top of page
Harsha

ರಾಮನೇಕೆ ಶ್ರೇಷ್ಠನಲ್ಲ?


ದೇಶಕ್ಕೆ ದೇಶವೇ ಧರ್ಮದ ಅಮಲಿನಲ್ಲಿದೆ,. 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಎಂದು ಹೇಳುತ್ತಾ ಬೇರೆ ಧರ್ಮವನ್ನು ದ್ವೇಷಿಸುವ ಕಾರ್ಯ(ವಿಲ್ಲದ)ಕರ್ತರು, ಐಷಾರಾಮಿ ಕಾರು - ಹವಾನಿಯಂತ್ರಿತ ಮಠಗಳಲ್ಲಿದ್ದು ವಿರಕ್ತಿ ಬೋಧಿಸುವ ಧರ್ಮಗುರುಗಳು, ಕ್ಷಾಮ - ಕಾಮದಿಂದ ನರಳುತ್ತಿರುವ ರೈತರ - ಹೆಣ್ಣುಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳದ, ಚುನಾವಣಾ ಸಮಯಕ್ಕೆ ಸರಿಯಾಗಿ ಹಾಜರಾಗುವ ('ಕೆಲಸಕ್ಕೆ ಕರಿಬೇಡಿ, ಊಟಕ್ಕೆ ಮರೀಬೇಡಿ' ಎನ್ನುವ) ನಮ್ಮ ದೇಶದ, ಕ್ಷಮಿಸಿ ಹಿಂದೂಗಳ ಪ್ರಧಾನಿ, ಅವರ ಬೂಟು ನೆಕ್ಕುವ ಮಾಧ್ಯಮಗಳು, ಇದ್ದಕ್ಕಿದ್ದಂತೆ ರಾಮನ ಮೇಲೆ ಭಕ್ತಿ ಹುಟ್ಟಿ ಏನೇನೋ ಹುಚ್ಚಾಟ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಗಳಿಗಾಗಿ ಕಾಯುವ ಪ್ರತಿಭೆಗಳು - ಎಲ್ಲವೂ (ಎಲ್ಲರೂ ಅಲ್ಲ) ಧರ್ಮದ ಅಮಲಿನಲ್ಲಿವೆ.


ಇದೆಲ್ಲ ಆಗುತ್ತಿರುವುದು ಒಂದು ಕಥೆಯ ಪರಮ ಸಾಮಾನ್ಯ, ಅಪಕ್ವ ಪಾತ್ರಧಾರಿ ರಾಮನಿಗಾಗಿ. ವಾಲ್ಮೀಕಿ ಒಬ್ಬ ಅದ್ಭುತ ಕಥೆಗಾರ. ದೇಶ ತಿರುಗಿದವನು. ವಾಸ್ತವದಲ್ಲಿರುವ ಪ್ರದೇಶಗಳಲ್ಲಿ ತನ್ನ ಊಹೆಯ ಪಾತ್ರಗಳನ್ನು ಸೇರಿಸಿ ಅದ್ಭುತ ಕಥೆಯೊಂದನ್ನು ಹೆಣೆದವನು. .ಆದರೆ ನಮ್ಮ ನಂಬಿಕೆಗೆ (ಮತ್ತು ಮೌಢ್ಯಕ್ಕೆ) ಒಂದು ಹದ್ದು ಇರಬೇಕಲ್ಲ! ಅದು ಹಾಗಾಗಲಿಲ್ಲ, ಆ ಪ್ರದೇಶಗಳು ಇರುವುದರಿಂದ ಆ ಪಾತ್ರಗಳೂ ನಿಜವಾಗಿಯೂ ಇದ್ದವು ಎಂದು ನಂಬಿದೆವು.

Fine, ಒಂದು ಕಥೆ, ಕಾದಂಬರಿ, ಸಿನೆಮಾ - ಇವುಗಳಲ್ಲಿನ ಪಾತ್ರಗಳು ಕಾಲ್ಪನಿಕವಾದರೂ ನಾವು ಅವುಗಳಿಂದ ಪ್ರಭಾವಿತರಾಗುವ, ಅವುಗಳನ್ನು ಅನುಕರಿಸುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಆ ಪಾತ್ರವನ್ನು ಪೂಜಿಸುವ, ಅದಕ್ಕಾಗಿ ಹೊಡೆದಾಡುವ, ಬೇರೆಯವರನ್ನು ದ್ವೇಷಿಸುವ, ಕೊಲ್ಲುವ - ಸಾಯುವ, ಮಾನವೀಯತೆಯನ್ನೇ ಮರೆಯುವ, ಸಾವಿರಾರು ಕೋಟಿ ರೂಪಾಯಿ ಹಣ (ದುಂದು)ವೆಚ್ಚ ಮಾಡುವ ಹುಚ್ಚಾಟ ಏಕೆ? ಯಃಕಶ್ಚಿತ್ ಒಂದು ಪಾತ್ರಕ್ಕಾಗಿ!


