top of page
Search

ವಿವೇಕದ ಆತ್ಮಕ್ಕೆ ಶಾಂತಿ ಸಿಗಲಿ!!

  • Harsha
  • Feb 11, 2022
  • 2 min read

Updated: Feb 12, 2022

ದುಬ್ಬೈವಾರಿ ಬಡಿ!


ನಾನು ಓದಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ನಾನು ಸೇರುವ ಹೊತ್ತಿಗಾಗಲೇ ಅದನ್ನು ಕಟ್ಟಿಸಿ ಬರೋಬ್ಬರಿ 45 ವರ್ಷಗಳಾಗಿದ್ದವು.


ಅದು ತೆಲುಗಿನ ಹೆಸರು: ದುಬ್ಬೈವಾರಿ ಬಡಿ. ದುಬ್ಬ ಐವಾರು ಅಂದರೆ ದಪ್ಪನೆ ಮೇಷ್ಟ್ರು ಅಂತ ಅರ್ಥ. ಬಡಿ ಎಂದರೆ ಶಾಲೆ. ಆ ದುಬ್ಬೈವಾರು ಯಾರೋ ನಮಗೆ ಗೊತ್ತಿರಲಿಲ್ಲ. ಬಹುಶಃ ಶಾಲೆ ಕಟ್ಟಿಸಿದ ಹೊಸದರಲ್ಲಿ ಕೆಲಸ ಮಾಡುತ್ತಿದ್ದ ಮೇಷ್ಟ್ರು ಇರಬೇಕು. ನಾವು ಅವರನ್ನು ಫೋಟೋದಲ್ಲಿ ಕೂಡ ನೋಡಿರಲಿಲ್ಲ.


ಅದು ಶಾಲೆಯ ಕಟ್ಟಡವೇ ಅಲ್ಲ. ಒಂದು ಮನೆ. ಅದನ್ನೇ ಸರ್ಕಾರದವರು ಬಾಡಿಗೆಗೆ ಪಡೆದು ಶಾಲೆ ಮಾಡಿದ್ದರು. ನಮ್ಮ ಕ್ಲಾಸ್ ರೂಮು ಅಡುಗೆ ಮನೆಯ ಮುಂದಿದ್ದ dining hall.


ಆ ಶಾಲೆಗೆ ಬರುತ್ತಿದ್ದ ಹುಡುಗರೆಲ್ಲ ಅಲ್ಲೇ ಅಕ್ಕ ಪಕ್ಕ ವಾಸಿಸುತ್ತಿದ್ದವರು. ನಾನು ಮಾತ್ರ ಅಪ್ಪನ ಜೊತೆ ಊರಿನ ಇನ್ನೊಂದು ಮೂಲೆಯಲ್ಲಿದ್ದ ಸತ್ಯನಾರಾಯಣ ಪೇಟೆಯಿಂದ ಬರುತ್ತಿದ್ದೆ. ಮಧ್ಯಾಹ್ನದ ಊಟಕ್ಕೆ ಎಲ್ಲರೂ ಅವರವರ ಮನೆಗೆ ಹೋಗುತ್ತಿದ್ದರು. ಬುತ್ತಿ ತೆಗೆದುಕೊಂಡು ಹೋಗುತ್ತಿವನು ಇಡೀ ಶಾಲೆಯಲ್ಲಿ ನಾನೊಬ್ಬನೇ. ಆಗಲೇ ನೆನಪಾಗುತ್ತಿದ್ದುದು ಆ ಆತ್ಮಹತ್ಯೆಯ ಕಥೆ!


ಆ ಮನೆಯಲ್ಲಿ ಮುಂಚೆ, ಬಹಳ ವರ್ಷಗಳ ಹಿಂದೆ ಒಂದು ಕುಟುಂಬ ವಾಸಿಸುತ್ತಿತ್ತಂತೆ. ಯಾವ ಕಾರಣಕ್ಕೋ ಗೊತ್ತಿಲ್ಲ; ಮನೆಯ ಹೆಣ್ಣುಮಗಳು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಅದೇ ಅಡುಗೆ ಮನೆಯಲ್ಲಿ!


