ಕೃಷ್ಣಾ, ನೀನು ವಂಚಕನಲ್ಲ; ನಾನೇ ಯಾಕೋ ವಂಚಿತೆ ರಾಧೆ !
ಅವೆಷ್ಟು ವರ್ಷಗಳಾದವು ನೀನು ಗೋಕುಲ ಬಿಟ್ಟು ಮಥುರೆಗೆ ಹೋಗಿ? ಅವೆಷ್ಟು ಶಿಶಿರಗಳು ಮರಗಳನ್ನು ಬೆತ್ತಲೆ ಮಾಡಿದವೋ ! ಅವೆಷ್ಟು ವಸಂತಗಳು ಮತ್ತೆ ಹಸಿರು ಹೊದಿಸಿ ಹೋದವೋ! ನಾನು ಮತ್ತೆ ಮತ್ತೆ ಲೆಕ್ಕ ತಪ್ಪುತ್ತೇನೆ. ನೀನು ಕೂಡ ಒಂದು ಋತುವಾಗಿದ್ದರೆ ವರ್ಷಕ್ಕೊಮ್ಮೆ ಬರುವೆಯೆಂಬ ನಿರೀಕ್ಷೆಯಾದರು ಇರುತ್ತಿತ್ತು. ನೀನು ನನ್ನ ಆಕಾಶದಲ್ಲಿ ತೇಲಿ ಹೋದ ಮೋಡ. ನೀನು ಮಳೆ ಸುರಿವೆಯೆಂದು ಹೇಳಿರಲಿಲ್ಲ. ಕಾದವಳು ನಾನೇ. ಕ್ಷಮಿಸು, ಅರ್ಥವಾಗುತ್ತಿದೆ, ಹೋದ ಮೋಡ ಮರಳುವುದಿಲ್ಲ.
ನನ್ನ ಕಡೆಗೆ ಬೀರುತ್ತಿದ್ದ ನಿನ್ನ ನಗು ಕಂಡು 'ನೀನು ನನ್ನವನು' ಅಂದುಕೊಂಡವಳು ನಾನು, ಗೋಪಿಕೆಯರೊಂದಿಗೆ ನೀನು ಆಡುವಾಗ 'ನೀನು ನನ್ನವನಾ?' ಎಂಬ ಅನುಮಾನ ಪಟ್ಟವಳೂ ನಾನು. ಮತ್ತೆ ಏಕಾಂತದಲ್ಲಿ ನೀನು ನನಗಾಗಿ ಕೊಳಲು ನುಡಿಸಿದಾಗ 'ಹೌದು, ನೀನು ನನ್ನವನು ಮಾತ್ರ' ಎಂದು ಸಮಾಧಾನ ಮಾಡಿಕೊಂಡದ್ದು ಕೂಡ ನಾನೇ. 'ನಾನು ನಿನ್ನವನು.' ಎಂದು ನೀನೆಂದೂ ಹೇಳಲಿಲ್ಲ; ಹಾಗಂದುಕೊಂಡದ್ದು ನಾನೇ. ನಿನ್ನ ತುಟಿಯ ಮೇಲಿನ ನಗು, ತುಟಿಯಾಚೆಗಿನ ಕೊಳಲು ಹೊಮ್ಮಿಸಿದ ಸಂಗೀತ ಹೇಳಲಿಲ್ಲ,ಕೇಳಿಸಿಕೊಂಡವಳು ನಾನೇ.
