ಉಳಿದು ಹೋದ ರಾಧೆಗಾಗಿ ಮರಳಿ ಬಂದ ಮಾಧವ
ಪ್ರೀತಿಯ ರಾಧೆ,
ಯುದ್ಧ ಗೆದ್ದು ಬರುವಾಗ ನಾನು ಹೇಡಿ ಎನಿಸಿದ್ದು, ಧರ್ಮ ಸಂಸ್ಥಾಪಿಸುವಾಗ ನಾನು ಭ್ರಷ್ಟ ಎನಿಸಿದ್ದು, ವ್ಯೂಹ ಭೇದಿಸುವಾಗ ನಾನು ಪುಕ್ಕಲ ಎನಿಸಿದ್ದು, ಗೀತೆ ಬೋಧಿಸುವಾಗ ನಾನು ಅನೈತಿಕ ಎನಿಸಿದ್ದು, ಜಗತ್ತು ನನ್ನ ಕೊಂಡಾಡುವಾಗ ಆ ಜೈಕಾರ ನನಗೆ ಕರ್ಕಶ ಎನಿಸಿದ್ದು - ಎಲ್ಲವೂ ಬಹುಶಃ ನಾನು ನಿನ್ನ ತೊರೆದು ಹೋದ ಪಾಪಪ್ರಜ್ಞೆಯಿಂದ.
ಗೋಕುಲದಲ್ಲಿನ ನಿನ್ನ ಪ್ರೀತಿಯ ಮೌನ ಕೊಟ್ಟ ಹರ್ಷ ಮಥುರೆಯ ಜನರ ಹೊಗಳಿಕೆಯ ಉದ್ಘಾರ ನನಗೆ ಕೊಡಲಿಲ್ಲ. ಬೃಂದಾವನದ ಹುಣ್ಣಿಮೆಗಳಲ್ಲಿ ಎಲ್ಲರಿಗಿಂತ ನಮ್ಮಿಬ್ಬರಿಗೆ ಬಹಳ ಹತ್ತಿರ ಇರುತ್ತಿದ್ದ ಚಂದಿರ ಗೋಕುಲದಲ್ಲಿ ನನ್ನ ಮೇಲೆ ಮುನಿಸಿಕೊಂಡು ದೂರವಿದ್ದ. ಈ ಊರಿನ ಬೆತ್ತಲೆ ಆಕಾಶದಷ್ಟು ಸುಂದರ ಆ ಊರಿನ ಅರಮನೆಯ ಒಳತಾರಸಿಯ ಮೇಲೆ ಕೆತ್ತಿದ ಚಿತ್ತಾರ ಎಂದೂ ಕಾಣಲಿಲ್ಲ.
ಗೋಕುಲ ಕೊಟ್ಟ ನವಿಲುಗರಿಯನ್ನು ಕಿತ್ತುಕೊಂಡು ಮಥುರೆ ಕೊಟ್ಟಿದ್ದು ಚಿನ್ನದ ಕಿರೀಟ. ಕೊಳಲು ಹಿಡಿದ ಕೈಯಲ್ಲಿ ಸಿಕ್ಕಿದ್ದು ಪಾಂಚಜನ್ಯ. ನಿನ್ನ ತುಟಿಯ ಮೃದು ಸ್ಪರ್ಶದ ಮೌನ ಮೂಡಿದ ನನ್ನ ತುಟಿಯ ಮೇಲೆ ಹೊರಟಿದ್ದು ಗೀತೆಯ ಮಾತು, ಬೆಣ್ಣೆ ಕೂಡ ಮೃದುವನ್ನು ಸಾಲ ಪಡೆಯುತ್ತಿದ್ದ ನಿನ್ನ ಮೈಯ ಆಲಿಂದನವ ಪಡೆದ ನನ್ನ ಎದೆಯ ಮೇಲೆ ಕವಚದ ಕಠಿಣ ಹೊದಿಕೆ - ಅದು ಯಾವುದೂ ನನ್ನದಲ್ಲ ಎನಿಸಿತು. ಅವೆಲ್ಲವುಗಳಿಂದ, ಅವರೆಲ್ಲರಿಂದ ರಾತ್ರೋ ರಾತ್ರಿ ಬಂದುಬಿಟ್ಟಿದ್ದೇನೆ.
