ಬದುಕಿನ ವಿದ್ಯಾರ್ಥಿಗೆ ಸಾವಿನ ಗಣಿತವೇ ಗೊತ್ತಿಲ್ಲ..
ರಜೆಯಿತ್ತು. ನೆಚ್ಚಿನ ತೆಲುಗು ಲೇಖಕ ಚಲಂ ಬರೆದ 'ಮೈದಾನಂ' ಪುಸ್ತಕ ಓದುತ್ತಿದ್ದೆ. ಯಾವುದೋ ಸಾಲು ಇಷ್ಟವಾಗಿ ಗುರು ರವಿ ಬೆಳಗೆರೆಗೆ SMS ಮೂಲಕ ಕಳಿಸಿದೆ. ಎರಡೇ ನಿಮಿಷದಲ್ಲಿ ಅವರಿಂದ ಕರೆ ಬಂದಿತು.
"ಇದೆಯೇನೋ ಆ ಪುಸ್ತಕ ನಿನ್ ಹತ್ರ?" ಅಂದರು.
ನನಗೆ ಅವರು ಕಾಲ್ ಮಾಡಿದ್ದಾರೆಂದು ಅರಗಿಸಿಕೊಳ್ಳಲು ಕೆಲ ಕ್ಷಣ ಬೇಕಾದವು.
"ಹಾ ಸರ್.. ಇದೆ." ಎನ್ನುತ್ತಲೇ..
"ಹರ್ಷ.. ಈಗ್ಲೇ ಆಟೋ ಹತ್ಕೊಂಡು ನನ್ನ ಆಫೀಸಿಗೆ ಬಂದು ಆ ಪುಸ್ತಕ ಕೊಡ್ತಿಯೇನೋ.. ಆಟೋ ಚಾರ್ಜು ನಾನೇ ಕೊಡ್ತೀನೋ.." ಅಂತ ಕೊನೆಯಲ್ಲಿ ತಮಾಷೆ ಮಾಡಿದರು.
ಅಕ್ಷರ ಕೊಟ್ಟ ಗುರುವಿಗೆ, ಯೋಚನೆ ಮಾಡುವುದನ್ನು ಹೇಳಿಕೊಟ್ಟ ಗುರುವಿಗೆ, ಓದುವ ಹುಚ್ಚು ಹಿಡಿಸಿದ ಗುರುವಿಗೆ, ಜೀವನ ಪ್ರೀತಿ ಕೊಟ್ಟ ಗುರುವಿಗೆ ಒಂದು ಪುಸ್ತಕ ಕೊಡುವುದು ಯಾವ ಕಷ್ಟ!
"ಖಂಡಿತ ಸರ್.. ಬರ್ತೀನಿ ಅಂದೆ"
"ತೆಲುಗು ಓದುತ್ತೀಯೇನೋ?"
"ಹೌದು ಸರ್.. ನನಗೆ ಚಲಂ ಬರೆದ 'ಬಿಡ್ಡಲ ಶಿಕ್ಷಣ' ಬೇಕಿತ್ತು" ಅಂದೆ.
"ಅದು ನನ್ ಹತ್ರ ಇದೆ.. ಕೊಡ್ತೀನಿ. ನೀನು ಮೊದಲು ಈ ಪುಸ್ತಕ ತಂದು ಆಫೀಸಲ್ಲಿ ಕೊಟ್ಟುಹೋಗು." ಅಂದರು.
"ಸರ್.. ನೀವು ಆಫೀಸಲ್ಲಿ ಇದೀರಾ?" ಅಂತ ಭೇಟಿಯಾಗಬಹುದೆಂಬ ಆಸೆಯಿಂದ ಕೇಳಿದೆ.
"ಇಂಥವೆಲ್ಲ ಪ್ರಶ್ನೆ ಕೇಳಬಾರದು." ಅಂದರು. ಇದ್ದಾರೆಂದು ಅರ್ಥವಾಯಿತು.
ರಾಜಾಜಿ ನಗರದ ನಮ್ಮ ಮನೆಯಿಂದ ಭಾಷ್ಯಮ್ ವೃತ್ತ ಹಾದು, ಬಿನ್ನಿ ಮಿಲ್ ದಾಟಿ, ಚಾಮರಾಜನಗರ, ಬಸವನಗುಡಿ, ಶ್ರೀನಿವಾಸನಗರ ಹಾದು, ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ನ ಹತ್ತಿರದಲ್ಲೇ ಹಾಯ್ ಬೆಂಗಳೂರ್ ಕಚೇರಿ. ಮೋಡ ಕವಿದಿತ್ತು.
Receptionist ಬಳಿ ಎಲ್ಲ ಹೇಳಿ ಪುಸ್ತಕ ಕೊಟ್ಟೆ. ಇನ್ನೇನು ಹೊರಡಬೇಕೆಂದಾಗ ಮಳೆ ಧೋ ಎಂದು ಸುರಿಯಹತ್ತಿತು.