ಆ ಪಾತ್ರವಾದರೂ ಪೂಜಿಸಲು, ಪ್ರಭಾವಕ್ಕೆ ಒಳಗಾಗಲು, ಅನುಕರಿಸಲು, ಅರ್ಹವಾ? ಅದೂ ಅಲ್ಲ! ಅದೊಂದು ಅಪೂರ್ಣ, ಅಪಕ್ವ, ಅಪ್ರಾಮಾಣಿಕ, ಅಸಮರ್ಥ ಪಾತ್ರ. ನೆನಪಿನಲ್ಲಿಡಬೇಕಾದ, ಅಳವಡಿಸಿಕೊಳ್ಳಬಹುದಾದ ಒಂದೆರಡು ಗುಣಗಳು ಇಲ್ಲವೆಂದಲ್ಲ. ಆದರೆ ಪೂಜಿಸಲು ಅರ್ಹವಾಗಿರುವಷ್ಟಲ್ಲ!


ಪಿತೃವಾಕ್ಯ ಪರಿಪಾಲಕ ರಾಮ


ನಮ್ಮ ಮಕ್ಕಳಿಗೆ ನಾವು ಹೇಳಿಕೊಡುವ ಮೊದಲ ರಾಮನ ಗುಣ ಇದು. ಎಂಥಾ ಅದ್ಭುತ! ಅಪ್ಪ ಹೇಳಿದ ಕೂಡಲೇ ಮರು ಮಾತಾಡದೆ, ಅಷ್ಟು ದೊಡ್ಡ ಹುದ್ದೆಯನ್ನು ಬಿಟ್ಟು ಹದಿನಾಲ್ಕು ವರ್ಷ ರಾಜ್ಯವನ್ನು ತ್ಯಜಿಸಿ ಹೋಗುವುದು ಸಾಮಾನ್ಯದ ಮಾತಾ? ಖಂಡಿತ ಅಲ್ಲ. ಅದಕ್ಕೆ ಎಷ್ಟು ತ್ಯಾಗ ಬೇಕು! ಅದೆಂಥಾ ವಿಧೇಯತೆ? ಮೆಚ್ಚಬೇಕು!


ಯೋಚಿಸಿ ನೋಡಿ. ಅಪ್ಪನ ಮಾತು ಪಾಲಿಸಲು ರಾಜ್ಯದ ಲಕ್ಷಾಂತರ ಜನರನ್ನು ಬಿಟ್ಟು ಹೋಗುವವನು ಅದೆಂಥಾ ಬೇಜವಾಬ್ದಾರಿ ರಾಜ! Fine, ತನ್ನನ್ನು ವನವಾಸಕ್ಕೆ ಹೋಗೆನ್ನಲು ಅಪ್ಪ ದಶರಥನ ಕಾರಣವಾದರೂ ಸರಿಯಿತ್ತಾ? ಇಲ್ಲ! ಅವಳು ಯಾವಳೋ ಹೆಂಡತಿ ಕೈಕೆಯ ಮೋಹಕ್ಕೆ ಬಿದ್ದು ಕೊಟ್ಟ ಸ್ವಾರ್ಥದ ವಚನಕ್ಕೆ! ತನ್ನ ರಾಜ್ಯದ ಜನರ ಹಿತವನ್ನು ಯೋಚಿಸದ, ತನ್ನ ತಂದೆಯ ಸ್ವಾರ್ಥದ-ಮೂರ್ಖತನದ ವಚನವನ್ನು ಪರಿಪಾಲಿಸುವುದು ಸರಿಯಲ್ಲ ಎನ್ನುವ ಚಿಕ್ಕ ವಿವೇಚನೆಯಿಲ್ಲದವನು ಅದು ಹೇಗೆ ಶ್ರೇಷ್ಠನಾಗುತ್ತಾನೆ?


