ಕನ್ನಡ ಎಂಬ ಪ್ರೀತಿ... ಇಂಗ್ಲಿಷ್ ಎಂಬ ಮದುವೆ
- Harsha
- Nov 1, 2022
- 3 min read
'ನೀನು ಹೇಗೆ ಇಂಗ್ಲಿಷ್ ಕಲಿತೆ?' ಅಂತ ಇತ್ತೀಚೆಗೆ ಒಬ್ಬರು ಕೇಳಿದರು. ಇದನ್ನು ಮೆಚ್ಚುಗೆಯಿಂದ ಕೇಳುತ್ತಿರಬಹುದಾ ಅಥವಾ ನಾನೇನಾದರೂ ಅಷ್ಟು ಕೆಟ್ಟದಾಗಿ ಮಾತಾಡಿದೆನಾ ಅಂತ ಅನುಮಾನ ಬಂದರೂ
'ಕನ್ನಡ ಮೀಡಿಯಂನಲ್ಲಿ ಓದಿರೋದ್ರಿಂದ ನಾನು ಇಂಗ್ಲೀಷು ಕಲಿತದ್ದು,' ಅಂದೆ.
ಬಹಳಷ್ಟು ಸಲ ಹೀಗೇ ಆಗುತ್ತದೆ: ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಚಂದ್ರ, ಪಾರಿಜಾತ, ಐರಾವತ, ಕಲ್ಪತರು, ಮದಿರೆ.. ಹೀಗೆ ಏನೇನೋ ಸಿಕ್ಕಂತೆ, ಕನ್ನಡ ಓದುತ್ತಾ ಓದುತ್ತಾ ಹೋದ ನನಗೆ ಸಿಕ್ಕಿದ್ದು ಮನುಷ್ಯತ್ವ ಎಂಬ ಚಂದ್ರ, ಪಾರಿಜಾತ ಎನ್ನುವ ತರ್ಕ, ಐರಾವತವೆಂಬ ಅನುಭವ, ಕಲ್ಪತರು ಎನ್ನುವ ಊಹೆ, ಮದಿರೆ ಎನ್ನುವ ಇಂಗ್ಲೀಷು.
ಇದನ್ನು ಎಷ್ಟು ಜನ ಭಾಷಾ ಪಂಡಿತರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರ ಪ್ರಕಾರ ಇಂಗ್ಲಿಷನ್ನು ನಮ್ಮ ಮಾತೃಭಾಷೆಯ ಮೂಲಕ ಕಲಿಯಬಾರದು ಮತ್ತು ಕಲಿಯಲಾಗುವುದಿಲ್ಲ. ಆದರೆ ನನಗೆ ತಿಳಿದಿರುವಷ್ಟು ಇಂಗ್ಲೀಷು ನಾನು ಕನ್ನಡದ ಮೂಲಕವೇ ಕಲಿತದ್ದು, ಅಕ್ಕನಲ್ಲಿ ಅಮ್ಮನನ್ನು ಕಾಣುವ ಹಾಗೆ.
ನಮ್ಮ ಮೊದಲ ಆಲೋಚನೆ, ಕನಸು, ಪ್ರತಿಕ್ರಿಯೆ, ಅರ್ಥ, ಅಭಿವ್ಯಕ್ತ - ಎಲ್ಲವೂ ಕನ್ನಡದಲ್ಲೇ ಆಗುವಾಗ ಅದು ಹೇಗೆ ಬೇರೊಂದು ಭಾಷೆಯನ್ನೂ ನನ್ನ ಭಾಷೆಯ ಆಸರೆಯಿಲ್ಲದೆ ನೋಡಲು ಸಾಧ್ಯ? ನನಗೆ ಅರ್ಥವಾಗುವುದಿಲ್ಲ.
ಎರಡನೇ ತರಗತಿಯಲ್ಲಿ ಶಕುಂತಲಾ ಬಾಯಿ ಟೀಚರ್ 'ಭೂಮಿ ಹೇಗೆ ಹುಟ್ಟಿತು' ಎಂಬುದನ್ನು ವಿವರಿಸಿದ್ದು, ಮೂರನೇ ತರಗತಿಯಲ್ಲಿದ್ದಾಗ ಪಕ್ಕದ ಮನೆಯವರ ಮೇಲಿನ ಸಿಟ್ಟಿಗೆ ನಾನು 'ಕೋಳಿ ಕಳ್ಳಿ' ಎಂಬ ಕತೆ ಬರೆದದ್ದು, ಆರನೇ ತರಗತಿಯಲ್ಲಿದ್ದಾಗ ಹೆಡ್ ಮಾಸ್ಟರ್ ರಾಜಸಿಂಹ ಸರ್ ಲಿಯೋ ಟಾಲ್ ಸ್ಟಾಯ್ ಕತೆ ಹೇಳಿ ಅದನ್ನು ನಮ್ಮದೇ ರೀತಿಯಲ್ಲಿ ಬರೆದುಕೊಂಡು ಬರಲು ಹೇಳಿದ್ದು - ಎಲ್ಲವೂ ಕನ್ನಡದಲ್ಲೇ. ಆಗಿನ ಮಟ್ಟಿಗೆ ಖಂಡಿತವಾಗಿಯೂ ನನ್ನ ಇಂಗ್ಲೀಷು ನನ್ನ ಇಂಗ್ಲಿಷ್ ಮೀಡಿಯಂ ಗೆಳೆಯರ ಇಂಗ್ಲಿಷ್ ಗೆ ಹತ್ತಿರದಲ್ಲೂ ಇರಲಿಲ್ಲ.
