ಕಡಲು ಮತ್ತು ಕತ್ತಲು
ಚಂಚಲ ಕಡಲು ತನ್ನ ಅಲೆಗಳನ್ನು ದಡಕ್ಕೆ ಕಳಿಸಿ ' ಕತ್ತಲಾಗುವುದಕ್ಕೆ ಇನ್ನೂಎಷ್ಟು ಹೊತ್ತು ಬೇಕು?' ಅಂತ ದಡವನ್ನು ಕೇಳಿಕೊಂಡ ಬರಲು ಹೇಳಿತು.
ದಡಕ್ಕೆ ಹೋದ ಪ್ರತಿ ಅಲೆಯು ಮನುಷ್ಯರ ಪಾದಗಳನ್ನು ಸ್ಪರ್ಶಿಸಿ ಮರಳಿ ಬರುತ್ತಿತ್ತು.
'ಇಲ್ಲ, ಇನ್ನೂ ಕತ್ತಲು ಬರಲು ಸಮಯವಿದೆ,' ಹೇಳುತ್ತಿದ್ದವು ಅಲೆಗಳು.
ಸಮುದ್ರಕ್ಕೆ ಮತ್ತೆ ಅದೇ ಚಡಪಡಿಕೆ. ಎರಡೇ ಕ್ಷಣಕ್ಕೆ ಮತ್ತೆ ಅಲೆಯನ್ನು ಕಳಿಸುತ್ತಿತ್ತು.
ಕೊನೆಗೂ ಮೆಲ್ಲಗೆ ಆವರಿಸಿತು ಕತ್ತಲು. ಕಡಲ ದಡದ ಮರಳ ಮೇಲೆ ಮನುಷ್ಯರ ಪಾದದ ಗುರುತುಗಳು ಕ್ರಮೇಣ ಕಡಿಮೆಯಾಗುತ್ತಿದ್ದವು.
ಮನುಷ್ಯನಿಗೆ ಏಕೋ ಕತ್ತಲೆಂದರೆ ಭಯ. ಕತ್ತಲು ಕವಿಯುತ್ತಿದ್ದಂತೆ ತನ್ನ ಚಚ್ಚೌಕಾಕಾರದ ಕುಹರದೊಳಗೆ ಹೋಗಿ ಅಲ್ಲಿ ಬೆಳಕು ಸೃಷ್ಟಿಮಾಡಿಕೊಳ್ಳುತ್ತಾನೆ. ಎಲ್ಲವನ್ನೂ ತೋರಿಸುವ ಆ ನಿರ್ಲಜ್ಜ ಬೆಳಕಿಗಾಗಿ ಕಾಯುತ್ತಾನೆ. ಅವನಿಗೆ ಎಲ್ಲವು ಕಾಣಬೇಕು - ಭಿನ್ನ ಭಿನ್ನ ಬಣ್ಣ, ದೊಡ್ಡ-ಚಿಕ್ಕ ಗಾತ್ರ, ಉಬ್ಬು-ತಗ್ಗು ನೇರ-ವಕ್ರ ಆಕಾರ.. ಬೆಳಕು ಇದೆಲ್ಲವನ್ನು ತೋರಿಸುತ್ತದೆ. ಅಸಹ್ಯ!
*****
'ಬರಲು ಯಾಕಿಷ್ಟು ತಡ ಮಾಡುವೆ?' ಕಡಲು ಅಸಮಾಧಾನದಿಂದ ಕತ್ತಲನ್ನು ಕೇಳಿತು.
'ಅರೆ! ತಡವೆಲ್ಲಿ? ನಾನಲ್ಲೇ ಆಕಾಶದ ಮೂಲೆಯೊಂದರಲ್ಲಿ ಕಾಯುತ್ತಿದ್ದೆ, ಬೆಳಕು ಹೋಗಲು. ಅಷ್ಟಕ್ಕೂ ನಿನಗೇಕೆ ಇಷ್ಟು ಚಡಪಡಿಕೆ?' ಕೇಳಿತು ಕತ್ತಲು.
