ಯಾಕೋ ಹೀಗೇ ಇಂದಿರಾ ಮೇಡಂ ನೆನಪಾಗಿ..
ಬಳ್ಳಾರಿ ಎಂಬುದು ಎಂಭತ್ತು ಚದರ ಕಿಲೋಮೀಟರಿನಷ್ಟು ದೊಡ್ಡ ಕಾದ ಬಾಣಲೆಯಂತ ಊರು..
ಮನೆಗೂ ಶಾಲೆಗೂ ಮೂರು ಕಿಲೋಮೀಟರು ದೂರ. ಮರಾಠ ಬೀದಿಯೆನ್ನುವ ಗಲ್ಲಿಗಳಲ್ಲಿ ನುಸುಳಿ, ವಡ್ಡರ ಬಂಡೆಯೆಂಬ ಬೃಹತ್ ಮೋರಿ ಪಕ್ಕ ಮೂಗು ಮುಚ್ಚಿಕೊಂಡು ಹಾದು, ಕೆ ಸಿ ರೋಡು ದಾಟಿ, ಮೀನಾಕ್ಷಿ ಲಾಡ್ಜಿನ ಸೊಂಟ ಗಿಲ್ಲಿ, ದಿನಕ್ಕೆ ಎರಡೇ ಬಾರಿ ಮಾತ್ರ ಸರಿಯಾದ ಸಮಯ ತೋರುವ ರಾಯಲ್ ಸರ್ಕಲ್ಲಿನ ನಿಂತ ಟವರ್ ಕ್ಲಾಕ್ ದಾಟಿ ಅಲ್ಲೇ ಅಂಡರ್ ಬ್ರಿಡ್ಜು ಇಳಿದು ಹತ್ತಿಬಿಟ್ಟರೆ ದುರ್ಗಮ್ಮ ಗುಡಿ ಕಾಣುತ್ತಿತ್ತು. ಅಲ್ಲಿಗೆ ತಲುಪಿದರೆ ನಮ್ಮ ಶಾಲೆ ತಲುಪಿದಂತೆಯೇ.
ಅವತ್ತು ಹಿಂದಿ class testಇತ್ತು; ಒಂದು ಭಾಷಣ ಸ್ಪರ್ಧೆ ಕೂಡ. ಆಗಿನಿಂದಲೇ ನನಗೆ ಭಾಷಣಗಳ ಹುಚ್ಚಿತ್ತು; ಮಾಡುವುದಕ್ಕಿಂತ ಹೆಚ್ಚಾಗಿ ಕೇಳುವುದಕ್ಕೆ. ನಾನು ಭಾಷಣಕ್ಕೆ ಹೆಸರು ಕೊಡದೆ ಹಿಂದಿ test ಬರೆಯುತ್ತಾ ಕುಳಿತಿದ್ದೆ.
'ಇವತ್ತು ಹರ್ಷ ಬಂದಿಲ್ವಾ?' ಅಂತ ನಮ್ಮ ಹಿಂದಿ ಟೀಚರನ್ನುಕೇಳಿದ್ದು ನನಗೆ ಕೇಳಿಸಿತು. ಕೇಳಿದ್ದು ಕನ್ನಡ ಟೀಚರ್ ಇಂದಿರಾ ಮೇಡಂ ಅಂತ ಗೊತ್ತಿತ್ತು. ಸುಮ್ಮನೆ ತಲೆ ತಗ್ಗಿಸಿ ಬರೆಯುತ್ತಿದ್ದೆ, ನನಗೆ ಕೇಳಿಲ್ಲವೇನೋ ಎಂಬಂತೆ.
'ಬಂದಿದಾನೆ. ಯಾಕೆ?' - ಅಂತ ಹಿಂದಿ ಟೀಚರ್ ಕೇಳಿದರು.
'ಇವತ್ತು ಭಾಷಣ ಸ್ಪರ್ಧೆ ಇದೆ. ಅವನು ಹೆಸರು ಕೂಡ ಕೊಟ್ಟಿಲ್ಲ. ಅದಕ್ಕೆ... '
ಹಿಂದಿ ಟೀಚರ್ ನನ್ನ ಹೆಸರು ಕರೆದರು.. ಅನಿವಾರ್ಯವಾಗಿ ಎದ್ದು ನಿಂತೆ.
