top of page
Harsha

ಅಳುವ ಕಡಲೊಳು ತೇಲಿ ಬರುತಲಿದೆ..


ಬದುಕಿನ ಸಮ್ಮುಖದಲ್ಲಿ ನಮ್ಮ ಮಿತಿಗಳು, ನಮ್ಮ ಅಸಹಾಯಕತೆ, ನಮ್ಮ ಸರಹದ್ದುಗಳನ್ನು ತೋರಿಸುವ ಇದಕ್ಕಿಂತ ಶ್ರೇಷ್ಠ ಕವಿತೆ ನಾನು ಓದಿಲ್ಲ. ಕವಿ ಗೋಪಾಲ ಕೃಷ್ಣ ಅಡಿಗರಿಗೆ ಮಾತ್ರ ಹೀಗೆ ಬರೆಯಲು ಸಾಧ್ಯ.


ಅಳುವ ಕಡಲೊಳು ತೇಲಿ ಬರುತಲಿದೆ

ನಗೆಯ ಹಾಯಿ ದೋಣಿ


ಮೊದಲ ಸಾಲಿನಿಂದಲೇ ಬದುಕಿನ ವೈರುಧ್ಯಗಳ ಬಗ್ಗೆ ಹೇಳಿತ್ತಾರೆ ಅಡಿಗರು. ಎಲ್ಲ ಮುಗಿಯಿತು ಎನಿಸಿದಾಗ ಬದುಕು ಮತ್ಯಾವುದೋ ತಿರುವು ಪಡೆಯುತ್ತದೆ. ಯಾವುದೋ ಸಹಾಯ, ಯಾರದೋ ಭರವಸೆ, ಎಲ್ಲೋ ಹಾಣುವ ಹೊಸ ದಾರಿ.. ಬದುಕು ಮತ್ತೆ ಜೀವ ಪಡೆಯುತ್ತದೆ. ಅಳುವ ಕಡಲೊಳು ತೇಲಿ ಬರುತ್ತದೆ ನಗೆಯ ಹಾಯಿದೋಣಿ. ಒಮ್ಮೊಮ್ಮೆ ನಾವೇ ಬೇರೆಯವರಿಗೆ ನಗೆಯ ಹಾಯಿ ದೋಣಿಯಾಗುತ್ತೇವೆ. ಬಹಳಷ್ಟು ಸಲ ಮತ್ಯಾರೋ ನಾವಿಕ, ಇನ್ಯಾರೋ ಅಂಬಿಗ ನಮ್ಮ ಹತ್ತಿರ ಆ ನಗೆಯ ಹಾಯಿ ದೋಣಿ ತರುತ್ತಾನೆ. ಹೀಗಿರುವುದರಿಂದಲೇ ಬದುಕು ಬದುಕಲು ಯೋಗ್ಯವೆನಿಸುತ್ತದೆ.


ಮತ್ತೆ ಬರೆಯುತ್ತಾರೆ ಅಡಿಗರು:


