ಏಕೆಂದರೆ.. ನಾನು ರಾಧೆ!
ನಮ್ಮದಲ್ಲದ ಪಾತ್ರವನ್ನು ನಿಭಾಯಿಸುವುದು ಅದೆಷ್ಟು ಕಷ್ಟ ಗೊತ್ತಾ ಕೃಷ್ಣಾ! ನಮ್ಮದಲ್ಲದ ಮಾತು, ಅಭ್ಯಾಸವಿರದ ಮೌನ, ಬದಲಾಯಿಸಿಕೊಳ್ಳಬೇಕಾದ ನಡವಳಿಕೆ, ಇಲ್ಲದ ನಗು, ಒಲ್ಲದ ಒಪ್ಪಿಗೆ, ಸಲ್ಲದ ಮುಖಭಾವ - ಕಷ್ಟವಾಗುತ್ತಿದೆ ಕೃಷ್ಣ! ಆದರೂ ನಾನದನ್ನು ಮಾಡುತ್ತೇನೆ. ಏಕೆಂದರೆ.. ನಾನು ರಾಧೆ!
ನೀನು ನಿನ್ನ ದಿನದ ಇಪ್ಪತ್ನಾಲ್ಕು ಗಂಟೆ ನನ್ನೊಂದಿಗಿದ್ದರೂ ಇಪ್ಪತೈದನೇ ಗಂಟೆ ಬಯಸುತ್ತಿದ್ದ ಆಸೆಬುರುಕಿ ರಾಧೆಯನ್ನು, ನಿನ್ನ ನೋಟ ಇತರೆ ಗೋಪಿಕೆಯರ ಮೇಲೆ ಕ್ಷಣ ಅರೆಕ್ಷಣ ಬಿದ್ದರೂ ಮುನಿಸಿಕೊಳ್ಳುತ್ತಿದ್ದ ಹೊಟ್ಟೆಕಿಚ್ಚಿನ ರಾಧೆಯನ್ನು, ನಿನ್ನನ್ನೇ ತನ್ನ ಪ್ರಪಂಚವನ್ನು ಮಾಡಿಕೊಂಡಿರುವ ಪುಟ್ಟ ಪ್ರಪಂಚದ ರಾಧೆಯನ್ನು, ನಿನ್ನ ಪ್ರಪಂಚ ಕೂಡ ತಾನೇ ಎಂದುಕೊಂಡಿದ್ದ ಅಮಾಯಕಿ ರಾಧೆಯನ್ನು ಇದ್ದಕ್ಕಿದ್ದಂತೆ ಕೃಷ್ಣ ಕೊಡುವ ಇಷ್ಟೇ ಇಷ್ಟು ಸಮಯದಲ್ಲಿ ತೃಪ್ತಿಗೊಳ್ಳುವಂತೆ ಬದಲಾಯಿಸುವುದಕ್ಕೆ, 'ನಿನ್ನ ಪ್ರಪಂಚ ಕೃಷ್ಣ ಮಾತ್ರನಿರಬಹುದು ಆದರೆ ನೀನು ಕೃಷ್ಣನ ಜಗತ್ತಿನ ಒಂದು ಭಾಗ ಮಾತ್ರ' ಎಂದು ಮನಸ್ಸಿಗೆ ಮನವರಿಕೆ ಮಾಡಿಸುವುದಕ್ಕೆ ಕಷ್ಟವಾಗುತ್ತಿದೆ. ಆದರೆ ನನಗೆ ಗೊತ್ತು: ಇದು ಅನಿವಾರ್ಯ. ಅದಕ್ಕೆ ನಾನದನ್ನು ಮಾಡುತ್ತೇನೆ. ಏಕೆಂದರೆ.. ನಾನು ರಾಧೆ!
