ಏಳಿ, ಎದ್ದೇಳಿ..
Brothers and Sisters of India,
ಏಳಿ, ಎದ್ದೇಳಿ
ನಾಳೆ ನಿಮ್ಮ ಮತ ಚಲಾಯಿಸುವವರೆಗೂ ಮಲಗದಿರಿ
ಆಮೇಲೆ ಮಲಗುವುದು ಇದ್ದೇ ಇದೆ
ನಮ್ಮದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಸಾರ್
ಚುನಾವಣೆ ನಡೆಯುವ ಕೆಲ ದಿನಗಳ ಮುಂಚೆಯಿಂದ ಚುನಾವಣೆ
ನಡೆಯುವವರೆಗೆ ಪ್ರಜೆಗಳೇ ಪ್ರಭುಗಳು!
ಆಮೇಲೆ?
ಅರೇ! ಕುಕ್ಕರ್ - ಸೀರೆ ಪಡೆದುಕೊಂಡು,
ಹೆಂಡ - ಬಿರಿಯಾನಿ ತುಂಬಿಕೊಂಡು,
ಜಾತಿ - ಧರ್ಮಗಳ ಭಾಷಣಗಳನ್ನು ಕೇಳಿಕೊಂಡು
ಸುಸ್ತಾಗಿರುವುದಿಲ್ಲವಾ? ಅದಕ್ಕೆ ಪ್ರಜೆಗಳಿಗೆ ವಿಶ್ರಾಂತಿ ಬೇಕು.
ಪ್ರಭುಗಳು ತಮಗೆ ಬೇಕಾದ್ದು ಮಾಡಿಕೊಳ್ಳಲಿ.
ಒಬ್ಬ _oತ್ರಿ ಜೈ ಭಜರಂಗಬಲಿ ಅಂತ ಹೇಳಿ
ಮತ ಚಲಾಯಿಸಿ ಎನ್ನುತ್ತಾನೆ
ಅದಕ್ಕೆ ಪ್ರತಿಯಾಗಿ ಇನ್ನೊಬ್ಬ _oತ್ರಿ ಅಲ್ಲಾಹು ಅಕ್ಬರ್
ಅಂತ ಹೇಳಿ ಮತ ಚಲಾಯಿಸಿ ಎನ್ನುತ್ತಾನೆ
ಅದೆಂಥಾ ಅದ್ಭುತ ನಾಯಕರು ಸಾರ್!
ದೇಶ - ಮಾನವೀಯತೆ ಕೋ ಗೋಲಿ ಮಾರ್!
ಭಜರಂಗ ಬಲಿ - ಅಲ್ಲಾಹು ಮೇಲೆಲ್ಲೋ ಒಟ್ಟಿಗೆ ಕುಳಿತು
ಅಪ್ಪಿಕೊಂಡು ಅಳುತ್ತಿರುವ ಶಬ್ದ ನಿಮಗೆ ಕೇಳಿತಾ?
ಏನಾದರೂ ಹೇಳಿ ನಮ್ಮ ದೇಶದ ನಂಬಿಕೆಗೆ ಒಂದು ದೊಡ್ಡ ಸಲಾಂ!
ಗುಮಾಸ್ತನ ಕೆಲಸಕ್ಕೆ, ಜಲಗಾರನ ಕೆಲಸಕ್ಕೂ ವಿದ್ಯಾರ್ಹತೆ, ಸಂದರ್ಶನ
ಮಾಡಿ ಕೆಲಸಕ್ಕೆ ತೆಗೆದುಕೊಳ್ಳುವವರು ನಾನು.
ಆದರೆ ಲಕ್ಷಾಂತರ - ಕೋಟ್ಯಂತರ ಜನರನ್ನು ಆಳುವ
ಶಾಸಕ ಮಂತ್ರಿಗಳಿಗೆ ಅದೇನು ನೋಡುವುದಿಲ್ಲ..
ನಮ್ಮ ನಂಬಿಕೆಯನ್ನು ಮೆಚ್ಚಿಕೊಳ್ಳಬೇಕು..
ಇಷ್ಟು ದೊಡ್ಡ ಊರಿನ, ಇಂಥ ದೊಡ್ಡ ರಾಜ್ಯದ
ಬೊಕ್ಕಸಕ್ಕೆ ಹೇಗೆ ಹಣ ತರಬೇಕು, ಅದನ್ನು ಜನರ
ಅಭಿವೃದ್ಧಿಗೆ ಹೇಗೆ ಖರ್ಚು ಮಾಡಬೇಕು ಎಂಬುದನ್ನು
ಒಂದು ಪೇಜಿನಲ್ಲಿ ಬರೆದುಕೊಡು ಅಂತ ಕೂಡ ಕೇಳದೆ
ಓಟು ನೀಡುತ್ತೇವೆ ನಾವು.. ಅದೆಂಥ ನಂಬಿಕೆ ನೋಡಿ!
