ದೀಪ ಆರುವ ಮುನ್ನ..
ಗಾಳಿಯೇ.. ಇನ್ನೊಂದಿಷ್ಟು ಸಮಯ ಕೊಡು, ನನ್ನ ಕೆಲವು ಜವಾಬ್ದಾರಿಗಳಿವೆ, ನಿಭಾಯಿಸಿ ಆರಿಹೋಗುತ್ತೇನೆ. ಇನ್ನು ಕೆಲವೇ ನಿಮಿಷ, ಸೂರ್ಯ ಉದಯಿಸುತ್ತಾನೆ, ಕತ್ತಲು ಕರಗುತ್ತದೆ. ಅಲ್ಲಿಯವರೆಗೂ ನನ್ನ ಬೆಳಗಲು ಬಿಡು. ಆಮೇಲೆ ನಾನು ಸಂತೋಷದಿಂದ ಆರಿಹೋಗುತ್ತೇನೆ. ಇನ್ನೊಂದಿಷ್ಟು ಸಮಯ ಕೊಡು.
ಸುಡುತ್ತಾ ಸುಡುತ್ತಾ ಬಾಳ ಬತ್ತಿಯು ಬಾಲ್ಯ, ಯೌವನ, ಮಧ್ಯ ವಯಸ್ಸು ದಾಟಿ ವೃದ್ಧಾಪ್ಯಕ್ಕೆ ಬಂದು ನಿಂತಿದೆ. ಇನ್ನು ಸ್ವಲ್ಪ ಉರಿಯಬೇಕಿದೆ. ಆಮೇಲೆ ಸೂರ್ಯ ಉದಯಿಸುತ್ತಾನೆ. ಆಮೇಲೆ ಸುತ್ತ ಮುತ್ತಲಿನವರ ಪ್ರಪಂಚಕ್ಕೆ ನನ್ನ ಅವಶ್ಯಕತೆ ಇರುವುದಿಲ್ಲ. ಉರಿಯಲು ಬಿಡು. ಮತ್ತೆ ಕೇಳುವುದಿಲ್ಲ. ಇನ್ನೊಂದಿಷ್ಟು ಸಮಯ ಕೊಡು.
ನನಗಾಗಿ ಕೇಳುತ್ತಿಲ್ಲ. ನನ್ನ ಬೆಳಕು ನನಗೆ ಬೇಕಿಲ್ಲ. ನನ್ನ ಕೆಳಗೆ ಕತ್ತಲು ಮಾಡಿಕೊಂಡು ಸುತ್ತ ಬೆಳಕು ಹರಿಸುವ ದೀಪ ನಾನು. ನಾನು ಉರಿಯದಿದ್ದರೆ ನನ್ನ ಸುತ್ತಲಿನ ಪ್ರಪಂಚ ನಿಂತುಹೋಗುವುದಿಲ್ಲವೇನೋ. ಆದರೆ ನನಗೆ ಅವರನ್ನು ಅಂಧಕಾರದಲ್ಲಿಡಲು ಆಗುತ್ತಿಲ್ಲ. ಇದು ನನ್ನ ಅಲಿಖಿತ ಜವಾಬ್ದಾರಿ. ಇನ್ನೊಂದಿಷ್ಟು ಸಮಯ ಕೊಡು.
ನನ್ನೊಳಗಿನ ಅಂತಃಸತ್ವ ವೆಂಬ ತೈಲವೇ, ನೀನು ಹನಿ ಹನಿಯಾಗಿ ಹರಿದು ನನ್ನನ್ನು ಉರಿಯುವಂತೆ ಮಾಡಿರುವೆ. ನೀನು ಮುಗಿದು ಹೋಗುತ್ತಿರುವುದು ನನಗೆ ಕಾಣುತ್ತಿದೆ. ಹೇಗೋ ಮಾಡಿ ಸ್ವಲ್ಪ ಹರಿದುಬಿಡು. ನಾನು ಉಳಿಯಬೇಕಿದೆ, ಉರಿಯಬೇಕಿದೆ. ಇನ್ನೊಂದಿಷ್ಟು ಸಮಯ ಕೊಡು.
