top of page
Search

ಮಥುರೆ ನಿನ್ನ ಕರೆಯುತ್ತಿದೆ..

  • Harsha
  • Dec 11, 2017
  • 2 min read

ಪ್ರೀತಿಯ ಕೃಷ್ಣ,

ಇನ್ನೆಷ್ಟು ದಿನ? ಎಷ್ಟು ಗಂಟೆ? ನನ್ನ ಪಾಲಿಗೆ ಎಲ್ಲವೂ ಮುಗಿದು ಹೋಗುತ್ತವೆ. ಈ ಬೃಂದಾವನದಲ್ಲಿನ ಭೇಟಿಗಳು, ಯಮುನೆಯ ತೀರದಲ್ಲಿನ ತುಂಟತನ, ಗೋವರ್ಧನ ಗಿರಿಯ ಯಾವುದೋ ಮರದ ಕೆಳಗಿಂದ ಕೇಳುವ ಮುರಳಿ ನಾದ, ಬಟ್ಟೆ ಅದಲು-ಬದಲು ಮಾಡಿಕೊಂಡು ನಾನೇ ಕೃಷ್ಣಾ ನೀನೆ ರಾಧೇ ಆಗಿ ಮಾಡಿದ ನೃತ್ಯ, ನೀನು ನನ್ನವನೇ ಎಂಬ ನಂಬಿಕೆ ಕೊಡುತ್ತಿದ್ದ ನಿನ್ನ ಮಾತು, ನೀನು ಅವರವನು ಕೂಡ ಹೌದೇನೋ ಎಂಬ ಆತಂಕ ಹುಟ್ಟಿಸುತ್ತಿದ್ದ ಗೋಪಿಕೆಯರ ಜೊತೆ ನಿನ್ನ ಸಲುಗೆ, ನನ್ನ ಹುಸಿ ಮುನಿಸು, ನಿನ್ನ ಮನವೊಲಿಕೆ.. ಎಲ್ಲವು ಮುಗಿದು ಹೋಗುತ್ತವೆ ಕೃಷ್ಣಾ.

ಇನ್ನು ಮುಂದೆ ಯಮುನೆಯ ಅಲೆಗಳು ಮಂಕಾಗುತ್ತವೆ, ಹುಣ್ಣಿಮೆಯ ರಾತ್ರಿಗಳು ಕಾಂತಿ ಕಳೆದುಕೋಳ್ಳುತ್ತವೆ, ಬೃಂದಾವನ ಹೂಗಳು ಇನ್ನೇಕೆ ಅರಳಬೇಕು? ಅಲ್ಲಿನ ಹಕ್ಕಿಗಳ ಕೊರಳಲ್ಲಿ ಗಾನ ಇರುವುದಿಲ್ಲ. ನೀನು ಮಥುರೆಗೆ ಹೋದ ಕೂಡಲೇ ಎಲ್ಲವು ಸ್ಥಬ್ದ.

ಇತರೆ ಗೋಪಿಕೆಯರಂತೆ ನಾನು ಅಳಲಾರೆ, ನೀನು ಇಲ್ಲೇ ಇದ್ದುಬಿಡು ಎಂದು ಗೋಗರೆಯಲಾರೆ. ನನಗೆ ಗೊತ್ತು. ನಿನ್ನ ಇನ್ನೊಂದು ಪಯಣ ಶುರುವಾಗುತ್ತಿದೆ. ಈಗ ನಿನ್ನದು ಕೊಳಲು ಬಿಟ್ಟು ಪಾಂಚಜನ್ಯ ಕೈಗೆತ್ತುಕೊಳ್ಳುವ ಸಮಯ. ತಲೆಯ ಮೇಲಿನ ನವಿಲುಗರಿ ಕಳಚಿ ಕಿರೀಟ ತೊಡುವ ಸಮಯ, ನನ್ನ ಕೈ ಹಿಡಿದ ಹಸ್ತಗಳಲ್ಲಿ ಖಡ್ಗ ಹಿಡಿಯುವ ಸಮಯ. ಅರ್ಥವಾಗುತ್ತದೆ ನೀನು ಬರೀ ರಾಧೆಯ ಮಾಧವನಲ್ಲ. ಯದುಕುಲದ ಉದ್ಧಾರಕ ಕೃಷ್ಣ.

ಮಥುರೆ ನಿನ್ನ ಕರೆಯುತ್ತಿದೆ. ಮತ್ತೆ ಮರಳುತ್ತೇನೆ ಎಂಬ ಆಶ್ವಾಸನೆ ಕೊಡಬೇಡ. ಈಡೇರದ ಆಶ್ವಾಸನೆಗಳು ಕೊಡುವ ಭ್ರಮೆಗಿಂತ ನೀನು ಮರಳಲಾರೆ ಎನ್ನುವ ನಿರ್ಧಾರದ ವಾಸ್ತವವೇ ಕಡಿಮೆ ಯಾತನಾದಾಯಕ. ನಾವು ಹೆಣ್ಣುಮಕ್ಕಳು - ವಾಸ್ತವ ಒಪ್ಪಿಕೊಳ್ಳೋದು, ಬದುಕಿನ ಜೊತೆಗೆ ರಾಜಿಯಾಗೋದು ನಮಗೆ ಹೊಸದಲ್ಲ.