ಒಂದು ವಿದ್ಯೆ, ಒಂದು ಪರೀಕ್ಷೆ ಏನೂ ಬೇಡ ನಮಗೆ
ಅರೆ! ಬೊಕ್ಕಸ ಯಾವುದಾದರೇನು ಸಾರ್, ತುಂಬಿಸುವುದು ಮುಖ್ಯ
ಅದಕ್ಕೆ ಅವರು ತಮ್ಮದೇ ಬೊಕ್ಕಸ ತುಂಬಿಕೊಳ್ಳುತ್ತಾರೆ! ತಪ್ಪೇನಿದೆ.
'ದೇಶವೇ ನನ್ನದು' ಎಂದುಕೊಂಡಾಗ ದೇಶದ ಬೊಕ್ಕಸ ನನ್ನದೇ ಅಲ್ಲವಾ!
ನಾವು ಚಿಕ್ಕವರಿರುವಾಗ water cycle, oxygen cycle ಅಂತ ಓಡಿಕೊಂಡಿಲ್ಲವಾ!
ಇದು ಕೂಡ ಅಷ್ಟೇ..
ಪಾಪ ಚುನಾವಣೆಗೆ ಎರಡು - ಮೂರು ತಿಂಗಳಿಂದ ಕುಕ್ಕರಿಗೆ, ಸೀರೆಗಳಿಗೆ,
ಸಾರಾಯಿ, ಬಿರಿಯಾನಿಗಳಿಗೆ ಖರ್ಚು ಮಾಡುವುದಲ್ಲದೆ, ಕೈಗೊಂದಿಷ್ಟು
ಹಣ ಕೊಟ್ಟು ಮಾಡಿದ ಖರ್ಚು ಮತ್ತೆ ಪಡೆಯಲು ಉಳಿದ ನಾಲ್ಕು ಮುಕ್ಕಾಲು ವರ್ಷ
ಎಷ್ಟು ಕಷ್ಟ ಪಡಬೇಕು ನಮಗೇನು ಗೊತ್ತು!
ಸಾರ್.. ಅದ್ಯಾವನೋ ನನ್ನಂಥ ಹುಚ್ಚ
ಪ್ರಧಾನ ಮಂತ್ರಿ, ಕೇಂದ್ರ ಗೃಹ ಮಂತ್ರಿ, ಅವನ್ಯಾರೋ ಬುಲ್ಡೋಜರ್ ಡ್ರೈವರ್
ಚುನಾವಣಾ ಸಮಯದಲ್ಲಿ ಮಾತ್ರ ನಮ್ಮ ರಾಜ್ಯದ ಚಾವಡಿಯಲ್ಲೇ
ದಿಂಬು ಹಾಸಿಗೆ ತಂದು ಹಾಸಿಕೊಂಡು ಮಲಗುತ್ತಾರೆ ಅಂತ ಹೇಳುತ್ತಾನೆ!
ಇದೊಳ್ಳೆ ಮಾತಾಯ್ತು, ಉಳಿದ ನಾಲ್ಕು ಮುಕ್ಕಾಲು ವರ್ಷವೂ ಇಲ್ಲಿಗೆ
ಬರುತ್ತಾ ಇರೋಕೆ ಆಗುತ್ತಾ? ಅವರಿಗೆ ಪಾಪ ಬಹಳ ಮುಖ್ಯ ಕೆಲಸ
ಇರುತ್ತವೆ. ಮಾವಿನ ಹಣ್ಣು ಹೇಗೆ ತಿನ್ನಬೇಕು ಅನ್ನೋದನ್ನ ದೇಶದ ಜನರಿಗೆ
ಹೇಳಿಕೊಡುವುದು ಸಣ್ಣ ಜವಾಬ್ದಾರಿಯ? ನಿಮ್ಮ ಮೈಯಲ್ಲಿ ವೈರಸ್ ಒಂದು
ಇದ್ದಾಗ ದೀಪ ಹಚ್ಚಿ ಜಾಗಟೆ ಬಾರಿಸಿ ಅಂತ ಹೇಳಬೇಕೆಂದರೆ
ಅವೆಷ್ಟು ರಾತರು ನಿದ್ದೆಗೆಟ್ಟು ಯೋಚಸಬೇಕು!
ನಿಮ್ಮ ಬರ, ನಿಮ್ಮ ನದಿಗಳ ಸಮಸ್ಯೆ
ಇಂಥ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಬೇಕು.
ಬೆಲೆ ಹೆಚ್ಚಾಗುತ್ತಿದ್ದರೆ ಪಾಪ ಯಾರೇನು ಮಾಡಲು ಸಾಧ್ಯ..
