ಅಪ್ಪ.. ನೀನು ಹಾಗೇ ಬಡವನಿರಬೇಕಿತ್ತು...
ಪ್ರೀತಿಯ ಅಪ್ಪ,
ನನಗೆ ಮಸುಕು-ಮಸುಕಾಗಿ ನೆನಪಿದೆ; ನನಗಾಗ ಮೂರು ವರ್ಷವಿರಬಹುದು. ನೀನೊಂದು ಪುಟ್ಟ ಪಟ್ಟಣದ ಫ್ಯಾಕ್ಟರಿ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದೆ. ನಮ್ಮ ಮನೆ ಹಳ್ಳಿಯ ಹೊಲಗಳನ್ನು ಮತ್ತು ಪಟ್ಟಣದ ಕಟ್ಟಡಗಳನ್ನು ಜೋಡಿಸುವ ಊರ ಹೊರಗಿನ ಜಾಗೆಯಲ್ಲಿತ್ತು. ನಮ್ಮ ಒಂದು ಕೋಣೆಯ ಮನೆಯ ಹತ್ತಿರವೇ ತಾಯಿ ನದಿಯಿಂದ ಮುನಿಸಿಕೊಂಡು ಬಂದಂತೆ ಕಾಣುತ್ತಿದ್ದ ಒಂದು ಪುಟ್ಟ ಝರಿ ಹರಿಯುತ್ತಿತ್ತು. ಅಲ್ಲಿಗೆ ಅಮ್ಮ ನನ್ನ ಕರೆದುಕೊಂಡು ಹೋಗಿ ಪಾತ್ರೆ ತೊಳೆಯುತ್ತಾ, ಬಟ್ಟೆ ಒಗೆಯುತ್ತ ಅದೂ-ಇದೂ ಮಾತಾಡುತ್ತಿದ್ದಳು. ಇನ್ನೂ ಅನತಿ ದೂರ ಹೋದರೆ ಅಲ್ಲಿ ಇನ್ನೊಂದು ತೊರೆ. ಭಾನುವಾರ ಬಂತೆಂದರೆ ಸಾಕು ನಿನ್ನ ಫ್ಯಾಕ್ಟರಿಗೆ ರಜೆ ಇದ್ದುದರಿಂದ ನೀನು ನನ್ನನ್ನು ನಿನ್ನ ಭುಜದ ವಿಮಾನದ ಮೇಲೆ ಕೂರಿಸಿಕೊಂಡು ಅಲ್ಲಿಗೆ ಹೋಗುತ್ತಿದ್ದೆ. ಅಲ್ಲೇ ಈಜು. ಅಲ್ಲೇ ಸ್ನಾನ. ಅಲ್ಲೇ ಆಟ - ಊಟ - ಹಾಡು - ನಗು. ವಾರದ ಉಳಿದ ದಿನಗಳಲ್ಲಿ ನೀನು ಕೆಲಸದಿಂದ ಮರಳಿ ಬರುವುದನ್ನೇ ನಾನು ಕಾಯುತ್ತಿದ್ದೆ; ನೀನು ಪ್ರತಿದಿನವೂ ಏನೋ ಒಂದು ಪುಟ್ಟ ಅಚ್ಚರಿ ತಂದಿರುತ್ತಿದ್ದೆ: ಬಣ್ಣ ಬಣ್ಣದ ಬಲೂನು, ಸಕ್ಕರೆಯ ಹತ್ತಿಗೆ ಗುಲಾಬಿಯ ಸ್ನಾನ ಮಾಡಿಸಿದ ಬೊಂಬಾಯ್ ಮಿಠಾಯಿ, ಹೆಬ್ಬರಳಿನ ಗಾತ್ರದ ಪ್ಲಾಸ್ಟಿಕ್ ಗೊಂಬೆ, ನೇಣು ಹಗ್ಗದಂತಿರುವ ತಂತಿಯನ್ನು