ನನ್ನ ಇಂಗ್ಲಿಷ್ ದ್ವೇಷವನ್ನು ಇಷ್ಟವಾಗಿಸಿದ ಗ್ರೇಸಿ ಟೀಚರ್ ನೆನಪಾಗಿ..
- Harsha
- May 4, 2023
- 2 min read
Updated: May 5, 2023
ಕೆಲವೊಮ್ಮೆ ಹಾಗಾಗುತ್ತದೆ. ಸುಮ್ಮನೆ ತನ್ನ ಪಾಡಿಗೆ ತಾನು ಚಲಿಸಿ ಒಂದು ಸರಳ ಬೆಳಕಿನ ಕಿರಣವಾಗಬೇಕಾದುದು, ದಾರಿಯಲ್ಲಿ ತೇಲಾಡುತ್ತಿರುವ ಮಳೆಯ ಹನಿಯ ಮೂಲಕ ಹಾದು ತನಗೇ ಗೊತ್ತಿಲ್ಲದೆ ತನ್ನಲ್ಲಿ ಅಡಗಿರುವ ಸಪ್ತ ವರ್ಣಗಳನ್ನು ಹೊರಹಾಕಿ ಕಾಮನಬಿಲ್ಲಾಗುತ್ತದೆ. ನನ್ನ ಪಾಲಿಗೆ ಆಗಿದ್ದು ಕೂಡ ಹಾಗೆಯೇ. ನಾನು ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಮಿಲ್ಲರ್ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದ್ದು ಫರ್ಜಾನ ಟೀಚರ್ ಮತ್ತು ಗ್ರೇಸಿ ಟೀಚರ್.
ಹೌದು! ನಮ್ಮ ಕನ್ನಡ ಮೀಡಿಯಂ ಹುಡುಗರದ್ದೇ ಒಂದು ವಿಭಿನ್ನ ಭಾಷೆಯಿತ್ತು. ನಾವು ಶಿಕ್ಷಕಿಯರಿಗೆ ಇಂಗ್ಲೀಷ್ ಮೀಡಿಯಂ ಹುಡುಗರಂತೆ 'ಮೇಡಂ' ಅಥವಾ 'ಮಿಸ್' ಅನ್ನುತ್ತಿದ್ದ ಅಭ್ಯಾಸವಿರಲಿಲ್ಲ. ನಮಗೇನಿದ್ದರೂ ಅವರು ಟೀಚರ್. ಶಿಕ್ಷಕರಾದರೆ 'ಸಾರ್' (ಸರ್ ಅಲ್ಲ).
ಮತ್ತು ನಮ್ಮ ಬಳ್ಳಾರಿಯದ್ದೇ ವಿಭಿನ್ನ ವ್ಯಾಕರಣವಿದೆ. ಇಲ್ಲಿ ಮನಸ್ಸಿಗೂ ಮಾತಿಗೂ ಸಂಬಂಧವಿರುವುದಿಲ್ಲ. ಮನಸಲ್ಲಿ ಗೌರವವಿದ್ದರೂ ಮಾತಿನಲ್ಲಿ ಏಕವಚನ ಸರಾಗ. ಬಹುವಚನವೇನಿದ್ದರೂ ಶಿಕ್ಷಕಿಯರಿಗೆ ಮಾತ್ರ ಮೀಸಲು, ಕೆಲವೊಮ್ಮೆ ಅದೂ ಇಲ್ಲ. 'ಸಾರ್ ಬಂದ', 'ಸಾರ್ ಹೋದ', 'ಟೀಚರ್ ಬಂದ್ರು.' ಹೀಗೆ.
