top of page
Harsha

ಪಡೆದುಕೊಳ್ಳುವ ಸುಖ ಮತ್ತು ಕೊಡುವ ಸಂತೋಷ

'ತಿಂಗಳ ಕೊನೆ' ಅನ್ನೋ ವಿಚಿತ್ರಕಾಲವನ್ನು ನೀವು ಅನುಭವಿಸಿಲ್ಲವಾದರೆ ಮುಂದೆಓದಿ ನಿಮ್ಮ ಸಮಯವ್ಯರ್ಥ ಮಾಡಿಕೊಳ್ಳಬೇಡಿ.


ತಿಂಗಳ ಆ ನಾಲ್ಕೈದು ದಿನಗಳು, ವಿಶೇಷವಾಗಿ ಸಂಬಳದ ಮೇಲೆ ಅವಲಂಬಿತರಾದವರಿಗೆ, ಉಸಿರುಗಟ್ಟಿಸುವ ದಿನಗಳು, ಮುಟ್ಟಿನಂತೆ. ಆ ಸಮಯ ಮುಗಿದುಹೋಗುತ್ತದೆಂದು ಗೊತ್ತು, ಆದರೆ ಅನುಭವಿಸುವಾಗ ಅನುಭವಿಸುವವರಿಗೇ ಗೊತ್ತು.


ಗೆಳೆಯರೊಂದಿಗೆ ಒಂದುವಾರದ ಮಟ್ಟಿಗೆ ಪಡೆಯುವ ಸಾಲ, ಯಾವುದೋ ಹಳೆಯ ಹುಂಡಿಯ ತಳ ಸೇರಿಕೊಂಡಿರುವ ಚಿಲ್ಲರೆ ದುಡ್ಡು, ಪ್ಯಾಂಟಿನ ಜೇಬುಗಳನ್ನು ಮರಕ್ಕೆ ನೇತು ಬಿದ್ದಿರುವ ಬಾವಲಿಗಳಂತೆ ತಲೆಕೆಳಗೆ ಮಾಡಿದಾಗ ಅಕಸ್ಮಾತಾಗಿ ಸಿಗುವ ಹಳೆಯ ನೋಟು.. ಎಲ್ಲ ಆದ ಮೇಲೂ ತಿಂಗಳಕೊನೆ ಮುಗಿದಿರುವುದಿಲ್ಲ. ಬೆಳಗ್ಗೆ - ಮಧ್ಯಾಹ್ನ - ರಾತ್ರಿ ಡಾಕ್ಟರು ಬರೆದುಕೊಟ್ಟ ಮಾತ್ರೆ ನುಂಗಿದಂತೆ 'ಸಂಬಳ ಬಂದಿದೆಯಾ?' ಅಂತ ಸಹೋದ್ಯೋಗಿಗಳಿಗೆ ಕೇಳುವ ಪ್ರಶ್ನೆಗೆ ಅದೇ ಉತ್ತರ: 'ಇಲ್ಲ'. ಬ್ಯಾಂಕಿನ ಹಾಳಾದ ಮೆಸೇಜುಗಳು ಒಮ್ಮೊಮ್ಮೆ ತಾವಾಗೇ ಬರುವುದಿಲ್ಲ ಅಂತ ಫೋನನ್ನು ಆಗಾಗ ನೋಡಿಕೊಂಡರೂ ಪಾಪ ಅಸಹಾಯಕ ಫೋನುಹೇಳುವುದೂ ಅದನ್ನೇ.


ಕೊನೆಗೂ ಬರುತ್ತದೆ ಸಂಬಳ. ಬಂದದ್ದೇ ತಡ - ಆಗತಾನೆ ಬಾಗಿಲು ತೆರೆಯುವ ವೈನು ಶಾಪಿನ ಮುಂದೆ ಕುಡುಕರು ಕಾದು ನಿಂತಂತೆ - ಅದ್ಯಾವುದೋ EMI, ಇನ್ಯಾವುದೋ ಲೋನು, ಇನ್ಶೂರೆನ್ಸ್.. ಹಾಳು - ಮೂಳು.. ಎಲ್ಲವು ಕಾದು ನಿಂತಿರುತ್ತವೆ. ಸಂಬಳದ ಹೊಸ್ತಿಲಲ್ಲಿ ಖರ್ಚುಗಳ ಸಾಲು!