ಸೋಪಿನ ನೀರಿನಲ್ಲಿ ಅದ್ದಿ ಊದಿದರೆ ಹೊರಡುವ ನೂರು ಗುಳ್ಳೆಗಳು - ಪ್ರತಿ ಗುಳ್ಳೆಯ ಕನ್ನಡಿಯಲ್ಲಿ ನನ್ನ ನಗು ಮತ್ತು ನಿನ್ನ ಸಂತೋಷ.. ರಾತ್ರಿ ಕಂದೀಲಿನ ಹಳದಿ ಬೆಳಕಿನಲ್ಲಿ ನಿನ್ನ ತೋಳಿನ ದಿಂಬಿನ ಮೇಲೆ ನಾನು ತಲೆಯಿಟ್ಟರೆ ನೀನು ಹೇಳಿತ್ತಿದ್ದ ಕಥೆಗಳು.. ಪ್ರತಿ ಕಥೆಯಲ್ಲಿ ಇರುತ್ತಿದ್ದ ರಾಜಕುಮಾರಿಯರು.. 'ಪ್ರತಿ ರಾಜಕುಮಾರಿ ನಾನೇ' ಎಂದುಕೊಳ್ಳುತ್ತಿದ್ದ ನಾನು, ಹಾಗೇ ಊಹಿಸಿಕೊಳ್ಳುತ್ತಿದ್ದ ನೀನು..
ಅಪ್ಪ.. ನೀನು ಹಾಗೇ ಬಡವನಿರಬೇಕಿತ್ತು..
ನನಗೆ ಸ್ಪಷ್ಟವಾಗಿ ನೆನಪಿದೆ; ನನಗಾಗ ಐದು ವರ್ಷ. ನಾವು ಊರ ಹೊರಗಿನ ಮನೆಯಿಂದ ಪಟ್ಟಣಕ್ಕೆ ಹೋದೆವು. ಬರೀ ನನ್ನ ಗೆಳೆಯರ ಮನೆಗಳಲ್ಲಿ ಮಾತ್ರ ನಾನು ಅಡುಗೆ ಮಾಡಲು ಒಂದು ಕೋಣೆ, ಊಟ ಮಾಡಲು ಇನ್ನೊಂದು, ಎಲ್ಲರು ಕೂತು ಹರಟಲು ಮತ್ತೊಂದು, ಮಲಗಲು ಮಗದೊಂದು ಕೋಣೆಗಳಿರುವುದನ್ನು ನೋಡಿದ್ದೆ. ಈಗ ನಮ್ಮದು ಕೂಡ ಮೂರು ಕೋಣೆಯ ದೊಡ್ಡ ಮನೆ ಇತ್ತು. ಮನೆಯೆಲ್ಲ ಓಡಾಡಿಬಿಟ್ಟೆ. ಮನೆಯ ಅಂಗಳದಲ್ಲೊಂದು ನೀಲಿ ಬೈಕು ನಿಂತಿತ್ತು. ನೀನು ನನ್ನನ್ನು ತೋಳಲ್ಲಿ ಎತ್ತಿಕೊಂಡು ಹೋಗಿ ಅದರ ಮೇಲೆ ಕೂರಿಸಿ 'ರಾಜಕುಮಾರಿ.. ಸವಾರಿಗೆ ಹೋಗೋಣವೆ..?!' ಅಂತ ಕೇಳಿ ಪಟ್ಟಣದ ತುಂಬೆಲ್ಲ ನನ್ನನ್ನು ಸುತ್ತಿಸಿದ್ದೆ. ಮಾರನೆಯ ದಿನ ನನಗೆ ಎಚ್ಚರವಾಗುವಷ್ಟರಲ್ಲಿ ನೀನು ಮನೆಯಲ್ಲಿರಲಿಲ್ಲ. ಅಮ್ಮ ಹೇಳಿದಳು 'ಅಪ್ಪ ಹೊಸ ಆಫೀಸಿಗೆ ಹೋಗಿದ್ದಾರೆ.' ಅಂದೇ ನನಗೆ ನಮ್ಮ ಹೊಸ ಮನೆಯ ಪಕ್ಕದಲ್ಲಿ ಹೊಸ ಗೆಳತಿ ಸಿಕ್ಕಿದ್ದಳು. ಅವಳ ಬಗ್ಗೆ, ನಾವಿಬ್ಬರು ಆಡಿದ ಹತ್ತಾರು ಆಟಗಳ ಬಗ್ಗೆ ನಿನಗೆ ಹೇಳಲು ಸಂಜೆ ಕಾತುರದಿಂದ ಕಾಯುತ್ತಿದ್ದೆ. ಹಾಳಾದ ಸಂಜೆ ರಾತ್ರಿಯಾಯಿತು. ಕತ್ತಲಿಗೂ ನಿದ್ರೆ ಬಂದಿತ್ತೇನೋ, ನನ್ನ ರೆಪ್ಪೆಯ ಮೇಲೆ ಭಾರ ಹಾಕಿ ಮಲಗಿತ್ತು. ನನ್ನ ಕಣ್ಣು ಮುಚ್ಚುತ್ತಿದ್ದವು. ಹೊರಗೆ ಜೀಪಿನ ಶಬ್ದ ಕೇಳಿ ಅದು ನೀನೆ ಇರಬೇಕೆಂದು ಊಹಿಸಿದಳು ಅಮ್ಮ. ನೀನು ಒಳಬಂದು ನನ್ನ ಹಣೆಯ ಮೇಲೆ ಮುತ್ತಿಟ್ಟಿದ್ದಷ್ಟೇ ನೆನಪು. ನನನ್ನು ನಿದ್ರೆ ಆವರಿಸಿತ್ತು ಮತ್ತು ನಿನ್ನನ್ನು ಸುಸ್ತು. ಕಥೆಯಲ್ಲಿನ ರಾಜಕುಮಾರಿಯರೂ ಮಲಗಿದ್ದರೇನೋ! ಮರುದಿನ ನಾನು ಏಳುವಾಗ ನೀನು ಹೊರಡುತ್ತಿದ್ದೆ. ಅಮ್ಮ ತಿಳಿಹೇಳಿದಳು 'ಅಪ್ಪ ಈಗ ದೊಡ್ಡ ಆಫೀಸಿಗೆ ಹೋಗುತ್ತಾರೆ. ದೊಡ್ಡ ಕೆಲಸ. ನಿನಗೆ ದೊಡ್ಡ ದೊಡ್ಡ ಗೊಂಬೆ ಕೊಡಿಸಲು ಹಣ ಬೇಕಲ್ವಾ? ಆಫೀಸಿನ ಜೀಪಿನಲ್ಲಿ ಎಲ್ಲರನ್ನು ಅವರವರ ಮನೆಗೆ ಬಿಟ್ಟು ನಿಮ್ಮ ಅಪ್ಪ ಮನೆಗೆ ತಲುಪೋದಕ್ಕೆ ತಡ ಆಗುತ್ತೆ'. ಹಾಗೆ ವಾರವೆಲ್ಲ ಇದ್ದರೂ ಭಾನುವಾರಗಳು ಅದ್ಭುತವಾಗಿದ್ದವು. ನಿನ್ನ ಗಾಡಿಯ ಮೇಲೆ ಊರೆಲ್ಲ ಸುತ್ತಾಡಿಸುತ್ತಿದ್ದೆ ನೀನು. ಸಿನಿಮಾ, ಹೋಟೆಲ್, ನೀರಿನ ಪಾರ್ಕು, ಐಸ್ ಕ್ರೀಮು - ವಾರದ ಆರು ದಿನ ನಿತ್ತರಿಸಿಕೊಂಡ ಮೋಡ ಭಾನುವಾರದಂದು ಹರ್ಷ ವರ್ಷ ಸುರಿಸುತ್ತಿತ್ತು. ನನಗೆ ಬಹಳ ಸಲ ಅನಿಸುತ್ತಿತ್ತು: ವಾರದ ಎಲ್ಲ ದಿನಗಳೂ ಭಾನುವಾರ ಇರಬೇಕಿತ್ತು.
