ಲಾಲ್ ಬಹದ್ದೂರ್ ಶಾಸ್ತ್ರಿ, ಹನುಮಂತ ರೆಡ್ಡಿ ಮತ್ತು ಸೆಕೆಂಡ್ ಹ್ಯಾಂಡ್ ಸೈಕಲ್ಲು ಆಮಿಷ
ಅಂಗೈ ಅಗಲದ ಊರು ಬಳ್ಳಾರಿ. ವಡ್ಡರಬಂಡೆ ಎಂಬ ಸುಗಂಧ ಸೂಸುವ ಕಾಲುವೆಯ ಪಕ್ಕ ಎರಡು ನಿಮಿಷ ಉಸಿರು ಬಿಗಿಹಿಡಿದುಕೊಂಡು ದಾಟಿ , ಕೃಷ್ಣಮಾಚಾರಿ ರಸ್ತೆ ಬಳಸಿ, ಮೀನಾಕ್ಷಿ ಲಾಡ್ಜಿನ ಸೊಂಟ ಗಿಲ್ಲಿ, ಊರಿನ ಹೃದಯಭಾಗದ ಕ್ಲಾಕ್ ಟವರ್ ದಾಟಿ, ಅಂಡರ್ ಬ್ರಿಡ್ಜ್ ಇಳಿದು ಹತ್ತಿ ದುರ್ಗಮ್ಮ ಗುಡಿಯನ್ನು ದಾಟಿಬಿಟ್ಟರೆ ಅಲ್ಲೇ ಕಾಣುತ್ತಿತ್ತು ಶಾಲೆ. ಎಲ್ಲ ಸೇರಿ ಎರಡು ಕಿಲೋಮೀಟರು.
ಏಳನೇ ಕ್ಲಾಸಿನ ತನಕ ಸ್ವಚ್ಛಂದವಾಗಿ ಕನ್ನಡ ಮೀಡಿಯಂ ಓದುತ್ತಿದ್ದವನನ್ನು ಹೈಸ್ಕೂಲಿನಲ್ಲಿ ಇಂಗ್ಲೀಷ್ ಮೀಡಿಯಂ ಸೇರಿಸಿದ್ದರು. 'Physics' ನ ಮೊದಲ ಪಾಠ 'Motion' ಇರಬೇಕಾದದ್ದು 'Biologyಯಲ್ಲಿ ಅಲ್ಲವಾ? ಅಂದುಕೊಳ್ಳುತ್ತಿದ್ದೆ. ಮುಂಚೆ ಶಾಲೆಯಲ್ಲಿ 'ಟೀಚರ್' ಅನ್ನುತ್ತಿದ್ದವನಿಗೆ ಇಲ್ಲಿನ ವಿವಾಹಿತ 'Miss'ಗಳು ಯಾಕೋ ಕಷ್ಟವಾದರು. ಕೋನಮಾಪಕವನ್ನು protractor ಎನ್ನುತ್ತಾರೆ ಎಂದು ತಿಳಿದುಕೊಳ್ಳಲು ವಾರಗಳು ಬೇಕಾದವು. ಒಮ್ಮೊಮ್ಮೆ ಹಿಂಸೆಯಾಗುತ್ತಿತ್ತು. ಅವಮಾನಗಳಾಗುತ್ತಿದ್ದವು. ಇವೆಲ್ಲದರ ಮಧ್ಯೆ ಕನ್ನಡ ಟೀಚರ್ ಇಂದಿರಾ ಮೇಡಂ ಮಾತ್ರ ಸಾಕ್ಷಾತ್ ಅಮ್ಮನಂತೆ ಕಾಣುತ್ತಿದ್ದರು. ನನ್ನ ಕನ್ನಡದ ಬಗ್ಗೆ, ಮಾತುಗಾರಿಕೆಯ ಬಗ್ಗೆ ಅದೆಂಥಾ ನಂಬಿಕೆಯೋ ಗೊತ್ತಿಲ್ಲ! ಭಾಷಣ ಸ್ಪರ್ಧೆಗೆ ನನ್ನ ಕೇಳದೆಯೇ ನನ್ನ ಹೆಸರು ಬರೆದುಕೊಳ್ಳುತ್ತಿದ್ದರು. ಬರಬರುತ್ತಾ ಕಾಡು ಕುದುರೆಯಂತಿದ್ದ ಇಂಗ್ಲೀಷು ಕೂಡ ನನ್ನ ಹತೋಟಿಗೆ ಬಂದಿತ್ತು.
