ನನ್ನ ಬೆರಳಿಗೆ ಅಂಟಿಕೊಂಡ ಕೊನೆಯ ಅಕ್ಷರಗಳನ್ನು ಕೊಡವುತ್ತಾ..
ಬಹುಶಃ ನನ್ನ ಬೆರಳ ಮೊನೆಗಳಿಗೆ ಅಂಟಿಕೊಂಡ ಕೊನೆಯ ಅಕ್ಷರಗಳಿವು. ಹೊಸ ಅಕ್ಷರಗಳು ಹುಟ್ಟುತ್ತವೆಂಬ ನಿರೀಕ್ಷೆ ಇಲ್ಲ; ಬಹುಶಃ ಅದರ ಅವಶ್ಯಕತೆಯೂ ಇಲ್ಲ. ನೀನೇ ಇರುವುದಿಲ್ಲ ಎಂದ ಮೇಲೆ ಈ ಅಕ್ಷರಗಳಿಗೇನು ಕೆಲಸ. ಬಿಡು! ಬರೆವವಳು ನಾನು ಎಂಬ ನನ್ನ ಭ್ರಮೆ, ಬರೆಯುವುದು ನಮ್ಮನೇ ಎನ್ನುವ ಅಕ್ಷರಗಳ ಅಹಂಕಾರ - ಎರಡೂ ಇವತ್ತಿಗೆ ಮುಗಿದುಹೋಗಲಿ; ನನ್ನ-ನಿನ್ನ ಸಂಬಂಧದ ಹಾಗೆ.
ಯಾರೋ ಸತ್ತಾಗ ಅವರ ಅಂತಿಮ ಸಂಸ್ಕಾರ ಮಾಡಿ ಬಂದು ಸ್ನಾನ ಮಾಡಿ ಮನೆಯ ಒಳಗೆ ಹೋಗುವಂತೆ, ಒಂದು ಸಂಬಂಧ ಸತ್ತಾಗಲೂ ಮನಸ್ಸಿಗೆ ಸ್ನಾನ ಮಾಡಿಸಿ ನೆನಪುಗಳ ಸೂತಕ ಕಳೆದುಕೊಂಡುಬಿಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ದೇಹಕ್ಕೆ ಇಲ್ಲದ ಹಠ ಮನಸ್ಸಿಗೆ ಯಾಕೋ!!
ಒಂದು ಕಾಲವಿತ್ತು ಕೃಷ್ಣಾ, ಕನ್ನಡಿ ಮುಂದೆ ನಿಂತರೆ ಯಾಕೋ ತುಟಿಯ ತುದಿಯಲ್ಲಿ ಒಂದು ಮುಗುಳ್ನಗು, ಎಲ್ಲೋ ಕೆನ್ನೆಯ ಇಳಿಜಾರಿನಲ್ಲಿ ಒಂದು ನಾಚಿಕೆ ತಾವಾಗೆ ಆವರಿಸಿಕೊಳ್ಳುತ್ತಿದ್ದವು. ನಾನು ಕೃಷ್ಣನಿಗೆ ಚೆಂದ ಕಾಣಬೇಕು ಎನ್ನುವ ಹಂಬಲ, ನಾನು ಚೆಂದ ಕಾಣುತ್ತೇನೆ ಎನ್ನುವ ವಿಶ್ವಾಸ, ನಾನೊಬ್ಬಳೇ ಚೆಂದ ಕಾಣಬೇಕು ಎನ್ನುವ ಯೋಚನೆ, ನಾನೊಬ್ಬಳೇ ಕಾಣುತ್ತೇನಲ್ಲವಾ? ಎನ್ನುವ ಅನುಮಾನ.. ಎಲ್ಲವೂ ಇದ್ದವು.