ಈಗಿನ ಪರಿಸ್ಥಿತಿ ತೀರಾ ಇಷ್ಟು ದುರ್ಗಮ ಅಲ್ಲದಿರಬಹುದು, ಆದರೆ ನಮ್ಮಲ್ಲಿ ಬಹುತೇಕರು ಇಂಥವೇ ದೃಶ್ಯಗಳನ್ನುನೋಡುತ್ತಾ ಬೆಳೆದವರು. ಅಪ್ಪನ ಜೇಬನ್ನುನೋಡುತ್ತಾ ಬೆಳೆದವರು, 'ತಿಂಗಳ ಕೊನೆಯ' ಬಿಸಿಯನ್ನು ಅನುಭವಿಸುತ್ತಾ, ಏನಾದರೂ ಕೊಂಡುಕೊಳ್ಳಬೇಕೆನಿಸಿದಾಗ ಅಮ್ಮನ ಸಮಝಾಯಿಷಿ ಕೇಳುತ್ತಾ ಬೆಳೆದವರು, ಸಿಗದ ದ್ರಾಕ್ಷಿ ಹುಳಿಯೆಂದು ನಮ್ಮನ್ನೇ ಒಪ್ಪಿಸಿಕೊಂಡು ಬೆಳೆದವರು, ನಮಗಿಂತ ಒಂದು ಕ್ಲಾಸು ಮುಂದಿರುವ ಅಕ್ಕ-ಪಕ್ಕದ ಮನೆಯ 'ಅಕ್ಕ' 'ಅಣ್ಣ'oದಿರ ಪುಸ್ತಕಗಳನ್ನು ಪಡೆಯುತ್ತಾ ಬೆಳೆದವರು, ವರ್ಷಕ್ಕೆಒಂದೋ ಎರಡೋ ಜಾತ್ರೆಗಳಿಗೆ ಹೋದಾಗ ಕೊಂಡ ಆಟಿಕೆಗಳನ್ನು ಜತನದಿಂದ ಕಾಪಾಡಿಕೊಂಡು ಸಂಭ್ರಮಿಸಿದವರು ನಾವು, ಹೈಸ್ಕೂಲಿನ ಉದ್ದಕ್ಕೂ ಒಂದೇ ಬ್ಯಾಗು - ಒಂದೇ geometry box, ಕಾಲೇಜಿನ ಲೈಬ್ರರಿಗಳ ಪುಸ್ತಕಗಳಿಂದ ನೋಟ್ಸ್.. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬದುಕಿನೊಂದಿಗೆ ರಾಜಿಯಾಗುತ್ತಾ, ಅಪ್ಪನ ಹಗುರ ಜೇಬಿಗೂ ನಮ್ಮ ಭಾರದ ಆಸೆಗಳಿಗೂ ಸಂಧಾನ ಮಾಡಿಸುತ್ತಾ - ಇದರ ಮಧ್ಯೆಯೇ ಸಿಕ್ಕಚಿಕ್ಕ ಪುಟ್ಟ ಸಂತೋಷಗಳನ್ನು ಸಂಭ್ರಮಿಸುತ್ತ ಬೆಳೆದವರು ನಾವು.