ಈ ಗುಣಗಳನ್ನು ಪೂಜಿಸುವವರಾದರೂ ಯಾರು? ಬದುಕಿದ್ದಾಗ ಅಪ್ಪನನ್ನ ಹತ್ತಿರವಿದ್ದು ನೋಡಿಕೊಳ್ಳದ ಪಿತೃವಾಕ್ಯ ಪರಿಪಾಲಕರು ಮತ್ತು ಮತ್ತೆ ಮತ್ತೆ ಅಧಿಕಾರ ಬಯಸುವ ಮಹಾನ್ ತ್ಯಾಗಿಗಳು!

ಏಕ ಪತ್ನಿ ವ್ರತಸ್ಥ ರಾಮ


'ಶ್ರೀರಾಮನಂಥ ಪತಿ ಇರಬೇಕು' ಅಂತ ಬಯಸುವ ಹೆಣ್ಣುಮಕ್ಕಳ ಆದರ್ಶ ಪುರುಷ ರಾಮ! ಪ್ರಪಂಚ ತಿರುಗುವ, ನೂರಾರು ಸೌಂದರ್ಯಗಳನ್ನು ನೋಡುವ, ಅವುಗಳ ಕಡೆ ವಾಲುವ ಕೋಟ್ಯಂತರ ಗಂಡಸರಿರುವಾಗ, ಕಳೆದು ಹೋದ ಹೆಂಡತಿಗಾಗಿ ದೇಶ - ಸಮುದ್ರ ದಾಟಿ ಯುದ್ಧ ಮಾಡಿ ಮರಳಿ ಕರೆದುಕೊಂಡು ಬರುವುದು ಸಾಮಾನ್ಯ ವಿಷಯವಲ್ಲ!


ಆದರೆ ಹಾಗೆ ಕರೆದುಕೊಂಡು ಬಂದಮೇಲೆ ಮಾಡಿದ್ದೇನು? ಅಗಸನೊಬ್ಬನ ಟೀಕೆಯೊಂದನ್ನು ಸುಳ್ಳುಮಾಡಲು ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ್ದು! ಇದನ್ನು ನಮ್ಮ ಅತೀ ಬುದ್ದಿವಂತರು ಬೇರೆ-ಬೇರೆ ರೀತಿ ವಿಶ್ಲೇಷಿಸುತ್ತಾರೆ. 'ರಾಮನಿಗೆ ತನ್ನ ಹೆಂಡತಿಯ ಶೀಲದ ಬಗ್ಗೆ ನಂಬಿಕೆ ಇತ್ತು. ಆದರೆ ಅಗಸನ ಅನುಮಾನ ತನ್ನ ರಾಜ್ಯದ ಹಲವರಲ್ಲೂ ಇರಬಹುದು.. ಇದನ್ನು ಸ್ಪಷ್ಟಪಡಿಸಲು ಸೀತೆಯನ್ನು ಅಗ್ನಿಪರೀಕ್ಷೆಗೆ ಕಳಿಸಿದ್ದು.'

ವಾಹ್! ಎಂಥಾ ಯೋಚನೆ! ಎಂಥಾ ಸಮಝಾಯಿಷಿ! ಕಾರಣ ಏನೇ ಇರಲಿ, 'ನೀನು ಶೀಲವಂತೆ ಅಂತ ಸಾಬೀತು ಮಾಡಲು ಒಂದು ಪರೀಕ್ಷೆ ಮಾಡಬೇಕು' ಅಂತ ಗಂಡ ಹೇಳಿದರೆ ಎಂಥ ಹೆಣ್ಣಿಗಾದರೂ ಎಷ್ಟು ನೋವಾಗಿರಬಹುದು! ಅಷ್ಟು ಸೂಕ್ಷ್ಮ ಸಂವೇದನೆ ಇಲ್ಲದ ಮನುಷ್ಯ ಹೆಚ್ಚೆಂದರೆ ನಿಮ್ಮ ಕಚೇರಿಯ Manager ಆಗಬಹುದು, ಆದರೆ ಪೂಜೆ ಮಾಡಲು ಅರ್ಹ ಹೇಗೆ ಆಗುತ್ತಾನೆ?