ನಾನು ಆಡದ ಮಾತು ಕೇಳುತ್ತಿದ್ದ ಪ್ರೇಮಿ ರಾಧೆ, ನನ್ನ ಕಣ್ಣಿಗೂ ಕಾಣದ ನನ್ನ ಕಣ್ಣೀರು ಒರೆಸುತ್ತಿದ್ದ ಗೆಳತಿ ರಾಧೆ, ನನ್ನ ಕರುಳಿಗೂ ತಿಳಿಯದ ಹಸಿವನ್ನು ಅರಿಯುತ್ತಿದ್ದ ಅಮ್ಮ ರಾಧೆ, ಯಾರೋ ಗೋಪಿಕೆ ನನಗೆ ಹತ್ತಿರಾದರೆ ಮುನಿಸಿಕೊಳ್ಳುತ್ತಿದ್ದ ಪುಟ್ಟ ಹುಡುಗಿ ರಾಧೆ, ನನಗೂ ಯಾರೋ ಗೋಪಿಕೆ ಇಷ್ಟವಾದಂತೆ ಕಲ್ಪಿಸಿಕೊಂಡು ಭಯಪಡುತ್ತಿದ್ದ ಮುದ್ದು ರಾಧೆ, ಅಪ್ಪುಗೆಗೆ ಕರಗುತ್ತಿದ್ದ ರಾಧೆಗೆ, ನನ್ನ ನೋವಿಗೆ ಕೊರಗುತ್ತಿದ್ದ ರಾಧೆ, ಯಾರೂ ನಂಬದಷ್ಟು ನನ್ನ ನಂಬುತ್ತಿದ್ದ ರಾಧೆ, ಯಾರನ್ನೂ ನಂಬದಷ್ಟು ನನ್ನ ನಂಬುತ್ತಿದ್ದ ರಾಧೆ, ತನ್ನನ್ನು ಪ್ರಪಂಚ ತೊರೆದರೂ ಪ್ರೀತಿಗೆ ಬದ್ಧಳಾಗಿದ್ದ ರಾಧೆ, ತಾನು ಪ್ರಪಂಚವನ್ನು ತೊರೆಯಲು ಸಿದ್ಧಳಾಗಿದ್ದ ರಾಧೆ - ಅದೇ ರಾಧೆಗಾಗಿ ನಾನು ಮರಳಿ ಬಂದಿದ್ದೇನೆ.
ಮತ್ತೆ ನನಗೆ ಜೈಕಾರದ ಕರ್ಕಶ. ಪಾಂಚಜನ್ಯದ ಯುದ್ಧ ಕೇಕೆ, ಭಾರದ ಕಿರೀಟ, ಉಸಿರುಗಟ್ಟಿಸುವ ಕವಚ - ಯಾವುದೂ ಬೇಡ. ಹುಣ್ಣಿಮೆ ಹತ್ತಿರಾಗುತ್ತಿದೆ. ಯಮುನೆಗೆ ಮತ್ತದೇ ಸೆಳವು. ನಿನಗಾಗಿ ಕಾಯುತ್ತಿರುತ್ತೇನೆ.
ಎಂದಿಗೂ ನಿನ್ನವನು
ಮಾಧವ
*******************************************************************
ನನ್ನವನಲ್ಲದ ಕೃಷ್ಣ,
ಅಂದು ಮಥುರೆಗೆ ಹೊರಟದ್ದು ನಿನ್ನ ಹೊಸ ಪ್ರಸ್ಥಾನವಲ್ಲ, ಅದು ನಮ್ಮ ಪ್ರೀತಿಯ ಅಂತಿಮ ಯಾತ್ರೆ. ನಿನಗೆ ತಿಳಿಯಲಿಲ್ಲವೇನೋ ಅಂದು ನೀನು ಹೊದ್ದದ್ದು ಶಲ್ಯವಲ್ಲ ನಿನ್ನ ಮೇಲಿನ ನನ್ನ ನಂಬುಗೆಯ ಶವದ ಮೇಲೆ ಹೊದಿಸಿದ್ದ ಕಫನು. ಯಾದವರೆಲ್ಲ ನಿನ್ನ ರಥ ಸಾಗುವ ರಸ್ತೆ ಮೇಲೆ ಹಾಕಿದ ಹೂಗಳು ಬಿದ್ದದ್ದು ನಮ್ಮ ಸಂಬಂಧದ ಗೋರಿಯ ಮೇಲೆ.
