ದೇವರ ರಾಜೀನಾಮೆ ಪತ್ರ
- Harsha
- Jun 13, 2021
- 3 min read
ನಾನು ದೇವರು.
ಸಾಮಾನ್ಯವಾಗಿ ಮನುಷ್ಯರು ತಮ್ಮ ಉದ್ಯೋಗಕ್ಕೆ ಎರಡು ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಾರೆ. ಒಂದು: ತಾವು ನಿರೀಕ್ಷಿಸಿದ್ದು ಅಥವಾ ತಮ್ಮ ಯೋಗ್ಯತೆಗೆ ತಕ್ಕಷ್ಟು ಸಿಗದ ಕಾರಣಕ್ಕಾಗಿ; ಎರಡು: ದೂರದಲ್ಲಿ ಕಾಣುತ್ತಿರುವ ಹುಲ್ಲುಗಾವಲು ಈಗಿರುವ ಹುಲ್ಲಿಗಿಂತ ಹೆಚ್ಚು ಹಸಿರಾಗಿ ಕಾಣುತ್ತಿರುವ ಕಾರಣಕ್ಕಾಗಿ. ಆದರೆ ನಾನು ದೇವರು. ನನ್ನ ರಾಜಿನಾಮೆಗೆ ಇವಕ್ಕೆ ತದ್ವಿರುದ್ಧ ಕಾರಣಗಳಿವೆ. ಒಂದು: ಆ ಜಗತ್ತಿನಲ್ಲಿ ನನ್ನ ಯೋಗ್ಯತೆ ಮೀರಿ ನನಗೆ ಸಿಗುತ್ತಿದೆ; ಎರಡು: ನಾನು ನಿಮ್ಮ ಜೀವನದಿಂದ ನಿರ್ಗಮಿಸುವುದರಿಂದ ನಿಮ್ಮ ಬಾಳು ಹೆಚ್ಚು ಹಸಿರಾಗುತ್ತದೆ.
ತಮಾಷೆಯೆಂದರೆ ನಾನು ಎಂದೂ ಮಾಡದ ನನ್ನ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನೀವೇ ನನ್ನನ್ನು ಆವಿಷ್ಕರಿಸಿದಿರಿ, ನನ್ನಿಂದ ನಿರೀಕ್ಷಿಸಿದಿರಿ, ಆ ಇಲ್ಲದ ಸದ್ಗುಣಗಳನ್ನು ಆರೋಪಿಸಿದಿರಿ. ನನಗೀಗ ಉಸಿರುಗಟ್ಟುತ್ತಿದೆ. ಇಷ್ಟು ಶತಮಾನ - ಸಹಸ್ರಮಾನಗಳವರೆಗೂ ನಿಮ್ಮ ಎಲ್ಲ ಮಾತು, ಎಲ್ಲ ಮಂತ್ರ, ಎಲ್ಲ ಕೆಲಸಗಳನ್ನು ಸಹಿಸಿಕೊಂಡೆ. ಇನ್ನು ಆಗುತ್ತಿಲ್ಲ. ಈಗ ನಾನು ನಿರ್ಗಮಿಸದಿದ್ದರೆ ತಪ್ಪಾದೀತು. ನಾನು ರಾಜೀನಾಮೆ ನೀಡುತ್ತಿದ್ದೇನೆ.
