ಮತ್ತೆ ನೀನು ನೆನಪಾಗಿ..
- Harsha
- Feb 14, 2019
- 2 min read
ಪ್ರೀತಿಯ ಕೃಷ್ಣ ,

ಮತ್ತೆ ಮನಸು ನಿನ್ನ ಕಡೆಗೆ. ಯಾವುದೋ ಹಾಡು, ಅಲ್ಲೆಲ್ಲೋ ಬಿದ್ದ ಮಳೆ ತಂದ ತಂಗಾಳಿಯ ಸ್ಪರ್ಶ, ಅಪ್ಪಿಕೊಂಡಾಗ ನಿನ್ನ ಭುಜದ ಇಳಿಜಾರಿನಲ್ಲಿ ಸಿಕ್ಕ ಬೆವರ ಘಮ, ನಾನು ಮಾತಾಡುತ್ತಿದ್ದರೆ ನೀನು ಸುಮ್ಮನೆ ನನ್ನ ನೋಡುವಾಗ ನಿನ್ನ ತುಟಿಯ ತಿರುವಿನಲ್ಲಿ ಇರುವ ನಗೆ, ಆ ಕಂಗಳ ಬೆಳಕು, ಹುಬ್ಬಿನ ಡೊಂಕು, ಸಾವಿರ ಮಾತಾಡುವ ನಿನ್ನ ಮೌನ.. ಇವೆಲ್ಲ ಏಕೆ ಅಷ್ಟು ಸ್ಪಷ್ಟವಾಗಿ ನೆನಪಿರುತ್ತವೋ ಗೊತ್ತಿಲ್ಲ. ಬರೀ ಇವುಗಳಿಂದಲೇ ನೀನು ನೆನಾಪಾಗಿ ಹಿಂಸೆ ಕೊಡುವಂತಿದ್ದರೆ ಅವೆಲ್ಲವುಗಳಿಂದ ದೂರವಿದ್ದು ನನ್ನ ನಾನು ನಿನ್ನ ನೆನಪುಗಳಿಂದ ರಕ್ಷಿಸಿಕೊಳ್ಳಬಹುದಿತ್ತು. ವಿನಾಕಾರಣ ನೆನಪಾದರೆ ಎಲ್ಲಿಗೆ ಹೋಗಲಿ!
ನೀನು ಬಾಲ್ಯದ ಗೆಳೆಯನಾಗಿದ್ದರೆ ಓದು ಮುಗಿದ ಮೇಲೆ ಮರೆತು, ಮದುವೆಯಾಗಿ ಬೇರೆ ಊರು ಸೇರಿಕೊಂಡು, ಹಬ್ಬಕ್ಕೋ ಜಾತ್ರೆಗೋ ತವರುಮನೆಗೆ ಬಂದಾಗ ನಿನ್ನ ನೋಡಿದಾಗ ಮಾತ್ರ ನೆನಪು ಮಾಡಿಕೊಂಡು ಮತ್ತೆ ಮರೆತುಬಿಡಬಹುದಿತ್ತು. ಹದಿಹರೆಯದಲ್ಲಿ ನಿನ್ನ ಪ್ರೀತಿ ಮಾಡಿದ್ದರೂ ಅಷ್ಟೇ - ಕಷ್ಟವಾಗುತ್ತಿತ್ತೇನೋ ಆದರೆ ಅತ್ತೆಯ ಭಯದಲ್ಲಿ, ಗಂಡನ ತೋಳಲ್ಲಿ, ಮಕ್ಕಳ ನಗುವಲ್ಲಿ ನಿನ್ನ ನೆನಪು ನಿಧಾನಕ್ಕೆ ಮಾಸಿ ಹೋಗುತ್ತಿತ್ತು. ನೀನು ಬರೀ ಗಂಡನಾಗಿದ್ದರೂ ಸರೀ - ಕಾಲದ ದಾಳಿಯಲ್ಲಿ ನಿನ್ನ ಮೇಲೊಂದು ತಾತ್ಸಾರ ಹುಟ್ಟಿಬಿಡುತ್ತಿತ್ತು. ಆದರೆ ನೀನು ಇವೇನೂ ಆಗಲಿಲ್ಲ ಮತ್ತು ಇವೆಲ್ಲವೂ ಆದೆ. ಮನಸ್ಸು ಗೊಂದಲಕ್ಕೆ ಬಿದ್ದದ್ದು ಆಗಲೇ.