ಹೇಳುತ್ತಾ ಹೋದರೆ nostalgia ಅನ್ನಿಸಬಹುದು, ಅನುಭವಿಸದರಿಗೆ ಇದೆಲ್ಲ ಬೋರಿಂಗ್ ಅನ್ನಿಸಬಹುದು, ಮೇಲ್ನೋಟಕ್ಕೆ ನಾನು ಆಗಿನ ಕಷ್ಟಗಳ ಬಗ್ಗೆ ಮಾತಾಡುತ್ತಿದ್ದೇನೆ ಅನಿಸಬಹುದು, ನಮ್ಮ ಮಿತಿಗಳ ಬಗ್ಗೆ, ಜವಾಬ್ದಾರಿಗಳ ಬಗ್ಗೆ, ಆದರ್ಶಗಳ ಬಗ್ಗೆ, ಜೀವನದೊಂದಿಗಿನ ಹೊಂದಾಣಿಕೆ ಬಗ್ಗೆ ಮಾತಾಡುತ್ತಿದ್ದೇನೆ ಅನ್ನಿಸಬಹುದು. ಆದರೆ ನಾನು ಮಾತಾಡುತ್ತಿರುವುದು ಸಂತೋಷದ ಬಗ್ಗೆ.


ನಾವು ಈಗಿನ ಮಕ್ಕಳಷ್ಟು ಬುದ್ಧಿವಂತರಿರಲಿಲ್ಲ. ನಮ್ಮ ಮಾರ್ಕುಗಳು (at least ನನ್ನವು) ಈಗಿನ below average studentನಷ್ಟಿರುತ್ತಿದ್ದವು ಅಷ್ಟೇ. ನಮ್ಮ ಇಂಗ್ಲೀಷು ದೇವರಿಗೇ ಪ್ರೀತಿ. ನಮಗೆ ದೂರದೃಷ್ಟಿ ಈಗಿನ ಮಕ್ಕಳಷ್ಟಿರಲಿಲ್ಲ. ನಮ್ಮದು ಮಂಜು ಕವಿದ ವಾತಾವರಣದಂಥ ದೃಷ್ಟಿ - ಹೆಚ್ಚು ದೂರ ನಮಗೇನೂ ಕಾಣುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಹೋಲಿಸಿಕೊಂಡರೆ ನಾವು ಬೌದ್ಧಿಕವಾಗಿ ಹಿಂದುಳಿದವರು (intellectually backward).


ಆದರೆ ಯೋಚಿಸಿ ನೋಡಿ: ಪ್ರಬುದ್ಧತೆ, ಜವಾಬ್ದಾರಿ, ಸ್ಪಂದನೆ - ಇವೆಲ್ಲವುಗಳ ವಿಷಯದಲ್ಲಿ ನಾವು ತುಂಬಾ ಮುಂದಿದ್ದೆವು. ಅಪ್ಪನ ಜವಾಬ್ದಾರಿ ನಮಗೆ ಅರ್ಥವಾಗುತ್ತಿತ್ತು. ಅಮ್ಮನ ಕಷ್ಟ ಮನಸ್ಸಿಗೆ ತಾಕುತ್ತಿತ್ತು. ಬಾಲ್ಯದ - ಹದಿಹರೆಯದ - ಯೌವನದ ವಯೋಸಹಜ ಆಸೆಗಳು, ನಿರೀಕ್ಷೆಗಳು ಇರುತ್ತಿದ್ದವು ನಿಜ. ಆದರೆ ಭಯವೋ, ಜವಾಬ್ದಾರಿಯೋ, ಪ್ರಬುದ್ಧತೆಯೋ ಗೊತ್ತಿಲ್ಲ - ಒಂದು family fabric - ಕುಟುಂಬದ ಚೌಕಟ್ಟು - ಅಚ್ಚುಕಟ್ಟಾಗಿರುತ್ತಿತ್ತು.