ನೀವೇ ನನ್ನ ಹೆಸರು, ಬಣ್ಣ, ಆಕಾರ, ಗಾತ್ರ, ಬಣ್ಣ, ಗುಣ, ಇಷ್ಟ - ಅಇಷ್ಟ ಎಲ್ಲವನ್ನು ನಿರ್ಧರಿಸಿದಿರಿ. ಬಹುಶಃ ನನ್ನೊಂದಿಗೆ ಬಾಂಧವ್ಯಕ್ಕಾಗಿ ನನ್ನನ್ನು ನಿಮ್ಮಂತೆ ಊಹಿಸಿಕೊಳ್ಳುತ್ತಿರಬೇಕು ಎಂದುಕೊಂಡು ಸುಮ್ಮನಿದ್ದೆ. ನೀವು ನನ್ನ ಬಗ್ಗೆ ಕಥೆಗಳನ್ನು ಬರೆದಿರಿ. ಅವುಗಳನ್ನು ಪುರಾಣವೆಂದಿರಿ. ನಾನೇ ಹೇಳಿದೆ ಅಂತ ಹೇಳಿ ನೀವೇ ಬರೆದುಕೊಂಡು ಅವುಗಳನ್ನು ಸ್ಮೃತಿ, ಶ್ರುತಿ, ಧರ್ಮಗ್ರಂಥಗಳು ಎನ್ನಲಾಯಿತು. ನೀವು ನನ್ನನ್ನು ಸೃಷ್ಟಿ - ಸ್ಥಿತಿ - ಲಯ ಎಲ್ಲವಕ್ಕೂ ಕಾರಣನೆಂದುಕೊಂಡಿರಿ. ಇದೆಲ್ಲ ನಿಮ್ಮ ನಿರುಪದ್ರವ ಕಲ್ಪನೆ ಅಂದುಕೊಂಡು ಸುಮ್ಮನಿದ್ದೆ. ನಿಮ್ಮ ಪ್ರಶ್ನೆಗಳಿಗೆ ನಿಲುಕದ ಉತ್ತರಕ್ಕಾಗಿ ನೀವು ನನ್ನನ್ನು ಕಲ್ಪಿಸಿಕೊಂಡಿರಬೇಕು ಎಂದುಕೊಂಡು ಸುಮ್ಮನೆ ನಿರ್ಲಕ್ಷಿಸಿದೆ.
ನೀವು ನನಗಾಗಿ - ನನ್ನನ್ನು ಪ್ರಾರ್ಥಿಸುವುದಕ್ಕಾಗಿ ದೇವಸ್ಥಾನ, ಮಸೀದಿ, ಚರ್ಚ್ ಕಟ್ಟಿಕೊಂಡಿರಿ. ನನ್ನ ಹೆಸರಲ್ಲಿ ಶ್ಲೋಕ, ಮಂತ್ರ, ಸ್ತುತಿ ಹಾಡುಗಳನ್ನು ಹೇಳಿಕೊಂಡಿರಿ - ಹಾಡಿಕೊಂಡಿರಿ. ನಿಮ್ಮ ಮನಸ್ಸಿನ ಸಮಾಧಾನಕ್ಕೆ, ಮನಸ್ಸಿನ ಏಕಾಗ್ರತೆಗೆ, ನಿಮ್ಮ ದುಃಖಗಳಿಂದ ವಿಮುಖಗೊಳ್ಳುವುದಕ್ಕೆ - ನಿಮಗೆ ಇಂಥ ಆಚರಣೆಗಳು, ಸ್ಥಳಗಳು ಬೇಕಿರಬಹುದು ಎಂದುಕೊಂಡು ಸುಮ್ಮನಾದೆ. ಆದರೆ ಬರಬರುತ್ತ ಸ್ಥಿತಿ ಹದಗೆಡಲು ಪ್ರಾರಂಭವಾಯಿತು.
ನಿಮ್ಮ ಕಲ್ಪನೆಗಳು ವಿಚಿತ್ರವಾದವು: ನಿಮ್ಮ ಕಥೆಗಳಲ್ಲಿ ನನ್ನನ್ನು ಕುಡುಕ ಮಾಡಿದಿರಿ, ಕೊಲೆಗಡುಕ, ಸಿಡುಕ, ವಂಚಕ.. ಕೊನೆಗೆ ಅತ್ಯಾಚಾರಿ ಕೂಡ ಮಾಡಿದಿರಿ. ನಿಮ್ಮೆಲ್ಲ ದುರ್ಗುಣ ಮತ್ತು ಬಲಹೀನತೆಗಳನ್ನು ನನ್ನ ಮೇಲೂ ಆರೋಪಿಸಿದಿರಿ. ಕೆಲವೊಮ್ಮೆ ನನ್ನನ್ನು ನಿಮಗಿಂತ ಕೀಳಾಗಿ ಬಿಂಬಿಸಿದಿರಿ. ನಿಮ್ಮಂತೆಯೇ ಅಥವಾ ನಿಮಗಿಂತ ಕೀಳಾದ ಗುಣಗಳುಳ್ಳ ನಾನು ನಿಮಗೆ ಏನು ಒಳ್ಳೆಯದು ಮಾಡಲು ಸಾಧ್ಯ? ಆದರೆ ನೀವು ಇದೇನನ್ನೂ ಪ್ರಶ್ನಿಸದೆ ನನ್ನನ್ನು ಮತ್ತು ನನ್ನ ಬಗೆಗಿನ ಕಥೆಗಳನ್ನು ಒಪ್ಪಿಕೊಳ್ಳುತ್ತಾ ಬಂದಿರಿ.