'ಕ್ಯಾ ಆಪ್ ಜಾನಾ ಚಾಹತೇ ಹೊ?' ಅಂತ ಕೇಳಿದರು. ನಾನು ಸುಮ್ಮನೆ ನಿಂತಿದ್ದೆ. ಹಿಂದಿಯಲ್ಲಿ ಹೇಗೆ ಉತ್ತರ ಕೊಡಬೇಕೋ ಎನ್ನುವುದು ಒಂದು ಸಮಸ್ಯೆಯಾದರೆ, ಭಾಷಣದ ವಿಷಯದ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ.
'ಅವನನ್ನೇನು ಕೇಳೋದು.. ಬಾರೋ ಹರ್ಷ..' ಅಂದರು ಇಂದಿರಾ ಮೇಡಂ.
'ಮೇಡಂ.. ಅದೂ.. ಹಿಂದಿ ಪರೀಕ್ಷೆ ಇದೆ.' - ಅಂದೆ.
'ಏನ್ ದೊಡ್ದು IAS ಪರೀಕ್ಷೆ ಅಲ್ಲ ಬಿಡು. ಆಮೇಲೆ ಬಂದು ಬರಿ.' ಅಂದರು.
'ಮೇಡಂ.. ಅದೂ.. ನಾನು ಭಾಷಣಕ್ಕೆ prepare ಆಗಿಲ್ಲ.' ಅಂದೆ.
'ಯಾಕೆ ಬೇಕು preparation ?' ಅಂದರು. ಸುಮ್ಮನೆ ತಲೆತಗ್ಗಿಸಿ ಅವರ ಹಿಂದೆ ನಡೆದೆ.
ಭಾಷಣ ಮಾಡಲು ೧೦-೧೫ ಹುಡುಗರು ಸಿದ್ಧರಾಗಿದ್ದರು. ನಾನು ಸುಮ್ಮನೇ ಹಿಂದೆ ಹೋಗಿ ನಿಂತೆ.
'ನಿನ್ನ ಹೆಸರು ಕೊನೆಗೆ ಕರೀತೇನೆ. ಬೇರೆ ಹುಡುಗರ ಮಾತು ಕೇಳಬೇಡ. ಅವರೆಲ್ಲರು ಮಾತಾನಾಡೋವರೆಗೆ ನೀನು ಏನು ಮಾತಾಡಬೇಕು ಅಂತ ಯೋಚಿಸು. ಏನು ತೋಚುತ್ತೋ ಅದು ಮಾತಾಡು.' ಅಂತ ಹೇಳಿ ಮುಂದೆ ಹೋದರು.
'ದೇಶದ ಪ್ರಚಲಿತ ಸಮಸ್ಯೆಗಳ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ.' - ಇಷ್ಟುದ್ದದ ವಿಷಯ.
ಏನು ಯೋಚನೆ ಮಾಡಲಿ? ಹೇಗೆ ಬೇರೆಯವರ ಮಾತು ಕೇಳಿಸಿಕೊಳ್ಳದೆ ನಿಲ್ಲಲಿ? ದೇಶದ ಪ್ರಚಲಿತ ಸಮಸ್ಯೆಗಳು? ಅವೇ ಪ್ರಬಂಧ ಪುಸ್ತಕದಲ್ಲಿ ಬರೆದ ಜನಸಂಖ್ಯೆ, ಬಡತನ, ನಿರುದ್ಯೋಗ - ಎಲ್ಲರು ಅದನ್ನೇ ಮಾತಾಡುತ್ತಿದ್ದರು. ಇಷ್ಟಕ್ಕೂ ಅವನ್ನೆಲ್ಲ ಪರಿಹರಿಸಲು ನಾವು ವಿದ್ಯಾರ್ಥಿಗಳು ಏನು ಮಾಡಲು ಸಾಧ್ಯ? ಇದೆಲ್ಲ ಆಗದ ಮಾತು ಅನಿಸಿತು. ಇಂದಿರಾ ಮೇಡಂ ನನ್ನ ಕಡೆ ನೋಡಿದರೆ ಸನ್ನೆ ಮಾಡಿ ಅಲ್ಲಿಂದ ಹೋಗಿಬಿಡಬೇಕೆನಿಸಿತು. ಅವರು ನೋಡಲಿಲ್ಲ.