ಅಂದು ಮೊದಲ ಬಾರಿಗೆ ನೀನು ಗೋಕುಲವನ್ನು ಬಿಟ್ಟು ಮಥುರೆಗೆ ಹೋಗುವೆ ಎಂದು ಕೇಳಿದಾಗ 'ಅದು ಸುಳ್ಳು' ಎಂದು ನನಗೆ ನಾನೇ ನಂಬಿಸಿಕೊಂಡೆ, 'ಅದು ಸುಳ್ಳಾಗಬೇಕು' ಎಂದು ಬಯಸಿದೆ, 'ಅದು ಸುಳ್ಳೇ ಇರುತ್ತದಲ್ಲವಾ?' ಅಂತ ನನ್ನೇ ನಾನು ಪ್ರಶ್ನಿಸಿಕೊಂಡೆ, 'ಇದು ಸುಳ್ಳಾಗದಿದ್ದರೆ ಹೇಗೆ!' ಅಂತ ನನ್ನಲ್ಲೇ ಆತಂಕಗೊಂಡೆ - ಈ ಎಲ್ಲ ನಂಬಿಕೆ, ಬಯಕೆ, ಪ್ರಶ್ನೆ, ಆತಂಕ - ಎಲ್ಲದ್ದನ್ನು ಮೀರಿ ಒಂದಿತ್ತು: ಸತ್ಯ. ನೀನು ಹೊರಡಲು ಸಿದ್ಧನಾಗಿದ್ದೆ. ನಾನದನ್ನು ಒಪ್ಪಿಕೊಂಡು ನಿನ್ನನ್ನು ಬೀಳ್ಕೊಡಲು ಸಿದ್ಧಳಾಗಿದ್ದೇನೆ. ಏಕೆಂದರೆ.. ನಾನು ರಾಧೆ!
ಸತ್ಯದ ನಿರ್ದಯತೆ, ವಾಸ್ತವದ ಕ್ರೌರ್ಯ ಮತ್ತು ಹೃದಯದ ಮೂರ್ಖತನ ನನಗೆ ಅರ್ಥವಾದದ್ದು ಅಂದೇ. 'ಕೃಷ್ಣನಿಗೆ ನನ್ನ ಮನಸ್ಸು ಗೊತ್ತು, ನನ್ನ ಹರ್ಷ, ನನ್ನ ದುಃಖ, ನನ್ನ ಆತಂಕ, ನನ್ನ ನಿರೀಕ್ಷೆ, ನನ್ನ ಹುಚ್ಚುತನ, ನನ್ನ ಪ್ರೀತಿ.. ಕೃಷ್ಣನಿಗಿಂತ ಚೆನ್ನಾಗೇ ಇನ್ನಾರಿಗೆ ನಾನು ಅರ್ಥವಾಗಲು ಸಾಧ್ಯ. ಅವನು ನನ್ನನ್ನು ನೋಯಿಸಲಾರ' ಎಂದುಕೊಂಡಿದ್ದ ಮಗುವಿನಂಥ ಹಠಮಾರಿ ಹೃದಯ ತನ್ನ ಮೂರ್ಖತೆಯನ್ನು ಒಪ್ಪಿಕೊಳ್ಳಲಿಲ್ಲ, ಈಗಲೂ ಅದಕ್ಕೆ ಸಾವಿರ ಪ್ರಶ್ನೆ, ಲಕ್ಷ ನಿರೀಕ್ಷೆ. ನಾನು ಅವೆಲ್ಲ ಪ್ರಶ್ನೆಗಳನ್ನು ಕೇಳಿಯೂ ಕೇಳದಂತೆ ನಟಿಸಬಲ್ಲೆ, ಅವೆಲ್ಲ ನಿರೀಕ್ಷೆಗಳನ್ನು ಗಮನಿಸಿಯೂ ಗಮನಿಸದಂತೆ ಇರಬಲ್ಲೆ.. ಏಕೆಂದರೆ.. ನಾನು ರಾಧೆ!