ನೀವು ತಪ್ಪುಗಳನ್ನು, ಅಪರಾಧಗಳನ್ನು, ಪಾಪಗಳನ್ನು ಮಾಡುತ್ತಾ ಬಂದು ಕೊನೆಗೆ ಅವುಗಳೆಲ್ಲವನ್ನು ಮರೆತುಬಿಡಲು, ಕ್ಷಮಿಸಿಬಿಡಲು ನನಗೆ ಲಂಚದ ಆಮಿಷ ತೋರಿಸಿದಿರಿ. ಅವನ್ನು ಮುಡಿಪು, ಹರಕೆ, ದಕ್ಷಿಣೆ - ಏನೇನೋ ಹೆಸರುಗಳಿಂದ ಕರೆದಿರಿ. ನಿಮಗೆ ಹಣ ಬೇಕು, ಅರೋಗ್ಯ ಬೇಕು, ಆಸ್ತಿ ಬೇಕು, ವಿದ್ಯೆ, ಉದ್ಯೋಗ, ಅಧಿಕಾರ, ಜನಪ್ರಿಯತೆ.. ಎಲ್ಲಕ್ಕಿಂತ ತಮಾಷೆಯೆಂದರೆ ಮದುವೆ! ಇವೆಲ್ಲ ಕೋರಿಕೆಗಳನ್ನು, ಆಸೆಗಳನ್ನು ಪೂರೈರ ಸಲು ನನಗೆ ದುಡ್ಡು, ಬಟ್ಟೆ, ಆಹಾರ (ನೈವೇದ್ಯ).. ಎಲ್ಲಕ್ಕಿಂತ ಅಸಂಬದ್ಧವಾಗಿ ನಿಮ್ಮ ಕೂದಲನ್ನು ಕೊಟ್ಟಿರಿ. ನೀವು ನನ್ನನ್ನು ನಿಜವಾಗಿಯೂ ಸೃಷ್ಟಿಕರ್ತ ಎಂದುಕೊಂಡಿದ್ದರೆ ನಾನೇ ಸೃಷ್ಟಿಸಿದ ಇವೆಲ್ಲವನ್ನೂ ನನಗೆ ಕೊಡುವ ಅವಶ್ಯಕತೆ ಏನಿತ್ತು? ನೀವು ಇವೆಲ್ಲ ಕೊಟ್ಟು ನನ್ನನ್ನು ಸರ್ಕಾರಿ ಕಚೇರಿಯ ಭ್ರಷ್ಟ ಗುಮಾಸ್ತನ ಮಟ್ಟಕ್ಕೆ ಇಳಿಸಿಬಿಟ್ಟಿರಿ.
