ನೋವಿಗೂ ತನ್ನದೇ ಆದ ಆಯಸ್ಸು ಇರುತ್ತದೆ..
ಮಧುಶಾಲೆಯ ಮೇಜಿನ ಮೇಲೆ, ಹೆರಿಗೆ ಕೋಣೆಯ ಆರ್ತನಾದದ ಒಳಗೆ, ವೃದ್ಧಾಶ್ರಮದ ಕಥೆಗಳಲ್ಲಿ, ಆತ್ಮಹತ್ಯಾ ಪತ್ರದ ಪದಗಳಲ್ಲಿ, ಕಾರಾಗೃಹದ ಕೋಣೆಗಳಲ್ಲಿ, ಸಾವಿನ ಮನೆಯ ಮೌನಗಳಲ್ಲಿ, ನೊಂದ ಪ್ರೇಮಿಯ ಹಾಡುಗಳಲ್ಲಿ - ಆಳುವ ಒಂದೇ ಭಾವ - ದುಃಖ, ನೋವು.
ನೋವು ಲಜ್ಜೆಗೇಡಿ ಸಂತೋಷದಂತೆ ಉದ್ದೇಶವಿಲ್ಲದೆ ಬರುವುದಿಲ್ಲ. ಬಹುತೇಕ ನೋವುಗಳು ತಮ್ಮದೇ ಆದ ಗಾಭೀರ್ಯತೆಯಿಂದ, ಉದ್ದೇಶದಿಂದ ಬರುತ್ತವೆ.
ದೇಹದ ನೋವು ಒಂದು ಸಂದೇಶ ಅಷ್ಟೇ. ದೇಹದ ಎಲ್ಲೋ ಆದ ಗಾಯ, ತರಚು, ಮುರಿತದ ಬಗ್ಗೆ ಮಿದುಳಿಗೆ ತಿಳಿಸುವ ಸಂದೇಶ ನೋವು. ಆಮೇಲೆ ನಡೆಯುವುದೆಲ್ಲ ದೇಹಕ್ಕೆ - ಮಿದುಳಿಗೆ ಬಿಟ್ಟದ್ದು. ದೇಹದ ಗಾಯ ಮಾಯುತ್ತದೆ, ಕೆಲವು ಕಲೆಗಳು ಉಳಿಯುತ್ತವೆ. ಆದರೆ ಮನಸ್ಸಿಗೆ ಆಗುವ ನೋವುಗಳು ಅಷ್ಟು ಸರಳವಲ್ಲ. ದೇಹಕ್ಕೆ ಇರುವಷ್ಟು ಬುದ್ಧಿವಂತಿಕೆ ಮನಸ್ಸಿಗೆ ಇಲ್ಲ.
ನಮ್ಮ ಮನಸ್ಸಿಗೆ ಆಗುವ ನೋವುಗಳನ್ನು ನಾವು ಸರಿಯಾಗಿ ನಿರ್ವಹಿದೇ ಇರುವುದಕ್ಕೆ ಬೇರೆ ಬೇರೆ ಕಾರಣಗಳಿವೆ.
ಒಂದು: ನಮ್ಮಲ್ಲಿ ಬಹುತೇಕರು ನಮ್ಮ ಮನಸ್ಸಿಗೆ ಆದ ನೋವನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಕಾರಣವನ್ನು ಒಪ್ಪಿಕೊಳ್ಳುವುದಿಲ್ಲ. ನೋವು ಸಂಭವಿಸಿದಾಗ ನಾವು ಕೆಲ ನಿಮಿಷವಾದರೂ ಸುಮ್ಮನೆ ಕೂತು ನೋವಿನ ಮೂಲ ಕಾರಣ ಏನೆಂಬುದನ್ನು ಕಂಡುಕೊಳ್ಳುವುದಿಲ್ಲ. ಪ್ರೀತಿಯಲ್ಲಿ ಒಬ್ಬ ಹುಡುಗಿಯಿಂದ ತಿರಸ್ಕೃತಗೊಂಡ ಹುಡುಗ, ಗಂಡನಿಂದ ಮೋಸಕ್ಕೊಳಗಾದ ಹೆಂಡತಿ, ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ.. ಎಲ್ಲರೂ ತಮ್ಮ ದುಃಖಗಳಿಗೆ ತಾವೇ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣ ಎಂಬುದನ್ನು ಮರೆಯುತ್ತಾರೆ. ಇಂಥ ನೋವುಗಳು ಅವುಗಳಿಂದ ಹೊರಬರಲು ಕೆಲವು ಪರ್ಯಾಯ ದಾರಿ ತೋರುತ್ತವೆ. ಇಲ್ಲ, ನಾವು ಆ ದಾರಿಗಳ ಬಗ್ಗೆ ಯೋಚಿಸುವುದಿಲ್ಲ. ಆಗ ನಾವು ನಮ್ಮ ಯೋಚನೆಯನ್ನು ಭಾವನೆಗಳ ಕೈಗೆ ಕೊಡುತ್ತೇವೆ. ಒಂದು ಭಾವ ನಮನ್ನು ಒಂದು ಕೊನೆಯಲ್ಲಿ ಬಂಧಿಸಿರುವಾಗ, ಅದೇ ಭಾವದ ಕೈಯಲ್ಲಿ ಕೀಲಿಕೈ ಇರುವಂತೆ ನೋಡಿಕೊಂಡರೆ, ನಾವು ಹೊರಬರುವುದು ಹೇಗೆ ಸಾಧ್ಯ. ಆಗಲೇ ಕೀಲಿಕೈಯನ್ನು ಬುದ್ಧಿಯ ಕೈಗೆ ಕೊಡಬೇಕು.