ನಿನ್ನ ನಿರ್ಗಮನದ ಬಗ್ಗೆ ನನಗೆ ತಿಳಿದೊಡನೆ ನನ್ನ ಬಳಿ ಹಲವು ಆಯ್ಕೆಗಳಿದ್ದವು ಕೃಷ್ಣ. ನಿನ್ನ ನಿರ್ಧಾರವನ್ನು ಪ್ರಶ್ನಿಸಿ, ನಮ್ಮ ಸಂಬಂಧವನ್ನು ಜ್ಞಾಪಿಸಿ, ನಮ್ಮ ಮಧ್ಯದ ಆಣೆ - ಪ್ರಮಾಣಗಳನ್ನು ನಿನಗೆ ನೆನಪಿಸಿ ನೀನು ಹೋಗದಂತೆ ಅಂಗಲಾಚಬಹುದಿತ್ತು. ಆದರೆ ಪ್ರೀತಿಯಲ್ಲಿ ವಿವರಣೆ, ಬೇಡಿಕೊಳ್ಳುವಿಕೆ ಇರುತ್ತವಾ ಕೃಷ್ಣಾ? ನೀನು ನನ್ನನು ತೊರೆದರೆ ನನಗೆ ನಾನೇ ಏನಾದರು ಮಾಡಿಕೊಳ್ಳುತ್ತೇನೆ ಅಥವಾ ನಿನಗೂ ಏನಾದರೂ ಮಾಡುತ್ತೇನೆ ಅಂತ ಹೆದರಿಸಬಹುತ್ತು. ಆದರೆ ಪ್ರೀತಿಗೆ ಭಯದ ಸಹಾರೆ ಬೇಕಾ? 'ನಿನಗೆ ನಾನೇ ಬೇಡವೆಂದ ಮೇಲೆ ನನಗೆ ನೀನೇಕೆ?' ಅಂತ ನಾನೊಂದು ಬೇರೆ ಪ್ರಪಂಚ ಸೃಷ್ಟಿಸಿಕೊಳ್ಳಬಹುದಿತ್ತು. ಏನು ಮಾಡಲಿ! ನನ್ನದು ಪ್ರೀತಿ; ವ್ಯವಹಾರವಲ್ಲ. ಈ ಅಲ್ಲ ಭಾವಗಳು, ಆಲೋಚನೆಗಳು ಪ್ರೀತಿಯ ಬಹುರೂಪಿಗಳೇ. ಆದರೆ ನಾನು ಆಯ್ದುಕೊಂಡಿದ್ದು ಬೇರೆಯದೇ ಆಯ್ಕೆಯನ್ನು. ನಾನು ನಿರ್ಧರಿಸಿದೆ: 'ಕೃಷ್ಣನಿಗೆ ನೋವು ಕೊಡಬಾರದು. ಅವನ ಮನಸ್ಸಿಗೆ ನೋವು, ಕಿರಿರಿ ಮಾಡಬಾರದು. ನನ್ನ ಕೃಷ್ಣನನ್ನು ಸಂತೋಷದಿಂದ ಬೀಳ್ಕೊಡಬೇಕು. ಹಾಗಂತ ನಿರ್ಧರಿಸಿ ಬದಲಾಗಲು ಪ್ರಾರಂಭಿಸಿದೆ; ಕೇವಲ ನಿನ್ನ ಸಂತೋಷಕ್ಕಾಗಿ; ಏಕೆಂದರೆ.. ನಾನು ರಾಧೆ!