ನನ್ನ ಖುಷಿ-ಕಷ್ಟಗಳನ್ನು ಹಂಚಿಕೊಳ್ಳುವಾಗ ನನ್ನಿಂದ ಅನತಿ ದೂರದಲ್ಲಿ ಕುಳಿತು ನನ್ನ ಪ್ರತಿ ಮಾತಿಗೂ ಕಿವಿಯಾಗುವ ಗೆಳೆಯ ನೀನು. ನನ್ನ ಸಮಸ್ಯೆಗಳಿಗೆ ನೀನು ಪರಿಹಾರ ಕೊಡಲಿಲ್ಲ, ನಾನದನ್ನು ಬಯಸಿಯೂ ಇರಲಿಲ್ಲ. ನೀನು ಕೊಟ್ಟದ್ದು ಕೇಳುವ ಕಿವಿ, ಬಯಸಿದ ತಾಳ್ಮೆ. ಅಷ್ಟು ಸಾಕು. ದೂರ ಸಾಕೆನಿಸಿದಾಗ ಬೆಚ್ಚನೆ ಸ್ಪರ್ಶ. ನನ್ನ ಕೈ ಹಿಡಿದುಕೊಂಡರೆ ಅದು ಪದಕ್ಕೆ ಸಿಗದ ಭರವಸೆ. ಹಣೆಯ ಮೇಲೆ ನೀನು ಮುತ್ತಾದರೆ ಅದು ಕಾಳಜಿ. ನಿನ್ನ ಬೆರಳುಗಳು ನನ್ನ ಕತ್ತು-ಬೆನ್ನ ಆಸುಪಾಸಿನಲ್ಲಿ ಅಲೆದಾಡಿದರೆ ಅದು ತುಂಟತನ. ಅವೇ ಬೆರಳು ನನ್ನ ನಾಭಿಯ ಸುತ್ತ ತಿರುಗಿದರೆ ಆಸೆ. ಹಿಂದೆಯಿಂದ ಅಪ್ಪುಗೆಯಾದರೆ ವಾಂಛೆ. ನನ್ನ ಕತ್ತಿನ ಇಳಿಜಾರಿನಲ್ಲಿ ನಿನ್ನ ಮುತ್ತು ಜಾರಿದರೆ ರೋಮಾಂಚನ. ನನ್ನ ಕಿವಿಯ ಶಂಖದಲ್ಲಿ ನಿನ್ನ ಮಾತು ಪಿಸುಗುಟ್ಟಿದರೆ ಅದು ಸಂಗೀತ. ಇನ್ನೂ ಹತ್ತಿರವಾದರೆ ತುಟಿಗೂ ಮೀಟಿಸಿಕೊಂಡ ವೀಣೆ ತಂತಿಯ ಕಂಪನ. ಹೃದಯದ್ದು ಹದ್ದು ಮೀರಿದ ವೇಗ. ನಿನ್ನದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾದ ಆಕರ್ಷಣೆಯಲ್ಲ. ಇಲ್ಲಿಗೆ ಸಾಕು ಎಂದು ನಡೆದು ಹೋಗಲು ಆಗುವ ಪ್ರೀತಿಯಲ್ಲ.
ನಿನ್ನ ಕಣ್ಣ ಅಂಗಳದಲ್ಲಿ ಇನ್ಯಾರದೋ ರಂಗೋಲಿ ಮೂಡುತ್ತದೇನೋ ಎಂಬ ಭಯದಲ್ಲಿ, ಇನ್ಯಾರದೋ ಕನಸಲ್ಲಿ ನೀನು ಹೋದರೆ ಹೇಗೆ ಎಂಬ ಆತಂಕದಲ್ಲಿ, ನನ್ನಷ್ಟು ಗಾಢವಾಗಿ ಪ್ರೀತಿಸುವ ಹುಡುಗಿ ನಿನಗೆ ಸಿಗಲಾರಳು ಎಂಬ ನನ್ನ ವಿಶ್ವಾಸದಲ್ಲಿ, ನೀನು ಕೂಡ ನನ್ನನ್ನು ಅಷ್ಟೇ ಪ್ರೀತಿಸುತ್ತೀಯಾ ಎಂಬ ಅನುಮಾನದಲ್ಲಿ, ನೀನು ಗಂಡನಾಗಿರಬೇಕಿತ್ತು ಎಂಬ ಆಲೋಚನೆಯಲ್ಲಿ, ನಾನು ಹೆಂಡತಿಯಾಗಿದ್ದರೆ ಹೇಗಿರುತ್ತಿತ್ತಲ್ಲ ಎಂದುಕೊಳ್ಳುವ ಊಹೆಯಲ್ಲಿ.. ಬೆಳಗಿನ ನೆನಪುಗಳಲ್ಲಿ, ರಾತ್ರಿ ಕನಸುಗಳಲ್ಲಿ ಪ್ರತಿ ಕ್ಷಣ ನೀನು ನನ್ನ ಜೊತೆಗಿರುವವನು ನೀನು. ಪ್ರಪಂಚ ನನ್ನ ಪ್ರೀತಿಯನ್ನು ಅನೈತಿಕ ಅನ್ನುತ್ತದೇನೋ. ಪ್ರೀತಿಯೇ ಅನೈತಿಕವಾದರೆ ನೀತಿಗೆ ಅರ್ಥವೆಲ್ಲಿ! ಬಿಡು.. ನನ್ನ ಈ ಅಕ್ಷರಗಳು ನಿನಗೆ ತಲುಪುವುದಿಲ್ಲ.
ನಿನ್ನವಳಾ,
ರಾಧೆ
Recent Posts
See All‘Who do you think is happier? Human beings or animals?’ asked my friend randomly. I don’t know why he gets such strange doubts. The...
Open any social media platforms, listen to any guests who visit our houses, consult any counsellors or child specialists, eye...