ಇವತ್ತು ಕನ್ನಡಿ ಕರೆಯುತ್ತದೆ. ಅದಕ್ಕೆ ಏನಂತ ಹೇಳಲಿ? ನೀನಿಲ್ಲದೆ ಆ ಮುಗುಳ್ನಗೆ, ಆ ನಾಚಿಕೆ ಎಲ್ಲಿಂದ ತರಲಿ? ನೀನಿಲ್ಲದೆ ಯಾವ ಕನ್ನಡಿ ನೋಡಿಕೊಂಡು ಏನು ಮಾಡಲಿ!! ಕನ್ನಡಿಗೆ ನನ್ನ ಮುಖ ಕಾಣುವಂತೆ, ನಿನಗೂ ನನ್ನ ಮನಸ್ಸು ಕಾಣುವಂತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು.
ದುಃಖಕ್ಕೆ ಹೆದರುವವಳಲ್ಲ ನಾನು. ದುಃಖದ್ದೇನಿದೆ ಕೃಷ್ಣಾ.. ಹೊಸಬರನ್ನು ನೋಡಿದ ಕೂಡಲೇ ಸದ್ದು ಮಾಡಿ, ಬರಬರುತ್ತಾ ಅಭ್ಯಾಸವಾಗಿ ಪಕ್ಕಕ್ಕೆ ಬಂದು ಬೆಚ್ಚಗೆ ಮಲಗಿ ಎದ್ದು ಹೋಗುವ ನಾಯಿಮರಿಯಂಥ ಅಮಾಯಕ ಭಾವ ದುಃಖ. ನನಗೆ ದುಃಖ ಹೊಸದಲ್ಲ. ನಾನು ಹೆದರುವುದೂ ಇಲ್ಲ. ನನಗೆ ನೋವಾಗುತ್ತಿರುವುದು ನೀನು ನನ್ನ ಬೇಡವೆಂದುಕೊಂಡಿದ್ದಕ್ಕಲ್ಲ.. ಅದನ್ನು ತೋರಿಸಿಕೊಟ್ಟ ರೀತಿಗೆ.
ನನಗೆ ಅರ್ಥವಾಗುತ್ತಿತ್ತು. ಪ್ರತಿಯೊಂದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ನೀನು, ಬರಬರುತ್ತಾ ನಾನು ಕೇಳಿದರೂ ಹೇಳದೆ ಹೋಗುತ್ತಿದ್ದೆ. ನಿನ್ನ ಆತ್ಮಸಾಕ್ಷಿ ಅದು ಹೇಗೆ ಮಲಗಿಬಿಟ್ಟಿತೊ ಗೊತ್ತಿಲ್ಲ. ನನ್ನಿಂದ ಏನಾದರೂ ಮುಚ್ಚಿಟ್ಟರೆ ಅದನ್ನು ಹೇಳುವವರೆಗೂ ನಿನ್ನನ್ನು ಒಳಗಿಂದಲೇ ಕೊರೆಯುತ್ತಿದ್ದ ಅದು, ಕೆಲ ಸುಳ್ಳುಗಳನ್ನು ಕೂಡ ನಿರರ್ಗಳವಾಗಿ ಹೇಳಲು ನಿನ್ನ ಬಿಟ್ಟುಬಿಟ್ಟಿತು. ನನ್ನ ಸಲುವಾಗಿ ಬೇರೆಯವರ ಬಳಿ ಸುಳ್ಳು ಹೇಳಿಸುತ್ತಿದ್ದ ನಿನ್ನ ಪ್ರೀತಿ, ಬೇರೆಯವರ ಸಲುವಾಗಿ ನನ್ನ ಬಳಿ ಸತ್ಯ ಮುಚ್ಚಿಡುವಂತೆ ಮಾಡುವ ಹಂತಕ್ಕೆ ತಂದಿತು. ನನ್ನ ಕಣ್ಣಿಗೆ ಚೆಂದ ಕಂಡರೆ ಸಾಕು ಎನ್ನುತ್ತಿದ್ದ ನಿನಗೆ ಪ್ರಪಂಚದ ಕಣ್ಣುಗಳು ಮುಖ್ಯವಾಗತೊಡಗಿದವು.