ಅದರ ಬಗ್ಗೆ ಮಾತಾಡಲು ಅವರೇನು ನಿಮ್ಮ ಹಾಗೆ ಕೆಲಸ ಇಲ್ಲದವರಲ್ಲ
ಬುದ್ಧಿವಂತರು ಮೌನದಿಂದಿರುತ್ತಾರೆ.. ಸಮಸ್ಯೆಗಳ ಬಗ್ಗೆ ಮಾತನಾಡಿ ಮಾತು ಖರ್ಚು ಮಾಡಿಕೊಂಡರೆ
ತಿಂಗಳಿಗೊಮ್ಮೆ ಮನದ ಮಾತು ಯಾರಾಡಬೇಕು!
ಸಾರ್.. ನಮ್ಮ ಊರಿನ, ನಮ್ಮ ರಾಜ್ಯದ ನಾಯಕರುಗಳು ಅದೆಷ್ಟು ವಿನಯವಂತರು!
ಮಾತೆತ್ತಿದರೆ ಮೇಲೆ ಬೆರಳು ಮಾಡಿ ತೋರಿಸುತ್ತಾರೆ. ಅರೆ!
ನಾವು ವೋಟು ಕೊಡಬೇಕಾಗಿರುವುದು ದಡ್ಡರಾದ ನಿಮಗಾ? ಗಡ್ಡದವರಿಗಾ?
ಇದೆಂಥ ಪ್ರಶ್ನೆ! ವೋಟು ಕೊಡಬೇಕಾದದ್ದು ಇಲ್ಲಿರುವವರಿಗೆ ಆದರೆ
ನಾವು ನೋಡಬೇಕಾದದ್ದು ನಮ್ಮನ್ನು ದಡ್ಡರನ್ನಾಗಿಸುವ ಗಡ್ಡದವರನ್ನ!
ಫ್ರೀ! ಫ್ರೀ! ಫ್ರೀ!
ಅದೆಷ್ಟು ಉದಾರಿಗಳು ಮತ್ತು ದಯಾಮಯಿಗಳು ಸಾರ್ ನಮ್ಮ ನಾಯಕರು!
ಹತ್ತು ಕೆಜಿ ಅಕ್ಕಿ, ೩,೪,೫ ಗ್ಯಾಸ್ ಸಿಲಿಂಡರು, ಸಿರಿಧಾನ್ಯ, ಕರೆಂಟು!
ಉಂಡು ಎಲ್ಲರು ಮನೆಯಲ್ಲಿ ಇರೋಣ ಸಾರ್! ಉದ್ಯೋಗ ಯಾಕೆ ಬೇಕು!
ನಮ್ಮ ಚಿಕ್ಕ ಚಿಕ್ಕ ಪಟ್ಟಣ ಗಳಲ್ಲಿ ಉದ್ಯೋಗ ಯಾಕೆ ಬೇಕು!
ಇಲ್ಲಿ ಓದಿಕೊಂಡವರಿಗೆ ಕೆಲಸ ಇಲ್ಲ.
ವಯಸ್ಸಾದ ಅಪ್ಪ ಅಮ್ಮನನ್ನ ಬಿಟ್ಟು ಬೆಂಗಳೂರಿಗೆ ಹೋದರಾಯಿತು!
ಪಾಪ ಆ ಊರು.. ದಿನಗಳು ತುಂಬಿದರೂ ಹೆರಿಗೆಯಾದ ವಿಚಿತ್ರ ಬಸುರಿ!
ಆ ಮೂರು ಸಿಲಿಂಡರ್ ಕೊಡುವುದು ಕೂಡ
ಯುಗಾದಿಗೆ, ಗಣೇಶ ಚತುರ್ಥಿಗೆ, ದೀಪಾವಳಿಗೆಯಂತೆ,
ರಂಜಾನ್, ಕ್ರಿಸ್ಮಸ್ ಹಬ್ಬಗಳಿಗೆ ಸೂರ್ಯನ ಕೆಳಗಿಟ್ಟುಬಿಟ್ಟರೆ ಹಬ್ಬದ ಅಡುಗೆ ತಯಾರಾಗುತ್ತದೆ!
ಇದು ಸಬ್ ಕಾ ಸಾಥ್.. ಸಬ್ ಕಾ ವಿಕಾಸ್!
ಅದೆಷ್ಟು ಶೀಮಂತ ದೇಶ ನಮ್ಮದು!
ಈ ಫ್ರೀ ಅಕ್ಕಿ, ಫ್ರೀ ಸಿಲಿಂಡರು, ಫ್ರೀ ಸಿರಿಧಾನ್ಯ ಪಡೆದುಕೊಳ್ಳುವವರು
BPL (Below Poverty Line) ನಲ್ಲಿರಬೇಕು. ಆದರೆ ನಮ್ಮಲ್ಲಿ ಸ್ವಂತ ಮನೆ,
ಸಾವಿರಾರು - ಲಕ್ಷಾಂತರ ದುಡ್ಡು ದುಡಿಯುವವರು ಕೂಡ BPL!
