ಉಳಿದುಹೋದವರು ಮತ್ತು ಕಳೆದುಹೋದವರು.
ಅಂಥದೊಂದು ಶುದ್ಧ ದುಃಖವನ್ನು ಒಬ್ಬರೇ ಅನುಭವಿಸಬೇಕು. ಏಕೆಂದರೆ ಎಲ್ಲರೊಂದಿಗೆ ಹಂಚಿಕೊಳ್ಳಲು ದುಃಖವೆಂಬುದು ಸುಖದ ಹಾಗೆ ಅಗ್ಗದ ಭಾವವಲ್ಲ.
ಇಷ್ಟಪಟ್ಟು ಮಾಡಿಕೊಂಡ ತಿಂಡಿಯನ್ನು ತಟ್ಟೆಯಲ್ಲಿ ಬಡಿಸಿಕೊಂಡು ಏನೋ ನೆನಪಾಗಿ ತಿನ್ನಲಾಗದೆ ಏಕಾಂತದಲ್ಲಿ ಬಿಕ್ಕಿ ಬಿಕ್ಕಿ ಅಳಿಸುವ ದುಃಖ,
ಯಾವುದೋ ಪುಸ್ತಕ ಓದುತ್ತ ಕಣ್ಣ ಹನಿಗಳನ್ನು ಜಾರಿಸಿ ಪುಟಗಳನ್ನು ಒದ್ದೆ ಮಾಡುವ ದುಃಖ,
ಇನ್ಯಾವುದೋ ಸಿನೆಮಾದ ದೃಶ್ಯವೊಂದು ನೋಡುತ್ತಾ ನಾಲ್ಕು ಜನರ ಮಧ್ಯದಿಂದ ಎದ್ದು ಹೋಗಿ ಕಣ್ಣೇರು ಒರೆಸಿಕೊಳ್ಳುವಂತೆ ಮಾಡುವ ದುಃಖ,
ಮತ್ಯಾವುದೋ ಹಾಡಿನ ಸಾಲೊಂದು ಕೇಳುತ್ತಾ ಇದ್ದಕ್ಕಿದ್ದಂತೆ ಪ್ರಪಂಚದಿಂದ ನಮ್ಮನ್ನು ವಿಮುಖರಾಗಿಸುವ ದುಃಖ,
ಯಾವುದೋ ದಾರಿಯಲ್ಲಿ ನಡೆಯುತ್ತಾ ಏನೋ ನೆನಪಾಗಿ ಇದ್ದಕಿದಂತೆ ನಮ್ಮನ್ನು ಅಲ್ಲೇ ನಿಲ್ಲಿಸಿಬಿಡುವ ದುಃಖ..
ಇವೆಲ್ಲವನ್ನೂ ಒಬ್ಬರೇ ಅನುಭವಿಸಬೇಕು!
ದುಃಖವೆಂಬುದು ಬಹಳ ಖಾಸಗಿಯಾದದ್ದು: ಅಲ್ಲಿರುವವರು ಇಬ್ಬರೇ - ಉಳಿದುಹೋದ ನಾವು ಮತ್ತು ಕಳೆದು ಹೋದ ಅವರು.
ಅದು ನಮ್ಮಿಬ್ಬರ ಮಧ್ಯದ ನೆನಪು, ನಮ್ಮಿಬ್ಬರ ಮಧ್ಯದ ಸಂಭಾಷಣೆ.
ಮನಶಾಸ್ತ್ರಜ್ಞರು ಬಹಳ ಆಳವಾದ ದುಃಖವನ್ನು ಖಿನ್ನತೆ ಅನ್ನುತ್ತಾರೆ. ಖಿನ್ನತೆಯಿಂದ ಹೊರ ಬರಲು ಸ್ಥಳ ಬದಲಾಯಿಸಲು ಹೇಳುತ್ತಾರೆ. ಕಳೆದು ಹೋದವರ ನೆನಪು ತರುವ ವಸ್ತು - ಸ್ಥಳ - ವಿಷಯಗಳಿಂದ ದೂರವಿರಲು ಹೇಳುತ್ತಾರೆ. ಸರಿ! ನಾವು ಆ ಹಾಡುಗಳನ್ನು ಕೇಳುವುದನ್ನು ನಿಲ್ಲಿಸುತ್ತೇವೆ, ಆ ರಸ್ತೆಗಳಲ್ಲಿ ಹೋಗುವುದನ್ನು ನಿಲ್ಲಿಸುತ್ತೇವೆ, ಅವರ ನೆನಪನ್ನು ತರುವ ದೃಶ್ಯ, ವಾಸನೆ, ಮಾತು.. ಎಲ್ಲವುಗಳಿಂದ ದೂರವಿರುತ್ತೇವೆ.
ಕಳೆದು ಹೋದವರು ಅಕಾರಣವಾಗಿ ನೆನಪಾಗಿಬಿಡುತ್ತಾರೆ. ಇಂಥ ದುಃಖಕ್ಕೆ ಪರಿಹಾರ ಎಲ್ಲಿಯದು? ಮದ್ದು ಎಲ್ಲಿಂದ ತರಲು ಸಾಧ್ಯ?
