ನನ್ನ ನಂಬಿಕೆ ಮತ್ತು ನಿನ್ನ ವಂಚನೆ ಮಾತಾಡಿಕೊಂಡಾಗ..
ಇಂಗ್ಲೀಷಿನಲ್ಲಿ ಇದನ್ನು connecting the dots ಅಂತಾರೆ: ನಮ್ಮ ಇಂದಿಗೆ ನಮ್ಮ ನೆನ್ನೆಗಳನ್ನೆಲ್ಲ ಜೋಡಿಸುವುದು. ಅಂಥದ್ದೇ ಆಗಿದ್ದು ಇಲ್ಲಿ.
ರಜೆ ಮುಗಿಸಿಕೊಂಡು ಮತ್ತೆ ಹಾಸ್ಟೆಲ್ಲಿಗೆ ಮರಳಿದ್ದೆವು. ಗಂಗಾವತಿಯ ನನ್ನ ಗೆಳೆಯ ಶಿವು ಸೂಟ್ ಕೇಸಿನಲ್ಲಿ ಕಪ್ಪು ಪತ್ರಿಕೆಯೊಂದನ್ನು ತಂದಿದ್ದ. ಶಿವು ಓದುತ್ತಾನೆಂದರೆ ಅದು ನಿಜವಾಗಿಯೂ ಏನೋ ವಿಶೇಷವಿರಬೇಕೆಂದು ಓದಲು ಶುರು ಮಾಡಿದೆ. ಅಲ್ಲಿ ಜೀವನದ ಬಿಂದುವೊಂದು ಸೃಷ್ಟಿಯಾಗಿತ್ತು, ನನಗೆ ತಿಳಿಯದೆ. ಪುಟ ತಿರುವುತ್ತಾ ಹೋದಾಗ ಕಣ್ಣಿಗೆ ಬಿದ್ದದ್ದು:
ನನ್ನ ನಂಬಿಕೆ ಮತ್ತು ನಿನ್ನ ವಂಚನೆ ಮಾತಾಡಿಕೊಂಡಾಗ.. ಎಂಬ ಲವ್ ಲವಿಕೆಯ ಅಂಕಣ. ಮತ್ತೆ ನಾನು ಓದುವುದನ್ನು ನಿಲ್ಲಿಸಲೇ ಇಲ್ಲ. ಗುರುವಿನ ಗುರುತ್ವಾಕರ್ಷಣೆ ಅಂಥಹುದು.
ಅದಕ್ಕೂ ಮುಂಚೆ ಕುವೆಂಪುರವರ 'ಬೊಮ್ಮನಹಳ್ಳಿ ಕಿಂದರಿಜೋಗಿ', 'ಜಲಗಾರ', 'ಮಲೆಗಳಲ್ಲಿ ಮದುಮಗಳು', ಕಾರಂತರ 'ಮೂಕಜ್ಜಿಯ ಕನಸುಗಳು', 'ಅಪೂರ್ವ ಪಶ್ಚಿಮ' ಓದಿದ್ದೆ. ಆಮೇಲೆ ಗುರು ರವಿ ಬೆಳಗೆರೆಯ ಪ್ರಭಾವ ತಪ್ಪಿಸಿಕೊಳ್ಳಲು ಎಸ್. ಎಲ್. ಭೈರಪ್ಪರವರ 'ನಿರಾಕರಣ', 'ನಾಯಿ-ನೆರಳು', 'ಗೃಹಭಂಗ', 'ಯಾನ' ಓದಿದೆ.. ತೇಜಸ್ವಿಯವಾರ 'ಕರ್ವಾಲೋ', 'ಅಬಚೂರಿನ ಪೋಸ್ಟಾಫೀಸು'.. ಎಲ್ಲ ಓದಿದೆ. ಇಲ್ಲ ಗುರು ನನ್ನ ಬಿಡಲಿಲ್ಲ.
ಇಂಗ್ಲೀಷಿನ ಪಾಲೋ ಕೋಯೆಲೊ, ಓ. ಹೆನ್ರಿ, ಮಾರ್ಕ್ ಟ್ವೈನ್'.. ಎಲ್ಲರಿಗು ಕಲೆಬಿದ್ದೆ.. ತೆಲುಗಿನ ಚಲಂ, ಶ್ರೀ ಶ್ರೀ ಯರನ್ನು ಅಲ್ಪ ಸ್ವಲ್ಪ ಓದಿದೆ. painkiller ಗಳಂತೆ ಆ ಕ್ಷಣಕ್ಕೆ ಇಷ್ಟ ಆಗುತ್ತಾ ಹೋದರು ಅವರು. ಗುರು ಮತ್ತೆ ಮತ್ತೆ ಕರೆದರು.
ಬಹುಶಃ ಗುರು ರವಿ ಬೆಳಗೆರೆ ಇಷ್ಟು ಪ್ರಭಾವ ಬೀರಲು ಕಾರಣ: ಅವರು ಬರೆದದ್ದು ಅಕ್ಷರವಲ್ಲ; ನೇರವಾಗಿ ಮಾತು, ನಮ್ಮದೇ ಬದುಕು. ನಮ್ಮ ಬದುಕಲ್ಲೂ ನಡೆದಿರಬಹುದಾದದ್ದು, ನಾವು ಬರೆಯಲಾಗದ್ದು ಬರೆಯುತ್ತಾ ಹೋದರು ಗುರು.