'ಗೊತ್ತಿಲ್ಲ, ಬೆಳಕಿನಲ್ಲಿ ನನಗೆ ಎಂಥದೋ ಅಸಮಾಧಾನ, ಏಕೋ ಒಂದು ಅಪೂರ್ಣ ಭಾವ, ಯಾವುದೋ ಒಂದು ಅನಾಥತೆ..' ಹೇಳುತ್ತಾ ಹೋಯಿತು ಕಡಲು.
ಅಷ್ಟು ವಿಸ್ತಾರ ಸಮುದ್ರವನ್ನು ತಾನೇ ಕಾಯುತ್ತಿರುವಂತೆ ಭಾವಿಸುತ್ತಿದ್ದ ಸೂಕ್ಯುರಿಟಿ ಗಾರ್ಡ್ ಪೀಪಿ ಊದುತ್ತಾ ಅಲ್ಲಲ್ಲಿ ಇದ್ದ ಜನರನ್ನು ಹೊರಗೆ ಕಳಿಸುತ್ತಿದ್ದ, ನವ ವಧು-ವರರನ್ನು ತಮ್ಮ ಪಾಡಿಗೆ ಇರಲು ಬಿಟ್ಟು ಹೋಗುವ ಸೂಕ್ಷ್ಮ ಗೆಳೆಯನಂತೆ.
ಮತ್ತೆ ಕತ್ತಲು ಮಾತಾಡಿತು.
'ತಮಾಷೆ ಎನಿಸುತ್ತದೆ. ಎಲ್ಲರು ಬೆಳಕನ್ನು ಪ್ರೀತಿಸುತ್ತಾರೆ. ಬೆಳಕಿಗೆ ಕಾಯುತ್ತಾರೆ. ಬೆಳಗ್ಗೆ ವ್ಯರ್ಥವಾಗಬಾರದೆಂದು ಪಕ್ಕದಲ್ಲೇ ಅಲಾರಮ್ಮು ಇಟ್ಟುಕೊಂಡು ಮಲಗುತ್ತಾರೆ. ಸಾವಿರ ಸಾವಿರ ಜನ ನಿನ್ನ ನೋಡಲು ಬರುತ್ತಾರೆ. ಇನ್ನೆಂಥಾ ಅನಾಥತೆ ನಿನಗೆ? ನಿನ್ನದೆಂಥಾ ಹುಚ್ಚು! ನನಗಾಗಿ ಕಾಯುವೆ! '
'ಬರೀ ಕಾಯುವುದಿಲ್ಲ, ಚಡಪಡಿಸುತ್ತೇನೆ! ಇನ್ನು ನೀನು ಹೇಳುವ ಸಾವಿರಾರು ಜನ! ಅವರು ಬೆಳಕಿನ ಜನ, ನೋಟದ ಜನ. ನಾನು ಚೆಂದ ಕಾಣುವವರೆಗೂ, ತಮ್ಮ ಸಮಯ ಕಳೆಯುವುದಕ್ಕಾಗಿ ಬರುವ ಜನ. ಬೆಳಕಿನ ಸಂತೆ ಮುಗಿದ ಮೇಲೆ ತಮ್ಮ ಅಂಗಡಿ ಮುಚ್ಚಿಕೊಂಡು ಹೀಗೆ ನನ್ನ ಬಿಟ್ಟು ತಮ್ಮ ಗೂಡು ಸೇರಿಕೊಳ್ಳುವ ಜನ. ಎಲ್ಲೋ ದೂರದೂರಿನಿಂದ ಇಂದು ಬಂದು ನಾಳೆ ಬಾರದ ಜನ. ಅವರ ಪಾತ್ರ ಅಷ್ಟೇ. ಇನ್ನು ಇದೇ ದಡದ ಊರಿನಲ್ಲಿದ್ದು ಪ್ರತಿ ದಿನವೋ, ವಾರಕ್ಕೊಮ್ಮೆಯೋ, ಆಗಾಗಲೋ ಬರುತ್ತಿದ್ದರೂ ಯಾವುದೇ ಬಂಧ ಬೆಳೆಸಿಕೊಳ್ಳದ ಜನ. ದೂರದಿಂದ ಬಂದು ದೂರ ಹೋಗುವವರು ಕೆಲವರು. ಹತ್ತಿರವಿದ್ದೂ ಹತ್ತಿರಾಗದವರು ಕೆಲವರು. ಅವರವರ ಬದುಕು. ಅವರವರ ಬೆಳಕು.'