Staff room ಇದ್ದುದ್ದು ಪಡಸಾಲೆಯಲ್ಲಿ; ಅಡುಗೆ ಮನೆಯಿಂದ ದೂರ. ಅಲ್ಲಿ ಕೆಲವರು ಶಿಕ್ಷಕಿಯರು ಇರುತ್ತಿದ್ದರೂ ನನಗೇಕೋ ಅವರ ಬಳಿ ಹೋಗಿ ಊಟ ಮಾಡಲು ಅದೇನೋ ಸಂಕೋಚ, ಮುಜುಗರ. ಇಲ್ಲಿ ನಾನು ನನ್ನ ಕ್ಲಾಸ್ ರೂಮಿನಲ್ಲಿ ಒಬ್ಬನೇ ಊಟ ಮಾಡುತ್ತಿದ್ದಾಗ ಸುಮ್ಮನೆ ಗೆಜ್ಜೆ ಶಬ್ದ ಕೇಳಿದ ಭ್ರಮೆ. ಸುಟ್ಟುಕೊಳ್ಳುವ ಉರಿಗೆ ಆ ಹೆಣ್ಣುಮಗಳು ಹೊರಗೆ ಓಡಿ ಬಂದಿರಬಹುದಾ? ಇಲ್ಲೇ.. ನಾನೀಗ ಊಟ ಮಾಡುತ್ತಾ ಕುಳಿತ ಸ್ಥಳದಲ್ಲೇ? ಹೃದಯ ಬಾಯಿಗೆ ಬಂದಂತಾಗುತ್ತಿತ್ತು.


ಆಗ ಧೈರ್ಯ ತುಂಬಿದವನೇ ಗೆಳೆಯ ಶಬ್ಬೀರ್! ನನಗಿಂತ ಒಂದಡಿ ಎತ್ತರವಿದ್ದ, ಬಹುಶಃ ವಯಸ್ಸು ಕೂಡ ಜಾಸ್ತಿಯಿತ್ತು.


"ನಮ್ ತಾತ ಹೇಳ್ತಾ ಇದ್ದ.. ಆ ಸೈತಾನ್ ಗಳು ಶಬ್ದ ಮಾಡ್ತಾವಂತೆ, ನಮ್ಗೆ ಗೊತ್ತಿರೋರ್ ಧ್ವನಿಯಲ್ಲಿ ಕರಿತಾವಂತೆ. ನಾವು ಉತ್ತರ ಕೊಡಬಾರದು. ಅವಕ್ಕೆ ಎರಡೇ ಸಲ ಕರಿಯೋಕೆ ಆಗೋದು. ಉತ್ತರ ಕೊಡಲಿಲ್ಲ ಅಂದ್ರೆ ಸುಮ್ಮನಾಗಿ ಬಿಡುತ್ತವೆ. ನೀನೇನು ಹೆದರಕೋಬೇಡ." ಅಂದ.


ಅವತ್ತಿನವರೆಗೆ ಬರೀ ಗೆಜ್ಜೆ ಶಬ್ದ ಕೇಳಿದಂತೆ ಭಾಸವಾಗುತ್ತಿದ್ದ ನನಗೆ ಮರುದಿನದಿಂದ ಆ ಹೆಣ್ಣುಮಗಳು ನನ್ನ ಹೆಸರು ಕರೆಯುವಂತೆ ಭಾಸವಾಗತೊಡಗಿತು. ಅವನು ನನಗ ಧೈರ್ಯ ತುಂಬಿದನಾ? ಇನ್ನೂ ಭಯಪಡಿಸಿದನಾ? ಅರ್ಥವಾಗಲಿಲ್ಲ.


