top of page
Search

ಸುಮ್ಮನೆ ಅದೆಲ್ಲ ನೆನಪಾಗಿ...

  • Harsha
  • Nov 17, 2023
  • 2 min read

ಮೊದಲಿಂದ ಅವನು ದೇವರ ಪರಮ ಭಕ್ತ. ನಾನು ಅಪ್ಪಟ ನಾಸ್ತಿಕ. ಅವನ ಮಾತು ಬಂಗಾರ. ನನ್ನದು ಬೆಳ್ಳಿಯ ಮೌನ. ಜ್ಞಾಪಕ ಶಕ್ತಿಯಲ್ಲಿ ಅವನು ಆನೆ. ಮರೆವಿನಲ್ಲಿ ನಾನು ಸ್ವರ್ಣ ಮೀನು. ಚಿಕ್ಕ ಜೋಕಿಗೂ ಕಣ್ಣೀರು ತುಂಬಿಕೊಂಡು ಉರುಳಾಡಿ ನಗುವ ಗಿರಾಕಿ ಅವನು. ದೊಡ್ಡ ದುಃಖಕ್ಕೆ ಮಾತ್ರ ಅತ್ತು ಕಣ್ಣೀರಿಗೊಂದು ಬೆಲೆ ಕೊಡಬೇಕು ಎನ್ನುವ ಮನುಷ್ಯ ನಾನು. ಇಂಥ ತದ್ವಿರುದ್ಧ ಗುಣಗಳ, ನಂಬಿಕೆಗಳ ಇಬ್ಬರ ಸ್ನೇಹಕ್ಕೆ ಇಪ್ಪತ್ತರ ಹರೆಯ. Unlike poles attract each other ಅಂತಾರೆ; ತೀರಾ ಈ ಮಟ್ಟಕ್ಕೆ ಅಂತ ಗೊತ್ತಿರಲಿಲ್ಲ.


ನಾನು ಹತ್ತನೇ ಕ್ಲಾಸು ಪಾಸಾಗಿದ್ದೆ. ಅವನು ಹನ್ನೆರಡನೇ ಕ್ಲಾಸು ಫೇಲಾಗಿದ್ದ. ಇಬ್ಬರು ಡಿಪ್ಲೋಮ ಎಂಬ ಎಡಬಿಡಂಗಿ ಕೋರ್ಸಿನಲ್ಲಿ ಗೆಳೆಯರಾದೆವು. ಹುಡುಗಿಯರ ಜೊತೆ ಅವನ ಮಾತು ಸರಾಗವಿರುತ್ತಿತ್ತು. ನನ್ನ ಪಾಲಿಗೆ ಹುಡುಗಿಯರನ್ನು ಮಾತಾಡಿಸುವುದೆಂದರೆ ಅಶ್ವಮೇಧ ಯಾಗ! (ಒಮ್ಮೆ ನಮ್ಮ department HOD ನನಗೆ notebook ಒಂದನ್ನು ಕೊಟ್ಟು, ಅದನ್ನು ನಮ್ಮ ಕ್ಲಾಸಿನ ಒಬ್ಬ ಹುಡುಗಿಗೆ ಕೊಡಲು ಹೇಳಿದಾಗ ನನ್ನ ಜೀವ ಹೋದಂತಾಗಿ ಇವನನ್ನು ಕಾಡಿ-ಬೇಡಿ ಅದನ್ನು ಆ ಹುಡುಗಿಗೆ ಇವನ ಮೂಲಕ ತಲುಪಿಸಿದ್ದೆ. ಆ ಸಹಾಯವನ್ನು ಕೂಡ ಭಟ್ಟರ ಹೋಟೆಲಿನಲ್ಲಿ ಸಂಜೆ ಟ್ರೀಟ್ ಪಡೆದುಕೊಂಡು ಮಾಡಿದ್ದ ಈ ಖದೀಮ!)