ಆದರೆ ಪ್ರತಿದಿನ ಈ ಎರಡು ಕಿಲೋಮೀಟರು ನಡಿಗೆ ನನ್ನ ಹೈರಾಣು ಮಾಡುತ್ತಿತ್ತು. ಒಬ್ಬನೇ ಎಷ್ಟಂತ ಮಾತಾಡಿಕೊಳ್ಳಲಿ? ಯಾವ ಹಾಡು ಗುನುಗಿದರೂ.. ಯಾವ ಕಥೆ ಹೇಳಿಕೊಂಡರೂ.. ಯಾವ ದೇವರು, ಸೃಷ್ಟಿ.. ಎಲ್ಲದರ ಬಗ್ಗೆ ಯೋಚಿಸುತ್ತಾ ನಡೆದರೂ ದಾರಿ ಕೂಡ ಹಠಕ್ಕೆ ಬಿದ್ದಂತೆ ಸಾಗುತ್ತಲೇ ಇರಲಿಲ್ಲ. ಸೈಕಲು ಕೊಡಿಸುವಂತೆ ಮನೆಯಲ್ಲಿ ಕೇಳಿದೆ, ಮುನಿಸಿಕೊಂಡೆ, ಹಠಕ್ಕೆ ಬಿದ್ದೆ.. ಯಾವುವೂ ಕೆಲಸ ಮಾಡಲಿಲ್ಲ.. ಅಪ್ಪನ ಜೇಬು ಹಗುರ, ಅಮ್ಮನ ಆತಂಕ ಭಾರ.
ಆಗ ಸಿಕ್ಕವನೇ ಹನುಮಂತ ರೆಡ್ಡಿ.
ನನ್ನ ಕ್ಲಾಸ್ ಮೇಟು. ಪಕ್ಕದ ಹಳ್ಳಿಯಿಂದ ಬರುತ್ತಿದ್ದ. ಶ್ರೀಮಂತರ ಮನೆ ಹುಡುಗ. ಓದಿನಲ್ಲಿ ವಿಪರೀತ ದಡ್ಡನಿದ್ದ. ವ್ಯವಹಾರದಲ್ಲಿ ಅವನನ್ನು ಮೀರಿಸುವವರಿರಲಿಲ್ಲ. ಅವನ ಗೆಳಯರ ಗುಂಪು, ಅವನ ಮಾತು, ಅವನ ಅಭ್ಯಾಸಗಳು ಎಲ್ಲವೂ ನನಗಿಂತ ತುಂಬಾ ಭಿನ್ನ.. ನಮ್ಮಿಬ್ಬರ ಮಧ್ಯೆ ಹತ್ತತ್ತಿರ ಇದ್ದದ್ದು ನಮ್ಮಿಬ್ಬರ ರೋಲ್ ನಂಬರುಗಳು. ಎಲ್ಲ ಪರೀಕ್ಷೆಗಳಲ್ಲಿ ನನ್ನ ಪಕ್ಕಕ್ಕೋ, ಹಿಂದೆಯೋ, ಮುಂದೆಯೋ ಇರುತ್ತಿದ್ದ. ನಾನು ಸುಮ್ಮನೆ ತಲೆ ತಗ್ಗಿಸಿಕೊಂಡು ನನ್ನ ಪಾಡಿಗೆ ಬಂದದ್ದು ಬರೆಯುತ್ತಿದ್ದೆ.. ಅವನ ಯಾವ ಸನ್ನೆಗೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.