ನನ್ನ ಕಷ್ಟ ನೋಡಲಾರದೆ ಒಂದು ತಾಬೀಜು (ಅಂತ್ರ) ಮಾಡಿಸಿಕೊಂಡು ಕೊಟ್ಟ. ಸ್ವಲ್ಪ ದಿನ ಜೊತೆಗಿದ್ದರೆ ಹೆಂಡತಿಯೇ ಅಭ್ಯಾಸವಾಗಿಬಿಡುತ್ತಾಳೆ ಇನ್ನು ದೆವ್ವ-ಆತ್ಮಗಳದ್ದೇನು ಮಹಾ! ನನಗೂ ಅಭ್ಯಾಸವಾಯಿತು. ತಾಬೀಜು ಕೆಲಸ ಮಾಡಿತೋ ಆ ಹೆಣ್ಣು ಮಗಳ ಆತ್ಮಕ್ಕೇ ನಾನು ಬೋರ್ ಎನಿಸಿ ಸುಮ್ಮನಾಯಿತೋ ಗೊತ್ತಿಲ್ಲ. ಶಬ್ದಗಳು ನಿಂತುಹೋದವು.


ಶಬ್ಬೀರ್ ನ ಬಳಿ ಎಲ್ಲದಕ್ಕೂ ಪರಿಹಾರವಿತ್ತು. ಶಾಲೆಯ, ಶಿಕ್ಷಕರ ಎಲ್ಲ ಕೆಲಸಕ್ಕೆ ಅವನೇ ಇರಬೇಕು. August 15: ಬೆಳಗ್ಗೆ ಧ್ವಜ ಕಟ್ಟಲು, ಸಂಜೆ ಇಳಿಸಲು ಅವನೇ ಬೇಕು. ಸರಸ್ವತಿ ಪೂಜೆ: ಎಲ್ಲರಿಗೆ ಮಂಡರಳು (ಪುರಿ), ಕೊಬ್ಬರಿ, ಬೆಲ್ಲ ಹಂಚುವುದು ಅವನೇ. ಗಣೇಶನ ಪ್ರತಿಷ್ಠಾಪನೆ-ವಿಸರ್ಜನೆ ಅವನವೇ.


ಅವನು ಮಾತ್ರವಲ್ಲ, ನನ್ನ ಗೆಳೆಯರು ಶಬ್ಬೀರ್, ಜಕೀರ್, ಮೆಹಬೂಬ್ ಬಾಷಾ, ಮಹಬೂಬ್ ಸುಭಾನಿ, ಇದ್ರಿಸ್, ಅಬೂಬಕರ್, ಇನಾಯತ್, ಬಶೀರ್ - ಯಾಕೋ ಧರ್ಮ ನಮ್ಮ ಮಧ್ಯೆ ಬರಲೇ ಇಲ್ಲ.


ಗಣೇಶ ಹಬ್ಬ ಬಂದರೆ ಎಲ್ಲರಿಗೂ ಹಬ್ಬ. ಮೊಹರಂ ಕೂಡ ನಮ್ಮದೇ. ಅಲಾಯಿ (ಗುಂಡಿ) ತೊಡುವಾಗಿನಿಂದ ಹಿಡಿದು, ಪೀರಲ ದೇವರಿಗೆ ಸಕ್ಕರೆ ಕೊಡುವವರೆಗೆ, ಪಕ್ಕದ ಮನೆಯ ರೇವಣ್ಣ ಪೀರಲ ದೇವರನ್ನು ಹೊತ್ತುಕೊಂಡು ಮೆರವಣಿಗೆ ಬಂದಾಗ ಅವರ ಕಾಲಿಗೆ ನೀರು ಹಾಕಿ ಅಮಾಯಕತೆಯಿಂದ ಅವರನ್ನೇ ದೇವರೆಂದುಕೊಳ್ಳುವಾಗಿನಿಂದ ದೇವರು ಸಾಯುವ ದಿನದ ವರೆಗೆ ಅದು ಕೂಡ ನಮ್ಮೆಲ್ಲರ ಹಬ್ಬ.


ನನಗೊಬ್ಬ ಸ್ವಂತ ತಂಗಿಯಿಲ್ಲ ಎಂಬ ಕೊರಗಿದ್ದಾಗ ಇನಾಯತ್ ನ ಮನೆಗೆ ಹೋದಾಗಲೆಲ್ಲ ಅವನ ತಂಗಿ ತಸ್ಲೀಮ್ ನನ್ನ ಕೂಡ ಅಣ್ಣ ಅಂದಾಗ ಅವಳೇ ನನ್ನ ತಂಗಿ. ನನ್ನ ಅಕ್ಕ ಅವರಿಗೂ ಅಕ್ಕ. ಧರ್ಮ ನಮ್ಮ ಮಧ್ಯೆ ಯಾಕೋ ಬರಲೇ ಇಲ್ಲ.