ಶಿಕ್ಷಕರಾದರೂ ಅಷ್ಟೇ. ವಿದ್ಯಾರ್ಥಿಗಳ ಮೇಲೆ ಪ್ರೀತಿ - ಕಾಳಜಿ ಸಾಕಷ್ಟಿದ್ದರೂ, ಆಗಲೇ ಹೇಳಿದಂತೆ, ಮನಸ್ಸಿಗೂ - ಮಾತಿಗೂ ಸಂಬಧವಿರುತ್ತಿರಲಿಲ್ಲ, ನಮ್ಮ ಧರ್ಮ - ಜಾತಿ - ಬಣ್ಣ - ಆಕಾರ ಎಲ್ಲವೂ ಅವರ ಬಾಯಲ್ಲಿ ಸರಾಗ. 'ಲೇ ಸಾಯ್ಬು', 'ಲೇ ಹಜಾಮ', 'ಲೇ ವಡ್ಡ', 'ಲೇ ಐನೋರ', ಕರಿಯ, ಕೆಂಪ, ದುಬ್ಬೀ, ಸುವ್ವರ್, ಸೂ.. ಮಗ, ಮುಂ... ಮಗ.. ಪಟ್ಟಿ ದೊಡ್ಡದಿತ್ತು. ಈಗಿನ ಮಕ್ಕಳಿಗೆ ಈ ಯಾವ ಮಾತುಗಳು ಅನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇವೆಲ್ಲ ಅನಿಸಿಕೊಂಡ ನಮಗೆ ಅವು ಬೈಗುಳಗಳಲ್ಲ, ಆತ್ಮೀಯ ಕರೆಗಳು ಅಂತ ಗೊತ್ತಾಗುತ್ತಿತ್ತು. ಇವೆಲ್ಲ ನಮ್ಮ ಅಪ್ಪ-ಅಮ್ಮನ ತನಕ ಹೋಗುತ್ತಿರಲಿಲ್ಲ. ಹೋದರೂ ಅವರು ಕೂಡ ಆ ಬೈಗುಳಗಳಿಗೆ ಇನ್ನೊಂದೆರಡು ಅಂಥವೇ ಸೇರಿಸಿ ನಮ್ಮನ್ನು ಹಾಡಿ ಹೊಗಳುತ್ತಿದ್ದರು.
ಇಂಥಾ ನಮ್ಮ ಅಮಾಯಕತೆಯ, ನಮ್ಮ ಭಾಷೆಯ ಅನಾಗರೀಕತೆಯ ಮಧ್ಯೆ ನಮ್ಮ ಶಾಲೆಗೆ ಬಂದದ್ದು ಫರ್ಜಾನ ಟೀಚರ್. ಅಷ್ಟು ಶುದ್ಧ ಕನ್ನಡ ಮಾತನಾಡುವವರನ್ನು ಪ್ರತ್ಯಕ್ಷವಾಗಿ ನಾನು ಈಗಿನವರೆಗೂ ನೋಡಿಲ್ಲ. ಅಂಥ ಗ್ರಾಂಥಿಕ ಕನ್ನಡ, ಅಷ್ಟು ನಿರರ್ಗಳತೆ, ಉಚ್ಚಾರಣೆಯಲ್ಲಿ ಆ ಮಟ್ಟದ ನಿಖರತೆ.. ನಾನು ನನ್ನ ಭಾಷೆಯನ್ನು ಸಂಸ್ಕರಿಸಿಕೊಂಡಿದ್ದು ಬಹುಶಃ ಅವೇ ದಿನಗಳಲ್ಲಿ. ಫರ್ಜಾನ ಟೀಚರ್ ಸರಸ್ವತಿ ಸ್ತುತಿ ಹಾಡಿದರೆ ಸರಸ್ವತಿಗೇ ಹಿಂದೆ ಕುಳಿತು ವೀಣೆ ನುಡಿಸುವ ಆಸೆಯಾಗುತ್ತಿತ್ತು. ಅವರ ಧ್ವನಿಯಲ್ಲಿ 'ಸಾರೇ ಜಹಾನ್ ಸೆ ಅಚ್ಛಾ..' ಕೇಳಿದ್ದರೆ ಕವಿ ಇಕ್ಬಾಲ್ ಗೆ ಖುಷಿಯಾಗುತ್ತಿತ್ತು.
