ಒಡೆದು ಬಿದ್ದ ಕೊಳಲ ಕೊಳಲು..
ಕವಿ ಗೋಪಾಲಕೃಷ್ಣ ಅಡಿಗರ ಕವಿತೆಯ ಕೊನೆಯ ಸಾಲುಗಳಿವು:
ಒಡೆದು ಬಿದ್ದ ಕೊಳಲ ಕೊಳಲು
ಬರುವನೊಬ್ಬ ಧೀರನು
ಅಲ್ಲಿವರೆಗೆ ಮೃಣ್ಮಯ
ಬಳಿಕ ನಾನು ಚಿನ್ಮಯ
ಇಂಥದೊಂದು ಅನುಭವ ಬಹುಶಃ ನಮ್ಮೆಲ್ಲರಿಗೂ ಆಗಿರುತ್ತದೆ. ಜೀವನದಲ್ಲಿ ದೊಡ್ಡ ನಿರೀಕ್ಷೆಯೊಂದು ಸುಳ್ಳಾದಗ, ಕನಸೊಂದು ಕೊನೆಗೊಂಡಾಗ, ಸಂಬಂಧವೊಂದು ಕೈಬಿಟ್ಟಾಗ, ಅನಿರೀಕ್ಷಿತವಾಗಿ ವಂಚನೆಗೊಳಗಾದಾಗ, ಬದುಕು ರಸ್ತೆಯ ಕೊನೆಗೆ ಬಂದು ನಿಂತಿದೆ ಎನಿಸಿದಾಗ, ಆತ್ಮಹತ್ಯೆಯ ಯೋಚನೆ ಬಂದಾಗ, ನಾಳೆ ಸೂರ್ಯೋದಯ ಆಗುವುದಿಲ್ಲ ಎನಿಸಿದಾಗ, ತೀರ ಒಂಟಿತನ ಕಾಡಿದಾಗ, ಹೃದಯ ಭಾರವಾದಾಗ, ಜೇಬು ಹಗುರಾದಾಗ.. ಎಂಥದ್ದೋ ಒಂದು ಬೆರಳು ನಮ್ಮನ್ನು ನಡೆಸಲು ಬರುತ್ತದೆ; ನಾವು ಅದನ್ನು ಹಿಡಿದುಕೊಳ್ಳಬೇಕು ಅಷ್ಟೇ..
ಅದು ಜೀವನದ ಕೊನೆತನಕ ಇರುವ ಬೆರಳು ಆಗಿರಬೇಕಿಲ್ಲ. ಮುಂದೆ ದಾರಿಯಿಲ್ಲ ಎಂದುಕೊಂಡಿದ್ದ ನಮಗೆ ಒಂದು ರಸ್ತೆ ದಾಟಿಸಿ ಜೀವನದ ಇನ್ನೊಂದು ರಸ್ತೆಗೆ ನಮ್ಮನ್ನು ತಲುಪಿಸಿ ಹೋಗಲು ಬಂದ ಬೆರಳು. ಅದರ ಆಯುಷ್ಯ ಅಷ್ಟೇ.
ಮತ್ತೆ ನಮ್ಮ ಪ್ರಯಾಣ ಮುಂದುವರೆಯುತ್ತದೆ. ರಾತ್ರಿ ಸಣ್ಣಗೆ ಕರಗಿ ಬೆಳಗು ಮೂಡುತ್ತದೆ. ಮರೆವು ದುಃಖವನ್ನು ಕರಗಿಸಿ ಹೊಸ ಅನುಭಗಳಿಗೆ ನಮ್ಮನ್ನು ತೆರೆಸುತ್ತದೆ. ಹೃದಯ ಹಗುರಾಗುತ್ತದೆ; ಜೇಬು ಭಾರ ಕೂಡ.
ಆ ಬೆರಳು ಯಾರದಾದರೂ ಆಗಿರಬಹುದು, ಅಸಲಿಗೆ ಅದು ಯಾರೋ ವ್ಯಕ್ತಿ ಕೂಡ ಆಗಿರಬೇಕಿಲ್ಲ.. ಯಾವುದೋ ಪುಸ್ತಕ, ಯಾವುದೋ ಹಾಡು, ಯಾವುದೋ ಮಾತು.. ಏನಾದರೂ.
ನಮ್ಮಷ್ಟಕ್ಕೆ ನಾವೇ ತುಂಬಾ ಬಲಹೀನರೆನಿಸಿದಾಗ, ಅಸಮರ್ಥರೆನಿಸಿದಾಗ, ಪ್ರಪಂಚದ ಹೊಡೆತಗಳನ್ನು ತಡೆಯುವ ಶಕ್ತಿಯಿಲ್ಲ ಎನಿಸಿದಾಗ, ನಮಗೆ ನಾವೇ ಒಡೆದು ಬಿದ್ದ ಕೊಳಲೆನಿಸಿದಾಗ, ಇನ್ನು ನಮ್ಮಿಂದ ಸಂಗೀತ ಹೊರಡುವುದಿಲ್ಲ ಎನಿಸಿದಾಗ.. ನೆನಪಿರಲಿ:
ಒಡೆದು ಬಿದ್ದ ಕೊಳಲ ಕೊಳಲು
ಬರುವನೊಬ್ಬ ಧೀರನು
ಅಲ್ಲಿವರೆಗೆ ಮೃಣ್ಮಯ
ಬಳಿಕ ನಾನು ಚಿನ್ಮಯ
ನಾವು ಕಾಯಬೇಕಷ್ಟೆ.
Comments