ಯಾಕೋ ನಿನ್ನ ನಲಿವಿನಲ್ಲಿ ಪಾಲ್ಗೊಳ್ಳದೆನ್ನ ಮನಸು...
ನನ್ನ ಪ್ರೀತಿಯ ಕವಿಗಳಲ್ಲೊಬ್ಬರಾದ ನಿಸಾರ್ ಅಹಮ್ಮದ್ ಅವರ ಕವಿತೆಯೊಂದರ ಸಾಲುಗಳು:
ನೀನು ಜೊತೆಯಲ್ಲಿರುವ ವೇಳೆ ಬಿಗಿದು ನಿಲುವುದೆನ್ನ ಮನಸು
ಯಾಕೋ ನಿನ್ನ ನಲಿವಿನಲ್ಲಿ ಪಾಲ್ಗೊಳ್ಳದೆನ್ನ ಮನಸು...
ಎಷ್ಟು ಜನರಿಗೆ ಈ ಅನುಭವ ಆಗಿದೆಯೋ ಗೊತ್ತಿಲ್ಲ. ಆದರೆ ಇದೊಂದು ವಿಚಿತ್ರ ಅನುಭವ. ನಾವು ಅತಿಯಾಗಿ ಪ್ರೀತಿಸುವವರ ನಲಿವಿನಲ್ಲಿ ನಮಗೆ ಪಾಲ್ಗೊಳ್ಳಲು ಆಗುವುದಿಲ್ಲ. ಅವರ ಸಂತೋಷದ ಪ್ರಪಂಚಕ್ಕೆ ನಾವು ಹೊರಗಿನವರಾಗಿರುತ್ತೇವೆ. ಅವರು ನಮ್ಮನ್ನು ಹೊರಹಾಕುವುದಲ್ಲ; ನಮ್ಮ ಮನಸ್ಸೇ ಹೊರಗುಳಿಯುತ್ತದೆ.
ಇದೆಂಥ ಪ್ರೀತಿ ಅಂತ ಅನ್ನಿಸಬಹುದು! ನಾವು ಪ್ರೀತಿಯುವವರು ಸಂತೋಷವಾಗಿರುವುದನ್ನು ನೋಡಿ ನಮಗೆ ಸಂತೋಷ ಆಗಬೇಕು. ಆದರೆ ಹಾಗಾಗುವುದಿಲ್ಲ. ಏಕೆ? ಅದಷ್ಟೇ! 'ಯಾಕೋ' ಅವರ ನಲಿವಿನಲ್ಲಿ ಪಾಲ್ಗೊಳ್ಳದೆಮ್ಮ ಮನಸ್ಸು.
ನಾವು ಪ್ರೀತಿಸುವವರು ನಲಿವಿನಿಂದ ಇರಬೇಕೆಂದು ಬಯಸುವುದು 'ಪ್ರೀತಿ'. 'ನಾವು ಪ್ರೀತಿಸುವವರಿಗೆ ನಮ್ಮಿಂದಲೇ ಪ್ರೀತಿ ಸಿಗಬೇಕು' ಅಂದುಕೊಳ್ಳುವುದನ್ನು ಏನನ್ನುತ್ತೀರಿ? ಸ್ವಾರ್ಥ? ಅಹಂ? ಸಂಕುಚಿತತೆ? ಏನಾದರೂ ಹೆಸರು ಕೊಡಿ; ಅದು ಕೂಡ ಪ್ರೀತಿಯೇ.
ಈ ಕವಿತೆಯಲ್ಲಿನ ಧ್ವನಿ ಒಬ್ಬ ಪ್ರೇಮಿಯದ್ದು. ಆದರೆ ಈ ಭಾವ ಎಲ್ಲ ಸಂಬಂಧಗಳಿಗೂ ಅನ್ವಯವಾಗುತ್ತದೆ. ಬೆಳೆದ ಮಗಳು ತನ್ನ ಮದುವೆಯ ಸಂಭ್ರಮದಲ್ಲಿ ತೊಡಗಿದಾಗ ದೂರ ಉಳಿಯುವ ಅಪ್ಪ, ಮಗ-ಸೊಸೆಯ ಸಂಭ್ರಮದಿಂದ ದೂರ ಉಳಿಯುವ ಅಮ್ಮ, ಪ್ರೀತಿಸುವ ಹುಡುಗಿ ತನ್ನ ಗೆಳೆಯ-ಗೆಳತಿಯರ ಜೊತೆ ಸಂತೋಷದಿಂದಿರುವಾಗ ಹೃದಯ ಚುಚ್ಚಿಸಿಕೊಳ್ಳುವ ಹುಡುಗ, ತನ್ನ ಬಂಧುಗಳ ಜೊತೆ ಹರ್ಷದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಗಂಡನಿಂದ ದೂರ ಉಳಿಯುವ ಹುಡುಗಿ.. ಎಲ್ಲರೂ ಹೇಳುವುದು ಅದನ್ನೇ...
ಯಾಕೋ ನಿನ್ನ ನಲಿವಿನಲ್ಲಿ ಪಾಲ್ಗೊಳ್ಳದೆನ್ನ ಮನಸು...
ನಮ್ಮಿಂದ ನಾವು ಪ್ರೀತಿಸುವವರು ದೂರ ಹೋಗುತ್ತಿದ್ದಾರೆಂಬ ದುಃಖವಾ? ದೂರ ಹೋದಾರೆಂಬ ಭಯವಾ? ದೂರ ಹೋಗಬಾರದೆನ್ನುವ ಸ್ವಾರ್ಥವಾ? ನಾವು ಮಾತ್ರ ಪ್ರೀತಿ ಮತ್ತು ಸಂತೋಷ ಕೊಡಬಹುದೆಂದುಕೊಂಡ ಅಹಮ್ಮಿಗೆ ಆದ ಘಾಸಿಯಾ? ಏನಾದರೂ ಆಗಲಿ, ಅದು ಕೂಡ ಪ್ರೀತಿಯ ಮತ್ತ್ತೊಂದು ರೀತಿ..
ಯಾಕೋ ನಿನ್ನ ನಲಿವಿನಲ್ಲಿ ಪಾಲ್ಗೊಳ್ಳದೆನ್ನ ಮನಸು...
Comments