-ದೀಪ
*****
ಪ್ರೀತಿಯ ದೀಪವೇ,
ನಾನು ಗಾಳಿ!
ಕ್ಷಮಿಸು, ನಾನು ನಿನ್ನನ್ನು ಆರಿಸುತ್ತಿದ್ದೇನೆ! ಇಷ್ಟು ಸಮಯ ಉರಿದದ್ದು ಸಾಕು. ಮಲಗು.
ಇಷ್ಟು ಸಮಯ ಬದುಕಿನ ಅಸಂಖ್ಯ ಕಷ್ಟ-ದುಃಖಗಳ ಕತ್ತಲೆಯ ವಿರುದ್ಧ ಹೋರಾಡಿದ್ದು ಸಾಕು. ವಿಶ್ರಮಿಸು.
ನಾನು ನಿರ್ದಯಿ ಎನಿಸಬಹುದು. ಆದರೆ ನಾನು ನನ್ನ ಕರ್ತವ್ಯ ಪಾಲಿಸುತ್ತಿದ್ದೇನೆ. ಮುಗಿದು ಹೋಗಿವೆ ನಿನ್ನ ಕಾಲದ ಬತ್ತಿ. ಬತ್ತಿಹೋಗಿದೆ ನಿನ್ನ ಅಂತಃಸತ್ವದ ತೈಲ. ನಿನ್ನ ಸುತ್ತಲಿನವರು ತಮ್ಮ ಕೈ ನಿನ್ನ ಸುತ್ತ ಹಿಡಿದು ನೀನು ಆರದಂತೆ ತಡೆಯಲಾರರು. ನಿನ್ನ ಸಾರ್ಥಕ ಹೋರಾಟ ಮುಗಿಯಲಿ.
ನೀನು ಅಂಧಕಾರದಲ್ಲಿ ನಿನ್ನವರನ್ನು ಬಿಟ್ಟುಹೋಗುತ್ತಿಲ್ಲ. ಸೂರ್ಯ ಮುಳುಗಿದ ಮೇಲೂ, ಕತ್ತಲೆ ಕವಿದ ಮೇಲೂ ಅವರಿಗೆ ಪ್ರತಿಯೊಂದನ್ನು ತೋರಿಸಿಕೊಟ್ಟ ಸಾರ್ಥಕತೆ ನಿನಗಿರಲಿ. ಆರಿಸಲು ನಾನೊಂದು ನೆಪ ಅಷ್ಟೇ. ನೀನು ಆರಿದ ನಂತರ - ಬೆಳಕು ಹರಿಯುವ ಮುನ್ನ ಇರುವುದು ನಿಶ್ಯಬ್ದ ಕಾಲ. ಅಲ್ಲಿ ನಿನ್ನ ಬದುಕಿನ ನಿಸ್ವಾರ್ಥ ಸಾರ್ಥಕತೆಯ ಮಂಥನ ಅವರ ಮನಗಳಲ್ಲಿ ನಡೆಯುತ್ತದೆ.
ಕತ್ತಲಲ್ಲಿ ತಡಕಾಡುವ ಕೈಗಳಿಗೆ ನೀನು ಬೆಳಗುತ್ತಿದ್ದಾಗ ತೋರಿಸಿದ್ದ ಎಲ್ಲವೂ ನೆನಪಾಗುತ್ತವೆ, ಪಾಠವಾಗುತ್ತವೆ, ದಾರಿ ತೋರುತ್ತವೆ.
ಮತ್ತೆ ಸೂರ್ಯ ಮುಳುಗಿ ಕತ್ತಲು ಕವಿದ ಮೇಲೆ ಬೆಳಗಬೇಕಾದದ್ದು ನೀನೇ!
ಸೂರ್ಯ ಬೇಗ ಮುಳುಗಲಿ. ಮಲಗು.
-ಗಾಳಿ
Comments