ಆದರೂ ನಿಮ್ಮ ಮೂರ್ಖತೆಯನ್ನು ನಿರ್ಲಕ್ಷಿಸಿದೆ. ಆದರೆ ನಿಮ್ಮ ಮೂರ್ಖತೆ ಹಾನಿಕಾರಕ ಬುದ್ಧಿವಂತಿಕೆಯಾಗಲು ಶುರುವಾಯಿತು. ನಿಮ್ಮ ಅತಾರ್ಕಿಕ ಧರ್ಮ - ಮತಗಳು ತಲೆಯೆತ್ತಿದ್ದವು, ನಿಮ್ಮ ಪ್ರವಾದಿಗಳು, ಸ್ವಾಮಿಗಳು, ಪಾದ್ರಿಗಳು, ಪೋಪ್ಗಳು, ಮುಲ್ಲಾಗಳು, ಜಗದ್ಗುರುಗಳು, ಮಠಾಧೀಶರು - ಎಲ್ಲರು ಹುಟ್ಟಿಕೊಂಡರು. ನೀವು ಇವರೆಲ್ಲರ ಮೂಲಕ ಅಸಂಬದ್ಧವಾದ, ಅಮಾನವೀಯ, ಮಾನಸಿಕ - ಬೌದ್ಧಿಕ ಅಸ್ವಸ್ಥ ಪ್ರಪಂಚ ಸೃಷ್ಟಿಸಿಕೊಂಡಿರಿ: ಎಲ್ಲವೂ ನನ್ನ ಹೆಸರಿನಲ್ಲಿ. ನಮ್ಮ ಎಲ್ಲ ಮತಗಳು, ಎಲ್ಲ ಧರ್ಮಗಳ ಗುರುಗಳು ನನ್ನನು ಪ್ರಾರ್ಥಿಸಲು ಹೇಳಿದರು, ಸಮಾಜ ಸರಿಯಾದ ದಾರಿಯಲ್ಲಿ ನಡೆಯಲು ದೇವರು ಬೇಕು ಎಂಬ ಕಾರಣ ಕೊಟ್ಟರು, ನೀವು ತಪ್ಪು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂದು ಹೆದರಿಸಿದರು. ನೀವು ಒಳ್ಳೆಯದು ಮಾಡಿದರೆ ನಿಮಗೆ ಮುಕ್ತಿ, ಸ್ವರ್ಗ ಸಿಗುತ್ತವೆಂಬ ಆಮಿಷ ಒಡ್ಡಿದರು.
ಇವೆಲ್ಲವೂ ನಿಮ್ಮ ಆಲೋಚನೆಯನ್ನು ದಾರಿತಪ್ಪಿಸುವ, ನಿಮ್ಮ ಬುದ್ಧಿವಂತಿಕೆಯನ್ನು ಮಲಗಿಸುವ, ಪ್ರಶ್ನೆ ಮಾಡುವ ನಿಮ್ಮ ಶಕ್ತಿಯನ್ನು ಕುಂದಿಸುವ ಪ್ರಯತ್ನಗಳಾದವು. ನನ್ನ ಹೆಸರಿನಲ್ಲಿ ಇನ್ನೆಷ್ಟು ಶತಮಾನ ಇವೆಲ್ಲ ನಡೆಯಬೇಕು? ಪ್ರೀತಿ ಮತ್ತು ಪ್ರಾಮಾಣಿಕತೆ ನಾವು ಬದುಕುವ ಸರಿಯಾದ ದಾರಿಗಳಾಗಬೇಕಲ್ಲವಾ? ಯಾರು ಕೂಡ ನಮ್ಮನ್ನು ನೋಡದಿದ್ದರೂ, ಯಾರು ನಮ್ಮನ್ನು ಶಿಕ್ಷಿಸದಿದ್ದರೂ ನಾವು ತಪ್ಪು ಮಾಡಬಾರದು