ಫರ್ಜಾನ ಟೀಚರ್ ನಮಗೆ ಸಮಾಜದ ವಿಷಯಕ್ಕೆ ಶಿಕ್ಷಕಿಯಾಗಿದ್ದರು. ಆದರೆ ಕನ್ನಡ, ಹಿಂದಿ ಶಿಕ್ಷಕಿಯರು ಶಾಲೆಗೆ ಬಾರದೆ ಇದ್ದರೆ. ಆ ಪಿರಿಯಡ್ ಗಳು ಇವರವೇ. ಕನ್ನಡದಲ್ಲಿ ಕುವೆಂಪುವಿನ ಪದ್ಯ ಹಾಡುತ್ತ, ಹಿಂದಿಯ ಸುಭದ್ರಾ ಕುಮಾರಿ ಚೌಹಾಣ್ ರ ಕವಿತೆ ವಿವರಿಸುತ್ತಾ - ನನಗೆ ಭಾಷಾ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿದವರೇ ಫರ್ಜಾನ ಟೀಚರ್.
ಆ ಕಡೆ ನಾನು ಅಂಥಾ ಮಳೆಹನಿಯ ಮೂಲಕ ಹಾದು ನನ್ನಲ್ಲಿನ ಸುಪ್ತ ಸಪ್ತ ವರ್ಣಗಳನ್ನು ಕಂಡುಕೊಳ್ಳುತ್ತಿದ್ದರೆ, ಈ ಕಡೆ ಗ್ರೇಸಿ ಟೀಚರ್ ನನ್ನನ್ನು ಇಂಗ್ಲಿಷಿಗೆ ಹತ್ತಿರ ಮಾಡಿದರು. ಈಗ ನಾನು ನೂರಾರು ಅದ್ಭುತ ಇಂಗ್ಲಿಷ್ ಟೀಚರ್ ಗಳನ್ನು ನೋಡಿದ್ದೇನೆ. ಆದರೆ ನಾನು ಇಂಗ್ಲಿಷ್ ಕಲಿಯಲು ಪ್ರೇರೇಪಿಸಿದ ಇಬ್ಬರು ಮಹಾನ್ ಗುರುಗಳೆಂದರೆ ಅಪ್ಪ ಮತ್ತು ಗ್ರೇಸಿ ಟೀಚರ್.
Mary Anthony Gracy ಅವರ ಪೂರ್ಣ ಹೆಸರು. ನಮಗೆಲ್ಲ ಅವರು ಗ್ರೇಸಿ ಟೀಚರ್. ಕನ್ನಡವನ್ನು ಅಂಗಳದೊಳಕ್ಕೂ ಸೇರಿಸಿಕೊಳ್ಳದ ಬಳ್ಳಾರಿಯ ಪ್ರತಿಷ್ಠಿತ St. Joseph's School ನಿಂದ ಕನ್ನಡವನ್ನೂ ತೆಲುಗಿನಂತೆ ಮಾತನಾಡುವ ನಮ್ಮ ಸರ್ಕಾರಿ ಶಾಲೆಗೆ ಬಂದಿದ್ದರು ಗ್ರೇಸಿ ಟೀಚರ್. ಮೊಳಕಾಲಿಗಿಂತ ಕೆಳಗಿಳಿಯದ ಸ್ಕರ್ಟುಗಳ ವಿದ್ಯಾರ್ಥಿನಿಯರ ಆ ಶಾಲೆಯ ಶಿಸ್ತಿಗೂ, ಏಕವಚನಕ್ಕಿಂತ ಮೇಲೆರದ ನಮ್ಮ ಶಾಲೆಯ ಹುಡುಗರ ಭಾಷೆಗೂ ಅಜಗಜಾಂತರವಿತ್ತು.
ಅದೆಷ್ಟು ಸಹನೆಯಿತ್ತೋ. ಗ್ರೇಸಿ ಟೀಚರ್ ನಮ್ಮಂಥ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡಲು ಪಣತೊಟ್ಟರು. ಅಕ್ಷರಗಳನ್ನು ತಿದ್ದಿದರು, ಉಚ್ಚಾರಣೆ ಸರಿ ಮಾಡಿದರು, ಅಕ್ಷರಕ್ಕಕ್ಷರ ಜೋಡಿಸಿ ಪದ ಮಾಡುವುದನ್ನು ಕಲಿಸಿದರು, ಪದಕ್ಕೆ ಪದ ಜೋಡಿಸಿ ವಾಕ್ಯ ಮಾಡಿ ಮಾತನಾಡಲು ಪ್ರೇರೇಪಿಸಿದರು. This is cat. That is dog ಗಿಂತ ಮುಂದೆ ಹೋಗದ ನಮ್ಮ ಇಂಗ್ಲಿಷನ್ನು ಹೊಸ ಹೊಸ ವಾಕ್ಯ ಸೃಷ್ಟಿಸುವ ಮಟ್ಟಿಗೆ ತಂದರು.