ಹಾಗಂತ ಇಂದಿನ ಮಕ್ಕಳದ್ದೇ ತಪ್ಪಾ? ಇಲ್ಲ. ನಾವು ಸೋಲುತ್ತಿರುವುದು ನಾವು ಮಾಡುತ್ತಿರುವ ಯೋಚನಾ ವಿಧಾನದಲ್ಲಿ. 'ನಾವು ಅನುಭವಿಸಿದ ಕಷ್ಟ ನಮ್ಮ ಮಕ್ಕಳು ಅನುಭವಿಸುವುದು ಬೇಡ' ಎನ್ನುವ ಒಂದು ನಿರ್ಧಾರ ಸಾಕು ನಿಮ್ಮ ಮಗನ / ಮಗಳ ಜೀವನವನ್ನು ಹಾದಿತಪ್ಪಿಸಲು. ನೆನಪಿರಲಿ: ನೀವು ಇಂದು ಏನಾಗಿರುವಿರೋ ಅದು ನೀವು ಅನುಭವಿಸಿದ ನೋವು ಮತ್ತು ಪಟ್ಟ ಕಷ್ಟದಿಂದ. ತಾಯಿ ಜಿರಾಫೆಯು ಆಗತಾನೆ ಹುಟ್ಟಿ ನೆಲದ ಮೇಲೆಬಿದ್ದ ಮಗುವನ್ನು ತನ್ನ ಹಿಂಗಾಲಿನಿಂದ ಬಲವಾಗಿ ಒದೆಯುತ್ತದೆ. ಹಾಗೆ ಒದೆಯದೇ ಇದ್ದರೆ ಮರಿ ಜಿರಾಫೆ ನಿಲ್ಲಲು ಪ್ರಯತ್ನಿಸುವುದೇ ಇಲ್ಲ. ಹಾಗೆ ಒದೆಸಿಕೊಂಡ ಜಿರಾಫೆಯ ಮರಿ, ತಾನು ಬೆಳೆದು ತಾಯಿಯಾದಾಗ 'ನಾನು ಹುಟ್ಟಿದಾಗ ಒದೆಸಿಕೊಂಡು ಅನುಭವಿಸಿದ ನೋವು ನನ್ನ ಮರಿ ಅನುಭವಿಸುವುದು ಬೇಡ' ಅಂದುಕೊಂಡರೆ, ಆ ಮರಿ ಎದ್ದು ನಿಲ್ಲುವುದನ್ನು ಕಲಿಯುವುದು ಹೇಗೆ?


ಮೈಲಿಗಟ್ಟಲೆ ನಡೆದುಕೊಂಡು ಶಾಲೆಗೆ ಹೋಗಿ ಓದಿದ ತಂದೆ ಮಗ ಕಾಲೇಜಿಗೆ ಹೋಗಲು ಲಕ್ಷಗಟ್ಟಲೆ ಬೆಲೆಬಾಳುವ ಬೈಕು ಕೊಡಿಸುತ್ತಾನೆ. ಮಗಳು ಕಾಲೇಜು ಮೆಟ್ಟಿಲು ಹತ್ತುವ ಸಮಯಕ್ಕೆ ಅವಳ ಕೈಗೆ ಹತ್ತಾರು ಸಾವಿರ ರುಪಾಯಿಯ ಮೊಬೈಲು ಫೋನು. Fine, ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ. ಆದರೆ ಒಂದು ಲೀಟರು ಪೆಟ್ರೋಲು ಹಾಕಿಸಿಕೊಳ್ಳುವಷ್ಟು ದುಡ್ಡು ದುಡಿಯುವ ಕಷ್ಟಗೊತ್ತಿರದ ಮಗನಿಗೆ, ಒಂದು ತಿಂಗಳಿಗೆ ಬೇಕಾಗುವಷ್ಟು ಕರೆನ್ಸಿಗೆ ಮಾಡಬೇಕಾದ ಕೆಲಸ ಎಷ್ಟೆಂದು ತಿಳಿಸದೇ ಮಗಳಿಗೆ ಏನಾದರೂ ಕೊಡಿಸುವ ಮುಂಚೆ ಅದರ ಬೆಲೆ ಅವರಿಗೆ ನಾವು ಮನವರಿಕೆ ಮಾಡಿಕೊಡುವುದಿಲ್ಲ. ಇದು ಬರೀ ದುಡ್ಡಿನ ಪ್ರಶ್ನೆಅಲ್ಲ. ಕೊಡಿಸುವಷ್ಟು ನಾವು ಶಕ್ತರಾಗಿರಬಹುದು; ಆದರೆ ಅದನ್ನು ಪಡೆದುಕೊಳ್ಳುವ ಅರ್ಹತೆಯನ್ನು ನಾವು ಅವರಲ್ಲಿ ತುಂಬಿದ್ದೇವಾ? ಎಲ್ಲವನ್ನು ಸುಲಭವಾಗಿ ಸಿಗುವಂತೆ ಮಾಡುವ ತಂದೆ ತಾಯಂದಿರಿಗಿಂತ ದೊಡ್ಡ ಶತ್ರುಗಳು ಮತ್ತೊಬ್ಬರಿಲ್ಲ.