ಬೆಳಗ್ಗೆ ನಡೆದು ಬಂದ ದಾರಿ ಕಣ್ಮುಂದೆ ಬಂತು. ವಡ್ಡರಬಂಡೆಯ ಸುತ್ತ ಮುತ್ತ ಇರುವ ಬೇಜವಾಬ್ದಾರಿ ಜನ, ಕೆ ಸಿ ರೋಡಿನ ಆಸುಪಾಸು ಇದ್ದ ಗ್ಯಾರೇಜ್ ಗಳಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಹುಡುಗರು, ದುರ್ಗಮ್ಮ ಗುಡಿ ಬಳಿ ಇದ್ದ ಸಾಲು ಸಾಲು ಜ್ಯೋತಿಷ್ಯ, ಗಿಣಿಶಾಸ್ತ್ರ, ಹಸ್ತ ಸಾಮುದ್ರಿಕೆ ಹೇಳುವ ಜನ - ನನ್ನ ದೇಶ ನನಗೆ ಅರ್ಥವಾಯಿತು.
ಏನು ಮಾತಾಡಿದೆನೋ ಇವತ್ತಿಗೆ ನನಗೆ ನೆನಪಿಲ್ಲ. ಮಾತನಾಡಿದ್ದು ನಾನಲ್ಲ. ಮಾತಾಡಿಸಿದ್ದು ಇಂದಿರಾ ಮೇಡಂಗೆ ನನ್ನ ಮೇಲೆ ನಂಗಿಂತ ಹೆಚ್ಚಿದ್ದ ನಂಬಿಕೆ.
ಮಾತಾಡಿ ಬಂದಮೇಲೆ 'ಇಷ್ಟು ಮಾತಾಡೋದು ಗೊತ್ತಿದ್ದೂ ಏನೂ ಮಾತಾಡಲ್ಲ ಅಂತಿದ್ದೆ ನೋಡು.' ಅಂದರು ಇಂದಿರಾ ಮೇಡಂ. ರಾತ್ರಿ ಊಟ ಮಾಡದೆ ಬೇಗ ಮಲಗಿದಾಗ ಎಬ್ಬಿಸಿ ಊಟ ಮಾಡಿಸಿ 'ಇಷ್ಟು ಹಸಿವು ಇಟ್ಕೊಂಡು ಹಾಗೇ ಮಲಗಿದ್ದೆ ನೋಡು..' ಅಂತ ಅಮ್ಮ ಪ್ರೀತಿಯಿಂದ ಬೈದಂತೆ ಅನಿಸಿತು.
ಅಮ್ಮನಿಗೆ ಮತ್ತು ಅಮ್ಮನಂತಹ ಗುರುವಿಗೆ ಮಾತ್ರ ನಾವು ನಮಗಿಂತ ಚೆನ್ನಾಗಿ ಅರ್ಥವಾಗಿರುತ್ತೇವೇನೋ!
****
ಇಂದಿರಾ ಮೇಡಂ ನಮ್ಮ ಕನ್ನಡ ಪರೀಕ್ಷೆ ಉತ್ತರ ಪತ್ರಿಕೆಗಳ ಚೀಲ ತರಗತಿಯಲ್ಲಿ ತರುತ್ತಿದ್ದದಂತೆ ಎಲ್ಲ ಹುಡುಗರು ಕೂಗಲು ಶುರುಮಾಡಿದರು. ಅವುಗಳ ಮೇಲೆ ಹಾಕಿದ ನಿಸ್ಸಾರ ಅಂಕಗಳ ಮೇಲೆ ಯಾಕಿಷ್ಟು ಕುತೂಹಲವೋ ಗೊತ್ತಿಲ್ಲ. ನನಗೆ ಅವತ್ತಿಗೂ ಇವತ್ತಿಗೂ ಯಾಕೋ ಏನೋ ಮಾರ್ಕುಗಳ ಮೇಲೆ ದಿವ್ಯ ನಿರ್ಲಕ್ಷೆ. ಪ್ರತಿಯೊಬ್ಬರ ಮಾರ್ಕುಗಳನ್ನು ಹೇಳುತ್ತಾ ಅವರವರ ಪೇಪರು ಕೊಟ್ಟರು. ನನಗೆ ಎಷ್ಟು ಮಾರ್ಕುಗಳು ಬಂದಿದ್ದವೆಂದು ನೆನಪಿಲ್ಲ. ಆದರೆ ಮೇಡಂ ಮಾತ್ರ 'ಹರ್ಷನಿಗೆ ಎಲ್ಲರಿಗಿಂತ ಹೆಚ್ಚು ಅಂಕ' ಹೇಳಿದರು. ಎರಡನೆಯ ಅತಿ ಹೆಚ್ಚು ಅಂಕ ಬಂದದ್ದು ನಾಗರಾಜನಿಗೆ. ಒಂದೇ ಅಂಕ ಕಡಿಮೆ. ಪಕ್ಕದ ಬೆಂಚಿನವನು. ಬಹಳ ನಿರಾಶನಾಗಿದ್ದ. ಸಿಟ್ಟು ಮಾಡಿಕೊಂಡಿದ್ದ.