'ನಾನು?' ಕೇಳಿತು ಕತ್ತಲು.
'ದೂರವಿದ್ದೂ ಹತ್ತಿರಾದವನು,' ಮುಂದುವರೆಸಿತು ಕಡಲು, 'ನೀನು ಯಾವಾಗಲೂ ಹತ್ತಿರವಿರುವವನು ಅಲ್ಲ. ಆದರೆ ದೂರವಾಗುವವನಲ್ಲ. ಯಾರೂ ಇರದಾಗ, ಒಂಟಿತನ ಕಾಡುವಾಗ, ಬೆಳಗಿನ ಸಾವಿರ ಜನರ ಮಧ್ಯೆಯೂ ಅನುಭವಿಸುವ ಅನಾಥತೆ ಹಿಂಸೆಯೆನಿಸಲು ಶುರುವಾದಾಗ ನನ್ನ ಜೊತೆ ಇರುವವನು ನೀನು. ನಿನಗೂ ನಾನು ಒಂದು ದಿನ ಸಾಕೆನಿಸಬಹುದು. ಪ್ರಪಂಚದಲ್ಲಿನ ಅಸಂಖ್ಯ ಮನುಷ್ಯರು ತಮ್ಮ ಮಧ್ಯದ ಸಂಬಂಧಗಳು ಸತ್ತಮೇಲೆ ಮೇಲೆ ಕೂಡ ಒಟ್ಟಿಗೆ ಇರುವಂತೆ ನೀನು ಕೂಡ ನನ್ನ ಜೊತೆ ಇರಬಹುದು. ಆದರೆ ಈ ಕ್ಷಣ ನೀನು ನನ್ನ ಪ್ರಪಂಚ. ನನ್ನ ಅನಾಥತೆ ಓಡಿಸಲು ಇರುವ ಒಂದೇ ದಾರಿ ನೀನು.'
ಕತ್ತಲು ಕೆಲ ಕ್ಷಣ ಇನ್ನೂ ಗಾಢವಾಗಿ ಕತ್ತಲಾಗಿ ಮಾತಾಡಿತು.