ಅಪ್ಪ.. ನೀನು ಹಾಗೇ ಬಡವನಿರಬೇಕಿತ್ತು..
ಅದೊಂದು ದಿನ ನೀನು ಸಪ್ಪಳ ಮಾಡದಂತೆ ಹಿಂದೆಯಿಂದ ಬಂದು ನನ್ನ ಕಣ್ಮುಚ್ಚಿದ್ದೆ. ನಿನ್ನ ಹಸ್ತದ ಪ್ರತಿ ರೇಖೆ, ನಿನ್ನ ಬೆರಳಿನ ಪ್ರತಿ ಶಂಖ, ಪ್ರತಿ ಚಕ್ರ ತಿಳಿದಿರುವಳು ನಾನು. ಅದು ನೀನೆಂದು ತಿಳಿಯಲು ಕ್ಷಣ ಕೂಡ ಬೇಕಾಗಲಿಲ್ಲ. ನೀನು ಹಾಗೇ ನನ್ನ ಕಣ್ಮುಚ್ಚಿ ಮೆಲ್ಲಗೆ ಅಂಗಳಕ್ಕೆ ನಡೆಸಿಕೊಂಡು ಹೋದೆ. ಅಲ್ಲಿ ಕೆಂಪು ಬಣ್ಣದ ಕಾರೊಂದು ನಿಂತಿತ್ತು! ನಮ್ಮ ಕಾರು! ನನಗೆ ಮಾತೇ ಹೊರಡಲಿಲ್ಲ. ನಮ್ಮ ಕಾರಿನಲ್ಲಿ ಓಡಾಡಬಹುದೆಂಬ ಸಂತೋಷಕ್ಕಿಂತ ಇನ್ನು ಮೇಲೆ ನೀನು ಮನೆಗೆ ಬೇಗ ಬರುವೆ ಎಂಬ ಖುಷಿಯೇ ನನ್ನ ಆವರಿಸಿತ್ತು. ಆ ಖುಷಿ ಕೆಲ ದಿನ ನಿಜವೂ ಆಯಿತು. ಆ ಸಂತೋಷ ಬಹಳ ದಿನ ಉಳಿಯಲಿಲ್ಲ. ಜೀವನ ತೃಪ್ತಿಯಿಂದ ಆರಾಮದೆಡೆಗೆ, ಆರಾಮದಿಂದ ಐಷಾರಾಮದ ಕಡೆ ಸಾಗುತ್ತಲೇ ಹೋಯಿತು. ನಾವು ನಮ್ಮದೇ ಹೊಸ ಸ್ವಂತ ಮನೆಗೆ ಹೋದೆವು. ಮನೆಯಲ್ಲ ಅದು ಬಂಗಲೆ. ನನಗಂತಲೇ ಮೆತ್ತನೆ ಹಾಸಿಗೆ - ದಿಂಬು ಇದ್ದ ಬೆಡ್ ರೂಮು, ಮನೆಯ ಹಿತ್ತಲಲ್ಲಿ ಸ್ವಿಮ್ಮಿಂಗ್ ಪೂಲ್, ಒಂದು ಕೋಣೆಯಲ್ಲಿ ಸಿನಿಮಾ ನೋಡಲೆಂದೇ ದೊಡ್ಡ ಪರದೆ. ಆ ಮನೆಯಲ್ಲಿ ಎಲ್ಲ ಇದ್ದವು, ನಿನ್ನ ಬಿಟ್ಟು. ನೀನು ಹೊಸ ಉದ್ಯೋಗಕ್ಕೆಂದು ದೂರದ ನಗರಕ್ಕೆ ಹೋಗಿದ್ದೆ. ನನ್ನ ಸಂಜೆಗಳು ಎಲ್ಲ ಕುತೂಹಲ ಕಳೆದುಕೊಂಡವು ಮತ್ತು ರಾತ್ರಿಗಳು ನನ್ನ ಊಹೆಗಳನ್ನು.