"ಎಲ್ಲರು ನಿಮ್ಮ ನಿಮ್ಮ ಉತ್ತರ ಪತ್ರಿಕೆ ನೋಡ್ಕೊಳಿ. ಎಲ್ಲ ಉತ್ತರ, ಅಂಕಗಳು ಸರಿಯಾಗಿ ಇವೆಯಾ? ಇಲ್ದಿದ್ರೆ ಹೇಳಿ. marks list ನಲ್ಲಿ ಸರಿಯಾಗಿ ಎಂಟ್ರಿ ಮಾಡ್ಬೇಕು" - ಅಂದರು ಇಂದಿರಾ ಮೇಡಂ.
ನಾನು ಲೆಕ್ಕ ಹಾಕಿದೆ. ನನಗೆ ಬಂದ ಅಂಕಗಳಿಗಿಂತ ಎರಡೂವರೆ ಮಾರ್ಕು ಹೆಚ್ಚು ಹಾಕಲಾಗಿತ್ತು; ಬಹುಶ ಎಲ್ಲ ಕೂಡುವಾಗ ತಪ್ಪಾಗಿರಬೇಕು. ಪಕ್ಕದಲ್ಲಿ ಕುಳಿತಿದ್ದ ವಿಜಯನಿಗೆ ಹೇಳಿದೆ. ಅವನು ಸುಮ್ಮನಿರುವಂತೆ ಸೂಚಿಸಿದ. ನನಗೆ ಕಡಿಮೆ ಅಂಕ ಪಡೆದುಕೊಳ್ಳುವುದಕ್ಕೆ ಬೇಜಾರಿಲ್ಲ ಆದರೆ ಇಂದಿರಾ ಮೇಡಂ ಅಂಕಗಳನ್ನು ತಪ್ಪಾಗಿ ಕೂಡಿದ್ದಾರೆ ಅಂತ ಹೇಳುವುದು ಹೇಗೆ? ಸುಮ್ಮನೆ ಕುಳಿತೆ. ಯಾಕೋ ತಳಮಳ. ನನ್ನದನ್ನು ಬೇರೆಯವರಿಗೆ ಕೊಟ್ಟಷ್ಟು ಸುಲಭವಲ್ಲ ನನ್ನದಲ್ಲದನ್ನು ನಾನು ಪಡೆದುಕೊಳ್ಳುವುದು.
"ಸರಿ ಹಾಗಾದರೆ, ಎಲ್ಲರ ಅಂಕಗಳು ಸರಿಯಾಗಿವೆ ಅನ್ಸುತ್ತೆ." ಎಂದು ಹೇಳಿ ಇಂದಿರಾ ಮೇಡಂ ಹೊರಗೆ ಹೋಗುತ್ತಿದ್ದರು. ನನಗೆ ಒಪ್ಪಿಕೊಳ್ಳಲಾಗಲಿಲ್ಲ. ಅವರು ತರಗತಿ ಹೊಸ್ತಿಲ ಬಳಿ ಹೋಗುವಷ್ಟರಲ್ಲಿ ನಾನು ಹೋಗಿ ಹೇಳಿದೆ:
'ಮೇಡಂ total ಜಾಸ್ತಿ ಇದೆ. ನನಗೆ ಬಂದಿರುವುದಕ್ಕಿಂತ ಎರಡೂವರೆ ಅಂತ ಹೆಚ್ಚಾಗಿ ಹಾಕಿದ್ದೀರಿ." ಅಂದೆ.
ಮತ್ತೆ ಕ್ಲಾಸಿನ ಒಳಕ್ಕೆ ಬಂದರು. ನಡೆದುದನ್ನು ಎಲ್ಲ ಹುಡುಗರಿಗೆ ಹೇಳಿ, "ಹರ್ಷ, ನಾನು ಬರೀ ಒಂದೂವರೆ ಮಾರ್ಕು ಕಡಿಮೆ ಮಾಡುತ್ತೇನೆ. ಉಳಿದ ಒಂದು ಮಾರ್ಕು ನಿನ್ನ ಪ್ರಾಮಾಣಿಕತೆಗೆ." ಎಂದರು. ನನಗೆ ನಾಗರಾಜನಿಗೆ ಸಮಾನ ಅಂಕ. ಅವನಿಗೆ ತೃಪ್ತಿಯಾಗಿರಲಿಲ್ಲ.