ಹಾಗಂತ ನಮ್ಮ ಹಾಗೆ ಅವರನ್ನೂಬದುಕುವಂತೆ ಮಾಡಬೇಕಾ? ತೀರಾ ಆದರ್ಶಪಾಲನೆ ಮಾಡುತ್ತಾ, ಕಷ್ಟಗಳನ್ನೇ ಹೇಳಿಕೊಳ್ಳುತ್ತಾ, ಅವರನ್ನು ಭಯದಿಂದ ನಮ್ಮ ನಿಯಂತ್ರಣದಲ್ಲೇ ಇಟ್ಟುಕೊಳ್ಳುತ್ತಾ.. ಇಲ್ಲ. ಆದರೆ 'ಭಯ' ಮತ್ತು 'ಸಲುಗೆ'ಯ ಮಧ್ಯೆಇರುವ ಗೆಳೆತನದ ಗೆರೆಯನ್ನು, 'ಸ್ವೇಚ್ಛೆ' ಮತ್ತು 'ಬಂಧನ'ದ ಮಧ್ಯೆಇರುವ ಜವಾಬ್ದಾರಿಯುತ ಸ್ವಾತಂತ್ರ್ಯದ ಗೆರೆಯನ್ನು, 'ಜಿಪುಣತನ' ಮತ್ತು 'ದುಂದುವೆಚ್ಚ'ದ ಮಧ್ಯೆಇರುವ ಅವಶ್ಯಕ ವ್ಯಯದ ಗೆರೆಯನ್ನು ಗುರುತಿಸಲು ಮಕ್ಕಳಿಗೆ ಹೇಳಿಕೊಡಬೇಕಾದವರು ನಾವೇ.


ಕಾಯುವ ಸಂತೋಷ, ದುಡಿಯುವ ಆನಂದ, ಪಡೆಯುವುದಕ್ಕಿಂತ ಕೊಡುವುದರಲ್ಲಿರುವ ಸಂತೃಪ್ತಿ - ಇವುಗಳನ್ನು ನಾವು ಮಕ್ಕಳಿಗೆ ಹೇಳಿಕೊಡದೇ ಹೋದರೆ ತಪ್ಪು ನಮ್ಮದೇ ಆಗುತ್ತದೆ. ಅಮ್ಮ ಅಡುಗೆ ಮಾಡುತ್ತಿದ್ದಾರೆ ಸಹಾಯಕ್ಕೆ ಹೋಗುವ ಮಕ್ಕಳನ್ನು, ಅಪ್ಪ ಮಾರುಕಟ್ಟೆಗೆ ಹೋದರೆ ಅವರನ್ನು ತಡೆದು ತಾವೇ ಹೋಗುವ ಮಕ್ಕಳನ್ನು, ತಂಗಿಯ ಮದುವೆಗೆ ಅಪ್ಪನಿಗೆ ಸಹಾಯವಾಗುವ ಮಕ್ಕಳನ್ನುನಾನು ಈಗಿನ ಮಕ್ಕಳಲ್ಲಿ ನೋಡಿಲ್ಲ. ಅಮ್ಮನ ದಣಿವು, ಅಪ್ಪನ ಬೆವರು ನಮ್ಮ ಮಕ್ಕಳ ಅನುಭೂತಿಗೆ ಬಾರದೆ ಹೋದರೆ, ಅದಕ್ಕೆಅವರು ಸ್ಪಂದಿಸದೆ ಇದ್ದರೆ - ಯಾರನ್ನುದೂಷಿಸೋಣ? Once again: 'ನಾವು ಪಟ್ಟ ಕಷ್ಟನಮ್ಮ ಮಕ್ಕಳು ಪಡುವುದು ಬೇಡ' ಎನ್ನುವ ನಮ್ಮ ಸಿದ್ಧಾಂತವನ್ನೇ.