ದುಃಖವನ್ನು ಯಾರ ಬಳಿಯೂ ಪೂರ್ತಿಯಾಗಿ ಹಂಚಿಕೊಳ್ಳಲಾರೆವು. ಅದು ಮಾರಲಾಗದ ಸರಕು. ದುಃಖ ತುಂಬಿ ಬಂದಾಗ ನಮ್ಮಲ್ಲಿರುವ ಕಣ್ಣೀರು ಕೂಡ ಸಾಂತ್ವನ ಹೇಳದೆ ಕಣ್ಣಿಂದ ಹೊರನಡೆದುಬಿಡುತ್ತದೆ.
ಬಾಲ್ಯದಲ್ಲಿ ಪಕ್ಕ ಮಲಗಿಸಿಕೊಂಡು ಬಿಸ್ಮಾರ್ಕ್ - ನೆಪೋಲಿಯನ್ ರ ನೂರು ಕಥೆಗಳು ಹೇಳಿದ ಜೀವ, ಪ್ರಾಮಾಣಿಕತೆಯನ್ನು ಒಮ್ಮೆಯೂ ಬೋಧಿಸದೆ ತಾನು ಪಾಲಿಸಿ ನಮಗೆ ಕಲಿಸಿದ ಜೀವ, ಸೋತ ಪ್ರತಿಬಾರಿಯೂ ಎಬ್ಬಿಸಿ ನಿಲ್ಲಿಸಿದ ಜೀವ, ನಿಂತ ಪ್ರತಿ ಬಾಯಾರಿಯೂ ಮುನ್ನಡೆಯಲು ಹೇಳಿದ ಜೀವ, ದುಷ್ಟ ಜೀವಕೋಶಗಳು ದೇಹವೆಲ್ಲ ಹರಡುತ್ತಿದ್ದರೂ ಹೃದಯದಲ್ಲಿ ಪ್ರೀತಿ ತುಂಬಿಕೊಂಡಿದ್ದ ಜೀವ, ಆಸ್ಪತ್ರೆಯ ಒಂಟಿತನದಲ್ಲಿ ನರಳಿದ ಜೀವ, ಮತ್ತೆ ಅಲ್ಲಿಂದ ಮರಳದ ಜೀವ..
ಹೀಗೆ ಮಾಡಿದ್ದರೆ ಉಳಿಸಿಕೊಳ್ಳಬಹುದಿತ್ತು ಎಂಬ ಪಶ್ಚಾತ್ತಾಪ, ಹಾಗೆ ಮಾಡಿದ್ದರೆ ಬದುಕಿಸಿಕೊಳ್ಳಬಹುದಿತ್ತು ಎನ್ನುವ ವ್ಯರ್ಥ ಯೋಚನೆ, ಹಾಗೆ ಮಾಡಲು ನಮ್ಮ ಕೈಲಾಗಲಿಲ್ಲ ಎನ್ನುವ ಅಸಾಹಾಯಕತೆ, ಹೀಗೆ ಮಾಡಲು ಯಾರೂ ಹೇಳಲಿಲ್ಲ ಎನ್ನುವ ನಿಂದನೆ, ಹಾಗೆ ಮಾಡಲು ಹೇಳಿದರೂ ನಾವು ಕೇಳಲಿಲ್ಲ ಎನ್ನುವ ಪಾಪಪ್ರಜ್ಞೆ.. ಈ ಯಾವ ಹೀಗೆ-ಹಾಗೆಗಳೂ ಕಾಲವನ್ನು ಹಿಂದಿರುಗಿಸುವುದಿಲ್ಲ, ಈ ನಿರ್ವಾತವನ್ನು ತುಂಬುವುದಿಲ್ಲ.
ವಿಜ್ಞಾನದ ಅಸಹಾಯಕತೆ ಮತ್ತು ದೇವರ ದುಷ್ಟತನ ಎರಡೂ ಕೈ ಕುಲುಕಿ ಜೀವನ ಪರ್ಯಂತ ಅನುಭವಿಸಬೇಕಾದ ಕೆಲವು ದುಃಖಗಳನ್ನು ಕೊಟ್ಟುಬಿಡುತ್ತವೆ. ಕಳೆದುಹೋದವರ ನೋವು ಅಲ್ಲಿಗೆ ಮುಗಿಯುತ್ತದೆ ಮತ್ತುಉಳಿದುಹೋದವರ ದುಃಖ ಅಲ್ಲಿ ಮೊದಲುಗೊಳ್ಳುತ್ತದೆ.
ಅದು ಮರೆಯಲಾಗದ ದುಃಖ. ಮರೆಯಲು ಪ್ರಯತ್ನಿಸಬಾರದ ದುಃಖ. ಅದು ನಮ್ಮೊಂದಿಗೆ ಇರಬೇಕಾದ ದುಃಖ. ಅದು ಕಳೆದು ಹೋದವರ ಮತ್ತು ಉಳಿದುಬಿಟ್ಟವರ ನಡುವೆ ಇರುವ ಏಕೈಕ ಕೊಂಡಿ. ಆ ದುಃಖ ಮಾತ್ರ ಅವರು ನಮ್ಮೊಳಗೇ ಇರುವುದಕ್ಕೆ ಸಾಕ್ಷಿ. ಆ ದುಃಖ ಒಂದು ಅದ್ಭುತ ಭಾವ. ನಾವು ಕೂಡ ಒಂದು ದಿನ ಕಳೆದು ಹೋಗುವವರೆಗೂ ಅದು ಮುಗಿಯುವುದಿಲ್ಲ. ಮುಗಿಯಬಾರದು.
ಯಾಕೋ ಕಣ್ಣು ಒದ್ದೆ ಒದ್ದೆ.
Comments