ಅಪ್ಪ.. ನೀನು ಹಾಗೇ ಬಡವನಿರಬೇಕಿತ್ತು, ಆಗ ಇಷ್ಟು ದೂರ ಹಾರಿ ಹೋಗುತ್ತಿರಲಿಲ್ಲ. ನಾನು ಅಮಾಯಕಿಯಾಯೇ ಉಳಿಯಬೇಕಿತ್ತು, ಆಗ ನಾನು ಇಷ್ಟೆಲ್ಲಾ ಯೋಚಿಸುತ್ತಿರಲಿಲ್ಲ.
ಯಾವ ಕಾರು ಕೂಡ ನಿನ್ನ ಭುಜದ ಮೇಲಿನ ಸವಾರಿಯ ಸಂತೋಷ ಕೊಡಲಿಲ್ಲ. ಯಾವ ದಿಂಬು ಕೂಡ ನನ್ನ ಅಪ್ಪನ ತೋಳಿನಷ್ಟು ಮೃದುವಾಗಿ ನನ್ನ ನಿದ್ರೆಗೆ ಜಾರಿಸಲಿಲ್ಲ. ನಿನ್ನ ಕಥೆಯಲ್ಲಿನ ರಾಜಕುಮಾರಿಯರು ಏಕೋ ಮನೆಯ ಸಿನೆಮಾ ಪರದೆ ಮೇಲೆ ಕಾಣಲೇ ಇಲ್ಲ. ಈ ಬಂಗಲೆಯ ಹಿತ್ತಲಿನ ಸ್ವಿಮ್ಮಿಂಗ್ ಪೂಲ್ ನಮ್ಮ ಒಂದು ಕೋಣೆಯ ಮನೆಯ ಹತ್ತಿರದ ತೊರೆಯಂತೆ ಹರಿಯುವುದೇ ಇಲ್ಲ.
ದುರಾದೃಷ್ಟವಶಾತ್ ನಾನೀಗ ಬೆಳೆದಿದ್ದೇನೆ. ನನಗೆ ಗೊತ್ತು, ನೀನು ಮತ್ತೆ ನಿನ್ನ ಭುಜದ ಮೇಲೆ ಸವಾರಿ ಮಾಡಿಸಲಾರೆ. ಪ್ರತಿ ಸಂಜೆ ಒಂದು ಅಚ್ಚರಿ ಕೊಡಲಾರೆ. ನನಗೆ ಖುಷಿಯಿದೆ: ಪ್ರೀತಿಸುವ ಅಪ್ಪ ಏನೇನು ಕೊಡಬಲ್ಲನೋ ನೀನದೆಲ್ಲ ಕೊಟ್ಟಿರುವೆ. ಆದರೆ ಅಪ್ಪ.. ಬಹಳಷ್ಟು ಮನುಷ್ಯರಂತೆ ನೀನು ಕೂಡ ಜೀವನದ ತಪ್ಪು ಕರೆಗಳಿಗೆ ಕಿವಿಗೊಟ್ಟು ಅದರ ಕಡೆಗೆ ನಡೆದೆ. ನಿರ್ದಯಿ ಕಾಲ ತನ್ನ ಕೆಲಸ ಮುಗಿಸಿಬಿಟ್ಟಿತು. ನೀನು ದೂರಾಗುತ್ತಲೇ ಹೋದೆ. ನಾನು ಬೆಳೆಯುತ್ತಾ ಬೆಳೆಯುತ್ತಾ ಮತ್ತು ನೀನು ಶ್ರೀಮಂತನಾಗುತ್ತಾ ಆಗುತ್ತಾ, ನೀನು ನನಗೆ ಕೊಟ್ಟಿದ್ದೆಲ್ಲಾ ನಿನಗೆ ಏನು ಕೊಡಬೇಕೆನಿಸಿತ್ತೋ ಅದನ್ನು, ನಾನು ಏನು ಬಯಸಿದ್ದೇನೋ ಅದನ್ನಲ್ಲ.
ಅಪ್ಪ.. ನೀನು ಹಾಗೇ ಬಡವನಿರಬೇಕಿತ್ತು...
Comments