ಸತ್ತು ಹೋದ ಸಂಬಂಧಕ್ಕೆ ಮತ್ತೆ ಜೀವ ಕೊಡುವ ವ್ಯರ್ಥ ಪ್ರಯತ್ನ ಬೇಡ. ಮಣ್ಣು ಮಾಡಿ ಬಂದ ಮೇಲೆ ಉಳಿಯುವ ದುಃಖಕ್ಕೆ, ಅನುಭವಿಸುವ ಖಾಲಿತನಕ್ಕೆ ಅದರದೇ ಆದ ಘನತೆಯಿದೆ ; ಅದನ್ನೂ ಕೊಲ್ಲಬೇಡ. ನನ್ನ ಗಡಿಯಾರ ಭವಿಷ್ಯದ ಕಡೆಗೆ ಚಲಿಸುವುದಿಲ್ಲ. ಅದು ನನ್ನ ಕೃಷ್ಣನ ಜೊತೆಗಿದ್ದ ಘಳಿಗೆಗಳನ್ನು ಮಾತ್ರ ಪುನರಾವರ್ತಿಸುತ್ತದೆ. ಮರಳಿ ಬಂದು ನೀನು ಇಷ್ಟು ಕಾಲ ಇದ್ದಿಲ್ಲವೆಂಬ ಸತ್ಯವನ್ನು ಜ್ಞಾಪಿಸಬೇಡ. ನಿನ್ನ ವಾಸ್ತವದ ಜಗತ್ತಿಗಿಂತ ನನ್ನ ಭ್ರಮೆಯ ಪ್ರಪಂಚದಲ್ಲಿ ಬದುಕಲು ಬಿಡು. ನನ್ನ ನೀನು ತೊರೆದು ಹೋದೆ ಎಂಬ ಪಾಪ ಪ್ರಜ್ಞೆ ಬೇಡ. ಬಹುಶಃ ಹೀಗೆ ಬಿಟ್ಟು ಹೋಗುತ್ತೇನೆ ಎಂಬುದು ನಿನಗೆ ಗೊತ್ತಿತ್ತೇನೋ ಅದಕ್ಕೆ ನನಗೆ ನೀನು ಜೀವನ ಪೂರ್ತಿ ಆಗುವಷ್ಟು ಸುಂದರ ನೆನಪುಗಳನ್ನು ಕೊಟ್ಟು ಹೋಗಿರುವೆ, ಅಷ್ಟು ಸಾಕು.
ಪ್ರಪಂಚದಲ್ಲಿನ ಲಕ್ಷಾಂತರ ವಿರಹಿಗಳಿಗೆ ನಾನು ಉತ್ತರವಾಗಬೇಕು. ಮತ್ತೆ ಬಂದು ಪ್ರಶ್ನೆ ಹುಟ್ಟುಹಾಕಬೇಡ. ನೀನು ಬಂದರೆ ಮತ್ತೆ ನೀನು 'ಕಳೆದು ಹೋಗಬಹುದು' ಎಂಬ ಆತಂಕ, 'ಕಳೆದು ಹೋದರೆ ಹೇಗೆ ?'ಎನ್ನುವ ಪ್ರಶ್ನೆ, 'ಕಳೆದು ಹೋಗಬಾರದು' ಎನ್ನುವ ಆಸೆ, 'ಕಳೆದುಹೋಗಬೇಡ 'ಎಂಬ ಪ್ರಾರ್ಥನೆ - ಎಲ್ಲ ಹುಟ್ಟುತ್ತವೆ. ಇಷ್ಟು ದಿನ ನೀನಿರಲಿಲ್ಲ. ಆದ್ದರಿಂದ ಈ ಯಾವ ಆತಂಕ, ಪ್ರಶ್ನೆ, ಆಸೆ, ಪ್ರಾರ್ಥನೆ ಇರಲಿಲ್ಲ. ಹೀಗೆ ಇರಲಿ ಬಿಡು.
ನಾನು ನಿನ್ನವಳಲ್ಲ.
ನಾನು,
ರಾಧೆಯ ಕೃಷ್ಣನ ರಾಧೆ