ಅವರಿಗೆ ದೇವರು ಇಷ್ಟ ಎನ್ನುವ ಕಾರಣಕ್ಕೆ ಮತ್ತು ನನಗೆ ಬರೆಯಲು ಚಿಕ್ಕ ವಾಕ್ಯ ಎನ್ನುವ ಕಾರಣಕ್ಕೆ ಕಾಪಿ ಪುಸ್ತಕದಲ್ಲಿ ಎರಡು ದಿನ 'God is great.' ಎಂದು ಬರೆದುಕೊಂಡು ಹೋಗಿ 'Good' ಹಾಕಿಸಿಕೊಂಡಿದ್ದೆ. ಮೂರನೆಯ ದಿನವೂ ಅದನ್ನೇ ಬರೆದಿದ್ದಕ್ಕೆ ನಗುತ್ತಲೇ ನನ್ನ ಕಳ್ಳಾಟವನ್ನು ತಿಳಿದು, 'ನಾನು good ಅಂತ ಹಾಕಿದ್ದು ನಿನ್ನ ಅಕ್ಷರಕ್ಕೆ; I don't see the same neatness in your handwriting today.' ಅಂದಿದ್ದರು. ಇದು ಅಂಥದ್ದೇನು ದೊಡ್ಡ ಘಟನೆ ಅಲ್ಲದಿರಬಹುದು. ಆದರೆ ಇಂಥವೇ ಚಿಕ್ಕ ಚಿಕ್ಕ ಮಾತುಗಳಿಂದ ಶ್ರದ್ಧೆಗೆ alternative ಇಲ್ಲ ಎಂಬುದನ್ನು ನಾನು ಕಲಿತೆ.
ಇದೆಲ್ಲ ಆಗಿ ವರ್ಷಗಳಾದವು.
ಮೂರು ವರ್ಷದ ಹಿಂದೆ ಗ್ರೇಸಿ ಟೀಚರ್ ಭೇಟಿಯಾದಾಗ 'ಟೀಚರ್, I am working as a teacher trainer. I train English teachers.' ಅಂತ ಹೇಳಿದೆ. ಹೇಳುವಾಗ ಎಲ್ಲಾದರೂ ತಪ್ಪಾಗಿ ಇಂಗ್ಲಿಷ್ ಮಾತಾಡಿದೆನಾ ಎಂಬ ಅಳುಕಿತ್ತು. ಅವರ ನಗುವಲ್ಲಿ ಹೆಮ್ಮೆಯಿತ್ತಾ? ಗೊತ್ತಿಲ್ಲ.
ಮೊನ್ನೆ ಫರ್ಜಾನ ಟೀಚರ್ voice message ಕಳಿಸಿದ್ದರು. ಅದೇ ಸ್ಪಷ್ಟ ಕನ್ನಡ 'ಹರ್ಷ.. ನಿಮ್ಮ ಗ್ರೇಸಿ ಟೀಚರ್ ನಮ್ಮನ್ನೆಲ್ಲ ಬಿಟ್ಟು ಹೋಗ್ಬಿಟ್ರು' ಅಂದರು. ಒಂದು ಮೌನ ತಂತಾನೇ ಕವಿಯಿತು. ಕಣ್ಣು ಮಂಜು ಮಂಜು.
ನಾನು ಕಾಪಿ ಪುಸ್ತಕದಲ್ಲಿ ಬರೆದದ್ದು ತಪ್ಪಿತ್ತು 'God is NOT great.'
ಈಗಲೂ ಕೊರಳಲ್ಲಿ ಬಿಕ್ಕು ಸಿಕ್ಕಿಕೊಂಡ ಅನುಭವ..
Recent Posts
See All‘Who do you think is happier? Human beings or animals?’ asked my friend randomly. I don’t know why he gets such strange doubts. The...
Open any social media platforms, listen to any guests who visit our houses, consult any counsellors or child specialists, eye...
Commentaires