ಅಲ್ಲೇ ಬೆಂಚಿನ ಮೇಲೆ ಕುಳಿತು 'ಗುರೂ.. ಪುಸ್ತಕ ತಲುಪಿಸಿದ್ದೇನೆ. Happy reading.' ಅಂತ ಒಂದು ಮೆಸೇಜು ಕಳಿಸಿದೆ. ಒಂದೇ ನಿಮಿಷದಲ್ಲಿ receptionist ಹೊರಗೆ ಬಂದು.. "ಬಾಸ್ ನಿಮ್ಮನ್ನ ಕರಿತಿದಾರೆ." ಅಂದರು.
ಮುಂದಿನ 15-20 ನಿಮಿಷಗಳನ್ನು ನಾನು ಮರೆಯಲಾಗುವುದಿಲ್ಲ.
ಅವರ ಕೋಣೆಗೆ ಹೋದಾಗ "ಓಹ್.. ಬಾರೋ ಹರ್ಷ.. ಕೂತ್ಕೋ." ಅಂತ ಅವೆಷ್ಟು ವರ್ಷಗಳ ಪರಿಚಯ ಎಂಬಂತೆ ಮಾತಾಡಿಸಿದರು. ಏನೋ ಬರೆಯುತ್ತಿದ್ದರು.
"ಪುಸ್ತಕ ತಂದು ಕೊಟ್ಟಿದ್ದಕ್ಕೆ thanks. ನಿನಗೊಂದು ಒಳ್ಳೆ ಕಾಫಿ, ಒಳ್ಳೆ ಹಾಡು ಕೊಡ್ತೀನಿ." ಅಂದರು.
ಎರಡು ನಿಮಿಷದಲ್ಲಿ ಮೇಜಿನ ಮೇಲೆ ಕಾಫಿಯಿತ್ತು ಮತ್ತು ಅವರ ಮ್ಯೂಸಿಕ್ ಸಿಸ್ಟಮ್ ನಲ್ಲಿ ಎಸ್.ಪಿ.ಬಿ ಧ್ವನಿಯಲ್ಲಿ ಹಿಂದಿ ಹಾಡು..
आके तेरी बाहों में हर शाम लगें सिंधूरि।
ಹಾಡು ಮುಗಿದ ಮೇಲೆ ಅದರ ಸಾಹಿತ್ಯ, ಹಾಡುಗಾರಿಕೆ ಮಾತಾಡುತ್ತಾ ಹೋದರು.. ನಾನು ಒಂದು ಬಗೆಯ ಸಮ್ಮೋಹನ (trance) ದಲ್ಲಿದ್ದೆ.
ನಾನು ಯಾರು ಅವರಿಗೆ? ಮಾಡಿದ್ದಾದರೂ ಏನು? ಬರೀ ಒಂದು ಪುಸ್ತಕ ಕೊಟ್ಟಿದ್ದು. ರಾಜಕಾರಣಿಗಳು ಹೆದರುವ, underworld don ಗಳ ಪರಿಚಯವಿರುವ, ಈ ಕಡೆ ತೇಜಸ್ವಿ-ಅಡಿಗ ರ ಬಗ್ಗೆ ನಿರರ್ಗಳವಾಗಿ ಮಾತಾಡುವ, ನನ್ನಂತಹ ಲಕ್ಷ ಲಕ್ಷ ಜನ ಒಂದು ಭೇಟಿಗಾಗಿ, ಒಂದು ಮಾತಿಗಾಗಿ ಕಾಯುವ THE Ravi Belagere.. ನನ್ನ ಜೊತೆ ಕಾಫಿ ಮತ್ತು ಹಾಡು ಹಂಚಿಕೊಳ್ಳುವುದೆಂದರೇನು..
ಇದೆಲ್ಲ ಯಾವುದೋ ಜಂಭದಿಂದ ಹೇಳಿಕೊಳ್ಳುತ್ತಿಲ್ಲ, ಅವರನ್ನು ಹತ್ತಿರದಿಂದ ನೋಡದವರಿಗೆ ಅವರು ಏನೇನೋ ಆಗಿ ಕಾಣಬಹುದು.. ಆದರೆ ಇದೇ ಗುರು..
ಆಮೇಲೆ ಬದುಕು ಎಲ್ಲಿಲ್ಲಿಗೋ ಕರೆದುಕೊಂಡು ಹೋಯಿತು. Keep writing, it's not everyone's cup of tea. ಅಂದಿದ್ದರು. ಎಷ್ಟು ಕಸವೋ ಎಷ್ಟು ರಸವೋ.. ಬರೆಯುತ್ತಾ ಹೋದೆ..
ಯಾಕೋ ಎಲ್ಲ ನೆನಪಾಗಿ ಕೊರಳಲ್ಲಿ ಬಿಕ್ಕು ಸಿಕ್ಕಿಹಾಕಿಕೊಳ್ಳುತ್ತಿದೆ.. ಬದುಕಿನ ವಿದ್ಯಾರ್ಥಿಗೆ ಗಣಿತವೇ ಗೊತ್ತಿಲ್ಲ.. ಬರೀ ಅರವತ್ತೆರಡಕ್ಕೇ ನೂರು ವರ್ಷ ಎಂದುಕೊಳ್ಳುವುದು ತಪ್ಪು.. ಮೋಸ.
ಶೂನ್ಯ ಕವಿದಿದೆ.
Comments