ಹತ್ತನೇ ಕ್ಲಾಸಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ನೂರು ರುಪಾಯಿಯ ಬಹುಮಾನ ಸನ್ಮಾನಗಳಿದ್ದವು. ನಾನು ಯಥಾಪ್ರಕಾರ ಎರಡನೇಯವನಾಗಿದ್ದೆ. ನನಗೆ ನೂರಾ ಒಂಭತ್ತು ಅಂಕ. ನಾಗರಾಜನಿಗೆ ಒಂದು ಹೆಚ್ಚು. ದೊಡ್ಡ ಪರೀಕ್ಷೆಗಳಲ್ಲಿ ಪ್ರಾಮಾಣಿಕತೆಗೆ ಅಂಕ ಇರುವುದಿಲ್ಲ
ಸನ್ಮಾನದ ದಿನ ಅವನು ಸ್ಟೇಜಿನ ಮೇಲಿದ್ದ. ನಾನು ಕೆಳಗೆ ಇಂದಿರಾ ಮೇಡಂ ಪಕ್ಕ ನಿಂತಿದ್ದೆ.
"ನೀನು ಅಲ್ಲಿರಬೇಕಿತ್ತು ಕಣೋ." - ಅಂದರು ಇಂದಿರಾ ಮೇಡಂ. ಅವರ ಚಿತ್ರ, ಆ ಧ್ವನಿ ನನ್ನಲ್ಲಿ ಈಗಲೂ ಅಚ್ಚು ಒತ್ತಿದಂತಿದೆ. ಅವರ ಕಣ್ಣಲ್ಲಿ ಸಣ್ಣ ಪರದೆಯ ನೀರಿತ್ತು.
ಆ ಸ್ಟೇಜಿನ ಮೇಲೆ ಹತ್ತಿ ಪಡೆಯುವ ಸನ್ಮಾನ-ಬಹುಮಾನಕ್ಕಿಂತ 'ನೀನಲ್ಲಿರಬೇಕಿತ್ತು' ಅನ್ನಿಸಿಕೊಳ್ಳುವುದೇ ಖುಷಿ ಕೊಟ್ಟಿತ್ತು.
**********
ಆಮೇಲೆ ಜೀವನ ಎತ್ತೆತ್ತಲೋ ಹೋಯಿತು. ಒಂದು ವರ್ಷದ ಕೆಳಗೆ ಇಂದಿರಾ ಮೇಡಂ ಫೋನ್ ನಂಬರು ಸಿಕ್ಕಿತು; "ಮೇಡಂ ಆಸ್ಪತ್ರೆಯಲ್ಲಿ ಇದಾರಂತೆ. ಹೈ ಶುಗರ್. ಅವರು ಮನೆಗೆ ಬಂದ ಮೇಲೆ ಕಾಲ್ ಮಾಡು." ಎನ್ನುವ ಸಂದೇಶದೊಂದಿಗೆ. ಕಾಯುತ್ತಿದ್ದೆ.
ಎರಡು ದಿನದ ನಂತರ ಮತ್ತೊಂದು ಮೆಸೇಜು ಬಂತು: "ಇಂದಿರಾ ಮೇಡಂ ತೀರಿಕೊಂಡಿದ್ದಾರೆ."
'ಇಷ್ಟು ಮಾತಾಡೋದು ಗೊತ್ತಿದ್ದೂ ಏನೂ ಮಾತಾಡಲ್ಲ ಅಂತಿದ್ದೆ ನೋಡು.' ಎಂದು ಅವತ್ತು ಅಂದದ್ದು ನೆನಪಾಯಿತು. ಇವತ್ತು ಮಾತಾಡಲು ಬಹಳಷ್ಟಿತ್ತು; ಬದುಕು ಬಿಡಲಿಲ್ಲ.
" ನೀನು ಅಲ್ಲಿರಬೇಕಿತ್ತು ಕಣೋ." ಅಂದವರು ಯಾಕೆ ಅಷ್ಟು ಬೇಗ ಇಲ್ಲಿರುವುದು ಬಿಟ್ಟು ಅಲ್ಲಿಗೆ ಹೋದರೋ. ಈಗಲೂ ಕಣ್ಣು ಒದ್ದೆ ಒದ್ದೆ.