ಲೆಕ್ಚರರ್ ಗಳಿಗೆ ಇಟ್ಟ ಅಡ್ಡ ಹೆಸರು, ಹುಡುಗಿಯರಿಗೆ ಇಟ್ಟ ಗಿಡ್ಡ ಹೆಸರು, ಕ್ಲಾಸು ಬೋರಾದಾಗ ಮಾಡಿದ (ಇಲ್ಲಿ ಬರೆಯಲಾಗದ) extra-curricular activity ಗಳು, ಆ ಸೆಕೆಂಡ್ ಶೋ ಸಿನೆಮಾಗಳು, ಕಳ್ಳರಂತೆ ಹಾಸ್ಟೆಲಿನಲ್ಲಿ ಸೇರಿಕೊಳ್ಳುತ್ತಿದ್ದ ಪುಳಕ. ದೇವರಂಥಾ ದತ್ತಾತ್ರೆಯ ಸರ್ ಎಂಬ ವಾರ್ಡನ್ನು, ಬ್ರಿಟೀಷರ ಅಕ್ರಮ ಸಂತಾನದಂತಿದ್ದ ಸ್ವಾಮಿನಾಥನ್ ಎನ್ನುವ ಸೆಕ್ಯೂರಿಟಿ ಗಾರ್ಡು, ತನ್ನ ಮೈಯ್ಯಲ್ಲಿನ ಕರೆಂಟನ್ನೇ ಕಳೆದುಕೊಂಡಂತಿದ್ದ ಎಲೆಕ್ಟ್ರಿಷಿಯನ್ ರಾಘು, ಆತ್ಮಹತ್ಯೆ ಪತ್ರ ಬರೆದು ಅದರ ಲಕೋಟೆಗೆ ನನ್ನ ಕೈಯಿಂದ ಅಡ್ದ್ರೆಸ್ಸು ಬರೆಸಿ ತನ್ನ ಅಪ್ಪ ಅಮ್ಮನಿಗೆ ಪೋಸ್ಟ್ ಮಾಡಿಸಿ ಅವಾಂತರ ಸೃಷ್ಟಿಸಿದ್ದ ಆಸೀಫ... ಆ ಮೂರು ವರ್ಷಗಳು ಅದು ಹೇಗೆ ಕಳೆದವೋ ಗೊತ್ತಿಲ್ಲ.


ಹಾಗೂ - ಹೀಗೂ ಆ trigonometry, calculus, analog circuits, computer networking ಎಲ್ಲವುಗಳಿಂದ ಮುಕ್ತಿ ಪಡೆದು ನನ್ನ ಸಾಹಿತ್ಯದ ತೆಕ್ಕೆಗೆ ಮರಳಿದೆ. ಆದರೆ ಇವನ ಸಂಬಂಧ ಮುಗಿಯಲು ಹೇಗೆ ಸಾಧ್ಯ! ಭೇಟಿಗಳು ಮುಂದುವರೆದವು. ಹೊಸ ಉದ್ಯೋಗ, ಇಬ್ಬರೂ ಸಿಕ್ಕಾಗ ಮನೆಯ ಮಾಳಿಗೆ ಮೇಲೆ ಮಲಗುತ್ತಾ ಬೆತ್ತಲೆ ಆಕಾಶದ ಕೆಳಗೆ ಅರ್ಧರಾತ್ರಿಯ ತನಕ ಆಡಿದ ಮಾತು, ಅಪರಾತ್ರಿಯಲ್ಲಿ ಸಿನೆಮಾ ನೋಡಿಕೊಂಡು ಮೋತಿ ಟಾಕೀಸಿನಿಂದ ಸತ್ಯನಾರಾಯಣ ಪೇಟೆವರೆಗೆ ನಿರ್ಮಾನುಷ ರಸ್ತೆಗಳ ಮೇಲೆ ನಮ್ಮದೇ ನಡಿಗೆ, ಹುಚ್ಚು ಮಾತು, ದೊಡ್ಡ ನಗೆ..


ಮತ್ತೆ ಯಾವುದೋ ತಿರುವಿನಲ್ಲೂ ನಮ್ಮ ಜೀವನ ರಸ್ತೆಗಳು ಬದಲಾದವು... ಸಂಪರ್ಕ ತಪ್ಪಿ ಹೋದವು.. Facebook ನಲ್ಲಿ ಸಿಕ್ಕರೂ ಯಾಕೋ ದೂರ ದೂರ ಅನಿಸುತ್ತಿತ್ತು.. Phone call ಗಳಲ್ಲಿ ಕರಡಿ ಅಪ್ಪುಗೆ ಹೇಗೆ ಸಾಧ್ಯ! ಭೇಟಿಯಾಗಲು ನಿಗದಿ ಮಾಡಿಕೊಂಡ ನಿರ್ಧಾರಗಳು ನಿರ್ಧಾರಗಳಾಗೇ ಉಳಿದಿದ್ದವು.

ಇವತ್ತು ಇದ್ದಕ್ಕಿದ್ದಂತೆ ಬಹಳ ವರ್ಷಗಳ ನಂತರ ಅನಿರೀಕ್ಷಿತವಾಗಿ ದಾರಿಯಲ್ಲಿ ಸಿಕ್ಕ ಜೀವದ ಗೆಳೆಯ ಸಂಜೀವ. ಇದೆಲ್ಲ ನೆನಪಾಯಿತು.

 
 
 

Recent Posts

See All
Let's Compare. Let's Complicate.

‘Who do you think is happier? Human beings or animals?’ asked my friend randomly. I don’t know why he gets such strange doubts. The...

 
 
 

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page