ಆದರೆ ಬರಬರುತ್ತಾ ನನಗೆ ಅರ್ಥವಾಗಿದ್ದು 'ಭೂಮಿ ಹೇಗೆ ಹುಟ್ಟಿತು' ಎನ್ನುವ ವಿಷಯ, ಲಿಯೋ ಟಾಲ್ ಸ್ಟಾಯ್ ಕತೆ - ಇವುಗಳನ್ನು ನಾನು (ಅಥವಾ ನನ್ನ ಇಂಗ್ಲಿಷ್ ಮೀಡಿಯಂ ಗೆಳೆಯರು) ಇಂಗ್ಲಿಷಿನಲ್ಲಿ ಕೇಳಿದ್ದರೆ ಕನ್ನಡದಲ್ಲಿ ಕೇಳಿದಷ್ಟು ಸ್ಪಷ್ಟವಾಗಿ ಅರ್ಥವಾಗುತ್ತಿರಲಿಲ್ಲ. ನಮ್ಮ ಬಹಳಷ್ಟು ಮಕ್ಕಳಿಗೆ ಆಗುವ ಸಮಸ್ಯೆಯೇ ಇದು. ಇಂಗ್ಲಿಷ್ ಕಲಿಸುವ ಭರದಲ್ಲಿ ಅವರು ಚಿಕ್ಕ ವಯಸ್ಸಿನಲ್ಲಿ ಕೇಳಿ ಸಂತೋಷ ಪಡಬೇಕಾದ ಕಥೆಗಳನ್ನು ಇಂಗ್ಲಿಷಿನಲ್ಲಿ ಹೇಳಿ ಅವರಿಗೆ ಅರ್ಧಂಬರ್ಧ ಅರ್ಥವಾಗಿ ಕಥೆಯ ಸವಿಯನ್ನೇ ಸವಿಯದಂತೆ ಮಾಡುತ್ತೇವೆ. ಇದು ಬರಿ ಕಥೆಗಳ ವಿಷಯವಲ್ಲ - ನಮ್ಮ ಪರಿಸರ, ಇತಿಹಾಸ, ವಿಜ್ಞಾನ - ಎಲ್ಲವನ್ನು ನಾವು ಇಂಗ್ಲೀಷಿನಲ್ಲೇ ಹೇಳಿಕೊಡುತ್ತಾ ಯಾವುದೂ ಅವರಿಗೆ ಪೂರ್ತಿಯಾಗಿ ಅರ್ಥವಾಗದಂತೆ ಮಾಡುತ್ತೇವೆ. ಅವರಿಗೆ ಇಂಗ್ಲೀಷು ಬರುತ್ತದೆ, ಹಾಗೂ ಹೀಗೋ ಕಾರ್ಡಿನ ಮೇಲೆ ಮಾರ್ಕುಗಳು ಕೂಡ ಬಂದಿರುತ್ತವೆ. ಆದರೆ ಎಲ್ಲೋ ಒಂದು ಕಡೆ ಅವರಿಗೆ ಪೂರ್ತಿಯಾಗಿ ಅರ್ಥವಾಗುವುದಿಲ್ಲ.
ಮಕ್ಕಳು ಇಷ್ಟಿಷ್ಟು ವಯಸ್ಸಿಗೆ ಇಷ್ಟಿಷ್ಟು ಇಂಗ್ಲೀಷು ಕಲಿತಿರಬೇಕೆಂಬ ನಮ್ಮ ಅಸಂಬದ್ಧ ಗುರಿಗಳು ಕಲಿಯುವಿಕೆಯಲ್ಲಿರುವ - ತಿಳಿದುಕೊಳ್ಳುವುದರಲ್ಲಿರುವ ಸಂತೋಷವನ್ನೇ ಕಸಿದುಬಿಡುತ್ತವೆ. LKG ಮುಗಿಯುವ ಹೊತ್ತಿಗೆ ಇಂಗ್ಲಿಷಿನ ವರ್ಣಮಾಲೆ ಕಲಿತಿರಲಿಲ್ಲ ಎನ್ನುವ ಕಾರಣಕ್ಕೆ ಯಾವ ಕಂಪನಿಯೂ ಯಾರನ್ನು ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವುದಿಲ್ಲ, ಕನಿಷ್ಠ ನನಗೆ ಗೊತ್ತಿರುವಂತೆ.