'ಮೈಕು' ಕಥೆಯ ನಮ್ಮಷ್ಟೇ ಅಸಾಹಾಯಕ ವೀರಸಂಗಪ್ಪ ಹೂಗಾರ, 'ಮಿನಾರಿನ ಊರಿನಲ್ಲಿ ಅವರು' ಕಥೆಯ ಮದುವೆಯ ಏಕತಾನತೆಯಿಂದ ದೂರ ಹೋಗಬೇಕೆನ್ನುವ ವೆನ್ನೆಲ ಮತ್ತು ಮಾಂಸದಂಗಡಿಯವ, 'ಕೊನೆ' ಕತೆಯಲ್ಲಿ ಬರುವ ನಮಗೂ ಸಿಕ್ಕಿರಬಹುದಾದ ಹುಡುಗಿ ಜೋಸೆಫೀನ್, ಪಾ.ವೆಂ. ಕೇಳಿದ ಕತೆಯ ಅನುಮಾನದ ಗಂಡ, ಮಾಂಡೋವಿ ಕಾದಂಬರಿಯ ಪ್ರೇಮಿ ಚಲಂ, 'ಹೇಳಿ ಹೋಗು ಕಾರಣ' ಕಾದಂಬರಿಯ ಅಮಾಯಕ ವಂಚನೆಯ ಹುಡುಗಿ ಪ್ರಾರ್ಥನಾ, ನಾವು ಎಂದೂ ಅನುಭವಿಸಲಾರದ ಸೈನಿಕರ ಕಷ್ಟಕ್ಕೆ ಕಣ್ಣೀರು ಹಾಕಿಸುವ 'Himlayan Blunder', ಸತ್ತ ಮೇಲೂ ಅಮ್ಮನನ್ನು ಅಷ್ಟು ಪ್ರೀತಿಸುವ 'ಅಮ್ಮ ಸಿಕ್ಕಿದ್ಲು' ಕಥೆಯ ಮಗ.. ದೇಶ, ಮಾನವ ಸಂಬಂಧ, ಕವಿತೆ - ಎಲ್ಲವನ್ನು ಹೇಳಿಬಿಟ್ಟರು ಗುರು ರವಿ ಬೆಳಗೆರೆ.
'ಎಲ್ಲ ಇದ್ದೂ ಏನು ಇಲ್ಲವೆಂದು ಕೊಳ್ಳುವುದಕ್ಕೂ' ನಮ್ಮ ಎಲ್ಲ ಇಲ್ಲಗಳ ಮಧ್ಯೆಯೇ ಬದುಕು ಕಟ್ಟಿಕೊಳ್ಳುವುದಕ್ಕೂ' ಇರುವ ವ್ಯತ್ಯಾಸ ಕೇಳಿಕೊಟ್ಟವರು ಗುರು. ಬಾಟಮ್ ಐಟಂ ಅಂಕಣಕ್ಕಿಂತ ಉತ್ಕೃಷ್ಟ personality development ಪುಸ್ತಕ ಮತ್ತೆಲ್ಲಿದೆ? ಅವರ ಖಾಸ್ ಬಾತ್ ಸಂಬಂಧಗಳ ಸೂಕ್ಷ್ಮತೆಯನ್ನು ಕಲಿಸಿದಷ್ಟು ಯಾರು ಕಲಿಸಲು ಸಾಧ್ಯ? ಹೂತಿಟ್ಟ ಹೆಣದ ಕಿವಿಯ ಒಲೆಯನ್ನು ಕದ್ದಾಗಿನ ಪಶ್ಚಾತ್ತಾಪ, ತಂಗಿಯಂಥ ವೇಶ್ಯೆಯೊಬ್ಬಳಿಗೆ ವಾಚು ತೊಡಿಸಿದಾಗ ಸಿಕ್ಕ ಆನಂದ, ಅಷ್ಟು ಪ್ರೀತಿಸಿದ ಹುಡುಗಿ ತೊರೆದು ಹೋದಾಗ ಕಳೆದ ವೇದನೆಯ ಸಮಯ, ಆಮೇಲೆ ಕಂಡುಕೊಂಡ ಬದುಕು.. ಗುರು ಎಲ್ಲವನ್ನು ನಮ್ಮ ಪಕ್ಕ ಕೂತು ಹೇಳಿಕೊಂಡರು, ಹೇಳಿಕೊಟ್ಟರು.
ಅಕ್ಷರಕ್ಕೆ ಮಾತ್ರ ಇಷ್ಟು ಶಕ್ತಿಯಿರಲು ಸಾಧ್ಯ; ರಕ್ತವನ್ನು ಕುದಿಸುವಷ್ಟು, ಬೆವರನ್ನು ಹರಿಸಿ ದುಡಿಯಲು ಪ್ರೇರೇಪಿಸುವಷ್ಟು, ಕಣ್ಣ ಆಳದಲ್ಲಿಂದ ನೀರನ್ನು ಸುರಿಸುವಷ್ಟು..
ಇವೆಲ್ಲ ಮಾಡಿದ್ದಕ್ಕೆ ರವಿ ಬೆಳಗೆರೆ ಗುರುವಾಗುತ್ತಾರೆ..
Comments