'ನಕ್ಷತ್ರಗಳು ಮಿನುಗುವುದು ಬಿಟ್ಟರೆ ವಿಶ್ವವೆಲ್ಲ ಆವರಿಸಿರುವವನು ನಾನೇ. ಆದರೇ ನಂಬುತ್ತೀಯಾ? ನನ್ನನ್ನು ಕೂಡ ಅಂಥದ್ದೊಂದು ಅನಾಥಪ್ರಜ್ಞೆ ಕಾಡುತ್ತದೆ. ನನ್ನ ಅಗಾಧತೆ, ನನ್ನ ಆಳ - ಅಗಲಗಳು ವಿಶ್ವಕ್ಕೆ ಬೇಕಿಲ್ಲ. ಅದು ಬೆಳಕನ್ನು ಹುಡುಕುತ್ತದೆ. ನಕ್ಷತ್ರಗಳ ಕಡೆ ತನ್ನ ದೂರದರ್ಶಕಗಳನ್ನು ತಿರುಗಿಸುತ್ತದೆ. ನಿಮ್ಮ ಭೂಮಿಯ ಮನುಷ್ಯರು ಕೂಡ ನಾನು ಕವಿದ ಕೂಡಲೇ ತಮ್ಮ ಗೂಡುಗಳಲ್ಲಿ ಸೇರಿಕೊಂಡು ನನ್ನನ್ನು ದೂರವಿಡುತ್ತಾರೆ. ನಾನು ಸೂರ್ಯ ಮುಳುಗುವುದನ್ನು ಕಾಯುತ್ತೇನೆ. ನಿನ್ನ ಸಾಂಗತ್ಯದಲ್ಲಿ ನಾನು ವಿಶೇಷವಾಗುತ್ತೇನೆ. ನನ್ನ ಹರ್ಷವನ್ನು ನಿನ್ನಲ್ಲಿ ಹುಡುಕುತ್ತೇನೆ. ನನಗೆ ಕಣ್ಣಿಲ್ಲ. ಆದ್ದರಿಂದ ನಿನ್ನ ಬಣ್ಣ - ಆಕಾರ ಗೊತ್ತಿಲ್ಲ. ಆದರೆ ನನ್ನ ಕಿವಿಗಳಿಂದ ನಿನ್ನ ಅಲೆಗಳ ಮೊರೆತದ ಚಡಪಡಿಕೆ ಕೇಳಿಸಿಕೊಳ್ಳುತ್ತೇನೆ. ನನ್ನ ಬಾಹುಗಳು ಸಾವಿರಾರು ಮೈಲಿಯ ನಿನ್ನ ಮೈಯನ್ನು ಅಪ್ಪಿಕೊಂಡಾಗ ನನ್ನೆಡೆಗಿನ ನಿನ್ನ ಅಲೆಗಳ ಏರಿಳಿತ ಅನುಭವಕ್ಕೆ ಬರುತ್ತದೆ. ನಿನ್ನ ನೋಡಿದ್ದರೆ ನಿನ್ನ ರೂಪ ನನ್ನ ಮೋಸ ಮಾಡುತ್ತಿತ್ತೇನೋ, ಅದು ಬದಲಾಗಿ ನೀನು ಕುರೂಪಗೊಂಡರೆ ನಾನು ನಿರಾಸೆಗೊಳ್ಳುತ್ತಿದ್ದೆನೇನೋ, ಆದರೆ ನಾನು ಬೆಳಕಲ್ಲ. ನಾನು ನೋಡಲಾರೆ. ನಾನು ತೋರಲಾರೆ. ನಿನ್ನ ಚಡಪಡಿಕೆ ಬದಲಾಗುವುದಿಲ್ಲ, ನಿನ್ನ ಸ್ಪರ್ಶ ಬೇರೆಯಾಗುವುದಿಲ್ಲ. ನನ್ನ ಅನುಭವಕ್ಕೆ ಬರುವುದು ಅದು ಮಾತ್ರ.'
ಇಬ್ಬರು ಅನಾಥರು ಜೊತೆಯಾಗಿ ತಮ್ಮ ಅನಾಥತೆಯನ್ನು ದೂರ ಮಾಡಿದ್ದರು. ಇಬ್ಬರು ಸಾಮಾನ್ಯರು ಜೊತೆಯಾಗಿ ಒಬ್ಬರಿಗೊಬ್ಬರು ವಿಶೇಷವಾಗಿದ್ದರು.
ದೂರದ ಆಕಾಶದಲ್ಲಿ ಬೆಂಕಿ ಚೆಂಡೊಂದು ನಯವಂಚಕನ ವೇಷದಲ್ಲಿ ಸೌಮ್ಯ ರೂಪದಲ್ಲಿ ಉದಯಿಸುತ್ತಿತ್ತು. ಕಣ್ಣು ಮೂಡಿದ ಪ್ರಪಂಚಕ್ಕೆ ಪ್ರೀತಿ ಕಾಣುವುದು ನಿಂತಿತು.
Comments