ಎರಡು, ದುಃಖದಿಂದ ಹೊರಬರಲು ನಮ್ಮಲ್ಲಿ ಕೆಲವರು ತಪ್ಪಾದ ಬಾಗಿಲನ್ನು ಬಡಿಯುತ್ತೇವೆ. ನಾವು ನಮ್ಮ ನೋವಿಗೆ ಪರಿಹಾರವನ್ನುಮಧುಶಾಲೆಗಳ ಟೇಬಲ್ಲುಗಳ ಮೇಲೆ ಹುಡುಕುತ್ತೇವೆ. ಪಾಪ ಆ ಮದ್ಯವಾದರೂ ಏನು ಮಾಡೀತು! ತಾನಿರುವಷ್ಟು ಹೊತ್ತು ನೀವು ನೋವನ್ನು ಮರೆಯುವಂತೆ ನೋಡಿಕೊಳ್ಳುತ್ತದೆ. ನಶೆ ಇಳಿದ ಮೇಲೆ ಮತ್ತೆ ನೋವು ಪುನರ್ಸ್ಥಾಪಿತ. ನಾವು ದೇವಸ್ಥಾನಗಳ ಗಂಟೆಯನ್ನು ಬಾರಿಸಿ ನಮ್ಮ ನೋವಿನ ಮೌನವನ್ನು ಓಡಿಸಲು ಪ್ರಯತ್ನಿಸುತ್ತೇವೆ. ಪಾಪ ದೇವರಾದರೂ ಏನು ಮಾಡಲು ಸಾಧ್ಯ. ಅವನು ನಿಮ್ಮ ನೋವಿಗೆ ಕಾರಣನೂ ಅಲ್ಲ, ನೋವನ್ನು ನೋಡಿದ ಸಾಕ್ಷಿಯೂ ಅಲ್ಲ, ಅನುಭವಿಸಿದ ಸಂತ್ರಸ್ತನೂ ಅಲ್ಲ. ನಿಮ್ಮ ನೋವಿನ ಬಗ್ಗೆ ಹೇಳಿಕೊಂಡ ಸಮಾಧಾನ, ಪರಿಹಾರಕ್ಕಾಗಿ ಮಾಡಿದ ಪ್ರಾರ್ಥನೆ ಎರಡೂ ಮುಗಿದುಹೋಗುತ್ತವೆ - ನೋವು ಮರುಕಳಿಸುತ್ತದೆ. ಕೆಲವರು ನೋವಿನಿಂದ ಹೊರಬರಲು ಬಡಿಯುವ ಕೊನೆಯ ಬಾಗಿಲು: ಸಾವು. ಅದು ನೋವಿನಿಂದ ಹೊರಬರಲು ಹೋಗಿ ಜೀವನದಿಂದಲೇ ಹೊರಗೆ ಬರುವ ಪ್ರಯತ್ನ ಮಾಡುತ್ತೇವೆ. ನಮಗೆ ಸಂತೋಷದ ಕಿಟಕಿಗಳ ಕೊರತೆಯಿರುವುದಿಲ್ಲ, ಆದರೆ ಅವುಗಳನ್ನು ತೆರೆಯುವ ಇಚ್ಛೆಯ ಕೊರತೆಯಿರುತ್ತದೆ ಅಷ್ಟೇ.