ನಮ್ಮ ಸಂಬಂಧದ ಜೀವ ಕಷ್ಟಪಟ್ಟು ಉಸಿರಾಡುತ್ತಿತ್ತು. ನನ್ನ ಸೋಲು ನನಗೆ ಅರ್ಥವಾಗುತ್ತಿತ್ತು. ನನ್ನ ಆತಂಕ, ಆರ್ತನಾದ, ಅರ್ಧರಾತ್ರಿಯ ಅಳು, ಅನಾಥತೆ - ಎಲ್ಲವು ಒಂದೊಂದೇ ಬೆಲೆ ಕಳೆದುಕೊಳ್ಳುತ್ತಾ ಹೋದವು. ಅವು ನಿನ್ನ ಮನಸ್ಸಿಗೆ ತಟ್ಟುವುದನ್ನೇ ನಿಲ್ಲಿಸಿದವು. ನಿನಗೆ ನಿನ್ನವೇ ವಿವರಣೆ, ನಿನ್ನವೇ ಸಮಝಾಯಿಷಿ, ನಿನ್ನದೇ ಪ್ರಪಂಚ. ಕೃಷ್ಣಾ.. ಕೊನೆಗೂ ನನ್ನ ಪ್ರೀತಿ ಅನಾಥ ಶವವಾಗಿ ಪೇಲವವಾಗಿ ನಕ್ಕು ಬೇರೆ ದಾರಿ ಕಾಣದೆ ಕಣ್ಮುಚ್ಚಿತು.
ಇದೆಲ್ಲ ಓದುತ್ತಿದ್ದರೇ ನಾನು ಬರೀ ನಿನ್ನ ತಪ್ಪುಗಳನ್ನು ಹೇಳುತ್ತಿದ್ದೇನೆ ಅನಿಸಬಹುದು. ನೀನು ಸರಿ ನೀನು ತಪ್ಪು ಎಂದು ಹೇಳುವ ಹಕ್ಕು ಅಧಿಕಾರ ಎಂದೋ ಕಳೆದುಹೋದವು ಕೃಷ್ಣಾ.. ನಾನು ಬರೆಯುತ್ತಿರುವುದೆಲ್ಲ ಒಳಗೆಲ್ಲೋ ಸತ್ತು ಮಲಗಿದ ಒಂದು ಸಂಬಂಧದದ ಅತೃಪ್ತ ಆತ್ಮದ ಆರ್ತನಾದ. ಬಿಡು.. ನಿನ್ನ ಪ್ರಪಂಚ ದೊಡ್ಡದು. ನಿನ್ನ ಜನ.. ಅವರ ಸಂಭ್ರಮ, ಅವರಿಗೆ ನಿನ್ನ ಮೇಲಿನ ನಿರೀಕ್ಷೆ, ಆ ನಿರೀಕ್ಷೆಗಳನ್ನು ಪೂರೈಸಬೇಕಾದ ನಿನ್ನ ಜವಾಬ್ದಾರಿ. ಅದರಲ್ಲಿ ನಿನಗೆ ಸಿಗುವ ಸಂತೋಷ.. ಜಗದ ಜಾತ್ರೆಯ ಮಧ್ಯೆ ಕಳೆದುಹೋದ ಮಗು ನಾನು.. ನನ್ನ ಅವಶ್ಯಕತೆ, ನನ್ನ ಪಾತ್ರ ನಿನ್ನ ಬದುಕಿನಲ್ಲಿ ಮುಗಿದು ಹೋಯಿತು. ಇದೆಲ್ಲ ಓದುತ್ತೀಯೋ ಇಲ್ಲವೋ ಗೊತ್ತಿಲ್ಲ.. ನನ್ನ ಬೆರಳ ಮೊನೆಗಳಿಗೆ ನಿನಗಾಗಿ ಅಂಟಿಕೊಂಡಿದ್ದ ಅಕ್ಷರಗಳನ್ನು ಕೊಡವಿಕೊಂಡಿದ್ದೇನೆ. ಕೈ ಬೆರಳುಗಳು ಹಗುರ ಹಗುರ.. ಮನಸ್ಸು ಭಾರ ಭಾರ
Comments