ಎಂದು ಯಾವ ಧರ್ಮವೂ ಹೇಳಲಿಲ್ಲ. ಯಾವ ಆಮಿಷ ತೋರದೆ ನಾವು ಒಳ್ಳೆಯವರಾಗಿರಬೇಕು ಅಂದು ಯಾವ ಧರ್ಮಗುರು ಕೂಡ ಹೇಳಲಿಲ್ಲ. ನನ್ನ ಹೆಸರಿನಲ್ಲಿ ಹುಟ್ಟಿಸಿದ ಭಯ ಮತ್ತು ಆಮಿಷ ಎಷ್ಟು ವರ್ಷ ನಿಮ್ಮನ್ನು ಹಿಡಿದಿಡಲು ಸಾಧ್ಯ? ನೀವು ತಪ್ಪು ಮತ್ತು ಮೋಸ ಮಾಡುವುದನ್ನು ಬಿಡಲಿಲ್ಲ.ಆದರೆ ನಿಮ್ಮ ಗುರುಗಳು ಅದಕ್ಕೂ ಪರಿಹಾರ ಸೂಚಿಸಿದವು. ನೀವು ನನಗೆ ಕಾಣಿಕೆ ಕೊಟ್ಟಿರಿ, ಮುಡಿಪು ಕಟ್ಟಿದಿರಿ, ಹೋಮ - ಹವನ, ತೀರ್ಥಯಾತ್ರೆ - ಎಲ್ಲ ಮಾಡಿದಿರಿ. ಕಲ್ಲಿನ ಮೇಲೆ, ಹುತ್ತದ ಒಳಗೆ ಹಸುಗಳ ಕೆಚ್ಚಲು ಹಿಸುಕಿ ಹಿಂಡಿದ ಹಾಲು ಸುರಿದಿರಿ. ಹುಳುಗಳನ್ನು ಕುದಿಸಿ ಕೊಂಡು ಮಾಡಿದ ರೇಷ್ಮೆ ಸೀರೆಗಳನ್ನು ಯಜ್ಞ ಕುಂಡದಲ್ಲಿ ಹಾಕಿದಿರಿ, ಗುಡ್ಡಗಾಡುಗಳಲ್ಲಿ ಮೇಯ್ದುಕೊಂಡಿದ್ದ ಆಡು-ಕುರಿಗಳನ್ನು ಅಮಾನವೀಯವಾಗಿ ಕೊಚ್ಚಿ ನನಗೆ ಸಮರ್ಪಿಸಿದಿರಿ: ನಿಮ್ಮ ಧರ್ಮಗಳು, ನಿಮ್ಮ ಗುರುಗಳು ಇವೆಲ್ಲವನ್ನೂ ಹೇಳಿಕೊಡುತ್ತಾ ಹೋದರು ಅಥವಾ ತಡೆಯದೆ ಹೋದರು. ಯಾರು ಕೂಡ ನಿಮ್ಮ ಹರಕೆಗಾಗಿ ನಿಮ್ಮ ಮಾಂಸವನ್ನೇ ನೈವೇದ್ಯ ಮಾಡಿ ಎಂದು ಹೇಳಲಿಲ್ಲ. ಹೇಳಿದರೆ ನೀವು ಕೇಳುತ್ತಿರಲಿಲ್ಲ. ಅವರಿಗೆ ನಿಮ್ಮ ಪ್ರಶಂಸೆ, ಕಾಣಿಕೆ ಬೇಕು - ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ದಡ್ಡತನ. ನಿಮ್ಮ ಹರಕೆ-ಆಸೆ ತೀರಿಸಿಕೊಳ್ಳಲು ನೀವು ಕುರಿ-ಕೋಳಿಗಳನ್ನು ಬಲಿ ಕೊಟ್ಟಂತೆ, ತಮ್ಮ ಲಾಭಕ್ಕಾಗಿ ಅವರು ನನ್ನನ್ನು ಬಲಿ ಮಾಡಿದರು.
