ರಾಧೆ ಓದದ ಪತ್ರ
ಪ್ರೀತಿಯ ರಾಧೆ,
ಈ ಕ್ಷಣಕ್ಕೆ ನಾನು ಗೋಕುಲ ಬಿಟ್ಟು ಬಂದು ಎರಡು ರಾತ್ರಿ, ಎರಡು ಹಗಲು. ಕಾಲೆಳೆದುಕೊಂಡು ಸಾಗುತ್ತಿದೆ ಕಾಲ. ನನ್ನ ಪಾಲಿನ ಪ್ರಪಂಚವಾಗಿದ್ದ ನಿನ್ನ ಬಿಟ್ಟು ಬಂದಮೇಲೆ ನಾನು ಪ್ರಪಂಚದ ಪಾಲಿಗೆ ಏನಾದರೇನು ಎನ್ನುವ ಜುಗುಪ್ಸೆ. ಇಲ್ಲಿ ಮಥುರೆಯಲ್ಲಿನ ನೀರು ಯಮುನೆಯಲ್ಲ. ಅಲ್ಲಲ್ಲಿ ಹಸಿರ ಬನಗಳಿವೆ; ಅವು ಯಾವುವೂ ಬೃಂದಾವನಗಳಲ್ಲ. ಈ ಊರಿನ ಆಕಾಶದಲ್ಲಿ ಸುಮ್ಮನೆ ಅಲೆದಾಡುವ ಮೋಡಗಳು; ಅವು ಮಳೆ ಸುರಿಸುವುದಿಲ್ಲ, ನನಗೆ ಚಂದ್ರ ಕಾಣುವುದಿಲ್ಲ. ಮುಂಜಾನೆ ಬೀದಿಯಲ್ಲಿ ನಿನ್ನದೇ ವಯಸ್ಸಿನ ನೂರಾರು ಹುಡುಗಿಯರು; ಅವರು ಯಾರೂ ರಾಧೆಯಲ್ಲ.
ಬಹುಶಃ ಗೋಕುಲದಲ್ಲಿ ಇದ್ದದ್ದು ಕೂಡ ಯಮುನೆಯಲ್ಲವೇನೋ, ಅಲ್ಲಿನ ಬನವೂ ಬೃಂದಾವನವಲ್ಲವೇನೋ, ಅಲ್ಲಿನ ಆಕಾಶದಲ್ಲಿ ಕೂಡ ಚಂದ್ರನಿರಲಿಲ್ಲವೇನೋ, ಅಲ್ಲಿ ಕೂಡ ನನ್ನ ಉಸಿರು ಸುಮ್ಮನೆ ಗಾಳಿಯಲ್ಲಿ ಲೀನವಾಗುತ್ತಿತ್ತೇನೋ.. ಅಲ್ಲಿ ರಾಧೆ ಇದ್ದುದರಿಂದಲೇ ನೀರು ಯಮುನೆಯಾಗಿದ್ದು, ಗಿಡಮರ ಹೂಗಳು ಬೃಂದಾವನವಾಗಿದ್ದು, ಭೂಮಿಯ ಸುತ್ತ ತಿರುಗುವ ಸಾಮಾನ್ಯ ಗೋಳಕೂಡ ಚಂದ್ರನಾಗಿದ್ದು, ಕೊಳಲೆಂಬ ಬರೀ ಬಿದುರಿನ ಮೈಯಲಿ ಹೊಕ್ಕು ಉಸಿರು ಸಂಗೀತವಾಗಿದ್ದು.
ರಾಧೆಯ ಬಳಿ ಮರಳಿ ಹೋಗಿ ಬಿಡಲಾ? - ಈ ಎರಡು ಈ ಪ್ರಶ್ನೆ ಕೇಳಿಕೊಂಡದ್ದು ಅದೆಷ್ಟು ನೂರು ಬಾರಿಯೋ ಗೊತ್ತಿಲ್ಲ. ನನ್ನನ್ನು ತಡೆದು ಹಿಡಿಯುತ್ತಿರುವುದು ಯಾವುದು? ನನ್ನಿಂದ ಲೋಕಕಲ್ಯಾಣವಾಗುತ್ತದೆಂಬ ಭ್ರಮೆಯಾ ? ಬಂದ ಕೆಲಸ ಮಾಡದೆ ಹೋದರೆ ಜಗದ ಮುಂದೆ ಕೀಳಾಗುತ್ತೇನೆ ಎಂಬ ಪುರುಷ ಸಹಜ ಅಹಂಕಾರವಾ? ನನ್ನನ್ನೇ ನಂಬಿದ ಸಾವಿರ ಸಾವಿರ ಜನರನ್ನು ರಕ್ಷಿಸಬೇಕು ಎನ್ನುವ ಹುಚ್ಚು ಜವಾಬ್ದಾರಿಯಾ? ಆಗ ಸಿಗುವ ಜನರ ಪ್ರೀತಿಯಾ? ಭಕ್ತಿಯಾ? ಮನುಷ್ಯನಾಗಿದ್ದು ಸಾಕಾಗಿರುವ ಬೇಸರವಾ? ದೇವರಾಗಿಬಿಡುವ ಆಸೆಯಾ? ಏನಾದರಾಗಲಿ ನಾವು ಗಂಡುಮಕ್ಕಳು ಬುದ್ಧಿ ಕೈಗೆ ಹೃದಯ ಕೊಡುವವರು. ನಾನು ಮರಳಲಾರೆ
ನೀನು ನಿನ್ನ ಗಂಡನ ತೋಳಲ್ಲಿ, ಉಸಿರುಗಟ್ಟಿಸುವ ಅಪ್ಪುಗೆಗಳಲ್ಲಿ, ನಕ್ಷತ್ರ ಕಾಣದ ರಾತ್ರಿಗಳಲ್ಲಿ ಒಂದು ಬದುಕು ಬದುಕುವಂತೆ, ನಾನು ಕೂಡ ಜನರ ಹೊಗಳಿಕೆಗಳಲ್ಲಿ, ಜಗದ ಹೋರಾಟಗಳಲ್ಲಿ, ನಗುವಿರಾದ ಗೆಲುವುಗಳಲ್ಲಿ, ಪಾಠವಿರದ ಸೋಲುಗಳಲ್ಲಿ ಬದುಕುತ್ತಾ ಒಂದು ದಿನ ಸಾಯುತ್ತೇನೆ. ಕಣ್ಮುಚ್ಚುವ ಕೊನೆಯ ಕ್ಷಣದಲ್ಲಿ ನಿನ್ನ ಚಿತ್ತಾರ ನನ್ನ ಕಣ್ಣಲ್ಲಿ ಮೂಡುತ್ತದೆ. ಅದು ಒದ್ದೆ ಕಂಗಳ ಪ್ರಪಂಚಕ್ಕೆ ಕಾಣುವುದಿಲ್ಲ.
ಪುರಾಣಗಳ ಪಾಲಿಗೆ ಅಲ್ಲಿಗೆ ನನ್ನದೊಂದು ಅವತಾರ ಮುಗಿಯುತ್ತದೆ. ಪ್ರಪಂಚದ ಕಣ್ಣಿಗೆ ನನ್ನ ಬದುಕಲ್ಲಿ ನೀನೊಂದು ಅಧ್ಯಾಯ ಮಾತ್ರ. ನನ್ನ ಅಧ್ಯಾಯದಲ್ಲಿ ನೀನು ನನ್ನ ಬದುಕು, ಪ್ರಪಂಚ ಮತ್ತು ಕಣ್ಣು.