ಮೂರು, ಬಹಳ ವಿಚಿತ್ರವೆಂಬಂತೆ ನಮ್ಮಲ್ಲಿ ಕೆಲವರು ನೋವನ್ನು ಇಷ್ಟಪಡಲು ಶುರುಮಾಡುತ್ತೇವೆ, ಮತ್ತು ಅದರೊಂದಿಗೆ ಬರುವ ಸ್ವಾನುಕಂಪವನ್ನೂ. ನಾವು ನಮಗೆ ಗೊತ್ತಿಲ್ಲದೆ ನಮ್ಮ ನೋವಿಗೆ ಬೇರೆಯವರ ಅನುಕಂಪವನ್ನು ಆಸ್ವಾದಿಸಲು ಶುರುಮಾಡುತ್ತೇವೆ. ನಮ್ಮ ನೋವು ನಮ್ಮಿಂದ ದೂರವಾಗಿಬಿಡುತ್ತದೆಂಬ ಭಯದಿಂದ ನಾವು ಪ್ರಪಂಚದಿಂದಲೇ ದೂರವಾಗಲು ಶುರುಮಾಡುತ್ತೇವೆ. ದುಃಖ ನಮ್ಮಿಂದ ದೂರವಾಗದಿರಲು ನಮ್ಮಿಂದ ದೂರವಾದವರ, ಕಳೆದುಹೋದವರ ನೆನಪುಗಳನ್ನು ಹಿಡಿದಿಡುವ ಎಲ್ಲ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ. ನಮ್ಮ ನೋವನ್ನು ಜೀವಂತವಾಗಿಡುವ ಹಾಡುಗಳನ್ನು ಕೇಳುತ್ತೇವೆ, ನಮ್ಮ ಬದುಕು ಇರುವುದು ಬದುಕಲು ಎನ್ನುವುದನ್ನು ಮರೆತು ನಾವು ನಮ್ಮ ನೋವನ್ನು ವೈಭವೀಕರಿಸುತ್ತೇವೆ. ದುಃಖಕ್ಕೂ ತನ್ನದೇ ಆದ ಆಯಸ್ಸು ಇದೆ ಅನ್ನುವುದನ್ನು ಮರೆತು ಅದರ ಸಮಯ ಮುಗಿದ ಮೇಲೂ ನಾವದನ್ನು ಬೀಳ್ಕೊಡುವುದಿಲ್ಲ. ಜೀವನದ ಸೌಂದರ್ಯಕ್ಕೆ ನಾವು ಕುರುಡರಾಗುತ್ತೇವೆ. ಸಮಯವೆಂಬ ಪರಿಹಾರಕರ್ತನ ಕರೆಗೆ ನಾವು ಕಿವುಡಾಗುತ್ತೇವೆ.
ನಾಲ್ಕು, ಮೇಲಿಂದಕ್ಕೆ ತದ್ವಿರುದ್ಧವಾಗಿ, ನಮ್ಮಲ್ಲಿ ಇನ್ನೂ ಕೆಲವರು ನೋವಿನಿಂದ ಆದಷ್ಟು ಬೇಗ ತಪ್ಪಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಮಗಾದ ನೋವಿನಿಂದ ಹೊರಬರಲು ಬಹುಬೇಗ ನಾವು ನಮ್ಮ ಕೈಗಳನ್ನು ಚಾಚುತ್ತೇವೆ - ಹೊಸ ಪರಿಹಾರಗಳ ಕಡೆಗೆ, ಹೊಸ ಜನರ, ಹೊಸ ಸಂಬಂಧಗಳ ಕಡೆಗೆ. ಆದರೆ ನೋವು ಹಾಗೆ ಪರಿಹಾರವಾಗುವಂಥದಲ್ಲ. ಅದು ಬೆಳಗಿನ ಸಮಯ ಮುಚ್ಚಿದ ದಟ್ಟ ಮಂಜಿನಂತೆ. ಅದು ತಿಳಿಗೊಳ್ಳಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ನೋವಿನಿಂದ ಹೊರಬರಲು ಇರುವ ಒಂದೇ ದಾರಿಯೆಂದರೆ ನೋವನ್ನು ಒಪ್ಪಿಕೊಂಡು ಅದು ತನ್ನ ಕೆಲಸ ಪೂರ್ಣಗೊಳಿಸಿಕೊಂಡು ಹೋಗುವವರೆಗೆ ಅದನ್ನು ಅನುಭವಿಸುವುದು. ನಾವು ಮನದಟ್ಟು ಮಾಡಿಕೊಳ್ಳಬೇಕಾದದ್ದು: ಕೆಲವು ಅಮೂಲ್ಯವಾದ ವಿಷಯಗಳಿಗೆ ಮತ್ತು ವ್ಯಕ್ತಿಗಳಿಗೆ ಪರ್ಯಾಯವಿರುವುದಿಲ್ಲ. ಅವುಗಳನ್ನು ನಾವು ಕಳೆದುಕೊಂಡಾಗ, ಅವರು ನಮ್ಮನ್ನು ಬಿಟ್ಟು ಹೋದಾಗ ಜೀವನ ಛಿದ್ರಗೊಳ್ಳುತ್ತದೆ. ಸರಿಯಾಗಿ ಅದೇ ಸಮಯದಲ್ಲಿ ತನ್ನ ಪಾತ್ರ ನಿಭಾಯಿಸಲು ನಮ್ಮ ಜೀವನದಲ್ಲಿ ಪ್ರವೇಶಿಸುವ ಭಾವವೇ ದುಃಖ.