ಮುಂದೊಂದು ದಿನ ಪ್ರಪಂಚ ನನಗೂ ಮದುವೆ ಮಾಡಿಸುತ್ತದೆ. ಅವನು ಗಂಡ - ನಾನು ಹೆಂಡತಿ, ಅವನು ದುಡಿದು ತರುವ ಗಂಡು. ನಾನು ಮನೆಯ ಬೆಳಗುವ ಹೆಣ್ಣು. ನನ್ನ-ನಿನ್ನ ಪ್ರೀತಿಯ ಬೃಂದಾವನದಂತೆ ಮದುವೆಯ ಮನೆಯನ್ನು ಬೆಳದಿಂಗಳು ಪ್ರವೇಶಿಸುವುದಿಲ್ಲ. ಅಲ್ಲೇನಿದ್ದರೂ ಕತ್ತಲ ಆಟ. ನಮ್ಮ ಯಮುನೆಯ ತೀರದಂತೆ ಮನೆಯಲ್ಲಿ ಆಕಾಶ-ನಕ್ಷತ್ರಗಳು ಕಾಣುವುದಿಲ್ಲ. ಮನೆಯ ಸೂರು ಕಪ್ಪು ಕಪ್ಪು. ಜೀವವಿಲ್ಲದ ರಾತ್ರಿಗಳಲ್ಲಿ ನಿನ್ನ ಕನಸು-ಅವನ ಮುನುಗು. ಲೋಕಕ್ಕೆಇದೆಲ್ಲ ಅನೈತಿಕವೆನಿಸುತ್ತದೆ. ಪ್ರೀತಿ ಕೂಡ ಅನೈತಿಕವಾದರೆ, ಇನ್ಯಾವುದೂ ನೀತಿ ಅನಿಸಿಕೊಳ್ಳಲು ಸಾಧ್ಯ! ಬಿಡು.. ಪ್ರಪಂಚಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ. ಅದು ಸಂಬಂಧಗಳ ಪ್ರಪಂಚ; ಭಾವನೆಗಳ ಎತ್ತರಕ್ಕೆ ಅದು ಇರುವುದಿಲ್ಲ.

ಕೊನೆಗೊಮ್ಮೆ ಅಪ್ಪಿಕೋ; ಮೈದುಂಬಿಕೊಳ್ಳುತ್ತೇನೆ . ಕೊನೆಗೊಮ್ಮೆ ಕೊಳಲು ನುಡಿಸು; ಮನದುಂಬಿಕೊಳ್ಳುತ್ತೇನೆ. ಮತ್ತೆ ಅಳಲು ಕೂಡ ಆಸ್ಪದ ಕೊಡುತ್ತದೋ ಇಲ್ಲವೋ ಪ್ರಪಂಚ, ನಿನ್ನ ಮಡಿಲಲ್ಲೇ ಕಣ್ಣೀರು ಚಾರೆಗಟ್ಟುವ ತನಕ ಅತ್ತುಬಿಡುತ್ತೇನೆ. ನೀನು ಕೊಟ್ಟ ಆನಂದದ ನಗೆ ಹೇಗೂ ಮರಳಿ ನಿನಗೆ ಕೊಡಲಾರೆ. ನಿನ್ನ ನಿರ್ಗಮನದ ದುಃಖದ ಕಂಬನಿಯಾದರು ನಿನಗೆ ಕೊಡುತ್ತೇನೆ. ಇಷ್ಟು ದಿನ ಇಷ್ಟು ವರ್ಷ ಜೀವವಾಗಿದ್ದಕ್ಕೆ ನಿನಗೆ ಧನ್ಯವಾದ ಹೇಳಿ ನೀನು ದೂರವೆನಿಸಿ ಮತ್ತೆ ಅಳಲಾರೆ. ಇನ್ನು ಮುಂದೆ ಪ್ರಪಂಚಕ್ಕೆ ಜೀವವಿಲ್ಲದೆ ಬದುಕಿರುವ ಮತ್ತೊಬ್ಬ ಹುಡುಗಿ ಸೇರಿಕೊಳ್ಳುತ್ತಾಳೆ. ಇಷ್ಟು ಕಾಲ ನಾವು ಒಟ್ಟಿಗೆ ಇದ್ದದ್ದಕ್ಕೆ ತೃಪ್ತಿಪಟ್ಟುಕೊಳ್ಳಬೇಕೋ! ಇನ್ನು ಮುಂದಿನ ದಿನಗಳಿಗೆ ದುಃಖಪಡಬೇಕೋ ತಿಳಿಯುತ್ತಿಲ್ಲ. ಬಿಡು. ಅದೆಲ್ಲ ನನ್ನ ಪಾಡು. ಹೋಗು.. ಮಥುರೆ ನಿನ್ನ ಕರೆಯುತ್ತಿದೆ.

ನಿನ್ನವಳಾ?

ರಾಧೆ

 
 
 

Recent Posts

See All
Let's Compare. Let's Complicate.

‘Who do you think is happier? Human beings or animals?’ asked my friend randomly. I don’t know why he gets such strange doubts. The...

 
 
 
Featured Posts
Recent Posts
Archive
Search By Tags
Follow Us
  • Facebook Basic Square
  • Twitter Basic Square
  • Google+ Basic Square
© 2023 by Andy Decker. Proudly created with WIX.COM
bottom of page