ನನ್ನ ಪ್ರಪಂಚ ತುಂಬಾ ಚಿಕ್ಕದು. ಗೋಕುಲದ ಪುಟ್ಟ ಬೀದಿಗಳಲ್ಲಿ ಮೇಲೆ ಹಾಲು ಮಾರುವವಳು ನಾನು. ಅವೇ ಗೊಲ್ಲರ ಮನೆಗಳು, ಪಕ್ಕದ ಬೃಂದಾವನ, ಅವೆಷ್ಟೋ ಸಾವಿರ ವರ್ಷಗಳಿಂದ ಹರಿಯುತ್ತಿದ್ದ ಯಮುನೆಯ ದಡ - ಇಷ್ಟೇ ನನ್ನ ಪ್ರಪಂಚ. ನಿನ್ನದೂ ಇಷ್ಟೇ ಅಂದುಕೊಂಡಿದ್ದೆ. ಕಾಳಿಂಗನ ನೀನು ಹೋರಾಡಿ ಮಣಿಸಿದಾಗ ನೀನು ನನ್ನಂತೆ ಸಾಮಾನ್ಯನಲ್ಲ ಎಂದು ನನಗೆ ಅರ್ಥವಾಗಬೇಕಿತ್ತು. ಗೋವರ್ಧನ ಗಿರಿಯನ್ನು ನಿನ್ನ ಕಿರುಬೆರಳಲ್ಲಿ ಎತ್ತಿದಾಗ ಜನರಿಗೆ ನಿನ್ನ ಅವಶ್ಯಕತೆ ಎಷ್ಟಿದೆ ಎಂಬುದು ನನಗೆ ಅರಿವಾಗಬೇಕಿತ್ತು.ಪ್ರೀತಿಎಂಬುದು ಅದೆಷ್ಟು ವ್ಯವಸ್ಥಿತವಾಗಿ ನನ್ನ ಕಣ್ಣು ಮುಚ್ಚಿಟ್ಟು ನೋಡು. ನೀನು ಕೂಡ ನನ್ನ ಹಾಗೆ ಅಂದುಕೊಂಡಿದ್ದೆ ನಾನು. 'ನಾನು ದೇವರು' ಅಂತ ನೀನು ಹೇಳಲಿಲ್ಲ, ನಿನ್ನನ್ನು ಮನುಷ್ಯ ಎಂದುಕೊಂಡದ್ದು ನಾನೇ.
ನೀನು ಬಿಟ್ಟುಹೋದೆ ಎಂದು ನಾನು ದೂರಲಾರೆ ಏಕೆಂದರೆ ನೀನು ನನ್ನ ಜೊತೆ ಇರುವೆಯೆಂದು ಆಣೆ ಮಾಡಿರಲಿಲ್ಲ. ನೀನು ನನ್ನ ಆಕಾಶದಲ್ಲಿ ಮಳೆ ಸುರಿಸದೆ ತೇಲಿ ಹೋದ ಮೋಡವೆಂದು ನನಗೆ ಬೇಸರವಿಲ್ಲ; ನೀನು ಹಾಗೆ ನನ್ನ ಜೀವನದಲ್ಲಿ ಹಾದು ಹೋದ ಸಮಯದಲ್ಲಿ ಮಳೆ ಸುರಿಸುವೆಯೆನೆಂಬ ಸಿಹಿ ನಿರೀಕ್ಷೆ ನನ್ನಲ್ಲಿ ಹುಟ್ಟಿತ್ತು, ಅಷ್ಟು ಸಾಕು. ನೀನು ದೇವರೆಂಬ ವಿಷಯ ನನಗೆ ತಿಳಿಯಲೇ ಇಲ್ಲ, ನೀನು ಹೇಳಲೇ ಇಲ್ಲ ಎಂದು ನನಗೆ ಬಾಧೆಯಿಲ್ಲ. ನಿಜ ಹೇಳಿ ಬೇಸರ ಮಾಡುವುದಕ್ಕಿಂತ ಸತ್ಯ ಮುಚ್ಚಿಟ್ಟು ಹರ್ಷ ಕೊಡಲು ನಿರ್ಧರಿಸಿದವನು ನೀನು. ನೀನು ದೇವರೆಂದು ತಿಳಿದಿದ್ದರೆ ನನ್ನಲ್ಲಿ ಭಯ - ಭಕ್ತಿ ಇರುತ್ತಿತ್ತಷ್ಟೇ. ನೀನು ನನ್ನಂತೆಯೇ ಮನುಷ್ಯ ಎಂದುಕೊಂಡಿದ್ದ ನನ್ನ ತಪ್ಪು ಗ್ರಹಿಕೆ ನಿನ್ನಲ್ಲಿ ಪ್ರೀತಿ ಹುಟ್ಟಿಸಿದ್ದು. ಕೆಲವು ತಪ್ಪುಗಳು ಅವೆಷ್ಟು ಸುಂದರ ನೋಡು.

ಕೊನೆಗೂ ಒಂದು ಸಾಲು ಮನದಲ್ಲೇ ಉಳಿದು ಹೋಗುತ್ತದೆ..
ಕೃಷ್ಣಾ. ನೀನು ವಂಚಕನಲ್ಲ. ನಾನೇ ಯಾಕೋ ವಂಚಿತೆ ರಾಧೆ !