ಮಗ ತನ್ನ ಶ್ರೀಮಂತ ಸ್ನೇಹಿತ Peter England shirt ಹಾಕಿದ್ದನ್ನು ಹೋಲಿಸಿಕೊಂಡು ನಿಮ್ಮ ಬಳಿಗೆ ಬಂದು ತನಗೂ ಅದೇ ಬ್ರ್ಯಾಂಡ್ ಅಂಗಿಬೇಕೆಂದು ಕೇಳಿದಾಗ ನೀವು ಮರುಮಾತಾಡದೆ ಕೊಡಿಸಿದ್ದಿರಿ. ಆಗ ನೀವು ಆ ತಿಂಗಳು ನೀವು ಕಟ್ಟಬೇಕಿದ್ದ ಇನ್ಶೂರೆನ್ಸ್ ಪ್ರೀಮಿಯಂ ಹಣದ ಬಗ್ಗೆನಿಮ್ಮ ಮಗನಿಗೆ ಹೇಳಲಿಲ್ಲ. ನಿಮ್ಮಮಗಳು ಬೆಳಬೆಳಗ್ಗೆ ಎಂಟು ಗಂಟೆಗೆ ಎದ್ದು ನಿಮಗೆ ಕಾಫಿ ಕೊಡಲು ಕೇಳಿದಾಗ ನೀವು ಅರ್ಧರಾತ್ರಿಯ ತನಕ ಮನೆಯ ಕೆಲಸ ಮಾಡಿದ್ದು ಹೇಳಲಿಲ್ಲ. ಮಗನನ್ನು ಕೂಡಿಸಿಕೊಂಡುಇಷ್ಟು ನನ್ನ ಆದಾಯ, ಇದು ನನ್ನ ಖರ್ಚು. ನೀನು ನನಗಿಂತ ಬುದ್ಧಿವಂತ. ನೀನಾಗಿದ್ದರೆ ಹೇಗೆ ನಿರ್ವಹಿಸುತ್ತಿದ್ದೆ? ಅಂತ ಕೇಳಲಿಲ್ಲ. ಮಗಳಿಗೆ ಅಮ್ಮನಿಗಿಂತ ಬೇಗಎದ್ದು ಕಾಫಿ ಮಾಡಿ ಎಲ್ಲರಿಗು ಕೊಡುವುದಲ್ಲಿರುವ ಸಂತೋಷ ತಿಳಿಸಲಿಲ್ಲ.


ನಾವು ಎಷ್ಟೇ ಇಪ್ಪತ್ತೊಂದನೆಯ ಶತಮಾನದವರುಎಂದುಕೊಂಡರೂ, ನಮ್ಮ ಮಗಳಿಗೆ ಮನೆಯ ಕೆಲಸಗಳನ್ನು ಮಾಡುವ ಕರ್ಮ ಏನಿದೆ ಅಂದುಕೊಂಡರೂ, ನಮ್ಮ ಮಗನಿಗೆ ಮಾರುಕಟ್ಟೆಗೆ ಹೋಗಿ ದಿನಸಿ ತರುವ ಅವಶ್ಯಕತೆ ಏನಿದೆ ಎಂದುಕೊಂಡರೂ, ಬದುಕು ಕೆಲವೊಮ್ಮೆ ತನ್ನದೇ ಆಟ ಆಡುತ್ತದೆ. 'ಇದು ಬಾಳು ನೋಡ ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ' ಎಂದು ಕವಿ ಅಡಿಗರು ಬರೆಯುತ್ತಾರೆ. ಬದುಕಿನ ಎಲ್ಲ ಹೊಡೆತಗಳನ್ನುಎದುರಿಸಲು ಮಕ್ಕಳನ್ನು ಸಿದ್ಧಗೊಳಿಸಬೇಕಾದದ್ದು ತಂದೆತಾಯಿಯರೇ. ಯಾವ ಶಾಲೆಯೂ, ಯಾವ ಯೂನಿವರ್ಸಿಟಿಯೂ ಈ ಪಾಠಗಳನ್ನುಹೇಳಿಕೊಡುವುದಿಲ್ಲ.