ಒಂದು ದಿನ ಪರೀಕ್ಷೆ ಮುಗಿದ ಮೇಲೆ 'ಏನ್ ಸೇ ಹಂಗ್ಯಾಕ್ ಮಾಡ್ತಿ. ತೋರ್ಸಿದ್ರೆ ನಿಂದೇನು ಗಂಟು ಕಳ್ಕೊಂತಿಯ?' ಅಂತ ಟಿಪಿಕಲ್ ಬಳ್ಳಾರಿ ಕನ್ನಡದಲ್ಲಿ ಕೇಳಿದ. ನನಗೆ ಪರೀಕ್ಷೆಯಲ್ಲಿ ಬೇರೆಯವರ ಪೇಪರು ನೋಡಿ ಬರೆವುದು, ಬೇರೆಯವರಿಗೆ ತೊರಿಸುವುದು ಸಾಧ್ಯವೇ ಇಲ್ಲದ ಮಾತು. 'ಏನಾದ್ರೂ ಅರ್ಥ ಆಗಿಲ್ಲ ಅಂದ್ರೆ ಮೊದ್ಲೇ ಕೇಳು. ನಂಗೊತ್ತಿದ್ರೆ ಹೊರಗೇ ಹೇಳಿ ಕೊಡ್ತೀನಿ. ಒಳಗೆ ಹೋದ್ಮೇಲೆ ಆಗಲ್ಲ' ಅಂದೆ. ಅವನಿಗೆ ಏನನ್ನಿಸಿತೋ.. 'ಸರಿ ಬಿಡು. ಒಂದ್ ಕೆಲ್ಸ ಮಾಡು ನಾಳೆ subject ಮ್ಯಾಕ್ಸು (maths) , ನನಿಗೆ ಕಷ್ಟ. ನೀನು ರವಷ್ಟು ಇತ್ಲಾಗ ನನಿಗೆ ಕಾಣೋ ಹಂಗ ಇಟ್ಕಂಡು ನಿನ್ ಪಾಡಿಗೆ ನೀನು ಬರ್ಕಂಡು ಓಗು. ನಾಳೆ ಬಿಟ್ಟು ನಾಡಿದ್ದು ನಿಂಗೆ ನನ್ ಸೈಕಲ್ ಕೊಡ್ತೀನಿ.. ಬ್ಯಾಡ ಅನಬ್ಯಾಡ ಸೇ.. ನೀವು ನಮ್ ಗುರುಗಳು' ಅಂದು ಬಳ್ಳಾರಿಗರು ಮಾತ್ರವೇ ಮಾತಾಡಬಹುದಾದ ಏಕವಚನ-ಬಹುವಚನ ಸೇರಿಸಿ, ಆಮಿಷ-ಜಾತಿ-ಸೆಂಟಿಮೆಂಟು ಎಲ್ಲ ಸೇರಿಸಿ ನನ್ನ ಉತ್ತರಕ್ಕೂ ಕಾಯದೆ ಹೋಗಿಬಿಟ್ಟ.
ಅವತ್ತು ರಾತ್ರಿ ಅಪ್ಪ ಹೇಳಿದ್ದ ಒಂದು ಕಥೆ ನೆನಪಾಯಿತು:
ಆಗಿನ್ನೂ ಲಾಲ್ ಬಹದ್ದೂರ್ ಶಾಸ್ತ್ರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಷ್ಟೇ. ಪಕ್ಷದವರು ಜೀವನ ನಿರ್ವಹಣೆಗೆ ತಿಂಗಳಿಗಿಷ್ಟು ಅಂತ ಸ್ವಲ್ಪ ಗೌರವಧನ ಕೊಡುತ್ತಿದ್ದರು.
ಒಮ್ಮೆ ಪರಿಚಯದ ವ್ಯಕ್ತಿ ಶಾಸ್ತ್ರಿಯವರ ಮನೆಗೆ ಬಂದು ಹತ್ತು ರೂಪಾಯಿ ಸಾಲ ಕೇಳಿದ. ಶಾಸ್ತ್ರಿಯವರು ಯಥಾ ಪ್ರಕಾರ ಬಡತನದ ಮಾಲೀಕ. 'ಅಯ್ಯೋ, ನಿನಗೆ ಸಹಾಯ ಮಾಡಲು ನನ್ನ ಬಳಿ ಅಷ್ಟು ಹಣ ಇಲ್ಲ.' ಎಂದು ಹೇಳಿದರು.
ಸ್ವಲ್ಪ ದಿನಗಳ ನಂತರ ಮತ್ತೆ ಅದೇ ವ್ಯಕ್ತಿ ಸಾಲ ಕೇಳಲು ಬಂದ. ಶಾಸ್ತ್ರಿಯವರದು ಮತ್ತದೇ ಉತ್ತರ. ಇನ್ನೇನು ಆ ವ್ಯಕ್ತಿ ಮರಳಿ ಹೋಗುವ ಸಮಯದಲ್ಲಿ "ರೀ.." ಅಂತ ಒಳಗಿಂದ ಲಲಿತಮ್ಮ, ಶಾಸ್ತ್ರಿಯವರ ಹೆಂಡತಿ ಕರೆದರು.
"ನೀವು ಮನೆ ನಡೆಸಲು ಕೊಡುವ ಹಣದಲ್ಲಿ ಆಗಿಷ್ಟು-ಈಗಿಷ್ಟು ಹಣ ಉಳಿಸಿದ್ದೇನೆ. ತಂದು ಕೊಡಲಾ?" - ಎಂದು ಕೇಳಿದರು.
