ಏಕೆಂದರೆ... ನೀನು ಕನ್ನಡ!
ನನ್ನ ಕನ್ನಡ,
ನಿನ್ನನ್ನು ನುಡಿಯುವಲ್ಲಿ ನಾನು ಹುಟ್ಟಿರುವುದಕ್ಕೆ ನನಗೆ ನಿನ್ನ ಅಭಿನಂದನೆ. ನನ್ನ ಎಲ್ಲ ಆಲೋಚನೆ, ಅಭಿಪ್ರಾಯ, ಊಹೆಗಳ ಅಭಿವ್ಯಕ್ತಗೊಳಿಸಲು ದಾರಿಯಾದ ನಿನಗೆ ನನ್ನ ಅಭಿವಂದನೆ.
ನಿನಗಿಂತಲೂ ಮುಂಚೆ ಸಂಸ್ಕೃತ ಇತ್ತಂತೆ, ನಮ್ಮ ದೇಶದ ಎಲ್ಲ ಭಾಷೆಗಳ ಮೂಲ. ಆಮೇಲೆ ಎಲ್ಲಿಂದಲೋ ಇಂಗ್ಲೀಷು ಬಂತಂತೆ. ಎರಡೂ ನಿನ್ನಷ್ಟು ಆಪ್ತವಾಗಲಿಲ್ಲ. ನಿನ್ನ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ!
ಏಕೆಂದರೆ ನೀನು ಕನ್ನಡ!
ಬೆಳಗಾವಿಗಲ್ಲಿ ಪುಂಡರು ನಿನ್ನ ಹಣಿಯಲು ಹೋಗುತ್ತಾರೆ. ಆದರೆ ಅದೇ ಮರಾಠಿ ಮಾತೃ ಭಾಷೆಯ ಬೇಂದ್ರೆ ಕನ್ನಡದಲ್ಲಿ ಬರೆದು ನಮ್ಮಲ್ಲಿ ಭಾವ ತುಂಬಿದರು. ಕಾವೇರಿಯ ನೀರು ಕೊಡದಿದ್ದರೆ ನಮ್ಮ ಆಸ್ತಿ ನಾಶ ಮಾಡುವ ಭಾಷಿಕರ ಮನೆಯಲ್ಲೇ ಹುಟ್ಟಿದ ಮಾಸ್ತಿ ನಮ್ಮ ಕನ್ನಡದ ಆಸ್ತಿಯಾಗಿ ನಮಗೆ ಕಥೆಗಳನ್ನು ಕೊಟ್ಟು ಹೋದರು. ಇಂಗ್ಲಿಷಿನ ಮೋಹಕ್ಕೆ ಬಿದ್ದು ಮೊದಲನೇ ಕವಿತೆಯನ್ನು ಇಂಗ್ಲೀಷಿನಲ್ಲಿಯೇ ಬರೆದಿದ್ದ ಪುಟ್ಟಪ್ಪನನ್ನು ಅವರ ಇಂಗ್ಲೀಷು ಮೇಷ್ಟ್ರು ಕರೆದು ಕನ್ನಡಲ್ಲಿ ಬರೆಯುವಂತೆ ಹೇಳದಿದ್ದರೆ ಪುಟ್ಟಪ್ಪ ನಮ್ಮ ಹೆಮ್ಮೆಯ ಕುವೆಂಪು ಆಗುತ್ತಿರಲಿಲ್ಲವೇನೋ. ನಮ್ದುಕೆ, ನಿಮ್ದುಕೆ ಅಂತ ಕನ್ನಡ ಮಾತಾಡುವ ಸಾವಿರ ಮುಸಲರ ಮಧ್ಯೆ ಒಬ್ಬ ಅದ್ಭುತ ನಿಸಾರರು ಎದ್ದು 'ಜೋಗದ ಸಿರಿ ಬೆಳಕಿನಲ್ಲಿ' ಎಂಬ ಅಚ್ಚ ಕನ್ನಡದ ಹಾಡು ಬರೆದುಕೊಟ್ಟರು. ಯಾವ ಭಾಷೆ ಕೂಡ ನಿನ್ನ ತುಳಿಯಲಾಗಲಿಲ್ಲ.
ಏಕೆಂದರೆ ನೀನು ಕನ್ನಡ!