ಅಲ್ಲೆಲ್ಲೋ ರಾಮ ಮಂದಿರ ಕಟ್ಟುವುದರಲ್ಲಿ
ಇಲ್ಲೆಲ್ಲೋ ಶತಾಯ ಗತಾಯ ಹಿಜಾಬ್ ಪರವಾಗಿ ಹೋರಾಡುವುದರಲ್ಲಿ
ಮಗ್ನರಾಗಿರುವ ನಾಯಕರು ಶ್ರೀಮಂತ ಕೈಯಿಂದ BPL ಕಾರ್ಡು ಕಿತ್ತುಕೊಂಡು
ನಿಜವಾದ ಬಡವರಿಗೆ ನಮ್ಮ ಊರುಗಳಲ್ಲೇ ಉದ್ಯೋಗ ಸೃಷ್ಟಿಸುವುದರ ಬಗ್ಗೆ ಮಾತಾಡುವುದಿಲ್ಲ
ಬೇರೆ ದೇಶಗಳು ನಮ್ಮನ್ನು ನೋಡಿ ಕಲಿಬೇಕು ಸಾರ್..
Digital India ! Smart City!
ನಮ್ಮ ಚುನಾವಣಾ ಆಯೋಗದ್ದು ಅದೆಂಥಾ ಅದ್ಭುತ ತಲೆ ನೋಡಿ!
ಈಗ ರಾಜ್ಯದಲ್ಲಿ ಮಕ್ಕಳಿಗೆ ರಜೆ ಇದ್ದು ಬಹಳ ಜನ ಪ್ರವಾಸ, ಮಾಡುವೆ ಅಂತ
ತಮ್ಮ ಊರು ಬಿಟ್ಟು ಹೋಗಿರುತ್ತಾರೆ! ಅವರ ಓಟುಗಳೆಲ್ಲ ಪೋಲು!
ನಾವು ಇದ್ದಲ್ಲಿಂದಲೇ ಓಟು ಮಾಡಿಸುವಂಥಾ ವ್ಯವಸ್ಥೆ ಇಲ್ಲ..
ನಮ್ಮದು Digital India!!
ಅದೆಂಥಾ ಜನಪ್ರಿಯತೆ! ಜನಸಾಗರ! ಚುನಾವಣಾ ಘರ್ಜನೆ!
ನಮ್ಮ ಬಹಳಷ್ಟು ಮಾಧ್ಯಮಗಳು ಇಂಥವೇ ವೈಭವೀಕರಣದಲ್ಲಿ ತಲ್ಲೀನ!
ಸರ್ಕಾರಿ ವಿಮಾನ - ಹೆಲಿಕಾಪ್ಟರಿನಲ್ಲಿ ಬಂದು, ಭ್ರಷ್ಟ ಅಭ್ಯರ್ಥಿಗಳ ಬಗ್ಗೆ ಪ್ರಚಾರ
ಮಾಡುವವರಿಗೆ ಅದೆಲ್ಲಿನ ನೈತಿಕತೆ..
ನಾವು ಅಮಾಯಕರು ಸಾರ್! ನಾವು ಮಾನವೀಯತೆಯನ್ನು ಮರೆತ ದುಷ್ಟ ಜನ!
ಅಂತ ರೋಡ್ ಶೋ ಗಳಿಗಾಗಿ ಹತ್ತಾರು ರಸ್ತೆಗಳನ್ನು ಮುಚ್ಚಿ, ಸಾವಿರಾರು ಜನರ ದಿನದ ವ್ಯಾಪಾರ ಮುಚ್ಚಿಸಿ
ನೋವು ಕೊಡುವ, ಹಿಂಸೆ ಕೊಡುವವರನ್ನು ಜೈ ಎನ್ನುವ ಮೂರ್ಖರು!
ಕೆಲಸ ಮಾಡಿದ್ದರೆ ಪ್ರಚಾರ ಯಾಕೆ ಬೇಕು?
ಸರಿಯಾದ ದಾರಿಯಲ್ಲಿ ನಡೆದಿದ್ದರೆ ಈಗ ರೋಡ್ ಶೋ ಯಾಕೆ?
ಒಂದೇ ದಿನ!
ಆಮೇಲೆ ಎಲ್ಲ ಮಾಮೂಲು!
ಅವರ ಅಧಿಕಾರಕ್ಕೆ ನಾವು ಬೇಕು
ನಮ್ಮ ಆಸೆಗಳಿಗೆ ಅವರು ಬೇಕು
ಮೇರಾ ಭಾರತ್ ಮಹಾನ್!
Commentaires