ನಾವು ಕಳೆದುಕೊಂಡ ವಿಷಯವನ್ನು, ನಮ್ಮನ್ನು ಬಿಟ್ಟು ಹೋದರೆಂಬ ಸತ್ಯವನ್ನು ಮನಸ್ಸು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಅದನ್ನು ಅಚ್ಚೋಟ್ಟುವ ಜವಾಬ್ದಾರಿ ದುಃಖದ್ದು. ಆದ್ದರಿಂದ ಆ ನೋವು ನಮ್ಮನ್ನು ಆಳುವಾಗ ನಾವು ಅದನ್ನು ಆಳಲು ಬಿಟ್ಟುಬಿಡಬೇಕು. ಅದು ನಮ್ಮ ಮನಸ್ಸು ಸತ್ಯವನ್ನು ಒಪ್ಪಿಕೊಳ್ಳಲು, ಮುಂದಿನ ಜೀವನಕ್ಕೆ ತನ್ನನ್ನು ತಾನು ಅಣಿಮಾಡುಳ್ಳೋವ ಪ್ರಕ್ರಿಯೆ. ನಾವು ನೋವನ್ನು ಅನುಭವಿಸದೇ ಹೋದರೆ, ಅದು ಮನಸ್ಸಿನಲ್ಲಿ ಸತ್ಯಗಳನ್ನು ಅಚ್ಚೋತ್ತದೆ ಹೋದರೆ ಮನಸ್ಸು ಭ್ರಮೆಯಲ್ಲೇ ಉಳಿದುಬಿಡುತ್ತದೆ. ಕಳೆದುಕೊಂಡ ವಿಷಯ ವ್ಯಕ್ತಿಯನ್ನು ಮತ್ತೆ ಮತ್ತೆ ಹುಡುಕುತ್ತದೆ, ನಿರೀಕ್ಷಿಸುತ್ತದೆ, ಮತ್ತೆ ಮತ್ತೆ ಘಾಸಿಕೊಳ್ಳುತ್ತದೆ. ಅದಕ್ಕೆ ವರಕವಿ ದ. ರಾ. ಬೇಂದ್ರೆ ಬರೆಯುತ್ತಾರೆ
ಅತ್ತಾರ ಅತ್ತು ಬಿಡು ಹೊನಲು ಬರಲಿ
ನಾಕ್ಯಾಕ ಮರೆಸತಿದಿ ದುಃಖ
ನೋವನ್ನು ನಿರಾಕರಿಸದೆ, ನೋವನ್ನು ದೂರ ಮಾಡಲು ತಪ್ಪು ಬಾಗಿಲುಗಳನ್ನು ಬಡಿಯದೇ, ನೋವನ್ನು ವೈಭವೀಕರಿಸಿ ಅದನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡದೆ, ನೋವಿನಿಂದ ಅತೀ ಬೇಗ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡದೆ - ನೋವಿಗೂ ತನ್ನದೇ ಆದ ಉದ್ದೇಶ, ಆಯಸ್ಸು ಇದೆ ಎಂಬುದನ್ನು ಅರ್ಥಮಾಡಿಕೊಂಡು ಸುಮ್ಮನೆ ಅದರ ಪಾಡಿಗೆ ಅದನ್ನು ಬಿಟ್ಟುಬಿಡಬೇಕು. ಸ್ವಲ್ಪ ಸಮಯ ಜೀವನ ಹಾದಿ ತಪ್ಪುತ್ತದೆ ನಿಜ, ಆದರೆ ಅದಾದಮೇಲೆ ಜೀವನಕ್ಕೆ ತನ್ನದೇ ಪಕ್ವತೆ ಬರುತ್ತದೆ.
ನೋವಿನ ನಿಜವಾದ ಮೌಲ್ಯ ನಮಗೆ ತಿಳಿಯುವುದು ಅದು ಹೋದ ಮೇಲೆ. ನೋವು ಒಂದು ನೆನಪಾಗುತ್ತದೆ. ನೋವು ಒಂದು ಜೀವನದ ಪಾಠವಾಗುತ್ತದೆ. ನೋವು ನಾವು ನಡೆಯುವ ಮುಂದಿನ ಹಾದಿಗೆ ದಾರಿದೀಪವಾಗುತ್ತದೆ.
Comments