಡಿಗರ ಕವಿತೆ ಕೇಳುತ್ತಿತ್ತ...
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ...
ಇದು ಬಾಳು ನೋಡು
ಇದ ತಿಳಿದನೆಂದರು ತಿಳಿದ ಧೀರನಿಲ್ಲ
コメント