top of page
Harsha

ಮೇರಾ ಭಾರತ್ ಮಹಾನ್!

ಮೇರಾ ಭಾರತ್ ಮಹಾನ್! ಸಮಾನತೆ ನಮ್ಮ ಸಂವಿಧಾನದ ಮಹತ್ವದ ಅಂಶ ಸ್ವಾಮಿ.. ಇಲ್ಲಿ ಹೆಂಗಸರೆಲ್ಲರು ಸಮಾನರು, ಗಂಡಸರೆಲ್ಲರು ಸಮಾನರು. ಹಿಂದುಗಳೆಲ್ಲರು ಸಮಾನರು, ಮುಸ್ಲಿಮರೆಲ್ಲರು ಸಮಾನರು! ಮೇರಾ ಭಾರತ್ ಮಹಾನ್! ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಸಂಸ್ಕೃತಿ ಇದೆ ಸಾರ್! ದ್ರೌಪದಿಯ ವಸ್ತ್ರ ದುಶ್ಶಾಸನ ಎಳೆದಾಗ ಕೃಷ್ಣ ಸೀರೆ supply ಮಾಡಿದ್ದ ಕಥೆ ಕೇಳಿ ಬೆಳೆದವರು ನಾವು. Brigade road  ನಲ್ಲಿ ತಾವೇ ಬಟ್ಟೆ ಬಿಚ್ಚಿಕೊಂಡು ಬಂದ ಸ್ತ್ರೀಯರನ್ನು ಪೊಲೀಸರು ರಕ್ಷಿಸುತ್ತಾರೆ. ಎಂಥಾ ಧರ್ಮ ಪಾಲನೆ! ಮೇರಾ ಭಾರತ್ ಮಹಾನ್! ಗುರುಕುಲಗಳಿದ್ದ ದೇಶ ನಮ್ಮದು. ಶಿಕ್ಷಣ ನಮ್ಮನ್ನು ನೋಡಿ ಕಲಿಯಬೇಕು ಪ್ರಪಂಚ. ಯಾಕಾದರೂ ಇರಲಿ ಅಂತ ಮೆಕಾಲೆ, ರಾಜಾ ರಾಮ್ ಮೋಹನ್ ರಾಯ್ ಪಶ್ಚಿಮದ ಶಿಕ್ಷಣ ತಂದರು. ನಾವು ಉದ್ಧಾರ ಆಗಿಬಿಟ್ಟೆವು. ನಮ್ಮ ಮಕ್ಕಳಿಗೀಗ ನವ'ಗ್ರಹ' ಶ್ಲೋಕದಲ್ಲಿ ಸೂರ್ಯ-ಚಂದ್ರ ಹೇಗೆ ಬಂದರು ಅಂತ ತಿಳಿಯುತ್ತಿಲ್ಲ. Kepler ಯಾಕೆ ಸೂರ್ಯ ಅನ್ನೋ 'ಗ್ರಹ'ವನ್ನ ಮಧ್ಯದಲ್ಲಿ ಕೂರಿಸಿ ಬಿಟ್ಟ ಅನ್ನುವುದು ಅರ್ಥವಾಗುವುದಿಲ್ಲ. ನಾವು ಮಂಗಳಗ್ರಹಕ್ಕೆ ಕಳಿಸೋ vehicle ಗೆ ಶನಿ ಶಾಂತಿ ಮಾಡಿಸಿ ನಿಂಬೆಹಣ್ಣು ಕಟ್ಟಿ ಕಳಿಸುವವರು. ಇರಲಿ ಬಿಡಿ ಸಾರ್.. ಮಧ್ಯದಲ್ಲಿ driver ಗೆ ಬಾಯಾರಿಕೆ ಆದರೆ ಶರಬತ್ತಿಗೆ ಆದೀತು! ನಾವು ಎಲ್ಲವನ್ನು ಒಪ್ಪಿಕೊಳ್ಳುತ್ತೇವೆ. ಮೇರಾ ಭಾರತ್ ಮಹಾನ್! ವೈದ್ಯಕೀಯ ರಂಗದಲ್ಲಿ ಭಾರತದ ನಂತರವೇ ಉಳಿದವರೆಲ್ಲ. ಚರಕ-ಶುಶ್ರೂತ ಶತಮಾಗಳಷ್ಟು ಹಿಂದೆಯೇ on-site surgery ಮಾಡಿದವರು. ಆಯುರ್ವೇದ, ಯುನಾನಿ.. ಎಲ್ಲ ನಮ್ಮ ಪದ್ಧತಿಗಳೇ. ಆಮೇಲೆ ಬಂದವು ಹೋಮಿಯೋಪತಿ, ಅಲೋಪತಿ.. ಅವು ಪತಿಗಳಷ್ಟೇ ವಿಧೇಯತೆಯಿಂದ, ವೇಗವಾಗಿ ಕೆಲಸ ಮಾಡುತ್ತವೆ ನೋಡಿ. ಅದಕ್ಕೆ ಇಷ್ಟವಾಗಿಬಿಟ್ಟವು ನಮಗೆ. ಒಂದು ಪತಿ ಕೆಲಸ ಮಾಡದಿದ್ದರೆ ಇನ್ನೊಂದು ಪತಿಗೆ ಹಾರುವುದರಲ್ಲಿ ತಪ್ಪೇನು!! ವೈದ್ಯೋ ನಾರಾಯಣೋ ಹರಿಃ! ಅರ್ಥ: ವೈದ್ಯ ಬರೆದದ್ದು ನಾರಾಯಣನೂ ಅರಿಯಲಾರ! ರಾಮನ 'ಬಾಣ'ಕ್ಕಿಂತ ಆಸ್ಪತ್ರೆಯ 'ಬಿಲ್ಲು'ಗಳೇ ವೇಗವಾಗಿ ಕೊಲ್ಲುತ್ತವೆ. ಮೇರಾ ಭಾರತ್ ಮಹಾನ್! ಗ್ರೀಕರು, ಅರೇಬಿಯನ್ನರು ಕಥೆಗಳನ್ನು ಹೇಳಿರಬಹುದು.. ಆದರೆ ನಮ್ಮ ದೇಶದ ಪುರಾಣಗಳ ಮುಂದೆ ಅವೆಲ್ಲ ಮಕಾಡೆ ಮಲಗಬೇಕು. ನಮ್ಮ ದೇವರುಗಳು ಥೇಟು ಮನುಷ್ಯರು.. ಕೆಲವೊಮ್ಮೆ ಅದಕ್ಕಿಂತ ಕೀಳು.. ಅವರು ಪರಸ್ತ್ರೀಯನ್ನು ಅತ್ಯಾಚಾರ ಮಾಡಿದರೂ ದೇವರಾಜ ಅನಿಸಿಕೊಳ್ಳುತ್ತಾರೆ, ಮಗುವಿನ ತಲೆ ಕಡೆದರೂ ಅಮಾಯಕ ಎಸಿಕೊಳ್ಳುತ್ತಾರೆ, ಹೆಂಡತಿಯನ್ನು ಅನುಮಾನಿಸಿದವ ಮರ್ಯಾದ ಪುರುಷೋತ್ತಮ.. ಕಥೆ ಬರೆದವನು ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತಾನೆ. ಅಂಥಾ ಅದ್ಬುತ ಕಥೆಗಳನ್ನು ನಾವು ಈಗಲೂ ಬರೆಯುತ್ತೇವೆ, ನೋಡುತ್ತೇವೆ.. ಕಾಫಿ ಮಾಡುವುದನ್ನು ಕೂಡ ಒಂದು ವಾರ ಕುತೂಹಲ ಸೃಷ್ಟಿಸಿ ತೋರಿಸುವ ನಮ್ಮ ಮೆಗಾ ಸೀರಿಯಲ್ ಗಳು ಸಮಾನ್ಯವಲ್ಲ. ಅದೂ ಒಂದು ಕಲೆ. ಕಲೆಯ ಕೊಲೆ ಮತ್ತು ಕೊಲೆ ಮಾಡುವ ಕಲೆ. ಮೇರಾ ಭಾರತ್ ಮಹಾನ್!