ನನಗೆ ಗೊತ್ತಿತ್ತು; ಬದಲಾಗುವುದೆಂದರೆ ನನ್ನ ಮನಸ್ಸಿಗೆ ವಿರುದ್ಧವಾಗಿ ಬರುವ ನೂರು ಸನ್ನಿವೇಶಗಳನ್ನು ಒಪ್ಪಿಕೊಳ್ಳಬೇಕು, ನನಗೆ ನೋವು ಕೊಡುವ ನಾನಿಲ್ಲದ ನಿನ್ನ ಪ್ರಪಂಚದ ಸಾವಿರ ಜನರನ್ನು ಅಂಗೀಕರಿಸಬೇಕು, ನನ್ನ ಪ್ರಶ್ನೆಗಳ ಬಾಯಿ ಮುಚ್ಚಿಸಬೇಕು, ನನ್ನ ಭಾವನೆಗಳನ್ನ ಮಲಗಿಸಬೇಕು, ಅಂಚಿನವರೆಗೆ ಬರುವ ಹನಿಯನ್ನು ಮರಳಿ ಕಳಿಸುವ ಕಲೆಯನ್ನು ಕಣ್ಣಿಗೆ ಕಲಿಸಬೇಕು, ಬರುವ ಬಿಕ್ಕನ್ನು ಕಚ್ಚಿ ಹಿಡಿದು ನಗುವನ್ನು ನಟಿಸುವ ಕುಶಲವನ್ನು ತುಟಿಗೆ ಹೇಳಿಕೊಡಬೇಕು, ನಿನ್ನ ಖುಷಿಗಾಗಿ ಇದೆಲ್ಲ ಮಾಡುತ್ತಿದ್ದೇನೆ. ಏಕೆಂದರೆ.. ನಾನು ರಾಧೆ!
ನೀನು ಗೋಕುಲದಿಂದ ನಿರ್ಗಮಿಸುವವರೆಗೆ ನೀನು ಕೊಡುವ ಅಲ್ಪ ಸಮಯದಲ್ಲೇ ತೃಪ್ತಿಪಟ್ಟುಕೊಳ್ಳುತ್ತ, ಆಡುವ ಒಂದೆರಡು ಮಾತುಗಳನ್ನು ದಿನಪೂರ್ತಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುತ್ತ, ಪ್ರಪಂಚದ ಎಲ್ಲರಲ್ಲಿ ನಾನೂ ಒಬ್ಬಳಾಗಿ ನಿನ್ನ ದಿನಗಳಲ್ಲಿ, ನಿನ್ನ ನೆನಪುಗಳಲ್ಲಿ, ನಿನ್ನ ಆಲೋಚನೆಗಳಲ್ಲಿ, ಬಂದು ಹೋಗುತ್ತಾ ಇರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ ಕೃಷ್ಣಾ. ನನ್ನದಲ್ಲದ ಪಾತ್ರವನ್ನು ನಾನು ನಿಭಾಯಿಸುವುದು, ನಾನಲ್ಲದ ರೀತಿಯಲ್ಲಿ ನಾನಿರುವುದು ಬರೀ ಕಷ್ಟವಲ್ಲ, ಯಾತನೆ. ಆದರೆ ನಿನ್ನ ನಿರ್ಗಮನದ ನಿರ್ಧಾರಕ್ಕೆ ನಾನು ಅಡ್ಡ ಬರಲಾರೆ. ನಿನ್ನ ನೋಯಿಸಿ ನಾನು ಸಂತೋಷದಿಂದಿರಲಾರೆ. ನಿನ್ನ ಪುಸ್ತಕದ ಕೆಟ್ಟ ಪುಟಗಳಲ್ಲಿ ನಾನು ದಾಖಲಾಗಲಾರೆ. ನಗುವಿನ ಹಿಂದೆ ದುಃಖದ ಬಿಕ್ಕನ್ನು, ಕಣ್ಣ ಕಾಡಿಗೆಯ ಮರೆಯಲ್ಲಿ ಕಂಬನಿಯನ್ನು ಮರೆಮಾಚುವುದು ಕಷ್ಟವಾಗುತ್ತದೆ, ಆದರೆ ಅಸಾಧ್ಯವಲ್ಲ.. ಏಕೆಂದರೆ.. ನಾನು ರಾಧೆ!
Comentarios