ನನ್ನ ಹೆಸರಿನಲ್ಲಿ ವ್ಯವಸ್ಥಿತವಾಗಿ ನೀವು ಮಾನವೀಯತೆಯನ್ನು ಕೊಂದಿರಿ. ನಿಮಗೆ ಪವಾಡಗಳು ಬೇಕು; ಪುರಾಣಗಳು, ಕಟ್ಟುಕಥೆಗಳು ಬೇಕು. ನೀವು ಯಾರನ್ನಾದರೂ ನಂಬಬೇಕೆಂದರೆ ಅವರು ತಮ್ಮ ಬಾಯಿಂದ ಇಷ್ಟಲಿಂದ ತೆಗೆಯಬೇಕು, ನೀರನ್ನು ಮಧುಪಾನ ಮಾಡಬೇಕು, ನೀರು ಹಾಕಿ ದೀಪ ಉರಿಸಬೇಕು. ಯಾವ ಧರ್ಮ ಕೂಡ, ಯಾವ ಧರ್ಮಗುರು ಕೂಡ ನಿಮ್ಮ ಸ್ವಶಕ್ತಿಯಿಂದ, ನಿಮ್ಮ ಪ್ರಾಮಾಣಿಕತೆಯಿಂದ, ನಿಮ್ಮ ಪರಿಶ್ರಮದಿಂದ ಮಾತ್ರ ಬದುಕಲು ಹೇಳಲಿಲ್ಲ. ಹೀಗೆ ಹೇಳಿದವರನ್ನು ನೀವು ನಂಬಲಿಲ್ಲ. ಅವರ ಮಾತುಗಳನ್ನು ಅನುಕರಿಸಲಿಲ್ಲ. ನಿಮಗೆ ಭಯ ಬೇಕು, ಆಮಿಷ ಬೇಕು, ಪವಾಡ ಬೇಕು, ತಪ್ಪು ಮಾಡಿ ತಪ್ಪಿಸಿಕೊಳ್ಳಲು ಸುಲಭಮಾರ್ಗ ಬೇಕು - ಇವೆಲ್ಲವುದಕ್ಕೂ ನಾನು ಬೇಕು - ದೇವರು!
ಯೋಚಿಸಿ ನೋಡಿ. ನನ್ನ ಮೇಲಿನ ನಿಮ್ಮ ನಂಬಿಕೆ ಭಕ್ತಿ ಕೂಡ ಪರಿಪೂರ್ಣವಾದುದಲ್ಲ. ಯಾರಾದರೂ ಮಾರಾಣಾಂತಿಕ ರೋಗದಿಂದ ನರಳುವಾಗ ಅವರು ನನ್ನ ದೇವಸ್ಥಾನ, ಮಸೀದಿ, ಚರ್ಚಿಗೆ ಬಂದು ನನ್ನನ್ನೇ ನಂಬಿಕೊಂಡು, ನನ್ನ ಮೇಲೆ ಮಾತ್ರ ಭಾರ ಹಾಕಿ, ನನ್ನ ಜಪ ಮಾತ್ರ ಮಾಡುತ್ತಾ, ನನ್ನ ಪ್ರಾರ್ಥನೆ ಮಾತ್ರ ಮಾಡುತ್ತಾ ನಿರಾಳವಾಗಿ ಇರುವವರನ್ನು, ಯಾವುದೇ ವೈದ್ಯರ ಬಳಿ ಹೋಗದೇ, ಔಷಧಿ ಸೇವಿಸದೇ ಇರುವವರನ್ನು ನಾನು ನೋಡಿಲ್ಲ. ನಿಮಗೆ ನಾನು ಕೂಡ ಒಂದು ಆಯ್ಕೆ ಮಾತ್ರ. ಇದು ಕೂಡ ನಿಮ್ಮ ಎಡಬಿಡಂಗಿ ಧರ್ಮಗಳು ಹೇಳಿಕೊಟ್ಟ ಪಾಠ. ನಿಮ್ಮ ಪ್ರಯತ್ನ ನೀವು ಮಾಡಿ ಅದರ ಜೊತೆ ದೇವರು ಪಕ್ಕಕ್ಕಿರಲಿ ಮತ್ತು ಫಲ ನಿರೀಕ್ಷಿಸಬೇಡಿ. ಹಾಗಾಗಿ ನಿಮ್ಮ ಬದುಕಿನ ಜವಾಬ್ದಾರಿಯನ್ನು ನೀವು ಸಂಪೂರ್ಣವಾಗಿ ತೆಗೆದುಕೊಳ್ಳಲು ಆಗುವುದೇ ಇಲ್ಲ. ನೀವು ಒಬ್ಬರೇ ನಡೆಯಲು ಪ್ರಯತ್ನವೇ ಪಡಲಿಲ್ಲ. ನಿಮಗೊಂದು ಇಲ್ಲದ ಊರುಗೋಲು ಬೇಕಾಯಿತು - ದೇವರು. ನೀವು ಗೆದ್ದಾಗ ನನ್ನನ್ನು ಹೊಗಳಿದಿರಿ. ನೀವು ಸೋತಾಗ ನಿಮ್ಮನ್ನೇ ದೂಷಿಸಿಕೊಂಡಿರಿ. ನಾನಿರುವವರೆಗೆ ನೀವು ಬರೀ ಸೋಲು - ಗೆಲವುಗಳ ಬಗ್ಗೆ ಯೋಚಿಸುತ್ತೀರಿ; ನಿಮ್ಮ ಪ್ರಯತ್ನದ ಬಗ್ಗೆ ಅಲ್ಲ.