ನೂರಾರು ವರ್ಷಗಳ ಮೊದಲೇ ನಾವು ಮೇಘಗಳನ್ನು ಸಂದೇಶ ಕಳಿಸಲು ಉಪಯೋಗಿಸಿ ಗೊತ್ತಿರುವವರು ನಾವು. ಇನ್ನು ಈ-ಮೇಲ್ ಆ-ಮೇಲ್ ಯಾವ ಲೆಕ್ಕ. ಸುದ್ದಿಗಳನ್ನು ತಲುಪಿಸುವುದರಲ್ಲಿ ನಾವೇ ಮೊದಲಿಗರು, ಇವತ್ತಿಗೂ. ನಿಜಾ ಹೇಳುವುದರಲ್ಲಿ ಮಜಾ ಏನಿದೆ ಗುರೂ.. ಸ್ವಾರಸ್ಯ ಇರಬೇಕು, ಸುದ್ದಿ ವೈಭವೀಕರಿಸಬೇಕು. ನಮ್ಮ TV ನ್ಯೂಸ್ ಚಾನೆಲ್ಲುಗಳನ್ನು ನೋಡಿ. ದೇಶದ ದೊಡ್ಡ ಸಮಸ್ಯೆಗಳದ್ದೇನಿದೆ ಬ್ರದರ್, 75 ವರ್ಷದಿಂದ ಇದ್ದದ್ದೇ. ಆದರೆ ಮನೆಗಳಲ್ಲಿ ಕ್ಯಾಮೆರಾ ಇಟ್ಟು ವೈಯಕ್ತಿಕ ಜಗಳ ತೋರಿಸುವುದರಲ್ಲಿ ಇರುವ ಮಜವೇ ಬೇರೆ. ಮಾಧ್ಯಮ ನಮ್ಮ ಸಂವಿಧಾನದ ನಾಲ್ಕನೇ ಕಂಬ. ಅದನ್ನು ಟೀಕೆ ಮಾಡೀರಿ ಹುಷಾರು. ದಿನದ 24 ಗಂಟೆಗಳ ಪರ್ಮಿಷನ್ ಇದೆ ಸುದ್ದಿ ಪ್ರಸಾರ ಮಾಡಲು. ಬುಟ್ಟಿ ದೊಡ್ಡದಿದೆ ಗುರೂ.. ಕಸ ತುಂಬುವುದರಲ್ಲಿ ತಪ್ಪೇನು! ಮೇರಾ ಭಾರತ್ ಮಹಾನ್!


ಚಂದ್ರಗುಪ್ತ ನ್ಯಾಯ ಕೊಡುವುದರಲ್ಲಿ ನಿಸ್ಸೀಮನಾಗಿದ್ದನಂತೆ. ನ್ಯಾಯಕ್ಕೆ ನಮ್ಮ ದೇಶವೇ ಸಮಾನಾರ್ಥಕ ಪದ. ಸಾವಿರ ಸಾವಿರ ಕೇಸುಗಳು ಬಾಕಿಯಿವೆ ಕೋರ್ಟುಗಳಲ್ಲಿ. ಗಂಡ ಏಕವಚನದಲ್ಲಿ ಮಾತನಾಡಿಸುವುದು ಅದೆಷ್ಟು ಘೋರ ಅಪರಾಧವಲ್ಲವೇ ಸ್ವಾಮಿ! ಆ ಹೆಣ್ಣು ಮಗಳು ಅಂಥಾ ಕಿರುಕುಳ ಕೊಟ್ಟ ಪತಿಯ ವಿರುದ್ಧ ಕೋರ್ಟಿನಲ್ಲಿ ನ್ಯಾಯ ಕೇಳಲೇಬೇಕು. ಅವನ್ಯಾರೋ ಮೂರ್ಖ ದೇವರ ವಿರುಧ್ಧ ತನಗನಿಸಿದ್ದು ಬರೆಯುತ್ತಾನೆ. ಅಂಥವನು ಆಸ್ತಿಕರ ಭಾವನೆಗಳಿಗೆ ಧಕ್ಕೆ ತಂದರೆ ಅವನ ವಿರುದ್ಧ ಕೇಸು ಹಾಕದೇ ಇರಲು ಆಗುತ್ತಾ! ಇಂಥಾ ಮಹತ್ತರ ಕೇಸುಗಳ ಮಧ್ಯೆ ಚಿಕ್ಕ ಪುಟ್ಟ ಭಯೋತ್ಪಾದಕರ, ಅತ್ಯಾಚಾರಿಗಳ ಕೇಸುಗಳು ನಿಧಾನವಾಗಿ ತೀರ್ಪುಗೊಂಡು ಅವರಿಗೆ ಬಿರಿಯಾನಿ ಕೊಟ್ಟು ಮೆಹರುಬಾನಿ ಮಾಡುವ ಉದಾರ ನಮ್ಮದು. ಇನ್ನೂ ನೂರು ವರ್ಷವಾಗಲಿ, ಅವಸರ ಏನಿದೆ.. ಇಂಥ ಲಕ್ಷ ಕೇಸುಗಳನ್ನು ಬಗೆಹರಿಸುತ್ತವೆ ನಮ್ಮ ನ್ಯಾಯಾಲಯಗಳು. ಮೇರಾ ಭಾರತ್ ಮಹಾನ್! ಈಗಲೂ ನಮ್ಮ ದೇಶದಲ್ಲಿ ಉನ್ನತ ಹುದ್ದೆಗೆ ಹೋಗುವುದು ಸುಲಭವಲ್ಲ ಬ್ರದರ್.. ಸಾಕಷ್ಟು ಓದಿಕೊಳ್ಳಬೇಕು, ಹಾಳು-ಮೂಳು ಸ್ಪರ್ಧೆ ಪರೀಕ್ಷೆ ಬರೆಯಬೇಕು.. ಇದು ಎಲ್ಲರಿಗೂ ಸಾಧ್ಯವಾಗದ ಮಾತು.. ಚಿಂತೆ ಬೇಡ. ಇದು ಭಾರತ. ನಮ್ಮಲ್ಲಿ ಪರಿಹಾರಗಳಿಗೆ ಕೊರತೆಯಿಲ್ಲ. ಬುದ್ಧಿವಂತಿಕೆ ಒಂದೇ ಎಲ್ಲ ಅಲ್ಲ. ದೇವರಿಗೆ application ಹಾಕಿ ಮುಂದಿನ ಜನ್ಮದಲ್ಲಿ ಕೆಲವೊಂದು ಜಾತಿಯಲ್ಲಿ ಹುಟ್ಟಿಬಿಡು. ಪಾಪ! ತುಳಿಸಿಕೊಂಡವರಿಗೂ ತುಳಿಯುವ ಅವಕಾಶ ಕೊಡುವ ನ್ಯಾಯಬದ್ಧ ದೇಶ ನಮ್ಮದು. ಬೇಡವಾ? ಕೆಲವು ವಂಶ-ಕುಟುಂಬಗಳಿವೆ. ಅವರ ಮನೆಯಲ್ಲಿ ಹುಟ್ಟಿಬಿಡು. ಚುನಾವಣೆ ಹಿಂದಿನ ರಾತ್ರಿ ಸೀರೆ, ಕುಕ್ಕರು, ಬಿರಿಯಾನಿ, ಹಸಿರು ನೋಟು ಕೊಟ್ಟು ರಾಜಕಾರಣಿಯಾಗು. ದೇವರ ದರ್ಶನವನ್ನೇ ದುಡ್ಡು ಕೊಟ್ಟು ಚಿಕ್ಕ queue ಮೂಲಕ ಬೇಗ ಪಡೆದುಕೊಳ್ಳುವವರು ನಾವು.. ಇನ್ನು ಸ್ಥಾನ ಯಾವ ಲೆಕ್ಕ. ಮೇರಾ ಭಾರತ್ ಮಹಾನ್! ಬರೀ ಇತಿಹಾಸ ಜ್ಞಾಪಿಸಿಕೊಳ್ಳುತ್ತಾ, ಪುರಾಣ ನೆನೆಯುತ್ತಾ 73 ಸ್ವಾತಂತ್ರ್ಯ ದಿನೋತ್ಸವಗಳನ್ನೂ 71 ಗಣರಾಜ್ಯೋತ್ಸವಗಳನ್ನು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಾ ಸಮಯ ಕಳೆದು ಬಿಟ್ಟವರು ನಾವು.. sorry..ಮೇರಾ ಭಾರತ್ ಮಹಾನ್! 

Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
bottom of page