ನನ್ನ ಕನ್ನಡ ನನಗೆ ಮಾಡಿದ ಅತಿ ದೊಡ್ಡ ಉಪಕಾರವೆಂದರೆ ಇದೇ: ಇಂಗ್ಲಿಷನ್ನು ತೀರಾ ಚಿಕ್ಕ ವಯಸ್ಸಿನಲ್ಲೇ ಕಲಿಯುವ ಅವಸರವನ್ನು - ಅನಿವಾರ್ಯತೆನ್ನು ತರದೇ ಇದ್ದುದು. ಇದರಿಂದ ಆದ ಉಪಯೋಗವೆಂದರೆ ನನ್ನ ಭಾಷೆಯಲ್ಲೇ ಪೂರ್ತಿಯಾಗಿ ಕಥೆಗಳನ್ನು ಮತ್ತು ಬೇರೆ ವಿಷಯಗಳನ್ನು ಕೇಳುತ್ತಾ, ಓದುತ್ತಾ, ಯೋಚಿಸುತ್ತಾ (ಆಗಾಗ ತಲೆಕೆಟ್ಟಾಗ ಬರೆಯುತ್ತಾ) ಇದ್ದದ್ದು.
ಹೈಸ್ಕೂಲಿಗೆ ಹೋದ ಮೊದಲಲ್ಲಿ ಕುವೆಂಪು ಬರೆದ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಎನ್ನುವ ಪುಟ್ಟ ಪುಸ್ತಕ ಓದಿದೆ, ಒಂಭತ್ತೇನೇ ಕ್ಲಾಸಿನಲ್ಲಿ ಶಿವರಾಮ ಕಾರಂತರು ಬರೆದಿದ್ದ ಗೀತಾ ನಾಟಕ ನಾನು ಕೂಡ ಬೇರೆ ರೀತಿಯಲ್ಲಿ ಬರೆದಿದ್ದೆ, ಹತ್ತನೇ ಕ್ಲಾಸಿನಲ್ಲಿ ವಿ. ಕೃ. ಗೋಕಾಕರು ಬರೆದಿದ್ದ 'ಹೃದಯವಂತಿಕೆಯ ಸಮಸ್ಯೆಗಳು' ಎಂಬ ಆ ವಯಸ್ಸಿಗೆ ಮೀರಿದ ಪಾಠವನ್ನು ಮುಂದೆ ಯಾವಾಗಲಾದರೂ ಓದಲು ಎತ್ತಿಟ್ಟ್ಟುಕೊಂಡಿದ್ದೆ, ಪುಟ್ಟಪ್ಪನವರ 'ಜಲಗಾರ' ನಾಟಕ ಮನುಷ್ಯ ಶ್ರದ್ಧೆಯ ಬಗ್ಗೆ, ಜಾತಿ ಪದ್ಧತಿ ಬಗ್ಗೆ ಹೊಸ ನೋಟ ಕೊಟ್ಟಿತು, ಎ ಎನ್ ಮೂರ್ತಿರಾಯರು ಬರೆದ ಪುಸ್ತಕ 'ದೇವರು' - ನನ್ನಲ್ಲಿ ದೇವರನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿತು, ತೇಜಸ್ವಿಯವರ 'ತಬರನ ಕತೆ' ಸಮಾಜದ ಕ್ರೌರ್ಯವನ್ನು ಪರಿಚಯಿಸಿತು, ಭೈರಪ್ಪನವರ ನಿರಾಕರಣ, ಗೃಹಭಂಗ, ಆವರಣ, ಯಾನ, ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಜೀವನವನ್ನು ಹೇಗೆಲ್ಲ ನೋಡಬೇಕು ಎಂಬುದನ್ನು, ತಿಳಿಸುತ್ತಾ ಹೋದವು. ಕವಿತೆಗಳು ನನಗೆ ಅರ್ಥವಾಗುವುದಿಲ್ಲವಾದರೂ ಕವಿ ಅಡಿಗರ, ನಿಸಾರ್ ಅಹಮ್ಮದರ, ವೆಂಕಟೇಶ ಮೂರ್ತಿಯವರ, ಶಿವರುದ್ರಪ್ಪನವರ, ಎಂ ಎನ್ ವ್ಯಾಸರಾಯರ ಕವಿತೆಗಳು ಇಷ್ಟವಾಗುತ್ತಾ ಹೋದವು.