ಆಶೆಯೆಂಬ ತಳವೊಡೆದ ದೋಣಿಯಲಿ

ದೂರತೀರಯಾನ |

ಯಾರ ಲೀಲೆಗೋ ಯಾರೋ ಏನೋ

ಗುರಿಯಿರದೆ ಬಿಟ್ಟ ಬಾಣ ||


ಯಾರ ಬದುಕು ಕೂಡ ಎಲ್ಲ ರೀತಿಯಿಂದ ಸರಿಯಿಲ್ಲ. ಯಾವುದೋ ಕಷ್ಟ, ಇನ್ಯಾವುದೋ ಚಿಂತೆ ಆದರೂ ಬದುಕು ಅಂಥದೇ ತಳವೊಡೆದ ದೋಣಿಯಲ್ಲಿ ಸಾಗುತ್ತಿದೆ, ಸಾಗಬೇಕು. ಅದೊಂದು ಸಾತ್ವಿಕ ಆಶೆ. ಅದೇ ಸರಿಯಾದ ದೋಣಿ. ನಿರಾಸೆಯ, ಜುಗುಪ್ಸೆಯ ದೋಣಿ ನಮ್ಮನ್ನು ದಡ ತಲುಪಿಸಲಾರದು; ಈ ಆಶೆಯೆಂಬ ದೋಣಿ ಕೂಡ ನಾವು ದಡ ಸೇರುವವರೆಗೂ ನಮ್ಮನ್ನು ಹೊತ್ತೊಯ್ಯಲಾರದೇನೋ. ಆದರೆ ಇದು ಮುಳುಗುವವರೆಗೂ ಭರವಸೆಯನ್ನು ಕೊಡುತ್ತದೆ. ಪ್ರತಿ ಕಷ್ಟ, ಪ್ರತಿ ದುಃಖ ನಾವೇ ಸೃಷ್ಟಿಸಿಕೊಂಡವಲ್ಲ. ಬದುಕಿನಲ್ಲ್ಲಿ ಬಂದ ಯಾರೋ ಸೃಷ್ಟಿಸಿದ್ದು. ಅವರು ಕೂಡ ಉದ್ದೇಶ ಪೂರ್ವಕವಾಗಿ ಸೃಷ್ಟಿಸಿರದೇ ಇರಬಹುದು. ಅದು ಗುರಿಯಿರದೆ ಬಿಟ್ಟ ಬಾಣ. ದಶರಥನ ಬಾಣ ಹೊರಟಿದ್ದು ಶ್ರಾವಣ ಕುಮಾರನ ಕೊಲ್ಲಲು ಅಲ್ಲ. ಆದರೆ ಶ್ರವಣನ ಸಾವಿಗೆ ತರ್ಕ ಎಲ್ಲಿ ಹುಡುಕುತ್ತೀರಿ? ಅವನ ಕುರುಡು ತಂದೆ ತಾಯಿಯರ ಒಂಟಿತನಕ್ಕೆ, ಅಸಾಯಕತೆಗೆ, ಮಗನನ್ನು ಕಳೆದುಕೊಂಡ ನೋವಿಗೆ ಕಾರಣ ಏನು ಕೊಡುತ್ತೀರಿ? ಗತಜನ್ಮದ 'ಕರ್ಮಫಲ' ಎಂದು ಕೈತೊಳೆದುಕೊಳ್ಳುತ್ತವೆ ಧರ್ಮಗಳು. ಅದರಿಂದ ಯಾವ ಪರಿಹಾರ ಕೊಟ್ಟಂತಾಯಿತು? ಬದುಕು ಧರ್ಮಕ್ಕಿಂತ ದೊಡ್ಡದು. ಕೆಲವು ಅಪ್ರಾಮಾಣಿಕ ಉತ್ತರಗಳಿಗಿಂತ, ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳಿಕೊಂಡು, ದೊರಕದ ಉತ್ತರನ್ನು ಪಡೆಯದೇ, ಮುಂದೆ ಹೊರಡುವುದು ಮೇಲು.


ಇದು ಬಾಳು ನೋಡು ಇದ ತಿಳಿದೆನೆಂದರೂ

ತಿಳಿದ ಧೀರನಿಲ್ಲ |

ಹಲವುತನದ ಮೈ ಮರೆಸುವಾಟವಿದು

ನಿಜವು ತೋರದಲ್ಲ ||


ಈ ಸಾಲುಗಳು ಬರೀ ಧರ್ಮಗುರುಗಳ ಒಣ ಉಪದೇಶವೆನಿಸುವುದಿಲ್ಲ, ಪ್ರಪಂಚವನ್ನು ಮೀರಿದ ಅಧ್ಯಾತ್ಮ ಎನಿಸುವುದಿಲ್ಲ. ಈ ಸಾಲುಗಳು ಬದುಕಿನ ಅಗಾಧತೆ ಮತ್ತು ನಮ್ಮ ಮಿತಿಗಳನ್ನು ತೋರುತ್ತದೆ. ಬದುಕು ತನ್ನ ರಹಸ್ಯಗಳನ್ನು, ನಿಗೂಢತೆಯನ್ನು ತೋರದೆ ಇರುವುದರಿಂದಲೇ ನಮಗೆ ಕುತೂಹಲಕಾರಿಯೆನಿಸುತ್ತದೆ. 'ನಾಳೆ ಏನಾದರೂ ಆಗಬಹುದು' ಎನ್ನುವ ಅನಿಶ್ಚಿತತೆಯೇ ಬರುವ ಕಷ್ಟಗಳನ್ನು ಎದುರಿಸುವ ಧೈರ್ಯ ಕೊಡುತ್ತದೆ; ಮತ್ತು ಈಗಿರುವ ಸಂತೋಷವನ್ನು ಕಳೆದುಕೊಳ್ಳಬಾರದೆಂಬ ಎಚ್ಚರಿಕೆಯನ್ನೂ. ಬದುಕಿನ ರಹಸ್ಯವನ್ನು ಭೇದಿಸಿದ ಶೂರ ಯಾರೂ ಇಲ್ಲ. ನಿನ್ನ ಬದುಕು ನೀನೆ ಅನ್ವೇಷಿಸಿಕೊಳ್ಳಬೇಕು. ಬದುಕು ಹಲುವುತನದ್ದು. ಅದು ನಿನ್ನದೇ ಬೆರಳಚ್ಚು, ಬೇರೆಯವರ ಬೆರಳ ರೇಖೆ ನಿಮ್ಮ ಗುರುತು ಆಗುವುದಿಲ್ಲ.


ಸುಮ್ಮನೆ ಬದುಕಿನ ಅಗಾಧತೆಯನ್ನು ಸವಿಯುತ್ತ, ಅದು ನಮಗೆ ತೋರಿದಷ್ಟು ಪಾಲನ್ನು ಒಪ್ಪಿಕೊಳ್ಳುತ್ತಾ, ಋಣಿಯಾಗಿರುತ್ತಾ ಇರುವುದರಲ್ಲೇ ಬಹುಶಃ ಖುಷಿಯಿದೆ.

Comments


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
bottom of page