ಇದು ನಾನು ನಿರ್ಗಮಿಸುವ ಕಾಲ. ಇದು ನಿಮ್ಮ ಪ್ರಪಂಚ, ನಿಮ್ಮ ಜೀವನ. ನೀವು ಸರಿಯಾಗಿರಲು, ಮೇಲೆ ಯಾರೋ ಒಬ್ಬ ಕುಳಿತುಕೊಂಡು ನಿಮ್ಮನ್ನು ನೋಡುತ್ತಾ, ನಿಮ್ಮ ತಪ್ಪುಗಳಿಗೆ ಶಿಕ್ಷೆ ಕೊಡುತ್ತಾ ಇರಬೇಕೆಂಬ ನಿರೀಕ್ಷೆ ಬೇಡ. ದೊಡ್ಡವರಾಗಿ. ಪ್ರಬುದ್ಧರಾಗಿ. ನಿಮ್ಮನ್ನು ನೀವೇ ನಿರ್ವಹಿಸಿಕೊಳ್ಳಿ. ನೀವು ಮನುಷ್ಯರು: ನೀವು ಬದುಕಿದ್ದಾಗಲೇ ಸ್ವರ್ಗ ಸೃಷ್ಟಿಸಿಕೊಳ್ಳಿ. ನನ್ನ ಹೆಸರಲ್ಲಿ ನಿಮ್ಮ ಧರ್ಮಗಳು ನಿಮ್ಮ ಮಧ್ಯೆ ದ್ವೇಷ ಬಿತ್ತಿದ್ದು ಸಾಕು. ನಿಮ್ಮ ಯಾವ ಧಾರ್ಮ ಗುರುವೂ ರಸ್ತೆ - ಸೇತುವೆ ಕಟ್ಟಲಿಲ್ಲ, ಬಿತ್ತಿ - ಬೆಳೆಯಲಿಲ್ಲ, ಯಾವುದನ್ನೂ ಅನ್ವೇಷಿಸಲಿಲ್ಲ - ಮಾಡಿದ್ದೆಲ್ಲ ನಿಮ್ಮನ್ನು ದೋಚಿದ್ದು, ಮೂರ್ಖರನ್ನಾಗಿಸಿದ್ದು ಮತ್ತು ಅವರ ಲಾಭಕ್ಕಾಗಿ ನನ್ನನ್ನು ಉಪಯೋಗಿಸಿಕೊಂಡಿದ್ದು.
ಈಗಾಗಲೇ ನನ್ನ ಹೆಸರಲ್ಲಿ ನಿಮ್ಮ ಬದುಕನ್ನು ದುಸ್ತರಗೊಳಿಸಿಕೊಂಡಿದ್ದೀರಿ. ನಿಮ್ಮದೇ ಆದ ಮೆದುಳಿದೆ: ಅಲ್ಲಿ ಮೂರ್ಖತನ ತುಂಬಿಕೊಳ್ಳಬೇಡಿ, ವಿವೇಕವಿರಲಿ. ನಿಮ್ಮದೇ ಹೃದಯವಿದೆ: ಅಲ್ಲಿ ಕಲ್ಮಶ ಬೇಡ, ಪ್ರ್ರೀತಿಯಿರಲಿ. ನಿಮ್ಮವೇ ರೆಕ್ಕೆಗಳಿವೆ: ಸ್ವತಂತ್ರವಾಗಿ ಹಾರಿ.
ನಾನು ನಿರ್ಗಮಿಸುತ್ತಿದ್ದೇನೆ.
ಇಂತಿ,
ಇಲ್ಲದ ದೇವರು
Comments