Fine, ಅವನು ರಾಜ. ತನ್ನ ವೈಯಕ್ತಿಕ ಭಾವನೆ-ನಿರ್ಧಾರ -ಅನಿಸಿಕೆಗಳಿಗಿಂತ ಜನರ ಅಭಿಪ್ರಾಯಕ್ಕೆ ಗೌರವ ಕೊಡುವುದು, ಅವರ ಅನುಮಾನಗಳನ್ನು ಪರಿಷ್ಕರಿಸುವುದು ಒಬ್ಬ ರಾಜನ ಕರ್ತವ್ಯ ಎಂದುಕೊಳ್ಳೋಣ. ಈ ಬುದ್ಧಿ ಅಪ್ಪನ ಮಾತು ಕೇಳಿ ರಾಜ್ಯದ ಜನರನ್ನು ಬಿಟ್ಟು ಹೋಗುವಾಗ ಎಲ್ಲಿ ಹೋಗಿತ್ತು?

ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗದವನು ಅದೆಂಥಾ ರಾಜ!


ರಾಮ ಬಾಣದ ಶೌರ್ಯವಂತ - ವಚನಪಾಲಕ ರಾಮ


ಸುಗ್ರೀವನಿಗೆ ಸಹೋದರ ವಾಲಿಯಿಂದ ಅನ್ಯಾಯವಾಗುತ್ತಿದ್ದುದು ನಿಜ. ಸೀತೆಯನ್ನು ಹುಡುಕಲು ಸುಗ್ರೀವ ಸಹಾಯ ಮಾಡುವುದು - ವಾಲಿಯ ಸಂಹರಣ ಮಾಡಿ ಸುಗ್ರೀವನಿಗೆ ನ್ಯಾಯ ಕೊಡಿಸುವುದಾಗಿ ರಾಮ ವಚನ ನೀಡುವುದು - ಹೀಗೆ ಪರಸ್ಪರ ಸಹಾಯ ಮಾಡಿಕೊಳ್ಳುವುದು ಸ್ನೇಹ! ಒಪ್ಪಿಕೊಳ್ಳೋಣ.

ಆದರೆ ಸುಗ್ರೀವನಿಗೆ ಇರುವ ವಿಶೇಷ ಶಕ್ತಿಯನ್ನು ಅರಿತು ಹಿಂದೆ ಅವಿತುಕೊಂಡು ತನ್ನ ಬಾಣ ಪ್ರಯೋಗಿಸಿ ಕೊಳ್ಳುವುದು ಅದೆಂಥಾ ಸಂಸ್ಕಾರ? ಅದೆಂಥಾ ಆದರ್ಶ? ಎಲ್ಲಿಯ ಪ್ರಾಮಾಣಿಕತೆ? ಶ್ರೇಷ್ಠನಾಗುವವನು ಸಾಧಕ ಮಾತ್ರ ಆಗಿದ್ದರೆ ಸಾಲದು, ಅದನ್ನು ಸಾಧಿಸಲು ಅವನು ನಡೆಯುವ ದಾರಿ ಕೂಡ ಮುಖ್ಯವಾಗುತ್ತದೆ! . ಎದುರಾಬದುರು ನಿಂತು ಬಿಟ್ಟು ಸಂಹರಿಸಲಾರದ್ದು ಅದೆಂಥಾ ರಾಮಬಾಣ!


ದುಷ್ಟ ಸಂಹಾರಿ ರಾಮ


ಸೀತೆಯನ್ನು ಮರಳಿ ಪಡೆದುಕೊಂಡು ಬರುವುದು ಒಂದು ಕಾರಣ. ಆದರೆ ದುಷ್ಟ ರಾವಣ ಸಂಹಾರ ರಾಮನ ಅವತಾರದ ನಿಜವಾದ ಉದ್ದೇಶ - ಇದು ಪಂಡಿತರು ಕೊಡುವ ಕಾರಣ. ಯುದ್ಧ ಮಾಡಲು, ಶತ್ರುವನ್ನು ಕೊಲ್ಲಲು ಒಬ್ಬ ಕ್ಷತ್ರಿಯ ಸಾಕು. ಅದನ್ನು ಮಾಡಲು ದೇವರೇಕೆ ಬೇಕು? ರಾವಣ ಸಾಮಾನ್ಯ ಶತ್ರುವಾಗಿರಲಿಲ್ಲ, ಅವನನ್ನು ಕೊಲ್ಲಲು ಸಾಮಾನ್ಯ ಕ್ಷತ್ರಿಯ ರಾಜನಿಗೆ ಸಾಧ್ಯವಿಲ್ಲ ಆದ್ದರಿಂದ ರಾಮ ಬರಬೇಕಾಯಿತು' ಎನ್ನುವುದು ಒಂದು ವಾದ.