ಎಲ್ಲೋ ಕೆಳಗಿನಿಂದ ಉದ್ಯೋಗ ಮಾಡಲು ಬಂದ ಮಲ್ಲು - ಕುಟ್ಟಿಗಳು ರಾಗಬದ್ಧವಾಗಿ ಆಸ್ಪತ್ರೆಗಳಲ್ಲಿ ಮಲಯಾಳದಂತೆ ಕನ್ನಡ ಮಾತಾಡಿದರು, ಮತ್ತೆಲ್ಲಿಂದಲೋ ವ್ಯಾಪಾರ ಮಾಡಲು ಬಂದ ಉತ್ತರದ ಮಾರ್ವಾಡಿಗಳು ತಮ್ಮ ಹೆಂಡತಿಯನ್ನು 'ಬರುತ್ತಿದೆ' ಅಂತಲೂ ತಮ್ಮ ನಾಯಿಯನ್ನು 'ಬರುತ್ತಾರೆ' ಅಂತಲೂ ಲಿಂಗ - ವಚನ ಗಳನ್ನು ತಲೆಕೆಳಗೆ ಮಾಡಿ ಕನ್ನಡ ಮಾತಾಡಿದರು, ತೆಲುಗರು ಇಲ್ಲಿಗೆ ಬಂದು ಭೂಮಿ ಕೊಂಡು ವ್ಯವಸಾಯ ಮಾಡಿ 'ಎಕ್ಕಡ ಹೋಗಬೇಕು?' ಎಂದು ಅರೆಗನ್ನಡ ನುಡಿದರು, ತಮಿಳಿಗರು 'ಎನ್ನಡಾ ಹೇಗಿದ್ದಿ?' ಅಂತ ಅಂದರು, ನೇಪಾಳದಿಂದ ಬಂದು ರಸ್ತೆ ಬದಿಯಲ್ಲಿ ಚಿಕ್ಕ ಕಣ್ಣಿನ ಚಿಂಕಿಗಳು ಹೇಗೋ ಏನೋ ಮಾತಾಡಿದರು. ಇವರೆಲ್ಲರ ತಮ್ಮದೇ ಆದ ಸುಂದರ ಕನ್ನಡ ಮಾತಾಡುವವರ ಮಧ್ಯೆ ವರ್ಷಗಳ ಆಶ್ರಯ ಪಡೆದರೂ ಕನ್ನಡ ಮಾತಾಡಲು ಪ್ರಯತ್ನವೇ ಪಡದ ಜೀವಚ್ಛವಗಳೂ ಇರುವುವು. ಅವುಗಳಿಂದ ನಮಗೆ ಏನೂ ಆಗಬೇಕಾದ್ದಿಲ್ಲ.
ಏಕೆಂದರೆ ನೀನು ಕನ್ನಡ.
ಕನ್ನಡಿಗರೇ ಆಗಿದ್ದರೂ ಕನ್ನಡವನ್ನು ಕನ್ನಡಿಯಂತೆ ಆಗಾಗ ಮಾತ್ರ ಬಳಸುವ ನಿರಭಿಮಾನಿಗಳ ಆತ್ಮಕ್ಕೆ ಶಾಂತಿ ಸಿಗಲಿ. ಕನ್ನಡವನ್ನು ಕನ್ನಡಕವೆಂದು ತಿಳಿದು ಅದರ ಮೂಲಕ ಪ್ರಪಂಚವನ್ನೇ ನೋಡುವ ವಿವೇಕವಂತರಿಗೆ ಜಯವಾಗಲಿ. ರಾಜ್ಯೋತ್ಸವವನ್ನು ರಾಜ್ಯೋಸ್ತವವೆಂದು ಚಂದಾ ವಸೂಲಿ ಮಾಡುವ ನವೆಂಬರ್ ಕನ್ನಡಿಗರಿರುವುದು ನಿಜ, ಆದರೆ ಕನ್ನಡ ಬಹಳ ಚೆಂದ ಎಂದು ಕನ್ನಡವನ್ನು ನವ ಅಂಬರದ ಎತ್ತರಕ್ಕೆ ಕೊಂಡೊಯ್ಯುವ ಅಭಿಮಾನಿಗಳಿರುವುದೂ ನಿಜ. ನೀನು ಯಾವಾಗಲೂ ದಣಿಯುವುದಿಲ್ಲ, ನೀನು ಯಾರು ಬಂದರೂ ಮಣಿಯುವುದಿಲ್ಲ.
ಏಕೆಂದರೆ ನೀನು ಕನ್ನಡ.
Komentáře