ಎಲ್ಲರಿಗಿಂತ ಹೆಚ್ಚಿನ ಪ್ರಭಾವ ಬೀರಿದ್ದು ಗುರು ರವಿ ಬೆಳಗೆರೆ. ಅವರ ಪ್ರತಿ ಪುಟ ಓದಿದಾಗಲೂ ನನ್ನನ್ನು ಪ್ರಶ್ನಿಸುತ್ತ, ನಗಿಸುತ್ತಾ, ಗಟ್ಟಿಗೊಳಿಸುತ್ತಾ, ಸೂಕ್ಷ್ಮಗೊಳಿಸುತ್ತ ಹೋದವು.
ಆದರೆ ಇವೆಲ್ಲವೂ ನಮ್ಮ ಹೃದಯವನ್ನು ತುಂಬಬಹುದು; ಹೊಟ್ಟೆ ತುಂಬಿಸಲಾರವು. ಆ ಕೆಲಸ ಮಾಡಿದ್ದು ಇಂಗ್ಲೀಷು. ಕನ್ನಡ ಎಂಬುದು ಪ್ರೀತಿಯಂತಹುದು - ಅದು ಮನಸ್ಸು, ಹೃದಯ, ಕನಸು, ಪಾತ್ರವಿರದ ಸಮುದ್ರ, ವರ್ತಮಾನ, ಆತ್ಮ. ಅಮಾಯಕತೆ, ಆನಂದ, ಆತ್ಮತೃಪ್ತಿ. ಆದರೆ ಇಂಗ್ಲೀಷು ಎಂಬುದು ಮದುವೆಯಂತಹುದು - ಅದು ಬುದ್ಧಿ, ಅನ್ನ, ವಾಸ್ತವ, ಬಹಳಷ್ಟು ಸಲ ಅನಿವಾರ್ಯತೆ, ಚೌಕಟ್ಟಿನಲ್ಲಿ ಕಟ್ಟಿಕೊಂಡ ಕೆರೆ, ಭವಿಷ್ಯ.
ಹೀಗಾಗಿ ನನ್ನ ಅಸ್ತಿತ್ವಕ್ಕಾಗಿ ಇಂಗ್ಲಿಷಿನ ಕೈಯನ್ನು ನಾನೇ ಹಿಡಿದುಕೊಂಡೆನೋ ಅಥವಾ ಕರುಣೆ ತೋರಿ ಅದೇ ನನ್ನ ಕೈ ಹಿಡಿಯಿತೋ ಹೇಳಲಾರೆ. ಮೊದಮೊದಲು ಕಷ್ಟವೆನಿಸಿದರೂ ಬರಬರುತ್ತ ಇಂಗ್ಲೀಷು ನನ್ನನ್ನು ಒಪ್ಪಿಕೊಂಡಿತು, ನಾನೂ ಅದನ್ನು ಅಪ್ಪಿಕೊಂಡೆ. ನಾನು ಮಾಡುವಂಥದು ಹೆಚ್ಚೇನೂ ಇರಲಿಲ್ಲ; ಕನ್ನಡದಲ್ಲಿ ಕಲಿತಿರುವುದಕ್ಕೆ ಇಂಗ್ಲಿಷ್ ಪದಗಳನ್ನು, ವಿಧಾನಗಳನ್ನು ಕಲಿಯಬೇಕಾದದ್ದು. ಇಂಗ್ಲೀಷಿನಲ್ಲಿ ಗುರುದೇವ ರವೀಂದ್ರನಾಥ ಠಾಗೂರರ ಕಥೆ - ಕವಿತೆಯ ಹಾಗು Shakespeare ನ ನಾಟಕದ ಪಾತ್ರಗಳು, Mark Twain ನ ಬರಹದ ಹಾಸ್ಯ ಹಾಗು ಚುರುಕುತನ, Paulo Coelho ನ ಶೈಲಿ, Frenz Kafka ನ ಊಹೆ, Khalil Gibran ನ ಯೋಚನೆಯ ಆಳ ಮತ್ತು ಹೋಲಿಕೆಗಳು, Ruskin Bond ರ ಸರಳ ವಸ್ತು - ಎಲ್ಲ ಇಷ್ಟವಾಗುತ್ತವಾದರೂ, ಪ್ರಭಾವ ಬೀರುವ ಮಟ್ಟಿಗಲ್ಲ.
ಯಾವುದಕ್ಕೆ ಏನೇ ಬೆಲೆಯಿದ್ದರೂ, ಯಾವುದು ಎಷ್ಟೇ ಅನ್ನ - ಬದುಕು ಕೊಟ್ಟರೂ, ಅಮ್ಮ ಅಮ್ಮನೇ: ಕನ್ನಡ.
Comments