ಒಪ್ಪಿಕೊಳ್ಳೋಣ. ಆದರೆ ರಾಮ ಮಾಡಿದ್ದಾದರೂ ಏನು? ಸಾಮಾನ್ಯ ಕ್ಷತ್ರಿಯನಿಗಿಂತ ಒಂಚೂರು ಹೆಚ್ಚು ಶಕ್ತಿ ಉಪಯೋಗಿಸಿದ್ದು. ಪರಿಣಾಮ ಅದೇ: ಸಂಹಾರ! ದೇವರಾದವನು, ಅಥವಾ ಪೂಜೆಗೆ ಅರ್ಹನಾಗಬೇಕಾದವನು ಬರೀ ಶಕ್ತಿ ಪ್ರದರ್ಶನ, ಸಂಹಾರ ಮಾಡುವುದ್ದಕ್ಕಿಂತ ಭಿನ್ನವಾಗಿ, ಹೆಚ್ಚು ಅರ್ಥಪೂರ್ಣವಾಗಿ ಏನನ್ನಾದರೂ ಮಾಡಬೇಕಲ್ಲವಾ? ಒಂದು ಮಾತುಕತೆ, ಒಂದು ಕಣ್ಣು ತೆರೆಸುವ ಪ್ರಯತ್ನ, ಒಂದು counselling ಏನೂ ಮಾಡದೆ ಸುಮ್ಮನೆ ಕಾಟಾಚಾರಕ್ಕೆ ಒಂದು ದಿನದ ಕಾಲಾವಕಾಶ ಕೊಟ್ಟು ಯುದ್ಧ ಮಾಡಿ ಸಂಹಾರ ಮಾಡುವುದರಲ್ಲಿ ದೊಡ್ಡತನ ಎಲ್ಲಿದೆ? ರಾವಣನ ಅಂಥಾ ಅದ್ಭುತ ಜ್ಞಾನ, ಅವನ ಬದ್ಧತೆ, ಶಕ್ತಿ - ಎಲ್ಲವನ್ನೂ ನಾಶ ಮಾಡದೇ ಅವನ್ನು constructive ಆಗಿ ಉಪಯೋಗಿಸುವ ಹಾಗೆ ಮಾಡುವ ಸಹನೆ ಮತ್ತು ಕುಶಲತೆ ಇಲ್ಲದವನು, ಸಂಹಾರವೇ ಪರಿಹಾರ ಎಂದುಕೊಂಡವನು ಅದು ಹೇಗೆ ಶ್ರೇಷ್ಠನಾಗುತ್ತಾನೆ?

ತಪ್ಪು ವಾಲ್ಮೀಕಿಯದಲ್ಲ: ಅವನು ತನ್ನ ತಿರುಗಾಟವನ್ನು ಆಧರಿಸಿ ಒಂದು ಕಥೆಯನ್ನು ಕಟ್ಟಿದ್ದಾನೆ. ತನ್ನ ಕಥೆಯಲ್ಲಿ ಕೆಲವು ತಿರುವುಗಳನ್ನು, ಮನುಷ್ಯರ ಒಳ್ಳೆತನ-ದುಷ್ಟತನ, ವಿವೇಕ-ಮೂರ್ಖತನ ಎಲ್ಲವನ್ನು ಸೇರಿಸಿ ಪಾತ್ರಗಳನ್ನೂ ಸೃಷ್ಠಿಸಿದ್ದಾನೆ, ಕಥೆ ಸ್ವಾರಸ್ಯವಾಗಿರಲು ಕೆಲವು ಅತಿಮಾನುಷ ಸನ್ನಿವೇಶಗಳನ್ನು ಸೃಷ್ಟಿಸಿದ್ದಾನೆ.. ಇದು ಬಹುತೇಕ ಎಲ್ಲ ಕಥೆಗಾರರು ಉಪಯೋಗಿಸುವ ತಂತ್ರಗಳು.

ತಪ್ಪು ರಾಮನದು ಆಗಲು ಸಾಧ್ಯವೇ ಇಲ್ಲ! ಅದು ಒಂದು ಕಥೆಯ ಪಾತ್ರ. ಅದು ಕೂಡ ನಮ್ಮೆಲ್ಲರಲ್ಲಿ ಇರುವ ಒಳ್ಳೆ-ಕೆಟ್ಟ ಗುಣಗಳನ್ನು ಹೊಂದಿರುವ ಒಂದು ಪಾತ್ರ!

ಮತ್ತೆ ತಪ್ಪು ಯಾರದು? ನಿಮಗೆ ಗೊತ್ತು.

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
bottom of page