ಶಾಲೆಯಲ್ಲೂ.. ಲೇ ಸಾಯಿಬು.. ಲೇ ಆಯ್ನೋರ.. ಹಜಾಮ.. ವಡ್ಡ... ಲೇ ಶೆಟ್ಟಿ.. ನಮ್ಮ ಮೇಷ್ಟ್ರಗಳು ಎಷ್ಟು ಸರಾಗವಾಗಿ ಕರೆಯುತ್ತಿದ್ದರು. ಇವೆಲ್ಲ ನಮಗೆ ಜಾತಿ ಸೂಚಕ ಪದಗಳೇ ಅಲ್ಲ. ಅಪಮಾನ ಅಂತ ಅನಿಸಲೇ ಇಲ್ಲ.


ಯಾಕೋ ನಾವು ಬರಬರುತ್ತಾ ಅತೀ ಸೂಕ್ಷ್ಮ, ಅತೀ ದುರ್ಬಲ, ಅತೀ ಸಂಕುಚಿತ ಮನೋಭಾವದವರಾಗುತ್ತಿದ್ದೇವೆ ಅನಿಸುತ್ತಿದೆ.


ಯಾವತ್ತೋ ಆತ್ಮಹತ್ಯೆ ಮಾಡಿಕೊಂಡಿದ್ದ ಹೆಣ್ಣುಮಗಳು ನಮ್ಮನ್ನು ಒಟ್ಟುಗೂಡಿಸಿದ ಹಾಗೆ, ಗಣೇಶ ಹಬ್ಬ - ಮೊಹರಂ ನಮ್ಮನ್ನು ಒಂದಾಗಿ ಹಿಡಿದಿಟ್ಟ ಹಾಗೆ, ಅವರ ಮನೆಯ ನಮ್ಮ ತಂಗಿ - ನಮ್ಮ ಮನೆಯ ಅವರ ಅಕ್ಕ ಆದ ಹಾಗೆ, ಮೇಷ್ಟ್ರಗಳು ಮುಕ್ತವಾಗಿ ಎಲ್ಲ ಜಾತಿಗಳನ್ನೂ ಕೂಗಿ - ಹಾಸ್ಯ ಮಾಡಿದ ಹಾಗೆ, ಯಾಕೋ ಈಗ ಇಲ್ಲ.


ಹಿಜಬ್ - ಕೇಸರಿ ಶಾಲು ವಿವಾದದ ಬಗ್ಗೆ ಕೇಳಿ ನೋಡಿದಾಗ ನಾವು ಯಾವ ಇದೆಂಥ ಸಮಾಜ ನಿರ್ಮಿಸಿಕೊಂಡಿದ್ದೇವೆ ಅಂತ ಬೇಸರವಾಗುತ್ತದೆ. ಹಿಜಬ್ ಹಿಂದಿನ ಮುಖ ತಂಗಿ ತಸ್ಲೀಮ್ ಳದ್ದೇ ಇರಬೇಕು. ಕೇಸರಿ ಶಾಲು ಹೊದ್ದದ್ದು ಯಾವುದೋ ಅಲ್ಲ; ಕಣ್ಣೀರು ಕೆಡವಲು ಇರುವ ಅಣ್ಣನದೇ ಭುಜ.


ಬಟ್ಟೆಯ ತುಂಡುಗಳೇ ನಮ್ಮನ್ನು define ಮಾಡುತ್ತವೆ ಎಂದರೆ ನಮ್ಮ ವಿವೇಕಕ್ಕೆ, ತರ್ಕಕ್ಕೆ, ಸಂಬಂಧಗಳಿಗೆ ಅರ್ಥವೆಲ್ಲಿ!


Mera Bharat Mahaan. May wisdom rest in peace!





 
 
 

Comentários


Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page