ಅವರಿಂದ ಹಣ ತೆಗೆದುಕೊಂಡು ಹೋಗಿ, ಮನೆಗೆ ಬಂದಿದ್ದ ವ್ಯಕ್ತಿಗೆ ಆ ಹಣ ಕೊಡದೆ ಕಳುಹಿಸಿದ ಮೇಲೆ ಒಳಗೆ ಬಂದು.. "ಲಲಿತಾ, ಪಕ್ಷ ನನಗೆ ಹಣ ಕೊಡುವುದು ಜೀವನ ಸಾಗಿಸಲು; ಉಳಿಸಿ ಭವಿಷ್ಯಕ್ಕೆ ಆಸ್ತಿ ಮಾಡಿಕೊಳ್ಳಲು ಅಥವಾ ಐಷಾರಾಮಿಗಲ್ಲ. ಮನೆ ನಡೆಸಿದ ಮೇಲೂ ಇನ್ನೂ ಹಣ ಉಳಿಯುತ್ತಿದೆಯೆಂದರೆ ನಾನು ಅವಶ್ಯಕತೆಗಿಂತ ಹೆಚ್ಚು ಹಣ ಪಡೆಯುತ್ತಿದ್ದೇನೆ ಅಂತ ಅರ್ಥ. ಹೆಚ್ಚು ಇರುವುದು ಯಾವುದೂ ನನಗಾಗಿ ಇರುವುದಲ್ಲ. ನನ್ನದಲ್ಲದ್ದು ನಾನು ಇಟ್ಟುಕೊಳ್ಳಬಾರದು."
ನೇರವಾಗಿ ಪಕ್ಷದ ಕಚೇರಿಗೆ ಹೋಗಿ, ಹಣ ಮರಳಿಸಿ, ಮುಂದಿನ ತಿಂಗಳಿಂದ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಲು ಕೋರಿದರು.
****
ರಾತ್ರಿಯೆಲ್ಲ ಯೋಚಿಸಿದೆ.. ಎರಡು ಕಿಲೋಮೀಟರ್ ದಾರಿ.. ಒಂಟಿತನ.. ಸುಸ್ತು.. ಅಪ್ಪನ ಜೇಬು.. ಅಮ್ಮನ ಕಾಳಜಿ.. ಕಾಪಿ ಹೊಡೆಯದ ಮನಸು.. ಒಂದೇ ಚಿಕ್ಕcompromise.. ಮಾಡಬೇಕಾದದ್ದೆಲ್ಲ ನನ್ನ answer script ಅವನಿಗೆ ಕಾಣುವಂತೆ ಇಟ್ಟುಕೊಂಡು ಬರೆಯಬೇಕು. ಸೈಕಲ್ ನನ್ನದಾಗುತ್ತದೆ.
ಮರುದಿನ ಪರೀಕ್ಷೆ ಶುರುವಾಯಿತು. ಹಿಂದೆಯಿಂದ 'ಸೇ.. ಸೇ..' ಎನ್ನುತ್ತಾ ನನ್ನ ತಿವಿಯುತ್ತಲೇ ಇದ್ದ ಹನುಮಂತ ರೆಡ್ಡಿ. ನಾನು ಪ್ರತಿಕ್ರಿಯಿ
ಸಲಿಲ್ಲ. ಆ ನನ್ನ ಉತ್ತರ ಪತ್ರಿಕೆ ಸರಿಸಲು ಆಗಲಿಲ್ಲ. ಅದಕ್ಕೆ ಸಮನಾಗಿ ನನ್ನ ಮನಸ್ಸಿನ ತಕ್ಕಡಿಯಲ್ಲಿ ಆ ಕಾಣದ ಸೈಕಲ್ಲು ತೂಗಲಿಲ್ಲ. ಆಮೇಲೆ ಯಥಾಪ್ರಕಾರ ನನ್ನ ನಡಿಗೆ, ನನ್ನ ಒಂಟಿತನ, ಸಾಗದ ದಾರಿ ಮುಂದುವರೆದವು.
ನನ್ನ ಅಪ್ಪ ಗೆದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಗೆದ್ದರು. ಸೈಕಲ್ಲು ಅಲ್ಲೇ ಉಳಿಯಿತು.
ಸಾಧ್ಯವಾದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಥೆಯನ್ನು ನಿಮ್ಮ ಮಕ್ಕಳಿಗೆ ಹೇಳಿ.
Comments