Peter England ಷರ್ಟುಹಾಕಿಕೊಂಡಿಲ್ಲವೆಂದು ಜೀವನ ಯಾರನ್ನೂ ತಿರಸ್ಕಿರಿಸಿದ ಉದಾಹರಣೆ ನಾನು ನೋಡಿಲ್ಲ. Fastrack ವಾಚು ಕಟ್ಟಿಕೊಂಡ ಕಾರಣಕ್ಕೆ ಯಶಸ್ಸು ಗಳಿಸಿದವರನ್ನುನಾನು ಕಂಡಿಲ್ಲ. ಒಂದು ಜನಪ್ರಿಯ ಬ್ರ್ಯಾಂಡು ಹಾಕಿಕೊಂಡು ಹೆಮ್ಮೆ ಪಡುವುದರಲ್ಲೇನಿದೆ ಹೆಚ್ಚುಗಾರಿಕೆ. ಈ ಎರಡರಲ್ಲಿ ಒಂದಾಗಬೇಕು: ಒಂದು, ನಾವು ಧರಿಸುವ ಅಥವಾ ಉಪಯೋಗಿಸುವ ಕಾರಣಕ್ಕೆ ಅದಕ್ಕೆ ಬೆಲೆ ಬರಬೇಕು; ಅದರಿಂದ ನಮಗಲ್ಲ. ಎರಡು, ನಾವು ಯಾವುದೇ ಬ್ರ್ಯಾಂಡು ಉಪಯೋಗಿಸಿದರೂ ಎಲ್ಲರು ನಮ್ಮನ್ನು ಗೌರವಿಸುವಂಥ ವ್ಯಕ್ತಿತ್ವ ನಮ್ಮದಾಗಬೇಕು. ಮಕ್ಕಳಿಗೆ ಮನವರಿಕೆ ಮಾಡಿಸಬೇಕಾದದ್ದು ಇದನ್ನೇ.


ಮಕ್ಕಳು ನಮಗಿಂತಲೂ 'ಬುದ್ಧಿವಂತರು', ಆದರೆನಮ್ಮಷ್ಟು ಅಥವಾ ನಮಗಿಂತಲೂ 'ಹೃದಯವಂತ'ರನ್ನಾಗಿಮಾಡುವ ಕೆಲಸ ಬಾಕಿ ಇದೆ. ಮಕ್ಕಳಿಗೆ ಬೇಕೆಂದಿದ್ದನ್ನು ಕೊಟ್ಟು - ಕೊಡಿಸಿ (ಬಹಳಷ್ಟುಸಲ ಬೇಡವಾಗಿರುವುದನ್ನೂ ಕೊಟ್ಟು) ನಾವು ಸಂತೋಷವನ್ನು ಅನುಭವಿಸುತ್ತೇವೆ ನಿಜ; ಆದರೆ ಅವರಿಗೂಕೊಡುವ - ಕೊಡಿಸುವ ಸಂತೋಷ ಸಿಗಲಿಮತ್ತು ಬರೀ ಪಡೆದುಕೊಳ್ಳುವ ಸುಖ ಅಭ್ಯಾಸವಾಗದಿರಲಿ.

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
bottom of page